ಶುಕ್ರವಾರ, ಸೆಪ್ಟೆಂಬರ್ 25, 2020
21 °C

ದಿನದ ಸೂಕ್ತಿ: ನಡೆ ಮುಂದೆ!

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಬದುಕು

ಕ್ಚಚಿದ್ವಿದ್ವಗೋಷ್ಠೀ ಕ್ವಚಿದಪಿ ಸುರಾಮತ್ತಕಲಹಃ

ಕ್ವಚಿದ್ವೀಣಾನಾದಃ ಕ್ವಚಿದಪಿ ಚ ಹಾಹೇತಿ ರುದಿತಮ್‌ ।

ಕ್ವಚಿದ್ರಮ್ಯಾ ರಾಮಾ ಕ್ವಚಿದಪಿ ಜರಾಜರ್ಜರತನುಃ

ನ ಜಾನೇ ಸಂಸಾರಃ ಕಿಮಮೃತಮಯಃ ಕಿಂ ವಿಷಮಯಃ ।।

ಇದರ ತಾತ್ಪರ್ಯ ಹೀಗೆ:

‘ಒಂದು ಕಡೆ ವಿದ್ವಾಂಸರ ಗೋಷ್ಠಿ; ಇನ್ನೊಂದು ಕಡೆ ಹೆಂಡಕುಡುಕರ ಜಗಳ. ಒಂದು ಕಡೆ ವೀಣಾನಾದ; ಇನ್ನೊಂದೆಡೆ ಹಾಹಾ ಎಂಬ ರೋದನ. ಒಂದು ಕಡೆ ಸುಂದರಿಯಾದ ತರುಣಿ; ಇನ್ನೊಂದು ಕಡೆ ಮುಪ್ಪಿನಿಂದ ಸೊರಗಿದ ಮುದುಕಿ. ಈ ಸಂಸಾರವು ಅಮೃತಮಯವೋ ವಿಷಯವೋ – ತಿಳಿಯುತ್ತಿಲ್ಲ.‘

ಜೀವನ ಎನ್ನುವುದು ಸಂಕೀರ್ಣ; ಹಲವು ವೈರುದ್ಧ್ಯಗಳ ನಡುವೆಯೇ ನಡೆಯುತ್ತಿರುತ್ತದೆ. ಹೀಗಾಗಿ ಜೀವನವನ್ನು ಹೀಗೆ – ಎಂದು ಹೇಳಲು ಕಷ್ಟವಾಗುತ್ತದೆ. ಒಮ್ಮೆ ಜೀವನ ಸುಖಮಯ ಎಂದು ಅನಿಸುತ್ತಿರುತ್ತದೆ; ಮರುಕ್ಷಣವೇ ಇಲ್ಲ ದುಃಖಮಯ ಎನಿಸಿಕೊಳ್ಳುತ್ತಿದೆ. ಸುಖಮಯ ಎನ್ನುವುದಕ್ಕೂ ಹತ್ತಾರು ಅನುಭವಗಳು ಕಾರಣವಾಗಿರುತ್ತವೆ; ದುಃಖಮಯ ಎನ್ನುವುದಕ್ಕೂ ಹತ್ತಾರು ಅನುಭವಗಳು ಕಾರಣವಾಗಿರುತ್ತವೆ. ಆದರೆ ಸುಖಮಯ ಎನ್ನುವುದೋ ಅಥವಾ ದುಃಖಮಯ ಎನ್ನುವುದೋ – ಹೇಗೆ ನಿರ್ಧರಿಸುವುದು.

ಸುಭಾಷಿತ ಹೇಳುತ್ತಿರುವುದು ಇದನ್ನೇ. ನಮಗೆ ಹಿತವಾಗಿರುವಂಥ ವಿವರಗಳೂ ಜೀವನದಲ್ಲಿ ಎದುರಾಗುತ್ತಲೇ ಇರುತ್ತವೆ, ಅಹಿತವಾಗಿರುವಂಥವೂ ಎದುರಾಗುತ್ತಲೇ ಇರುತ್ತವೆ. ಇದರ ನಡುವೆ ನಮಗೆ ಪ್ರಶ್ನೆಯೊಂದು ಉಳಿದುಕೊಳ್ಳುತ್ತದೆ: ಜೀವನಕ್ಕೆ ಅರ್ಥವೇನು?

ಬಸವಣ್ಣನವರ ವಚನವೊಂದನ್ನು ಈ ಸುಭಾಷಿತದ ಜೊತೆ ನೋಡಬಹುದು:

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು !

ಕೊಂದಹರೆಂಬುದನರಿಯದೆ

ಬೆಂದ ಒಡಲ ಹೊರೆಯಹೋಯಿತ್ತಲ್ಲದೆ !

ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು:

ಕೊಂದವರುಳಿದರೆ ಕೂಡಲಸಂಗಮದೇವ ?

ಜೀವನವನ್ನು ಹಬ್ಬ ಎಂದು ಭಾವಿಸಿಕೊಂಡು ಸಂಭ್ರಮಪಡುತ್ತಿರುತ್ತೇವೆ. ಆದರೆ ಆ ಸಂಭ್ರಮದ ಒಡಲಲ್ಲಿಯೇ ದುಃಖದ ಮಡುವೂ ತುಂಬಿಕೊಂಡಿರುತ್ತದೆ; ಆದರೆ ಅದು ಆ ಕ್ಷಣ ನಮ್ಮ ಗಮನಕ್ಕೆ ಬಂದಿರುವುದಿಲ್ಲ.

ಬಲಿ ಕೊಡಲು ಕುರಿಯೊಂದನ್ನು ತಂದಿದ್ದಾರೆ; ಆದರೆ ಪಾಪ! ಆ ಕುರಿಗೆ ಇದು ಹೇಗೆ ಗೊತ್ತಾದೀತು? ಹಬ್ಬದಲ್ಲಿ ಕಟ್ಟಲು ತೋರಣವನ್ನು ಸಿದ್ಧಮಾಡಿಟ್ಟಿದ್ದಾರೆ. ಆ ಕುರಿ ಅದನ್ನೇ ತಿನ್ನುತ್ತಿದೆಯಂತೆ, ಮುಂದಿನ ಕ್ಷಣವೇ ಅದಕ್ಕೆ ಸಾವು ಇದೆ ಎಂದು ತಿಳಿಯದೆಯೇ!

ನಮ್ಮ ಜೀವನದಲ್ಲಿ ಎದುರಾಗುವ ಸುಖದ ಸಂದರ್ಭಗಳೂ ಹೀಗೇ ಇರುತ್ತವೆ; ಅಥವಾ ಕಷ್ಟಪರಂಪರೆಗಳೂ ಹೀಗೇ ಇರುತ್ತವೆ – ಒಂದು ಇನ್ನೊಂದರಲ್ಲಿ ಬೆರೆತುಕೊಂಡಿರುತ್ತದೆ.

ಮಂಕುತಿಮ್ಮನ ಕಗ್ಗದ ಪದ್ಯವೊಂದು ಹೀಗಿದೆ:

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ।।
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ।।

ಜೀವನದಲ್ಲಿ ಇಂಥ ವೈರುದ್ಧ್ಯಗಳೇ ತುಂಬಿ ತುಳುಕುತ್ತಿದ್ದರೂ ನಮಗೆ ಅದನ್ನು ಮೀರಿ ನಡೆಯುವಂಥ ಅವಕಾಶ ಇಲ್ಲ. ನಾವು ಹತ್ತಿ ಕುಳಿತಿರುವ ಜಟಕಾಬಂಡಿಯನ್ನು ನಡೆಸುತ್ತಿರುವವನು ಬೇರೊಬ್ಬನಿದ್ದಾನೆ; ನಾವು ಪ್ರಯಾಣಿಕರು ಮಾತ್ರವಷ್ಟೆ. ಪ್ರಯಾಣದ ದಿಕ್ಕನ್ನೇ ನಿಯಂತ್ರಿಸಬಲ್ಲ ಚುಕ್ಕಾಣಿಯಾಗಲೀ ಶಕ್ತಿಯಾಗಲೀ ನಮಗೆ ಒದಗಿಲ್ಲ. ಹೀಗಾಗಿ ಜೀವನ ನಮ್ಮನ್ನು ಕರೆದುಕೊಂಡುಹೋಗುವ ದಿಕ್ಕಿಗೆ ನಾವು ಹಜ್ಜೆ ಹಾಕಬೇಕಷ್ಟೆ.

ಆದರೆ ನಾವು ಈ ಕಾರಣದಿಂದ ಹೆದರಬೇಕಿಲ್ಲ, ಧೃತಿಗೆಡಬೇಕಿಲ್ಲ ಎಂದೂ ಡಿವಿಜಿಯವರು ಹೇಳುತ್ತಿದ್ದಾರೆ. ಈ ಪ್ರಯಾಣದಲ್ಲಿ ನಾವು ಬೀಳಬಹುದು; ಆದರೆ ಅದರಿಂದ ಹೆದರಬೇಡಿ. ಏಕೆಂದರೆ ನಾವು ಬಿದ್ದರೆ ಎಲ್ಲಿ ಬೀಳುತ್ತೇವೆ? ಈ ನೆಲದ ಮೇಲೆಯೇ ಬೀಳುತ್ತೇವೆ; ಭೂಮಿಯ ಒಳಗೆ, ಪಾತಾಳಕ್ಕೆ ಜಾರುವುದಿಲ್ಲವಷ್ಟೆ! ಪದ ಕುಸಿಯೆ ನೆಲವಿಹದು – ಎಂದರೆ ಕಾಲು ಸೋತಾಗ ನೆಲದ ಮೇಲೆ ಕುಸಿಯುತ್ತವೇಯೇ ಹೊರತು ಪಾತಾಳವನ್ನು ಸೇರುವುದಿಲ್ಲ. ಹೀಗಾಗಿ ಜೀವನದಲ್ಲಿ ಬಂದದ್ದನ್ನು ಧೈರ್ಯವಾಗಿ ಸ್ವೀಕರಿಸಿ, ಮುಂದಕ್ಕೆ ಸಾಗುವುದನ್ನು ಕಲಿಯಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.