ಮಂಗಳವಾರ, ಜೂನ್ 28, 2022
26 °C

ದಿನದ ಸೂಕ್ತಿ: ಓದಿನಲ್ಲಿರಲಿ ವೈವಿಧ್ಯ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಬುದ್ಧಿವೃದ್ಧಿಕರಣ್ಯಾಶು ಧನ್ಯಾನಿ ಚ ಹಿತಾನಿ ಚ ।

ನಿತ್ಯಂ ಶಾಸ್ತ್ರಣ್ಯವೇಕ್ಷೇತ ನಿಗಮಾಂಶ್ಚೈವ ವೈದಿಕಾನ್‌ ।।

ಇದರ ತಾತ್ಪರ್ಯ ಹೀಗೆ:

‘ಬುದ್ಧಿಶಕ್ತಿಯನ್ನು ಬೆಳೆಸುವ ಗ್ರಂಥಗಳನ್ನೂ, ಧನಸಂಪಾದನೆಗೆ ಉಪಯುಕ್ತವಾದವುಗಳನ್ನೂ, ಪರಹಿತಕ್ಕಾಗಿ ಉಪಯೋಗಿಸಬಹುದಾದ ಶಾಸ್ತ್ರಗಳನ್ನೂ, ವೇದದ ಅರ್ಥವನ್ನು ತಿಳಿಸಿಕೊಡುವ ದರ್ಶನಾದಿ ಗ್ರಂಥಗಳನ್ನೂ ಯಾವಾಗಲೂ ಓದುತ್ತಿರಬೇಕು.’

ಓದು ನಮ್ಮ ಜೀವನಕ್ಕೆ ಬೇಕಾದ ಆಹಾರ; ಮಾತ್ರವಲ್ಲ, ಅದು ಔಷಧ ಕೂಡ; ಅಷ್ಟೇ ಅಲ್ಲ, ಅದು ನಮ್ಮ ಪಾಲಿಗೆ ಸಂಪತ್ತು ಸಹ ಎನ್ನುತ್ತಿದೆ ಸುಭಾಷಿತ.

ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವುದಕ್ಕೆ ಇರುವ ಸುಲಭವಿಧಾನವೇ ಓದು, ಎಂದರೆ ಪುಸ್ತಕಗಳು. ನಾವು ಜೀವನಕ್ಕೆ ಬೇಕಾದ ನಾನಾ ವಿದ್ಯೆಗಳನ್ನು ಕಲಿಯಲು ಒದಗುವಂಥವೇ ಪುಸ್ತಕಗಳು. ನಮ್ಮ ಜೀವನದ ಸಮಗ್ರ ಅಭ್ಯುದಯಕ್ಕೂ ನಿಃಶ್ರೇಯಸ್ಸಿಗೂ ಒದಗುವಂಥವೇ ಅರಿವು, ತಿಳಿವಳಿಕೆ. ಹೀಗೆ ಎಲ್ಲ ಆಯಾಮಗಳನ್ನೂ ಒಳಗೊಂಡ ಅರಿವು ನಮ್ಮದಾಗಬೇಕು; ಅಂಥ ಓದು ನಮ್ಮದಾಗಬೇಕು ಎನ್ನುತ್ತಿದೆ ಸುಭಾಷಿತ. ಹೀಗಾಗಿಯೇ ಅದು ‘ಬುದ್ಧಿಶಕ್ತಿಯನ್ನು ಬೆಳೆಸುವ ಗ್ರಂಥಗಳನ್ನೂ, ಧನಸಂಪಾದನೆಗೆ ಉಪಯುಕ್ತವಾದವುಗಳನ್ನೂ, ಪರಹಿತಕ್ಕಾಗಿ ಉಪಯೋಗಿಸಬಹುದಾದ ಶಾಸ್ತ್ರಗಳನ್ನೂ, ವೇದದ ಅರ್ಥವನ್ನು ತಿಳಿಸಿಕೊಡುವ ದರ್ಶನಾದಿ ಗ್ರಂಥಗಳನ್ನೂ ಯಾವಾಗಲೂ ಓದುತ್ತಿರಬೇಕು’ ಎಂದಿರುವುದು.

ನಾವು ಬುದ್ಧಿಶಕ್ತಿಯನ್ನು ಸಂಪಾದಿಸಬೇಕು; ಇದಿಷ್ಟೇ ಇದ್ದರೆ ಸಾಲದು, ಹಣವೂ ಬೇಕು. ಹಣವನ್ನು ಸುಮ್ಮನೆ ಕೂಡಿ‌ಟ್ಟರೆ ಏನು ಪ್ರಯೋಜನ? ಅದು ಪರರ ಸಂತೋಷಕ್ಕೂ ಒಳಿತಿಗೂ ನೆರವಾಗಬೇಕು. ಇಷ್ಟೆಲ್ಲ ಚಟುವಟಿಕೆಗಳ ನಡುವೆಯೇ ನಾವು ನಮ್ಮ ಜೀವನದ ಸಾರ್ಥಕತೆಯನ್ನೂ ಕಂಡುಕೊಳ್ಳಬೇಕು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ಬುದ್ಧಿಶಕ್ತಿಗಾಗಿ, ಧನಸಂಪಾನೆಗಾಗಿ, ಪರಹಿತಕ್ಕಾಗಿ ಮತ್ತು ವೇದಾರ್ಥದ ತಿಳಿವಳಿಕೆಗಾಗಿ ಅಧ್ಯಯನ ಆವಶ್ಯಕ ಎಂದು.

ಇಂದು ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕವಿದೆ ಎನ್ನುತ್ತಿದ್ದಾರೆ ಕೆಲವರು. ಇದು ನಿಜವೋ ಸುಳ್ಳೋ – ಅದು ಬೇರೆ ಮಾತು. ಆದರೆ ಒಂದಂತೂ ನಿಜ, ಅದೆಂದರೆ, ವೈವಿಧ್ಯಮಯವಾದ ಓದು ನಮ್ಮಲ್ಲಿ ಕಡಿಮೆಯಾಗುತ್ತಿದೆ. ಪೂರ್ವಗ್ರಹಗಳಿಂದ ಕೂಡಿದ ಸಂಕುಚಿತ ಮನಃಸ್ಥಿತಿಯಲ್ಲಿ ನಮ್ಮ ಸೀಮಿತ ಓದು ನಡೆದಿದೆ. ನಮ್ಮ ಜೀವನದ ಸಮಗ್ರತೆಯನ್ನು ಎತ್ತಿಹಿಡಿಯವಂಥ ಓದು ನಮ್ಮದಾಗಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು