ಮಂಗಳವಾರ, ಸೆಪ್ಟೆಂಬರ್ 22, 2020
26 °C

ದಿನದ ಸೂಕ್ತಿ | ದುಷ್ಟತನದಿಂದ ದೂರ ಇರಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಖಲಃ ಕರೋತಿ ದುರ್ವೃತ್ತಂ ನೂನಂ ಫಲತಿ ಸಾಧುಷು ।
ದಶಾನನೋsಹರತ್ ಸೀತಾಂ ಬಂಧನಂ ತು ಮಹೋದಧೇಃ ।।

ಇದರ ತಾತ್ಪರ್ಯ ಹೀಗೆ:
‘ಕೆಟ್ಟ ದಾರಿಯಲ್ಲಿ ನಡೆಯುವುದು ದುಷ್ಟರು; ಆದರೆ ಅದರ ಪರಿಣಾಮವನ್ನು ಅನುಭವಿಸುವವರು ಸಜ್ಜನರು. ಇದು ಹೇಗೆಂದರೆ, ಸೀತೆಯನ್ನು ಅಪಹರಿಸಿದ್ದು ರಾವಣ; ಆದರೆ ಬಂಧನವನ್ನು ಅನುಭವಿಸಿದ್ದು ಮಹಾಸಾಗರ.‘

ಈಗಿನ ಸಂದರ್ಭದಲ್ಲಿ ಹಲವರು ಮನೆಯಲ್ಲಿ ಶಿಸ್ತುಬದ್ಧವಾಗಿರುತ್ತಾರೆ; ಅನವಶ್ಯಕವಾದ ಓಡಾಟವನ್ನೂ ಮಾಡುವುದಿಲ್ಲ; ಅಕಸ್ಮಾತ್‌ ಹೊರಗೆ ಹೋಗಬೇಕಾಗಿಬಂದರೂ ಎಚ್ಚರಿಕೆಯಿಂದಲೇ ಇರುತ್ತಾರೆ. ಆದರೂ ಯಾರೋ ಒಬ್ಬ ಅಸಡ್ಡಾಳನ ಕಾರಣದಿಂದ ಕೋವಿಡ್‌ನ ಸೋಂಕು ಅಂಟುತ್ತದೆ. ಒಬ್ಬ ದುಷ್ಟನಿಂದ ಹತ್ತಾರು ಜನಕ್ಕೆ ತೊಂದರೆ!

ಇಂಥ ಹಲವು ಪ್ರಸಂಗಗಳನ್ನು ನಿತ್ಯಜೀವನದಲ್ಲಿ ನೋಡುತ್ತಲೇ ಇರುತ್ತೇವೆ. 

ಒಬ್ಬ ವ್ಯಕ್ತಿ ಫುಟ್‌ಪಾತ್‌ ಮೇಲೆ, ಎಲ್ಲ ರೀತಿಯ ಸುರಕ್ಷಾಕ್ರಮಗಳನ್ನು ಅನುಸರಿಸಿಕೊಂಡೇ, ನಡೆದುಹೋಗುತ್ತಿರುತ್ತಾರೆ. ಆದರೆ ಯಾರೋ ಒಬ್ಬ ದುರಹಂಕಾರಿ, ಅಯೋಗ್ಯ ಫುಟ್‌ಪಾತ್‌ನ ಮೇಲೇಯೇ ವಾಹನವನ್ನು ಚಲಾಯಿಸಿ, ಅಲ್ಲಿ ಅಪಘಾತವನ್ನು ಉಂಟುಮಾಡುತ್ತಾನೆ. ಒಬ್ಬ ದುಷ್ಟನಿಂದ ಹಲವು ಜನರು ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ.

ಸುಭಾಷಿತ ಹೇಳುತ್ತಿರುವುದು ಇಂಥ ಸಂದರ್ಭಗಳನ್ನು ಕುರಿತು. ದುಷ್ಟರು ಮಾಡುವ ಅಯೋಗ್ಯದ ಪರಿಣಾಮವನ್ನು ಸಜ್ಜನರು ಅನುಭವಿಸಬೇಕಾಗುತ್ತದೆ. ಸುಭಾಷಿತ ಇಲ್ಲಿ ನೀಡಿರುವ ಉದಾಹರಣೆಯೂ ಸೊಗಸಾಗಿದೆ: ಸೀತೆಯನ್ನು ಅಪಹರಿಸಿದ್ದು ದುಷ್ಟನಾದ ರಾವಣ. ಆದರೆ ಇದರ ಪರಿಣಾಮವಾಗಿ ಬಂಧನವನ್ನು ಅನುಭವಿಸಿದ್ದು ಸಮುದ್ರರಾಜ. ಲಂಕೆಯನ್ನು ತಲಪಲು ರಾಮಸೇನೆಯು ಸಮುದ್ರವನ್ನು ದಾಟಬೇಕಿತ್ತು. ಆದರೆ ಹೇಗೆ ದಾಟುವುದು? ಸಮುದ್ರಕ್ಕೆ ಬಂಧಿಸಿ, ಎಂದರೆ ಸೇತುವೆಯನ್ನು ಕಟ್ಟಬೇಕಾಯಿತು. ಹೀಗೆ ಸ್ವತಂತ್ರವಾಗಿದ್ದ, ಜೀವಿಗಳಿಗೆ ಉಪಕಾರಿಯಾಗಿದ್ದ ಸಮುದ್ರವೇ ಬಂಧನಕ್ಕೆ ಒಳಪಡಬೇಕಾಯಿತು.

ನಮ್ಮ ಜೀವನದಲ್ಲಿಯ ಇನ್ನೊಂದು ಉದಾಹರಣೆಯನ್ನೂ ಇಲ್ಲಿ ನೋಡಬಹುದು. ಎಷ್ಟೋ ಸಂದರ್ಭದಲ್ಲಿ ಮಕ್ಕಳು ಮಾಡುವ ಅಯೋಗ್ಯಕಾರ್ಯಗಳ ಪರಿಣಾಮವಾಗಿ ಹೆತ್ತವರು ಅಪಮಾನವನ್ನು ಅನುಭವಿಸಬೇಕಾಗುತ್ತದೆ, ಅಲ್ಲವೆ?

ಹೀಗಾಗಿಯೇ ದುಷ್ಟರು ಯಾರೇ ಆಗಿದ್ದರೂ – ನಮ್ಮ ಮಕ್ಕಳು, ಬಂಧುಗಳು, ಸ್ನೇಹಿತರು, ಪಕ್ಷದವರು – ಯಾರೇ ಆಗಿದ್ದರೂ, ಅವರು ದುಷ್ಟರೇ ಹೌದು. ಅವರನ್ನು ತೊರೆಯದ ಹೊರತು ನಮಗೆ ಅಪಾಯ ತಪ್ಪಿದ್ದಲ್ಲ. ಈ ವಿವೇಕವನ್ನು ಈ ಪದ್ಯ ಸೊಗಸಾಗಿ ಹೇಳಿದೆ:

ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |
ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ ||

’ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಾಗಮಾಡಬೇಕು; ಗ್ರಾಮದ ಹಿತಕ್ಕಾಗಿ ಕುಲವನ್ನೂ, ರಾಷ್ಟ್ರದ ಹಿತಕ್ಕಾಗಿ ಗ್ರಾಮವನ್ನೂ ತ್ಯಾಗಮಾಡಬೇಕು; ಕೊನೆಗೆ, ತನ್ನ ಹಿತಕ್ಕಾಗಿ ಈ ಭೂಮಿಯನ್ನೇ ತೊರೆಯುವಂಥ ಸ್ಥಿತಿ ಎದುರಾದರೆ ಆಗ ಈ ಪೃಥ್ವಿಯನ್ನೇ ತ್ಯಾಗಮಾಡಬೇಕು‘ ಎಂದು ಹೇಳುತ್ತಿದೆ, ಈ ಸುಭಾಷಿತ.

ರಾವಣನಿಗೆ ವಿಭಿಷಣ ಇಂಥದೇ ಬುದ್ಧಿವಾದವನ್ನು ಹೇಳುತ್ತಾನೆ. ’ನಿನ್ನ ದುಷ್ಟಕಾರ್ಯದಿಂದ ಕುಲವೇ ನಾಶವಾಗುತ್ತದೆ‘ ಎಂದು ಎಚ್ಚರಿಸುತ್ತಾನೆ. ಆದರೆ ಅವನು ಕೇಳುವುದಿಲ್ಲ. ದುರ್ಯೋಧನನಿಗೂ ಇಂಥದೇ ಉಪದೇಶ ಸಿಕ್ಕುತ್ತದೆ. ಆದರೆ ಅವನೂ ಕೇಳುವುದಿಲ್ಲ. ಕೊನೆಗೆ ರಾಕ್ಷಸಕುಲವೇ ನಾಶವಾಗುವಂಥ ಸ್ಥಿತಿ ಎದುರಾಗುತ್ತದೆ; ಕೌರವರಿಗೂ ಇಂಥದೇ ಸ್ಥಿತಿ ಒದಗುತ್ತದೆ.

ಹೀಗಾಗಿ ಮಕ್ಕಳು ದುಷ್ಟರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಾಲಕ–ಪೋಷಕರ ಮೇಲಿದೆ; ಪ್ರಜೆಗಳು ದುಷ್ಟರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮನ್ನು ನಾವು ಸದಾ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಿರಬೇಕು; ದುಷ್ಟತನ ನಮ್ಮ ಹತ್ತಿರ ಬರದಂತೆ ಎಚ್ಚರ ವಹಿಸಬೇಕು. ನಮ್ಮ ಒಬ್ಬರ ದುಷ್ಟತನದಿಂದ ಇಡಿಯ ಸಮಾಜವೇ ಸಂಕಷ್ಟಕ್ಕೆ ಒಳಗಾಗುವಂಥ ಸ್ಥಿತಿ ಎದುರಾಗಬಹುದು. ಎಚ್ಚರದಿಂದ ನಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.