ಗುರುವಾರ , ನವೆಂಬರ್ 26, 2020
19 °C

ದಿನದಸೂಕ್ತಿ | ಸ್ನೇಹದ ಜಿಡ್ಡು

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ದುಗ್ಧಂ ಪಯಸ್ತದಪಿ ಚ ಕ್ವಥಿತಂ ತದೇವ
ಮಾಧುರ್ಯಮಪ್ಯಪಹೃತಂ ಮಥಿತಂ ಚ ವೇಗಾತ್ ।
ದಗ್ಧಃ ಪುನರ್ಘೃತಕೃತೇ ನವನೀತಪಿಂಡಃ
ಸ್ನೇಹಸ್ತು ಕಾರಣಮನರ್ಥಪರಂಪರಾಯಾಃ ।।

ಇದರ ತಾತ್ಪರ್ಯ ಹೀಗೆ:

‘ಹಾಲಿನಿಂದ ತುಪ್ಪವನ್ನು ಪಡೆಯಬೇಕಾದರೆ, ಮೊದಲು ಹಸುವಿನ ಕೆಚ್ಚಲಿನಿಂದ ಹಾಲನ್ನು ಕರೆದು, ಬಳಿಕ ಅದನ್ನು ಕಾಯಿಸಿ, ಅದರ ಮಾಧುರ್ಯವನ್ನು ಕಳೆದು, ಹುಳಿಯಾದ ಮೊಸರನ್ನಾಗಿಸಿ, ಅದನ್ನು ಕಡೆಗೋಲಿನಿಂದ ವೇಗವಾಗಿ ಕಡೆಯಬೇಕು. ಆಮೇಲೆ ಬೆಣ್ಣೆಯ ಮುದ್ದೆಯನ್ನು ಮತ್ತೆ ಕಾಯಿಸಬೇಕು. ಇಷ್ಟು ಶ್ರಮಪಟ್ಟರೆ ಮಾತ್ರ ’ಸ್ನೇಹ’ ದೊರಕುತ್ತದೆ.’

ಇಲ್ಲೊಂದು ಸ್ವಾರಸ್ಯವುಂಟು. ಸ್ನೇಹ – ಎಂದರೆ ಜಿಡ್ಡು ಎಂದೂ ಅರ್ಥವಿದೆ; ಮಿತ್ರತ್ವ ಎಂದೂ ಅರ್ಥವಿದೆ. ಇಲ್ಲಿ ಜಿಡ್ಡು ಎಂದರೆ ತುಪ್ಪ ಎಂದು ಅರ್ಥ. ಸ್ನೇಹವನ್ನು ಸಂಪಾದಿಸುವುದು ಎಷ್ಟು ಕಷ್ಟ – ಎಂಬುದನ್ನು ಸುಭಾಷಿತ ತುಪ್ಪದ ನೆಪದಲ್ಲಿ ಹೇಳುತ್ತಿದೆ.

ತುಪ್ಪವನ್ನು ಪಡೆಯುವುದು ಸುಲಭವಲ್ಲ. ಅದನ್ನು ಸುಭಾಷಿತ ವಿವರವಾಗಿಯೇ ಹೇಳಿದೆ. ನಮ್ಮ ಇಂದಿನ ನಗರಪ್ರದೇಶಗಳಲ್ಲಿರುವ ಹಲವರು ಮಕ್ಕಳಿಗೆ ತುಪ್ಪ ಹೇಗೆ ಸಿಗುತ್ತದೆ ಎಂಬ ಮಾಹಿತಿಯೇ ಇಲ್ಲದಿರಬಹುದು. ಆಧುನಿಕತೆ ಇಂಥ ಹಲವು ಸಂಗತಿಗಳ ಬಗ್ಗೆ ಅರಿವೇ ಇರುವುದಿಲ್ಲ ಎಂಬುದು ವಾಸ್ತವ.

ಸ್ನೇಹವನ್ನು ಸಂಪಾದಿಸುವುದೂ ಸುಲಭವಲ್ಲ. ನಿಜವಾದ ಸ್ನೇಹಿತರನ್ನು ಪಡೆದವರಿಗೆ ಈ ಶ್ರಮದ ಬಗ್ಗೆ ಅರಿವು ಇರುತ್ತದೆ. ಮಾತ್ರವಲ್ಲ, ಅಂಥವರು ಮಾತ್ರವೇ ಸ್ನೇಹವನ್ನು ಉಳಿಸಿಕೊಳ್ಳಲೂ ತವಕಿಸುತ್ತಿರುತ್ತಾರೆ.

ಸ್ನೇಹ ಎಲ್ಲರಿಗೂ ಸುಲಭವಾಗಿ ದಕ್ಕುವಂಥದ್ದಲ್ಲ. ಅದೊಂದು ಹೊಣೆಗಾರಿಕೆ; ಸುಂದರಭಾವ; ಜೀವನಕ್ಕೆ ದಕ್ಕುವ ನಿಧಿ. ಯಾವುದೋ ಸ್ವಾರ್ಥದ ಉದ್ದೇಶದಿಂದ ನಮಗೆ ಹಲವರ ಪರಿಚಯ ಆಗುತ್ತದೆ. ಆದರೆ ಈ ಪರಿಚಯವನ್ನೇ ಸ್ನೇಹ ಎಂದು ಹೇಳಲು ಆಗದು. ಸ್ನೇಹದಲ್ಲಿ ಪರಸ್ಪರ ಗೌರವ, ಪ್ರೀತಿ, ಕಾಳಜಿ, ಸರಸತೆ – ಇಂಥ ಹಲವು ಗುಣಗಳು ಸೇರಿಕೊಂಡಿರುತ್ತವೆ. 

ಸ್ನೇಹ ಕೇವಲ ಗಂಡು–ಗಂಡು ಅಥವಾ ಹೆಣ್ಣು–ಹೆಣ್ಣು – ಇಂಥ ಸಮೀಕರಣದಲ್ಲೇ ಆಗಬೇಕೆಂದೇನಿಲ್ಲ. ಗಂಡು ಮತ್ತು ಹೆಣ್ಣಿನ ನಡುವೆಯೂ ಒಳ್ಳೆಯ ಸ್ನೇಹ ಏರ್ಪಡಬಹುದು. ನಿಜವಾದ ಸ್ನೇಹದಲ್ಲಿ ಆಸ್ತಿ–ಅಂತಸ್ತುಗಳ ಕೈವಾಡವೂ ಇರುವುದಿಲ್ಲ; ವಿದ್ಯೆ–ಅಧಿಕಾರಗಳ ನಿರ್ಬಂಧವೂ ಇರುವುದಿಲ್ಲ. ಎರಡು ಒಳ್ಳೆಯ ಮನಸ್ಸುಗಳು ಸೇರುವುದೇ ಸ್ನೇಹತೀರ್ಥದ ಉಗಮಸ್ಥಾನ.

ಒಳ್ಳೆಯ ಸ್ನೇಹವನ್ನು ಸಂಪಾದಿಸೋಣ; ಒಳ್ಳೆಯ ಸ್ನೇಹಿತರಾಗಿಯೂ ಇರೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು