ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಎಚ್ಚರ ಇದ್ದರೆ ಭಯ ಇಲ್ಲ

Last Updated 23 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಮ್‌ ।

ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ ।।

ಇದರ ತಾತ್ಪರ್ಯ ಹೀಗೆ:

‘ಓದುವವನಿಗೆ ದಡ್ಡತನ ಇರುವುದಿಲ್ಲ; ಜಪ ಮಾಡುವವನಿಗೆ ಪಾಪ ಇರುವುದಿಲ್ಲ; ಮೌನವಾಗಿರುವವನಿಗೆ ಜಗಳದ ಭಯ ಇರುವುದಿಲ್ಲ; ಸದಾ ಎಚ್ಚರವಾಗಿರುವವನಿಗೆ ಯಾವುದರಿಂದಲೂ ಭಯ ಇರುವುದಿಲ್ಲ.’

ನಮ್ಮಲ್ಲಿ ಎಷ್ಟೋ ದೋಷಗಳು ಇರುತ್ತವೆ; ಕೆಲವೊಂದು ಹುಟ್ಟಿನಿಂದಲೇ ಇರುತ್ತವೆ, ಕೆಲವೊಂದು ಆಮೇಲೆ ಸೇರಿಕೊಳ್ಳುತ್ತವೆ. ಆದರೆ ಎಷ್ಟೋ ದೋಷಗಳಿಗೆ ಪರಿಹಾರದ ದಾರಿಯೂ ಇರುತ್ತದೆ. ಅದನ್ನು ನಾವು ಕಂಡುಕೊಳ್ಳಬೇಕು. ಆ ದಾರಿಯಲ್ಲಿ ನಡೆಯಬೇಕು. ಆಗ ದೋಷದಿಂದ ನಾವು ಮುಕ್ತರಾಗಬಹುದು.

ಸುಭಾಷಿತ ಅಂಥ ಕೆಲವೊಂದು ಪರಿಹಾರದ ದಾರಿಗಳನ್ನು ಸೂಚಿಸಿದೆ.

ನಾವು ಎಲ್ಲರೂ ಹುಟ್ಟಿನಿಂದ ದಡ್ಡರೇ. ಈ ದಡ್ಡತನನ್ನು ಹೋಗಾಲಾಡಿಸಿಕೊಳ್ಳಲು ಇರುವ ದಾರಿ ಎಂದರೆ ಓದು. ಈ ಓದಿನ ಆಯ್ಕೆಯಲ್ಲೂ ಜಾಣತನ ಇರಬೇಕು. ಕೇವಲ ನಮಗೆ ಇಷ್ಟವಾದುದುನ್ನು ಮಾತ್ರವೇ ಓದುವುದಲ್ಲ; ನಮ್ಮ ಅಭಿಪ್ರಾಯಗಳಿಗೆ ವಿರುದ್ಧವಾಗಿರುವುದನ್ನೂ ಓದಬೇಕು. ಆಗ ಎರಡೂ ಅಭಿಪ್ರಾಯಗಳ ನಡುವೆ ಮಂಥನ ನಡೆದು, ನಾವು ಸರಿಯಾದ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ.

ನಮ್ಮಿಂದ ಎಷ್ಟೋ ಅಧಾರ್ಮಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಅವುಗಳಿಂದ ಪಾಪವೂ ಉಂಟಾಗುತ್ತಿರುತ್ತದೆ. ಭಗವಂತನನ್ನು ಕುರಿತ ಜಪಸಾಧನೆಯೇ ನಮ್ಮ ಎಲ್ಲ ಪಾಪಗಳನ್ನು ಹೋಗಲಾಡಿಸುತ್ತದೆ ಎನ್ನುವುದು ಶಾಸ್ತ್ರಗಳ ಮಾತು.

ಜಗಳದ ಮೂಲ ಎಲ್ಲಿರುತ್ತದೆ? ನಮ್ಮ ಮಾತಿನಲ್ಲಿಯೇ ಹೌದು. ನಾವಾಡುವ ಮಾತುಗಳೇ ಜಗಳಕ್ಕೆ ಕಾರಣ ಎನ್ನುವುದು ಸ್ಪಷ್ಟ. ಎಷ್ಟೋ ಸಂದರ್ಭಗಳಲ್ಲಿ ಮೌನವಾಗಿದ್ದರೆ ಆಗ ಜಗಳದ ಪ್ರಸಕ್ತಿಯೇ ಉಂಟಾಗುವುದಿಲ್ಲ. ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬ ಅರಿವು ತುಂಬ ಮುಖ್ಯ.

ಸುಭಾಷಿತ ಹೇಳಿರುವ ಕೊನೆಯ ಮಾತು ತುಂಬ ಸ್ವಾರಸ್ಯಕರವಾಗಿದೆ. ನಾವು ಸದಾ ಎಚ್ಚರವಾಗಿದ್ದರೆ ಆಗ ಯಾವುದರಿಂದಲೂ ಭಯವೇ ಎದುರಾಗದು. ಎಂದರೆ ನಾವು ಮಾಡುವ ಪ್ರತಿ ಕೆಲಸವನ್ನೂ ತುಂಬ ಎಚ್ಚರಿಕೆಯಿಂದ, ಮೈಯೆಲ್ಲ ಕಣ್ಣಾಗಿಸಿಕೊಂಡು, ಮಾಡಬೇಕು. ಈ ಕೆಲಸ ಮಾಡುವುದರಿಂದ ಹೀಗೆಲ್ಲ ಆಗಬಹುದು – ಎಂಬ ಎಚ್ಚರಿಕೆ ನಮ್ಮ ಕೆಲಸವನ್ನು ಸರಿಯಾಗಿ ಮೌಲ್ಯಮಾಪನ ಮಾಡುತ್ತದೆ. ಆಗ ನಾವು ಮುಂದೆ ಎದುರಾಗಬಹುದುದಾದ ತೊಂದರೆಯಿಂದ ಹೆದರುವ ಆವಶ್ಯಕತೆಯೇ ಉಂಟಾಗದು.

ಸದಾ ಎಚ್ಚರವಾಗಿರೋಣ; ಭಯದಿಂದ ಮುಕ್ತರಾಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT