ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಬ್ರಹ್ಮಾನಂದ ಎಂಬ ನಿಧಿ

Last Updated 24 ಜೂನ್ 2021, 1:07 IST
ಅಕ್ಷರ ಗಾತ್ರ

ಬ್ರಹ್ಮಾನಂದ ನಿಧಿರ್ಮಹಾಬಲವತಾsಹಂಕಾರ–ಘೋರಾಹಿನಾ

ಸಂವೇಷ್ಟ್ಯಾತ್ಮನಿ ರಕ್ಷತೇ ಗುಣಮಯೈಶ್ಚಂಡೈಸ್ತ್ರಿಭಿರ್ಮಸ್ತಕೈಃ ।

ವಿಜ್ಞಾನಾಖ್ಯಮಹಾಸಿನಾ ದ್ಯುತಿಮತಾ ವಿಚ್ಛಿದ್ಯ ಶೀರ್ಷತ್ರಯಂ

ನಿರ್ಮೂಲ್ಯಾಹಿಮಿಮಂ ವಿಧಿಂ ಸುಖಕರಂ ಧೀರೋsಭೋಕ್ತುಂ ಕ್ಷಮಃ ।।

ಇದರ ತಾತ್ಪರ್ಯ ಹೀಗೆ:

‘ಮಹಾಬಲವುಳ್ಳ ಅಹಂಕಾರ ಎಂಬ ಘೋರಸರ್ಪವು ಬ್ರಹ್ಮಾನಂದ ಎಂಬ ನಿಧಿಯನ್ನು ಸತ್ತ್ವ ರಜಸ್ಸು ತಮಸ್ಸು ಎಂಬ ಗುಣಗಳಿಂದ ರೋಷಗೊಂಡಿರುವ ಮೂರು ಹೆಡೆಗಳಿಂದ ಸುತ್ತುಕೊಂಡು ತನ್ನಲ್ಲಿಯೇ ರಕ್ಷಣೆಯನ್ನು ಪಡೆದಿರುತ್ತದೆ. ಬ್ರಹ್ಮಜ್ಞಾನ ಎಂಬ ಥಳಥಳಿಸುವ ದೊಡ್ಡ ಕತ್ತಿಯಿಂದ ಮೂರು ಹೆಡೆಗಳನ್ನೂ ಕತ್ತರಿಸಿ, ಈ ಸರ್ಪವನ್ನು ನಾಶಮಾಡಿ, ಆನಂದಕರವಾದ ಈ ನಿಧಿಯನ್ನು ಅನುಭವಿಸಲು ಧೀಮಂತನಾದವನೇ ಶಕ್ತನಾಗಿರುತ್ತಾನೆ.’

ಇಲ್ಲಿ ಅಹಂಕಾರದ ಖಂಡನೆಯಿದೆ. ನಾನು–ನನ್ನದು, ನನ್ನ ಈ ಶರೀರವೇ ನಾನು – ಇಂಥ ಸ್ವಾರ್ಥಕೇಂದ್ರಿತ ಬುದ್ಧಿಯೇ ಅಹಂಕಾರ. ಇಲ್ಲಿ ಅಹಂಕಾರವನ್ನು ದೊಡ್ಡ ಹಾವಿಗೆ ಹೋಲಿಸಲಾಗಿದೆ. ಈ ಹಾವಿಗಾದರೋ ಮೂರು ಹೆಡೆಗಳು; ಅವೇ ಸತ್ತ್ವ ರಜಸ್ಸು ಮತ್ತು ತಮಸ್ಸುಗಳು. ಈ ಮೂರು ಗುಣಗಳೇ ಮನುಷ್ಯನ ಅಹಂಕಾರಕ್ಕೆ, ಎಂದರೆ ಅಭಿಮಾನಕ್ಕೆ ಕಾರಣ. ಈ ಗುಣಗಳು ಇರುವುದಾದರೂ ಎಲ್ಲಿ? ನಮ್ಮಲ್ಲಿಯೇ. ಇದನ್ನೇ ಈ ಪದ್ಯ ಹೇಳುತ್ತಿರುವುದು, ಮೂರು ಹೆಡೆಗಳ ಈ ಮಹಾಸರ್ಪ ನಮ್ಮಲ್ಲಿಯೇ ಸುತ್ತುಕೊಂಡು ಆಶ್ರಯವನ್ನು ಪಡೆದಿರುತ್ತದೆ ಎಂದು.

ಬ್ರಹ್ಮಾನಂದಕ್ಕೆ ಅಡ್ಡಿಯಾಗಿರುವುದೇ ಈ ಅಹಂಕಾರ; ಈ ಸಂಕುಚಿತ ಬುದ್ಧಿ, ಎಂದರೆ ಅವಿದ್ಯೆಯಿಂದ ಮುಕ್ತನಾಗದ ವಿನಾ ನಮಗೆ ಬ್ರಹ್ಮಾನಂದ ದಕ್ಕದು ಎಂಬುದು ಶಾಸ್ತ್ರಗಳ ಒಕ್ಕಣೆ. ಹೀಗಾಗಿ ವಿದ್ಯೆ ಎಂಬ, ಅರಿವು ಎಂಬ ಹರಿತವಾದ ಕತ್ತಿಯಿಂದ ಈ ಹಾವನ್ನು ಕತ್ತರಿಸಬೇಕು; ಆಮೇಲಷ್ಟೆ ಅವಿದ್ಯೆಯು ತೊಲಗುತ್ತದೆ, ಬ್ರಹ್ಮಾನಂದದ ಅನುಭೂತಿಯಾದ ಆನಂದವು ಸಿಕ್ಕುತ್ತದೆ.

ಇಲ್ಲಿ ಆನಂದನಿಧಿ ಎಂದು ಹೇಳಿರುವುದು ಕೂಡ ಗಮನಾರ್ಹ. ನಿಧಿಯನ್ನು ಸರ್ಪ ಕಾಯುತ್ತಿರುತ್ತದೆ ಎಂಬ ನಂಬಿಕೆ ಲೋಕದಲ್ಲಿರುವುದಷ್ಟೆ. ಅಂತೆಯೇ ಬ್ರಹ್ಮಾನಂದ ಎಂಬ ನಿಧಿಯನ್ನು ಅಹಂಕಾರ ಎಂಬ ಮೂರು ಹೆಡೆಗಳ ಹಾವು ಕಾಯುತ್ತಿದೆ ಎಂದು ತಾತ್ಪರ್ಯ. ಈ ಹಾವನ್ನು ಓಡಿಸಿದರೆ ಮಾತ್ರ ನಮಗೆ ಆ ನಿಧಿ ದೊರಕುತ್ತದೆ. ಈ ಕೆಲಸವನ್ನು ಧೀಮಂತ, ಎಂದರೆ ಜ್ಞಾನಿಯಾದವನು ಮಾತ್ರವೇ ಮಾಡಬಲ್ಲ; ಅವನೇ ನಿಜವಾದ ಶೂರ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT