ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕೋಪದ ಕೆಟ್ಟ ಫಲಗಳು

Last Updated 19 ಜೂನ್ 2021, 19:33 IST
ಅಕ್ಷರ ಗಾತ್ರ

ಪೈಶುನ್ಯಂ ಸಾಹಸಂ ದ್ರೋಹ ಈರ್ಷ್ಯಾಸೂಯಾರ್ಥದೂಷಣಮ್‌ ।

ವಾಗ್ದಂಯೋಶ್ಚ ಪಾರುಷ್ಯಂ ಕ್ರೋಧಜೋsಪಿ ಗಣೋsಷ್ಟಕಃ ।।

ಇದರ ತಾತ್ಪರ್ಯ ಹೀಗೆ:

‘ನಿಶ್ಚಯವಾಗಿ ಗೊತ್ತಿಲ್ಲದಿದ್ದರೂ ಇತರರ ಮೇಲೆ ದೋಷಾರೋಪಣೆಯನ್ನು ಮಾಡುವುದು, ದುಡುಕಿನಿಂದ ಮಾಡುವ ಅಧರ್ಮದ ಕೆಲಸ, ಅಪಕಾರ, ಹೊಟ್ಟೆಕಿಚ್ಚು, ಬೇರೊಬ್ಬರ ಗುಣವನ್ನೇ ದೋಷವಾಗಿ ಪರಿಗಣಿಸುವುದು, ಇನ್ನೊಬ್ಬರ ಸ್ವತ್ತನ್ನು ಕಸಿದುಕೊಂಡು ತಾನು ಕೊಡಬೇಕಾದ್ದನ್ನು ಕೊಡದಿರುವುದು, ಕಠೋರವಾದ ಮಾತುಗಳು, ಉಗ್ರವಾದ ದಂಡನೆ – ಇವು ಕ್ರೋಧದಿಂದಾಗುವ ಎಂಟು ದೋಷಗಳು.’

ಕೋಪ ನಮ್ಮ ವ್ಯಕ್ತಿತ್ವದಲ್ಲಿ ಏನೆಲ್ಲ ಬದಲಾವಣೆಗಳನ್ನು ಮಾಡಬಹುದು ಎಂಬುದನ್ನು ಈ ಶ್ಲೋಕ ನಿರೂಪಿಸುತ್ತಿದೆ.

ಕೋಪ ಬರುವುದೇ ಇನ್ನೊಬ್ಬರ ಮೇಲೆ; ಇದು ಬರುವುದು ಎದುರಿಗಿರುವ ಆ ವ್ಯಕ್ತಿಯ ಬಗ್ಗೆ ನಮಗೆ ಉಂಟಾಗುವ ಅಸಹನೆಯಿಂದ; ಅವನಿಗೂ ನಮಗೂ ಇನ್ನು ಹೊಂದಾಣಿಕೆ ಸಾಧ್ಯವಿಲ್ಲ ಎಂಬಂಥ ಸಂದರ್ಭದಲ್ಲಿ. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ನಮ್ಮ ಬುದ್ಧಿ ಮಂಕಾಗಿರುತ್ತದೆ. ಈ ಸಂದರ್ಭವನ್ನು ಬಳಸಿಕೊಂಡು ಕೋಪ ನಮ್ಮ ಮೇಲೆ ಸವಾರಿ ಮಾಡಲು ತೊಡಗುತ್ತದೆ. ಇದರ ಪರಿಣಾಮ ಹತ್ತುಹಲವು. ಇದರಲ್ಲಿ ಎಂಟನ್ನು ಸುಭಾಷಿತ ಇಲ್ಲಿ ಗುರುತಿಸಿದೆ.

ಪೈಶುನ್ಯ ಎಂದರೆ ಚಾಡಿಯನ್ನು ಹೇಳುವುದು, ಎಂದರೆ ನಿಶ್ಚಯವಾಗಿ ಗೊತ್ತಿಲ್ಲದಿದ್ದರೂ ಇತರರ ಮೇಲೆ ದೋಷಾರೋಪಣೆಯನ್ನು ಮಾಡುವುದು. ಸಾಹಸ ಎಂದರೆ ಯೋಚನೆಯನ್ನೇ ಮಾಡದೆ ಮುನ್ನುಗ್ಗುವುದು, ಇದೇ ದುಡುಕಿನಿಂದ ಮಾಡುವ ಅಧರ್ಮದ ಕೆಲಸ. ದ್ರೋಹ ಎಂದರೆ ಅಪಕಾರ, ಇನ್ನೊಬ್ಬರಿಗೆ ತೊಂದರೆ ಕೊಡುವುದು, ಅನ್ಯಾಯ ಮಾಡುವುದು. ಅಸೂಯೆ ಎಂದರೆ ಹೊಟ್ಟೆಕಿಚ್ಚು, ಇನ್ನೊಬ್ಬರ ಏಳಿಗೆಯನ್ನು ಸಹಿಸದಿರುವುದು. ಈರ್ಷೆ ಎಂದರೆ ಬೇರೊಬ್ಬರ ಗುಣವನ್ನೇ ದೋಷವಾಗಿ ಪರಿಗಣಿಸುವುದು. ಅರ್ಥದೂಷಣ ಎಂದರೆ ಇನ್ನೊಬ್ಬರ ಸ್ವತ್ತನ್ನು ಕಸಿದುಕೊಂಡು ತಾನು ಕೊಡಬೇಕಾದ್ದನ್ನು ಕೊಡದಿರುವುದು, ಎಂದರೆ ತಾನು ಕೊಟ್ಟ ಸಾಲವನ್ನು ಬಿಡದೆ ವಸೂಲಿ ಮಾಡುವುದು, ತಾನು ತೆಗೆದುಕೊಂಡಿರುವ ಸಾಲವನ್ನು ಮಾತ್ರ ಮರೆತುಬಿಡುವುದು! ವಾಗ್ದಂಡನೆ ಎಂದರೆ ಕಠೋರವಾದ ಮಾತುಗಳು, ಇನ್ನೊಬ್ಬರನ್ನು ನೋಯಿಸುವಂಥ ಮಾತುಗಳು. ಪಾರುಷ್ಯ ಎಂದರೆ ಉಗ್ರವಾದ ದಂಡನೆ, ಮಾತು–ಕೃತಿಗಳಲ್ಲಿ ಕಠೋರತೆ, ಸೇಡಿನ ಮನೋಭಾವ.

ಇಷ್ಟು ಭಯಂಕರವಾದ ಕೋಪದ ತಂಟೆಗೆ ನಾವು ಹೋಗಬೇಕೆ ಎಂದು ನಾವು ಆಲೋಚಿಸಿದರೆ ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT