ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸಂಪತ್ತು ಸ್ಥಿರವಲ್ಲ

Last Updated 23 ಆಗಸ್ಟ್ 2020, 0:49 IST
ಅಕ್ಷರ ಗಾತ್ರ

ನಾಂತರಜ್ಞಾಃ ಶ್ರಿಯೋ ಜಾತು ಪ್ರಿಯೈರಾಸಾಂ ನ ಭೂಯತೇ ।

ಆಸಕ್ತಾಸ್ತಾಸ್ವಮೀ ಮೂಢಾಃ ವಾಮಶೀಲಾ ಹಿ ಜಂತವಃ ।।

ಇದರ ತಾತ್ಪರ್ಯ ಹೀಗೆ:

’ಸಂಪತ್ತು ನೀಚ ಮತ್ತು ಉತ್ತಮ ಎಂಬ ಅಂತರವನ್ನು ತಿಳಿಯದೆ ಎಲ್ಲರನ್ನೂ ಸೇರುತ್ತದೆ. ಯಾರೂ ಸಂಪತ್ತಿಗೆ ಪ್ರಿಯರಾಗಿ ಬಹುಕಾಲ ಇರುವುದು ಸಾಧ್ಯವಿಲ್ಲ. ಆದರೂ ಮೂರ್ಖರು ಮಾತ್ರ ಸಂಪತ್ತನ್ನು ಗಳಿಸುವುದರಲ್ಲಿ ಆಸಕ್ತರಾಗಿರುತ್ತಾರೆ. ಏಕೆಂದರೆ ಜನರ ಸ್ವಭಾವವೇ ವಕ್ರ.‘

ಕೆಲವೊಮ್ಮೆ ನಾವು ಗೊಣಗಿಕೊಳ್ಳುವುದುಂಟು: ಸಂಪತ್ತು ಸೇರುವುದೇ ನೀಚರಿಗೆ, ಅಯೋಗ್ಯರಿಗೆ; ಒಳ್ಳೆಯವರು ಎಂದೂ ಬಡತನದಲ್ಲಿಯೇ ಇರಬೇಕಾಗುತ್ತದೆ.

ಆದರೆ ಸುಭಾಷಿತ ಇಲ್ಲಿ ಹೇಳುತ್ತಿರುವುದು ಇದಕ್ಕಿಂತಲೂ ಭಿನ್ನವಾದ ವಿಷಯವನ್ನು. ಸಂಪತ್ತು ಎನ್ನುವುದು ಭೇದಮಾಡುವುದಿಲ್ಲ. ಇವನು ನೀಚ, ಇವನಲ್ಲಿಗೆ ಹೋಗಬಾರದು; ಇವನು ಉತ್ತಮ, ಇವನಲ್ಲಿಗೆ ಹೋಗಬೇಕು – ಹೀಗೆ ಯಾವುದೇ ಅಂತರ ಮಾಡದೆ ಅದು ಎಲ್ಲರಲ್ಲೂ ಹೋಗುತ್ತದೆ. ಸಂಪತ್ತು ಕಷ್ಟದಿಂದಲೂ ನಮ್ಮನ್ನು ಸೇರಿರಬಹುದು; ಮೋಸದಿಂದಲೂ ಸೇರಿರಬಹುದು.

ಸುಭಾಷಿತ ಇಲ್ಲಿ ಇನ್ನೊಂದು ಅಂಶವನ್ನೂ ನಮ್ಮ ಗಮನಕ್ಕೆ ತರುತ್ತಿದೆ. ಸಂಪತ್ತಿಗೆ ಯಾರೂ ಪ್ರಿಯರಾಗಿರಲೂ ಸಾಧ್ಯವಿಲ್ಲ. ಹೀಗಾಗಿ ಅದು ನೀಚರಲ್ಲೂ ಶಾಶ್ವತವಾಗಿ ಇರುವುದಿಲ್ಲ, ಸಜ್ಜನರಲ್ಲೂ ಶಾಶ್ವತವಾಗಿ ಇರುವುದಿಲ್ಲ. ಇದನ್ನೇ ಜನರ ಮಾತಿನಲ್ಲಿ ’ಲಕ್ಷ್ಮೀ ಚಂಚಲೆ‘ ಎಂದಾಗಿರುವುದು.

ಸಂಪತ್ತು ಶಾಶ್ವತವಾದುದಲ್ಲ; ಹೀಗಾಗಿ ಅದರ ಬಗ್ಗೆ ತುಂಬ ವ್ಯಾಮೋಹವನ್ನು ಇಟ್ಟುಕೊಳ್ಳಬಾರದು ಎಂದೂ ಸುಭಾಷಿತ ಎಚ್ಚರಿಕೆ ಕೊಡುತ್ತಿದೆ. ಹೀಗಿದ್ದರೂ ಮೂರ್ಖರು ಮಾತ್ರ ಸಂಪತ್ತು ಸ್ಥಿರವಾಗಿರುತ್ತದೆ ಎಂಬಂತೆ ನಡೆದುಕೊಳ್ಳುತ್ತಾರೆ. ಮನುಷ್ಯರ ಬುದ್ಧಿ ಯಾವಾಗಲೂ ಡೊಂಕು ತಾನೆ!

ಇದು ನಮ್ಮ ಗಮನಕ್ಕೂ ಬಂದಿರುತ್ತದೆ. ಅಥವಾ ಆ ಮೂರ್ಖರು ನಾವೇ ಆಗಿರಬಹುದು.

ಜೀವನದಲ್ಲಿ ಕೇವಲ ದುಡ್ಡು–ಸಂಪತ್ತುಗಳು ಮಾತ್ರವೇ ಮುಖ್ಯವಲ್ಲ. ಭೌತಿಕ ಸಂಪತ್ತಿನ ಹೊರತಾಗಿಯೂ ಇನ್ನೂ ಹಲವು ಸಂಪತ್ತುಗಳು ಇವೆ; ಮಾತ್ರವಲ್ಲ, ಅವು ನಮ್ಮ ಜೀವನವನ್ನು ದಿಟವಾಗಿಯೂ ಶ್ರೀಮಂತಗೊಳಿಸುತ್ತಿರುತ್ತವೆ. ಇದನ್ನು ನಾವು ಅರ್ಥಮಾಡಿಕೊಳ್ಳದೆ ಬರಿಯ ದುಡ್ಡಿನ ಹಿಂದೆ ಓಡಿದರೆ ಜೀವನದ ಸತ್ಯ ಶಿವ ಸುಂದರಗಳಿಂದ ವಂಚಿತರಾಗುತ್ತೇವಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT