ಮಂಗಳವಾರ, ಅಕ್ಟೋಬರ್ 27, 2020
22 °C

ದಿನದ ಸೂಕ್ತಿ: ವಿನಯದ ಸೊಗಸು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ನಭೋಭೂಷಾ ಪೂಷಾ ಕಮಲವನಭೂಷಾ ಮಧುಕರೋ

ವಚೋಭೂಷಾ ಸತ್ಯಂ ವರವಿಭವಭೂಷಾ ವಿತರಣಮ್‌ ।

ಮನೋಭೂಷಾ ಮೈತ್ರೀ ಮಧುಸಮಯಭೂಷಾ ಮನಸಿಜಃ

ಸದೋಭೂಷಾ ಸೂಕ್ತಿಃ ಸಕಲಗುಣಭೂಷಾ ಚ ವಿನಯಃ‌ ।।

ಇದರ ತಾತ್ಪರ್ಯ ಹೀಗೆ:

‘ಆಕಾಶಕ್ಕೆ ಸೂರ್ಯನೂ, ಕಮಲವನಕ್ಕೆ ದುಂಬಿಯೂ, ಮಾತಿಗೆ ಸತ್ಯವೂ, ಹೆಚ್ಚಾಗಿರುವ ಸಂಪತ್ತಿಗೆ ದಾನವೂ, ಮನಸ್ಸಿಗೆ ಸ್ನೇಹವೂ, ವಸಂತಕಾಲಕ್ಕೆ ಪ್ರೇಮವೂ, ಸಭೆಗೆ ಸೂಕ್ತಿಯೂ, ಎಲ್ಲ ಗುಣಗಳಿಗೂ ವಿನಯವೂ ಭೂಷಣಗಳು.‘

ಪ್ರತಿಯೊಂದು ವಸ್ತುವಿಗೂ ಅದರ ಸೊಗಸನ್ನು ಹೆಚ್ಚಿಸಬಲ್ಲ ಅದರದ್ದೇ ಆದ ಅಂಗವೊಂದು ಇದ್ದೇ ಇರುತ್ತದೆ; ಸೊಗಸಿನ ಜೊತೆಗೆ ಅದು ಅದರ ಬೆಲೆಯನ್ನೂ ಹೆಚ್ಚಿಸುತ್ತದೆ. ಆ ವಸ್ತುವಿನ ಪ್ರಯೋಜನಕ್ಕೂ ಸಾರ್ಥಕತೆಗೂ ಅದು ಕಾರಣವಾಗಿರುತ್ತದೆ. ಸುಭಾಷಿತ ಇದನ್ನೇ ಇಲ್ಲಿ ಹೇಳುತ್ತಿರುವುದು.

ಇಡಿಯ ಆಕಾಶಕ್ಕೆ ಭೂಷಣ ಎಂದರೆ ಸೂರ್ಯ. ಹೌದು, ಸೂರ್ಯನಿಲ್ಲದ ಆಕಾಶವನ್ನು ಊಹಿಸಿಕೊಳ್ಳಲೂ ಆಗದು. ಕಮಲವನಕ್ಕೆ ದುಂಬಿಯೇ ಭೂಷಣ; ದುಂಬಿಗಳು ಅಲ್ಲಿವೆ ಎಂದರೆ ಹೂವಿನಲ್ಲಿ ಮಕರಂದವೂ ಇದೆ ಎಂಬುದು ಗೊತ್ತಾಗುತ್ತದೆ; ಜೊತೆಗೆ ಕಮಲಗಳ ದೃಶ್ಯವೈಭವಕ್ಕೆ ದುಂಬಿಗಳ ಝೇಂಕಾರ ಸಂಗೀತವಾಗಿ ಒದಗಿ, ಅಲ್ಲಿಯ ಪರಿಸರವನ್ನು ಇನ್ನಷ್ಟು ಸುಂದರಗೊಳಿಸುತ್ತದೆ. 

ಸಾವಿರ ಮಾತುಗಳನ್ನು ಆಡಬಹುದು; ಆದರೆ ಆ ಎಲ್ಲ ಮಾತುಗಳಿಗೂ ಒಂದು ವ್ಯಕ್ತಿತ್ವ ಬರುವುದೇ ಅವು ಸತ್ಯವನ್ನು ಹೇಳಲು ಹೊರಟಾಗ. ಹೀಗಾಗಿ ಮಾತಿಗೆ ಭೂಷಣವೇ ಸತ್ಯ.

ನಮ್ಮ ಸಂಪತ್ತಿಗೆ ಅಲಂಕಾರ ಯಾವುದು? ದಾನವೇ ಸಂಪತ್ತಿಗೆ ಭೂಷಣ. ನಾವು ಕೂಡಿಟ್ಟ ಸಂಪತ್ತು ನಾಲ್ಕು ಜನರಿಗೆ ಉಪಯೋಗವಾಗಬೇಕು; ಆದರೆ ಅದಕ್ಕೆ ಸಾರ್ಥಕತೆ.

ಸ್ನೇಹವೇ ಮನಸ್ಸಿಗೆ ಭೂಷಣ ಎಂದಿದೆ ಸುಭಾಷಿತ. ಮನಸ್ಸಿನ ವೈಶಾಲ್ಯಕ್ಕೂ ಇದು ಸಂಕೇತ; ಸೊಗಸಿಗೂ ಸಂಕೇತ; ಆರೋಗ್ಯಕ್ಕೂ ಸಂಕೇತ.

ಪ್ರಕೃತಿಯಲ್ಲಿ ಕಾಣುವ ಸುಂದರ ಋತು ಎಂದರೆ ವಸಂತಋತು. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇದರ ಸಾರ್ಥಕತೆ ಪ್ರೇಮಭಾವದಲ್ಲಿಯೇ ಇದೆ. ‍ಪ್ರೀತಿ–ಪ್ರೇಮ–ಶೃಂಗಾರಗಳಿಗೆ ಇದು ಒಪ್ಪುವಂಥ ಸಮಯವೂ ಹೌದು. ಹೀಗಾಗಿ ವಸಂತಸಮಯದಲ್ಲಿ ಮನ್ಮಥನೇ ಭೂಷಣ.

ಸಭೆ ಎಂದರೆ ಭಾಷಣ ಆಗಬಹುದು; ನಾಲ್ಕಾರು ಜನರ ಮಧ್ಯೆ ನಿಂತು ಆಡುವ ಮಾತುಗಳು. ಈ ಮಾತುಗಳಿಗೆ ಕಳೆ ಬರುವುದೇ ಸೂಕ್ತಿಗಳ ಮೂಲಕ. ಸೂಕ್ತಿ ಎಂದರೇನೆ ಒಳ್ಳೆಯ ಮಾತು ಎಂಬ ಅರ್ಥವಿದೆ. ಮಹಾಪುರುಷರ ವಿಚಾರಪ್ರದ ಮಾತುಗಳೂ ಸೂಕ್ತಿಗಳೇ ಹೌದು. ಸುಂದರವೂ ಅರ್ಥಪೂರ್ಣವೂ ಆದ ಸೂಕ್ತಿಗಳನ್ನು ಉದ್ಧರಿಸಿ ಮಾತನಾಡಿದರೆ ಇಡಿಯ ಪರಿಸರಕ್ಕೇ ಜೀವಕಳೆ ಬರುತ್ತದೆ; ಕೇಳುಗರಲ್ಲೂ ಆಕರ್ಷಣೆ–ಉತ್ಸಾಹಗಳು ಹೆಚ್ಚುತ್ತವೆ.

ನಮ್ಮಲ್ಲಿ ನೂರು ಒಳ್ಳೆಯ ಗುಣಗಳು ಇರಬಹುದು; ನಮ್ಮದು ಸಾವಿರ ಸಾಧನೆಗಳೂ ಇರಬಹುದು. ಆದರೆ ಅವುಗಳಿಗೆ ಬೆಲೆ ಬರುವುದು ನಮ್ಮಲ್ಲಿ ವಿನಯ ಇದ್ದಾಗ ಮಾತ್ರ. ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಖ್ಯಾತ ಹಿನ್ನೆಲೆಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ವಿನಯಗುಣವನ್ನು ಎಲ್ಲರೂ ಹಾಡಿಹೊಗಳುತ್ತಿದ್ದಾರೆ. ಅಷ್ಟೆಲ್ಲ ಸಾಧನೆಮಾಡಿದ್ದರೂ ಅವರಲ್ಲಿ ಅಹಂಕಾರ ಇರಲಿಲ್ಲ; ವಿನಯದ ಮೂರ್ತರೂಪವೇ ಆಗಿದ್ದ ಅವರನ್ನು ಜನರು ನೂರ್ಕಾಲ ಸ್ಮರಿಸಿಕೊಳ್ಳುತ್ತಲೇ ಇರುತ್ತಾರೆ.

ನಮ್ಮ ಕಾಲದ ದೊಡ್ಡ ದುರಂತ ಎಂದರೆ ನಮಗೆ ವಿನಯದ ಬೆಲೆ ಗೊತ್ತಿಲ್ಲ; ವಿನಯದ ಸೊಗಸೂ ಗೊತ್ತಿಲ್ಲ. ವಿನಯವೇ ನಮ್ಮ ಎಲ್ಲ ಸಾಧನೆಗಳನ್ನೂ ಕಾಪಾಡುವ ಮಹಾಶಕ್ತಿ ಎಂಬುದನ್ನು ನಾವು ಇನ್ನಾದರೂ ತಿಳಿದುಕೊಳ್ಳಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.