ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಪಾಪದಲ್ಲಿ ಯಾರಿಗೆಲ್ಲ ಪಾಲು?

Last Updated 6 ಸೆಪ್ಟೆಂಬರ್ 2020, 0:55 IST
ಅಕ್ಷರ ಗಾತ್ರ

ಪಾದೋsಧರ್ಮಸ್ಯ ಕರ್ತಾರಂ ಪಾದಃ ಸಾಕ್ಷಿಣಮೃಚ್ಛತಿ ।

ಪಾದಃ ಸಭಾಸದಃ ಸರ್ವಾನ್‌ ಪಾದೋ ರಾಜಾನಮೃಚ್ಛತಿ ।।

ಇದರ ತಾತ್ಪರ್ಯ ಹೀಗೆ:

‘ಯಾವುದಾದರೊಂದು ದುಷ್ಕೃತ್ಯ ನಡೆದಾಗ ಅದರಿಂದ ಎದುರಾಗುವ ಪಾಪದಲ್ಲಿ ಕಾಲುಭಾಗ ಅದನ್ನು ಮಾಡಿದವನಿಗೂ, ಕಾಲುಭಾಗ ನೋಡಿದವನಿಗೂ ಕಾಲುಭಾಗ ಸಭಾಸದರಿಗೂ ಉಳಿದ ಕಾಲುಭಾಗ ರಾಜನಿಗೂ ಸೇರುತ್ತದೆ.‘

ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರಗಳನ್ನು ವಿಶ್ಲೇಷಿಸಲು ಈ ಶ್ಲೋಕ ನೆರವಾದೀತು.

ಸಮಾಜದಲ್ಲಿ ಯಾವುದೇ ಕೆಟ್ಟ ಕೆಲಸ ನಡೆದರೂ ಅದಕ್ಕೆ ಯಾರೋ ಒಬ್ಬ ವ್ಯಕ್ತಿಯಷ್ಟೆ ಕಾರಣ ಆಗಿರುವುದಿಲ್ಲ. ಹತ್ತಾರು ಜನರು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಇಂಥ ಕೃತ್ಯಕ್ಕೆ ಕಾರಣ ಆಗಿರುತ್ತಾರೆ; ಮಾತ್ರವಲ್ಲ, ಇಡಿಯ ಸಮಾಜವೇ ಒಂದು ವಿಧದಲ್ಲಿ ಇದರಲ್ಲಿ ಪಾಲ್ಗೊಂಡಿರುತ್ತದೆ ಎಂದರೂ ತಪ್ಪಾಗಲಾರದು. ಸುಭಾಷಿತ ಇದನ್ನೇ ಹೇಳುತ್ತಿರುವುದು.

ಕೆಟ್ಟ ಕೆಲಸ ನಡೆಯುತ್ತಿದ್ದರೆ ನಾವು ಅದನ್ನು ನೋಡುತ್ತ ನಿಲ್ಲುತ್ತೇವೆ; ನಮಗೆ ಹತ್ತಿರದವರು ಅಂಥ ಕೆಲಸವನ್ನು ಮಾಡಿದರೆ ಅವರನ್ನು ರಕ್ಷಿಸಲು ಮುಂದಾಗುತ್ತೇವೆ. ಅಥವಾ ನಾವು ಮಾಡಿರುವ ಯಾವುದೋ ಒಂದು ಕೆಲಸದ ದೆಸೆಯಿಂದ ಆ ಕೆಟ್ಟ ಕೆಲಸ ನಡೆದಿರುವ ಸಾಧ್ಯತೆ ಇರಬಹುದು. ಹೀಗೆ ವಿಚಾರಿಸುತ್ತಹೋದರೆ ಪ್ರತಿಯೊಂದು ಕೆಲಸಕ್ಕೂ ಸಮಾಜಕ್ಕೂ ನಮಗೂ ಒಂದು ಸಂಬಂಧಸೂತ್ರ ಇರುವುದು ಸ್ಪಷ್ಟವಾಗುತ್ತದೆ. ಹೀಗಾಗಿಯೇ ಸುಭಾಷಿತ ಅಂಥ ಪಾಪಕೃತ್ಯದ ಪಾಪವನ್ನು ಸಮಾಜದ ಎಲ್ಲ ಘಟಕಗಳಿಗೂ ಸಮಾನವಾಗಿ ಹಂಚುತ್ತಿರುವುದು.

ಒಂದು ದುಷ್ಕೃತ್ಯ ನಡೆಯಿತೆಂದರೆ ಅದನ್ನು ಒಬ್ಬ ಮಾಡಿರಬೇಕಾಗುತ್ತದೆ. ಅವನಿಗೆ ಪಾಪದಲ್ಲಿ ಕಾಲುಭಾಗ ಸೇರುತ್ತದೆ. ಆ ದುಷ್ಕೃತ್ಯವನ್ನು ನೋಡಿದವರೂ ಇರುತ್ತಾರೆ. ಅವರಿಗೂ ಪಾಪದಲ್ಲಿ ಕಾಲುಭಾಗ. ಇದಕ್ಕೆ ಕಾರಣ ಏನು? ಕೆಟ್ಟ ಕೆಲಸ ನಮ್ಮ ಕಣ್ಣಿನ ಮುಂದೆ ನಡೆಯುತ್ತಿದ್ದರೂ ಅದನ್ನು ನೋಡಿಯೂ ಸುಮ್ಮನಿದ್ದರೆ ಅದನ್ನು ನಾವೇ ಮಾಡಿದಂತೆ. ಹೀಗಾಗಿ ಅಂಥವರಿಗೂ ಪಾಪದಲ್ಲಿ ಕಾಲುಭಾಗ. ಸಭಾಸದರು, ಎಂದರೆ ಸಮಾಜವೂ ಆಗಬಹುದು, ಜನಪ್ರತಿನಿಧಿಗಳೂ ಆಗಬಹುದು; ನಮ್ಮ ಎಂ. ಎಲ್.‌ ಎ.ಗಳು, ಎಂ.ಪಿ.ಗಳು – ಇಂಥವರು ಸೇರುತ್ತಾರೆ. ಸಮಾಜದಲ್ಲಿ ಕೆಟ್ಟ ಕೆಲಸಗಳು ನಡೆಯುತ್ತಿದೆ ಎಂದರೆ ಅದಕ್ಕೆ ಕಾರಣ ಯಾರು? ಕಾನೂನು ಮಾಡುವವರು, ಆ ಕಾನೂನನ್ನು ಅನುಷ್ಠಾನಕ್ಕೆ ತರುವವರು ತಾನೆ? ಅವರು ಸರಿಯಾಗಿ ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲ ಎಂದೇ ಅರ್ಥ. ಹೀಗಾಗಿ ಅವರಿಗೂ ಪಾಪದಲ್ಲಿ ಕಾಲುಭಾಗ ಸಲ್ಲುತ್ತದೆ. ಇನ್ನು ಉಳಿದ ಕಾಲುಭಾಗ ರಾಜನಿಗೆ ಸಲ್ಲುತ್ತದೆ ಎನ್ನುತ್ತಿದೆ ಸುಭಾಷಿತ.

ರಾಜನಾದವನು ರಾಜ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ರಾಜ್ಯದಲ್ಲಿ ನಡೆಯುವ ಎಲ್ಲ ಕೆಲಸಗಳಲ್ಲೂ – ಅದು ಪಾಪದ ಕೆಲಸ ಆಗಿರಬಹುದು, ಪುಣ್ಯದ ಕೆಲಸ ಆಗಿರಬಹುದು – ರಾಜನಿಗೆ ಪಾಲು ಇರುತ್ತದೆ. ಹೀಗಾಗಿ ಪಾಪಕೃತ್ಯದ ಪಾಪದಲ್ಲಿ ಅವನಿಗೂ ಕಾಲುಭಾಗದಷ್ಟು ಪಾಲು ಇದೆ ಎನ್ನುತ್ತಿರುವುದು.

ಪಾಪ–ಪುಣ್ಯ ಇಂಥವನ್ನು ನಾವು ಒಪ್ಪದಿರಬಹುದು, ಅಥವಾ ಒಪ್ಪಬಹುದು. ಆದರೆ ದುಷ್ಕೃತ್ಯದಲ್ಲಿ ಇಡಿಯ ಸಮಾಜದ ಪಾಲು ಇದೆ ಎನ್ನುತ್ತಿರುವ ಸುಭಾಷಿತದ ಮಾತನ್ನು ನಾವು ಮತ್ತೆ ಮತ್ತೆ ಮನನ ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT