ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಮ್ಮ ಶತ್ರುಗಳು

Last Updated 7 ಫೆಬ್ರುವರಿ 2021, 1:39 IST
ಅಕ್ಷರ ಗಾತ್ರ

ನಾರ್ಗ್ನಿರ್ನಾನ್ಯಾನಿ ಶಸ್ತ್ರಾಣಿ ನ ನಃ ಪಾಶಾ ಭಯಾವಹಾಃ ।

ಘೋರಾಃ ಸ್ವಾರ್ಥ ಪ್ರಯುಕ್ತಾಸ್ತು ಜ್ಞಾತಯೋ ನೋ ಭಯಾವಹಾಃ ।।

ಇದರ ತಾತ್ಪರ್ಯ ಹೀಗೆ:

‘ನಮಗೆ ಬೆಂಕಿಯಿಂದಾಗಲಿ, ಆಯುಧಗಳಿಂದಾಗಲಿ ಭಯವಿಲ್ಲ. ಆ ಹಗ್ಗಗಳಿಗೂ ಬಲೆಗಳಿಗೂ ನಾವು ಹೆದರುವುದಿಲ್ಲ. ಕ್ರೂರರೂ ಸ್ವಾರ್ಥಿಗಳೂ ಆದ ಈ ದಾಯಾದಿಗಳಿದ್ದಾರಲ್ಲ – ಪಳಗಿಸಿದ ಆನೆಗಳು, ಅವುಗಳಿಗೆ ನಾವು ಹೆದರಬೇಕಾಗಿದೆ.’

ಈ ಮಾತುಗಳು ಕಾಡಾನೆಗಳು ತಮ್ಮಲ್ಲಿ ತಮಗೆ ಹೇಳಿಕೊಳ್ಳುತ್ತಿರುವುದು.

ನಮ್ಮ ನಿಜವಾದ ಶತ್ರುಗಳು ಯಾರು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ನಮ್ಮ ಮನೆಗೆ ತೊಂದರೆ ಎದುರಾಗುವುದು ನಮ್ಮ ಕುಟುಂಬಕ್ಕೆ ಸೇರದವರಿಂದ, ಎಂದರೆ ಹೊರಗಿನವರಿಂದ ಎಂದು ಅಂದುಕೊಳ್ಳುತ್ತೇವೆ. ಹೀಗೆಯೇ ನಮ್ಮ ದೇಶಕ್ಕೆ ಶತ್ರುಗಳನ್ನು ಪರದೇಶದವರು ಎಂದು ಭಾವಿಸಿಕೊಳ್ಳುತ್ತೇವೆ. ಆದರೆ ಸುಭಾಷಿತ ಮಾತ್ರ ಶತ್ರುಗಳ ನೆಲೆಯನ್ನು ತುಂಬ ಹತ್ತಿರದಲ್ಲಿಯೇ ಕಾಣಿಸುತ್ತಿದೆ. ನಮ್ಮ ಮನೆಗೆ ಶತ್ರುಗಳು ಹೊರಗಿನವರಲ್ಲ, ಮನೆಯವರೇ ಎಂದು; ಹೀಗೆಯೇ ನಮ್ಮ ದೇಶಕ್ಕೆ ಶತ್ರುಗಳೂ ನಮ್ಮ ದೇಶದವರೇ ಹೊರತು ಪರದೇಶದವರಲ್ಲ ಎಂದು. ಈ ಸಂಗತಿಯನ್ನು ಅದು ಹೇಳಿರುವ ರೀತಿ ಸೊಗಸಾಗಿದೆ. ಆನೆಯ ಮೂಲಕ ಈ ವಾಸ್ತವವನ್ನು ಕಾಣಿಸುತ್ತಿದೆ.

ಕಾಡಾನೆಗಳನ್ನು ಹಿಡಿಯಲು ಆನೆಗಳನ್ನೇ ಬಳಸಿಕೊಳ್ಳಲಾಗುತ್ತದೆ; ಈಗಾಗಲೇ ಪಳಗಿಸಿರುವ ಆನೆಗಳನ್ನು. ಅದನ್ನೇ ಇಲ್ಲಿ ಕವಿ ಆನೆಗಳ ಮೂಲಕ ಹೇಳಿಸಿದ್ದಾನೆ. ’ನಮಗೆಬೆಂಕಿಯಿಂದಾಗಲಿ, ಆಯುಧಗಳಿಂದಾಗಲಿ ಭಯವಿಲ್ಲ. ಆ ಹಗ್ಗಗಳಿಗೂ ಬಲೆಗಳಿಗೂ ನಾವು ಹೆದರುವುದಿಲ್ಲ. ಕ್ರೂರರೂ ಸ್ವಾರ್ಥಿಗಳೂ ಆದ ಈ ದಾಯಾದಿಗಳಿದ್ದಾರಲ್ಲ, ಅವರಿಂದಲೇ ಭಯ‘ ಎಂದು ಕಾಡಾನೆಗಳು ಮಾತನಾಡಿಕೊಳ್ಳುತ್ತಿವೆಯಂತೆ. ಇಲ್ಲಿ ದಾಯಾದಿಗಳು ಎಂದರೆ ಆನೆಗಳೇ, ಈಗಾಗಲೇ ಜನರ ಕೈಯಲ್ಲಿ ಸಿಕ್ಕಿಹಾಕಿಕೊಂಡು, ಪಳಗಿಸಲ್ಪಟ್ಟಂಥವು. ಅವೇ ಕಾಡಿನಲ್ಲಿರುವ ಆನೆಗಳನ್ನು ಬಂಧಿಸಲು ನೆರವಾಗುತ್ತವೆ, ಇವುಗಳನ್ನು ಬಳಸಿಯೇ ಕಾಡಾನೆಗಳನ್ನು ನಾವು ಹಿಡಿಯುವುದು. ಇದು ಹೇಗೆಂದರೆ, ಪಾಂಡವರ ಶತ್ರುಗಳು ಎಲ್ಲೋ ದೂರದಲ್ಲಿ ಇರಲಿಲ್ಲ; ಅವರ ಮನೆಯಲ್ಲೇ ಇದ್ದರು; ಅವರೇ ಕೌರವರು; ಅವರ ದಾಯಾದಿಗಳೇ ಆಗಿದ್ದವರು.

ನಾವು ಯಾರನ್ನು ನಮ್ಮವರು, ನಮ್ಮ ಹಿತವನ್ನು ಕಾಪಾಡುವವರು ಎಂದು ಭಾವಿಸಿಕೊಳ್ಳುತ್ತೇವೆಯೋ ಅವರೇ ನಮಗೆ ವಾಸ್ತವದಲ್ಲಿ ದೂರದವರು ಆಗಿರುತ್ತಾರೆ, ನಮ್ಮ ಶತ್ರುಗಳೂ ಆಗಿರುತ್ತಾರೆ. ಇಂಥ ಹಲವು ಸಂದರ್ಭಗಳನ್ನು ನಾವು ಜೀವನದಲ್ಲಿ ಎದುರಿಸುತ್ತಿರುತ್ತೇವೆ. ಆಗ ಈ ಆನೆಗಳ ಮಾತುಗಳನ್ನು ನಾವೂ ಹೇಳಿಕೊಂಡಿರುತ್ತೇವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT