ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ದುಃಖವೇ ಇಲ್ಲದ ಜೀವನ

Last Updated 12 ಡಿಸೆಂಬರ್ 2020, 4:56 IST
ಅಕ್ಷರ ಗಾತ್ರ

ಪುಣ್ಯೇನ ಕಾರ್ಯಃ ಸುಖಿತಃ ಪಾಂಡಿತ್ಯೇನ ಮನಃ ಸುಖಮ್‌ ।

ತಿಷ್ಠನ್‌ ಪರಾರ್ಥಂ ಸಂಸಾರೇ ಕೃಪಾಲುಃ ಕೇನ ಖಿದ್ಯತೇ ।।

ಇದರ ತಾತ್ಪರ್ಯ ಹೀಗೆ:

‘ಪುಣ್ಯಕಾರ್ಯಗಳಿಂದ ಶರೀರಕ್ಕೆ ಸುಖ ಉಂಟಾಗುತ್ತದೆ; ಪಾಂಡಿತ್ಯದಿಂದ ಮನಸ್ಸಿಗೆ ಸುಖ ಉಂಟಾಗುತ್ತದೆ. ಬೇರೆಯವರಿಗೋಸ್ಕೋರ ಜಗತ್ತಿನಲ್ಲಿ ಜೀವಿಸುವ ಕೃಪಾಳುವಿಗೆ ದುಃಖವಾಗಲು ಯಾವುದೇ ಕಾರಣ ಇಲ್ಲ.’

ಸುಖ ಮತ್ತು ದುಃಖಗಳ ಮೀಮಾಂಸೆಯನ್ನು ಈ ಸುಭಾಷಿತ ತುಂಬ ಸರಳವಾಗಿ, ಆದರೆ ಹೃದ್ಯವಾಗಿ ಮಾಡಿಕೊಟ್ಟಿದೆ.

ನಾವು ಎರಡು ನೆಲೆಯಲ್ಲಿ ಸುಖವನ್ನು ಅಪೇಕ್ಷಿಸುತ್ತೇವೆ. ಇದರ ಜೊತೆಗೆ ದುಃಖ ನಮ್ಮ ಹತ್ತಿರವೂ ಸುಳಿಯದಿರಲಿ ಎಂದೂ ಆಶಿಸುತ್ತೇವೆ, ಅಲ್ಲವೆ?

ಮೊದಲಿಗೆ ದೈಹಿಕ ಸುಖವನ್ನು ಬಯಸುತ್ತೇವೆ. ಶರೀರ ಚೆನ್ನಾಗಿರಬೇಕು; ಇಂದ್ರಿಯಗಳು ಶಕ್ತಿಯುತವಾಗಿರಬೇಕು; ಯಾವುದೇ ಕಾಯಿಲೆಗಳು ಬರಬಾರದು. ಜೊತೆಗೆ ಇಂದ್ರಿಯಗಳು ಬಯಸುವ ಸುಖಾಪೇಕ್ಷೆಗಳನ್ನು ಈಡೇರಿಸಿಕೊಳ್ಳಲು ಹಾತೊರೆಯುತ್ತೇವೆ. ದೈಹಿಕ ಸುಖಕ್ಕಾಗಿ ಏನೆಲ್ಲ ಮಾಡುತ್ತೇವೆ? ಒಳ್ಳೆಯ ಆಹಾರಸೇವನೆ; ವ್ಯಾಯಾಮ; ಮನೆ, ಮಡದಿ, ಮಕ್ಕಳು ಇತ್ಯಾದಿ, ಇತ್ಯಾದಿ. ಸುಭಾಷಿತ ಹೇಳುತ್ತಿದೆ ಇದನ್ನೆಲ್ಲ ಮಾಡುವ ಆವಶ್ಯಕತೆ ಇಲ್ಲ, ಪುಣ್ಯಕಾರ್ಯಗಳನ್ನು ಮಾಡಿದರೆ ಸಾಕು, ನಮ್ಮ ಶರೀರಕ್ಕೆ ಸುಖ ಉಂಟಾಗುತ್ತದೆ ಎಂದು.

ಪುಣ್ಯಕಾರ್ಯಗಳು ಎಂದರೆ ಒಳ್ಳೆಯ ಕಾರ್ಯಗಳು; ನಾವು ಯಾವ ಕೆಲಸವನ್ನು ಮಾಡಿದಮೇಲೆ ನಾಚಿಕ ಪಡಬೇಕಾಗಿಲ್ಲವೋ ಅಂಥವು; ನಾಲ್ಕು ಜನರಿಗೆ ಉಪಯೋಗ ಆಗುವಂಥವು.

ಎರಡನೆಯ ಸುಖ ನಾವು ಬಯಸುವಂಥದ್ದು ಎಂದರೆ ಮಾನಸಿಕ ಸುಖ. ಪಾಂಡಿತ್ಯದಿಂದ ಆ ಸುಖ ಸಿಗುತ್ತದೆ ಎನ್ನುವುದು ಸುಭಾಷಿತ ನೀಡುತ್ತಿರುವುದು ಭರವಸೆ. ಪಾಂಡಿತ್ಯ ಎಂದರೆ ಕೇವಲ ಪುಸ್ತಕಗಳ ಓದು ಅಲ್ಲ; ಸರಿ–ತಪ್ಪುಗಳ ವಿವೇಕ; ಎಂಥ ಸಂದರ್ಭದಲ್ಲೂ ಮನಸ್ಸಿನ ಹದವನ್ನು ಕೆಡಿಸಿಕೊಳ್ಳದಿರುವುದು. ಮನಸ್ಸು ಸಮಾಧಾನವಾಗಿ ಇದ್ದರೆ ಅದೇ ಸುಖ ಅಲ್ಲವೆ?

ನಾವು ಬೇರೊಬ್ಬರಿಗಾಗಿ ಬದುಕುವಂಥ ಜೀವನವಿಧಾನವನ್ನು ರೂಪಿಸಿಕೊಂಡರೆ ಆಗ ನಮ್ಮಲ್ಲಿಗೆ ದುಃಖ ಬರುವುದೇ ಇಲ್ಲ ಎಂದು ಸುಭಾಷಿತ ಅಭಯ ಕೊಡುತ್ತಿದೆ. ಅಂಥವನನ್ನು ಕೃಪಾಳು ಎಂದು ಅದು ಕರೆದಿದೆ. ನಮಗೆ ದುಃಖ ಬರುವುದು ಸಾಮಾನ್ಯವಾಗಿ ಇತರರಿಂದ ನಮಗೆ ಮೋಸ, ಅನ್ಯಾಯಗಳು ತಲೆದೋರಿದಾಗ. ನಾವು ಇತರರ ಒಳಿತಿಗಾಗಿಯೇ ನಮ್ಮ ಜೀವನವನ್ನು ಸಮರ್ಪಿಸಿದಾಗ, ಇತರರು ಎಂಬ ಭೇದಬುದ್ಧಿಗೆ ನಮ್ಮಲ್ಲಿ ಜಾಗವೇ ಇರದು. ಆಗ ನಮಗೆ ಯಾರಿಂದಲೂ ದುಃಖ ಒದಗುವಂಥ ಪ್ರಸಂಗವೇ ಎದುರಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT