ದಿನದ ಸೂಕ್ತಿ: ಮೂರ್ಖದುಷ್ಟರು!

ಪಯಃಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಮ್ ।
ಉಪದೇಶೋ ಹಿ ಮೂರ್ಖಾಣಾಂ ಪ್ರಕೋಪಾಯ ನ ಶಾಂತಯೇ ।।
ಇದರ ತಾತ್ಪರ್ಯ ಹೀಗೆ:
‘ಹಾವಿಗೆ ಹಾಲೆರೆಯುವುದು ಕೇವಲ ವಿಷವನ್ನು ಹೆಚ್ಚು ಮಾಡುವುದಕ್ಕೇ ಆಗುತ್ತದೆ; ಹಾಗೆಯೇ ಮೂರ್ಖರಿಗೆ ಮಾಡಿದ ಉಪದೇಶವೂ ಸಹ. ಇದರಿಂದ ಇನ್ನೂ ಹೆಚ್ಚು ಕೆರಳುವುದೇ ವಿನಾ ಶಾಂತವಾಗುವುದಿಲ್ಲ.’
ಮೂರ್ಖರಲ್ಲಿ ಎರಡು ವಿಧ ಎನ್ನಬಹುದು! ಶುದ್ಧ ಮೂರ್ಖರು ಮತ್ತು ಅಶುದ್ಧ ಮೂರ್ಖರು. ಏನು ಈ ಇಬ್ಬರಿಗೂ ವ್ಯತ್ಯಾಸ? ಶುದ್ಧ ಮೂರ್ಖರು ಎಂದರೆ ಅವರಲ್ಲಿ ನೂರಕ್ಕೆ ನೂರರಷ್ಟು ಮೂರ್ಖತ್ವವೇ ತುಂಬಿರುತ್ತದೆ. ಅಶುದ್ಧ ಮೂರ್ಖರಲ್ಲಿ ಮೂರ್ಖತೆಯ ಜೊತೆಗೆ ಧೂರ್ತತೆಯೂ ತುಂಬಿರುತ್ತದೆ; ಇದರ ಹಂಚಿಕೆಯಲ್ಲಿ ಒಬ್ಬರಿಗಿಂತ ಇನ್ನೊಬ್ಬರಲ್ಲಿ ವ್ಯತ್ಯಾಸ ಇರುತ್ತದೆಯೆನ್ನಿ!
ಮೂರ್ಖರಿಂದ ತೊಂದರೆ ಎದುರಾಗುವುದು ಸ್ವಾಭಾವಿಕವೇ. ಆದರೆ ಮೇಲೆ ಹೇಳಿದ ಇಬ್ಬರು ಮೂರ್ಖರಲ್ಲಿ ಎರಡನೆಯ ಮೂರ್ಖನಿಂದಲೇ ಹೆಚ್ಚಿನ ತೊಂದರೆ; ಮೂರ್ಖತನ ಮತ್ತು ಧೂರ್ತತನ – ಇವೆರಡು ಸೇರಿದರೆ ಆಗುವ ಅನಾಹುತಪರಂಪರೆಯ ವ್ಯಾಪ್ತಿ ದೊಡ್ಡದು. ಇದು ಹೇಗೆಂದರೆ ಬೆಂಕಿ ಮತ್ತು ಗಾಳಿ ಸೇರಿಕೊಂಡಂತೆ. ಸುಭಾಷಿತ ಇದನ್ನೇ ಹೇಳುತ್ತಿರುವುದು.
ಹಾವಿಗೆ ಹಾಲನ್ನು ಎರೆದರೆ ಏನಾಗುವುದು? ಹಾಲಿನ ಸಾತ್ವಿಕತೆಯು ಹಾವಿನ ಸ್ವಭಾವವನ್ನು ಬದಲಾಯಿಸಬಲ್ಲದೆ? ಇಲ್ಲವಷ್ಟೆ! ಹಾಲನ್ನು ಸೇವಿಸಿದ ಹಾವು ತನ್ನ ವಿಷವನ್ನು ಅದರಿಂದ ಹೆಚ್ಚಿಸಿಕೊಳ್ಳುತ್ತದೆಯೇ ವಿನಾ ಸಾಧುಜೀವಿಯಾಗಿ ಪರಿವರ್ತನೆ ಆಗುವುದಿಲ್ಲ, ಅಲ್ಲವೆ? ಹಾಲನ್ನು ಹೆಚ್ಚೆಚ್ಚು ಸೇವಿದಷ್ಟು ವಿಷವೂ ಹೆಚ್ಚಾಗುತ್ತಹೋಗುತ್ತದೆ. ಇದೇ ರೀತಿಯಲ್ಲಿ ದುಷ್ಟತನದಿಂದ ಕೂಡಿರುವ ಮೂರ್ಖನೊಂದಿಗೆ ನಾವು ಎಷ್ಟು ಆತ್ಮೀಯವಾಗಿ, ಪ್ರೀತಿಪೂರ್ವಕವಾಗಿ ನಡೆದುಕೊಂಡರೂ ಅವನ ಮೂರ್ಖತನವೂ ಕಡಿಮೆಯಾಗದು, ದುಷ್ಟತನವೂ ಕಡಿಮೆಯಾಗದು. ಹೀಗಾಗಿ ನಾವು ಹೇಳುವ ಒಳ್ಳೆಯ ಮಾತುಗಳು ಅವರ ಸಮ್ಮುಖದಲ್ಲಿ ವ್ಯರ್ಥವೇ ಆಗುತ್ತದೆಯಷ್ಟೆ. ಇದನ್ನೇ ಸುಭಾಷಿತ ಹೇಳುತ್ತಿರುವುದು.
ಹೀಗಾಗಿ ನಾವು ದುಷ್ಟಮೂರ್ಖರೊಂದಿಗೂ ಮೂರ್ಖದುಷ್ಟರೊಂದಿಗೂ ಎಚ್ಚರಿಕೆಯಿಂದ ಇರಬೇಕು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.