ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸದಾ ಸುಖಿ

Last Updated 10 ಡಿಸೆಂಬರ್ 2020, 2:49 IST
ಅಕ್ಷರ ಗಾತ್ರ

ಉದೇತಿ ಸವಿತಾ ತಾಮ್ರಸ್ತಾಮ್ರ ಏವಾಸ್ತಮೇತಿ ಚ ।

ಸಂಪತ್ತೌ ಚ ವಿಪತ್ತೌ ಚ ಮಹತಾಮೇಕರೂಪತಾ ।।

ಇದರ ತಾತ್ಪರ್ಯ ಹೀಗೆ:

‘ಸೂರ್ಯನು ಕೆಂಪಾಗಿಯೇ ಹುಟ್ಟುತ್ತಾನೆ; ಕೆಂಪಾಗಿಯೇ ಮುಳುಗುತ್ತಾನೆ. ಸಂಪತ್ತು ಇರಲಿ, ವಿಪತ್ತು ಬರಲಿ; ಸುಖ ಇರಲಿ, ಕಷ್ಟ ಬರಲಿ. ಮಹಾತ್ಮರ ಸ್ವರೂಪ ಮಾತ್ರ ಒಂದೇ ವಿಧದಲ್ಲಿ ಇರುತ್ತದೆ.’

ದಿನನಿತ್ಯದ ವಿದ್ಯಮಾನವೊಂದನ್ನು ವರ್ಣಿಸುವ ಮೂಲಕ ಸುಭಾಷಿತವು ಮಹಾತ್ಮರ ವಿಶಿಷ್ಟ ಗುಣದ ಬಗ್ಗೆ ಹೇಳುತ್ತಿದೆ.

ನಮ್ಮ ಮುಖವನ್ನು ನೋಡಿದ ಕೂಡಲೇ ನಾವು ಈಗ ಎಂಥ ಪರಿಸ್ಥಿತಿಯಲ್ಲಿದ್ದೇವೆ ಎಂದು ಇತರರಿಗೆ ಗೊತ್ತಾಗಿಬಿಡುತ್ತದೆ; ಸುಖದಲ್ಲಿ ನಮ್ಮ ಮುಖ ಅರಳಿರುತ್ತದೆ, ದುಃಖದಲ್ಲಿ ಅದು ಬಾಡಿಹೋಗಿರುತ್ತದೆ. ಆದರೆ ಮಹಾತ್ಮರು ಹೀಗೆ ಸುಖದಲ್ಲಿ ಹಿಗ್ಗುವುದೂ ಇಲ್ಲ, ದುಃಖದಲ್ಲಿ ಕುಗ್ಗುವುದೂ ಇಲ್ಲ. ಇದನ್ನೇ ಸುಭಾಷಿತ ಹೇಳುತ್ತಿರುವುದು.

ಸೂರ್ಯನು ದಿನವೂ ಪೂರ್ವದಲ್ಲಿ ಹುಟ್ಟುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ. ಇದು ನಮಗೆ ಪ್ರತ್ಯಕ್ಷವಾಗಿರುವ ಸಂಗತಿ. ನಾವೆಲ್ಲರೂ ಜನ್ಮವನ್ನು, ಎಂದರೆ ಹುಟ್ಟನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತೇವೆ. ಆದರೆ ಅವಸಾನವನ್ನು, ಎಂದರೆ ಮುಳುಗುವುದನ್ನು ನೆನಸಿಕೊಂಡರೂ ಸಾಕು ಹೆದರುತ್ತೇವೆ, ಕಂಗಾಲಾಗುತ್ತೇವೆ. ಹುಟ್ಟುವುದು ಏಳಿಗೆಯನ್ನು ಸೂಚಿಸುತ್ತದೆ; ಮುಳುಗುವುದು ಅವನತಿಯನ್ನು ಸೂಚಿಸುತ್ತದೆ. ನಾವೀಗ ಲಾಭದ ಪಥದಲ್ಲಿದ್ದೇವೋ ಅಥವಾ ನಷ್ಟದ ದಾರಿಯಲ್ಲಿದ್ದೇವೋ ಎಂದು ನಾವೇನೂ ಯಾರಿಗೂ ಬಾಯಿಬಿಟ್ಟು ಹೇಳಬೇಕಾಗಿರುವುದಿಲ್ಲ; ನಮ್ಮ ಮುಖ, ಮಾತು, ನಡಿಗೆ – ಹೀಗೆ ನಮ್ಮ ನಡೆ–ನುಡಿಗಳೇ ಈ ಸಂಗತಿಗಳನ್ನು ಜಗತ್ತಿಗೆ ಸಾರುತ್ತಿರುತ್ತದೆ. ಆದರೆ ಸೂರ್ಯನನ್ನು ಗಮನಿಸಿ: ಅವನು ಹುಟ್ಟುವಾಗಲೂ ಕೆಂಪಾಗಿರುತ್ತಾನೆ, ಮುಳುಗುವಾಗಲೂ ಕೆಂಪಾಗಿಯೇ ಇರುತ್ತಾನೆ. ಎಂದರೆ ಅವನು ಹುಟ್ಟನ್ನೂ ಅವಸಾನವನ್ನೂ, ಲಾಭವನ್ನೂ ನಷ್ಟವನ್ನೂ, ಸುಖವನ್ನೂ ಕಷ್ಟವನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸುತ್ತಿದ್ದಾನೆ; ಅವನು ಹಿಗ್ಗಿನಲ್ಲೂ ಕುಗ್ಗಿನಲ್ಲೂ ಒಂದೇ ರೀತಿಯಲ್ಲಿರುತ್ತಾನೆ. ಸುಭಾಷಿತ ಹೇಳುತ್ತಿದೆ: ಇದೇ ಮಹಾತ್ಮರ ಗುಣ.

ಸುಖದಲ್ಲೂ ದುಃಖದಲ್ಲೂ ನಾವು ಒಂದೇ ವಿಧದಲ್ಲಿ ಇರುವುದು ಸುಲಭವಲ್ಲ, ಹೌದು. ಅದಕ್ಕೆ ಸಾಕಷ್ಟು ಸಾಧನೆ ಬೇಕು; ಮಾನಸಿಕ ಸಿದ್ಧತೆ ಬೇಕು, ದಿಟ. ಆದರೆ ನಾವು ಅದನ್ನು ರೂಢಿಸಿಕೊಂಡರೆ ಜೀವನವು ಸದಾ ಸುಂದರವಾಗಿಯೇ ಕಾಣುತ್ತಿರುತ್ತದೆ; ಇದರಲ್ಲಿ ಅನುಮಾನ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT