ಬುಧವಾರ, ಅಕ್ಟೋಬರ್ 28, 2020
20 °C

ದಿನದ ಸೂಕ್ತಿ: ಅಧಿಕಾರ ಶಾಶ್ವತವಲ್ಲ

ಎಸ್‌. ಸೂರ್ಯಪ್ರಕಾಶ ಪಂಡಿತ್ Updated:

ಅಕ್ಷರ ಗಾತ್ರ : | |

Prajavani

ಅತ್ಯುಚ್ಚಪದಾಧ್ಯಾಸಃ ಪತನಾಯೇತ್ಯರ್ಥಶಾಲಿನಾಂ ಶಂಸತ್‌ ।
ಆಪಾಂಡು ಪತತಿಪತ್ತ್ರಂ ತರೋರಿದಂ ಬಂಧನಗ್ರಂಥೇಃ ।।

ಇದರ ತಾತ್ಪರ್ಯ ಹೀಗೆ:

‘ಮರದ ಬಿಳುಪಾದ ಎಲೆಯು ಮೇಲಿಂದ ಕೆಳಗೆ ಬೀಳುತ್ತದೆ. ಉನ್ನತ ಪದವಿಗೆ ಹೋದವರೆಲ್ಲರೂ ನನ್ನಂತೆಯೇ ಒಂದು ದಿನ ಬೀಳುವರು ಎಂಬ ನೀತಿಯನ್ನು ಅದು ತಿಳಿಸುತ್ತಿದೆ.‘

ಜಗತ್ತಿನ ಹಲವು ಸಂಸ್ಕೃತಿಗಳಲ್ಲಿ ಸೃಷ್ಟಿಯ ಬಗ್ಗೆ ಒಂದು ಕಲ್ಪನೆ ಇದೆ. ಇಡಿಯ ಸೃಷ್ಟಿ ಯಾವುದೋ ಒಂದು ದಿನ ನಾಶವಾಗುತ್ತದೆ. ಇದನ್ನೇ ಪ್ರಳಯ ಎನ್ನುವುದು. ನಮ್ಮ ಸಂಸ್ಕೃತಿಯಲ್ಲಂತೂ ಮಹೇಶ್ವರನನ್ನು ಪ್ರಳಯಕಾರಕ ಎಂದೇ ಕಾಣಿಸಲಾಗಿದೆ. ಸೃಷ್ಟಿಯೇ ಒಂದು ದಿನ ಕಣ್ಮರೆಯಾಗುತ್ತದೆ ಎಂದಿರುವಾಗ ಈ ಸೃಷ್ಟಿಯ ಭಾಗವಾಗಿರುವ ವಿವರಗಳು ಶಾಶ್ವತವಾಗಿರಲು ಸಾಧ್ಯವೆ?

ಹೌದು, ಕೆಲವರು ಶಾಶ್ವತ ಎಂದುಕೊಳ್ಳುತ್ತಾರೆ. ‘ನಾವು ಶಾಶ್ವತ, ನಮ್ಮ ಆಸ್ತಿ–ಅಧಿಕಾರ–ಪದವಿಗಳು ಇನ್ನೂ ಶಾಶ್ವತ‘ ಎಂಬ ಧೋರಣೆಯಿಂದ ನಡೆದುಕೊಳ್ಳುತ್ತಿರುತ್ತಾರೆ. ಅಂಥವರಿಗೆ ಸುಭಾಷಿತ ಬುದ್ಧಿಮಾತನ್ನೂ ಎಚ್ಚರಿಕೆಯನ್ನೂ ನೀಡುತ್ತಿದೆ.

ಮರದ ಮೇಲಿರುವ ಎಲೆ ಸಹಜವಾಗಿ ಉದುರಲೇಬೇಕಷ್ಟೆ. ಇದನ್ನೇ ಉದಾಹರಣೆಯಾಗಿ ತೆಗೆದುಕೊಂಡಿದೆ ಸುಭಾಷಿತ. ಮೇಲಿದೆ ಎನ್ನುವ ಕಾರಣದಿಂದ ಮರದ ಎಲೆಗಳು ಶಾಶ್ವತವಾಗಿ ಅಲ್ಲೇ ಇರಲಾರವು; ಬೀಳುವುದು ಪ್ರಕೃತಿಯ ಸಹಜಧರ್ಮ. ಹೀಗೆ ಮೇಲಿಂದ ಬೀಳುವ ಎಲೆ ಒಂದು ಸಂದೇಶವನ್ನು ರವಾನಿಸುತ್ತಿದೆಯಂತೆ. ಮೇಲೆ ಏರಿದವರು ಕೆಳಗೆ ಬೀಳಲೇಬೇಕು. ಇದೇ ಆ ಸಂದೇಶ.

ಇನ್ನು ಸುಭಾಷಿತ ನಮಗೆ ಕೊಡುತ್ತಿರುವ ಎಚ್ಚರಿಕೆ ಎಂದರೆ: ಮೇಲೆ ಏರಿದ್ದೇವೆ ಎಂದು ಬೀಗಬೇಡಿ. ಅಲ್ಲಿಂದ ಒಂದು ದಿನ ನೀವು ಬೀಳಲೇಬೇಕು.

ಇಲ್ಲಿ ಮೇಲೆ ಎಂದರೆ ಆಧಿಕಾರ, ಪದವಿ. ಕೆಲವರಿಗೆ ಅಧಿಕಾರ ಸಿಕ್ಕ ಕೂಡಲೇ ಇಂದ್ರಪದವಿಯೇ ಸಿಕ್ಕಂತೆ ಎಗರಾಡುತ್ತಾರೆ. ಆದರೆ ಆ ಇಂದ್ರನ ಪದವಿಯೇ ಶಾಶ್ವತವಲ್ಲ. ಇನ್ನು ಅರವತ್ತು ವರ್ಷಕ್ಕೆ ನಿವೃತ್ತಿಯಾಗುವ ಕೆಲಸದಲ್ಲಿ ಸಿಕ್ಕ ಅಧಿಕಾರ ಎಷ್ಟು ದಿನ ಶಾಶ್ವತವಾಗಿದ್ದೀತು? ಐದು ವರ್ಷದ ಚುನಾವಣೆ ತಂದುಕೊಡುವ ಪದವಿ ಎಷ್ಟು ಶಾಶ್ವತವಾಗಿದ್ದೀತು?

ಆದರೆ ನಮಗೆ ಅಧಿಕಾರ–ಪದವಿ ಸಿಕ್ಕಿದ ಕೂಡಲೇ ತಲೆ ಸುತ್ತುತ್ತದೆ; ನೆಟ್ಟಿಗೆ ಅದು ನಿಲ್ಲದು. ನಾನೂ ಶಾಶ್ವತ, ನನ್ನ ಅಧಿಕಾರವೂ ಶಾಶ್ವತ ಎಂಬಂತೆ ಹಾರಾಟ ಶುರುಮಾಡುತ್ತೇವೆ. ನಮ್ಮ ಮೇಲಿನವರ ದಯೆಯಿಂದಲೋ ತಂತ್ರಗಾರಿಕೆಯಿಂದಲೋ ನಮಗೆ ಪದವಿ ಸಿಕ್ಕಿರುತ್ತದೆ. ಆ ದಯೆಯ ಅವಧಿ ಮುಗಿದ ಮೇಲೆ ಅಲ್ಲಿಂದ ಎತ್ತಂಗಡಿ ಖಂಡಿತ ಎಂಬ ವಾಸ್ತವವನ್ನು ಮರೆಯುತ್ತೇವೆ. ಇಷ್ಟು ಮಾತ್ರವಲ್ಲ, ನಾವೇ ಶಾಶ್ವತವಲ್ಲ; ಇನ್ನು ನಮಗೆ ಒದಗಿರುವ ಅಧಿಕಾರ ಶಾಶ್ವತವಾಗಿದ್ದೀತೆ? ನಾವು ಯೋಚಿಸುವುದೇ ಇಲ್ಲ!

ಹೀಗೆಂದು ಪದವಿ–ಅಧಿಕಾರಗಳು ಶಾಶ್ವತವಲ್ಲ ಎಂದು ನಾವು ಕೊರಗುತ್ತಲೂ ಕೂರಬೇಕಾಗಿಲ್ಲ. ಅಧಿಕಾರದಲ್ಲಿದ್ದಷ್ಟು ದಿನ ಪ್ರಾಮಾಣಿಕವಾಗಿ ಸಮಾಜದ ಏಳಿಗೆಗಾಗಿ ಕರ್ತವ್ಯವನ್ನು ನಿರ್ವಹಿಸಿದರೆ ಆಗ ಸಿಗುವ ತೃಪ್ತಿ–ಜನಪ್ರೀತಿಗಳು ನಮ್ಮ ಅಧಿಕಾರದ ಅವಧಿಗಿಂತಲೂ ಹೆಚ್ಚು ದಿನ ಉಳಿಯುತ್ತದೆಯೆನ್ನಿ!‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು