ಗುರುವಾರ , ಸೆಪ್ಟೆಂಬರ್ 23, 2021
26 °C

ದಿನದ ಸೂಕ್ತಿ: ದುಷ್ಟರಾಜರಿಗೆ ಶಿಕ್ಷೆ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಉದ್ವೇಜನೀಯೋ ಭೂತಾನಾಂ ನೃಶಂಸಃ ಪಾಪಕರ್ಮಕೃತ್‌ ।

ತ್ರಯಾಣಾಮಪಿ ಲೋಕಾನಾಮೀಶ್ವರೋsಪಿ ನ ತಿಷ್ಠತಿ ।।

ಇದರ ತಾತ್ಪರ್ಯ ಹೀಗೆ:

‘ಜನರಿಗೆ ಉದ್ವೇಗಕಾರಿಯಾಗಿ ಕೆಟ್ಟ ಕೆಲಸಗಳನ್ನು ಎಸಗುವ ಘಾತುಕ ಅವನು ಒಂದು ವೇಳೆ ಮೂರು ಲೋಕಗಳಿಗೆ ಒಡೆಯನಾಗಿದ್ದರೂ ಬಹುಕಾಲ ಬಾಳಲಾರ.’

ಇದು ರಾಮಾಯಣದಲ್ಲಿ ಬರುವ ಮಾತು. ಖರನನ್ನು ಕುರಿತು ರಾಮ ಹೇಳುವ ಮಾತು. ರಾಜನಾದವನು ಹೇಗಿರಬೇಕು, ಹೇಗಿರಬಾರದು; ದುಷ್ಟರಾಜನನ್ನು ಜನರು, ಸಮಾಜ ಹೇಗೆ ತ್ಯಜಿಸುತ್ತಾರೆ ಎಂಬುದನ್ನು ಈ ಮಾತುಗಳು ಹೇಳುತ್ತಿವೆ.

ಈ ಶ್ಲೋಕದ ಮುಂದಿನ ಶ್ಲೋಕವನ್ನೂ ಇಲ್ಲಿ ನೋಡಬಹುದು:

ಕರ್ಮ ಲೋಕವಿರುದ್ಧಂ ತು ಕುರ್ವಾಣ ಕ್ಷಣದಾಚರ ।

ತೀಕ್ಷ್ಣಂ ಸರ್ವಜನೋ ಹಂತಿ ಸರ್ಪಂ ದುಷ್ಟಮಿವಾಗತಮ್‌ ।।

’ಪ್ರಜಾವಿರೋಧಿಯಾದ ಕೆಲಸಗಳನ್ನು ಮಾಡುವ ಉಗ್ರ ಸ್ವಭಾವದವನನ್ನು ಜನರೇ ಹೊಡೆದು ಕೊಲ್ಲುತ್ತಾರೆ – ಮನೆಯಲ್ಲಿ ಸೇರಿದ ಹಾವನ್ನು ಹುಡುಕಿ ಹುಡುಕಿ ಕೊಲ್ಲುವಂತೆ‘ ಎಂಬುದು ಈ ಶ್ಲೋಕದ ತಾತ್ಪರ್ಯ.

ಈ ಎರಡು ಶ್ಲೋಕಗಳಿಗೂ ಹೆಚ್ಚಿನ ವ್ಯಾಖ್ಯಾನದ ಅನಿವಾರ್ಯತೆಯೇ ಇಲ್ಲ. ನಮ್ಮ ಕಾಲದ ರಾಜಕಾರಣದಲ್ಲಿರುವ ಭ್ರಷ್ಟಾಚಾರ, ಅಧಿಕಾರಿಗಳಲ್ಲಿರುವ ಭ್ರಷ್ಟಾಚಾರಗಳ ಹಿನ್ನೆಲೆಯಲ್ಲಿ ಈ ಶ್ಲೋಕಗಳು ಸುಲಭವಾಗಿ ಅರ್ಥವಾಗುತ್ತವೆ. ಆದರೆ ರಾಮಾಯಣದ ಈ ಶ್ಲೋಕಗಳಲ್ಲಿ ಒಂದು ವೈಶಿಷ್ಟ್ಯವಿದೆ. ನಾವು ನಮ್ಮ ’ರಾಜರು‘ ಎಂದು ರಾಜಕಾರಣಿಗಳು, ಅಧಿಕಾರಿಗಳು ಇವರ ಅನ್ಯಾಯಗಳಿಂದ, ಅಕ್ರಮಗಳಿಂದ ಹತಾಶರಾಗಿಹೋಗಿದ್ದೇವೆ. ಈ ಅನಾಚಾರಗಳಿಂದ ನಮಗೆ ಬಿಡುಗಡೆಯೇ ಇಲ್ಲವೆ ಎಂದು ವ್ಯಥೆ ಪಡುತ್ತಿದ್ದೇವೆ. ರಾಮಾಯಣ ನಮ್ಮಲ್ಲಿ ಆಶಾಭಾವನೆಯನ್ನು ಉಂಟುಮಾಡುತ್ತಿದೆ. ಪ್ರಜೆಗಳನ್ನು ಹಿಂಸಿಸುವ ನಾಯಕರನ್ನು ಸಮಾಜವೇ ಶಿಕ್ಷಿಸುತ್ತದೆ ಎಂದು ಅದು ಭರವಸೆಯನ್ನು ನೀಡಿದೆ. ಇಲ್ಲೊಂದು ಉದಾಹರಣೆಯನ್ನು ಕೂಡ ನೀಡಿದೆ. ನಮ್ಮ ಮನೆಗೇನಾದರೂ ಹಾವು ಹೊಕ್ಕರೆ ನಾವು ಏನು ಮಾಡುತ್ತೇವೆ? ಎಲ್ಲಿದ್ದರೂ ಆ ಹಾವನ್ನು ಹುಡುಕಿ ಹುಡುಕಿ ಕೊಲ್ಲೇ ಕೊಲ್ಲುತ್ತೇವೆ. ಹೀಗೆಯೇ ದುಷ್ಟರಾಜರ ಗತಿಯೂ ಆಗುತ್ತದೆ ಎಂದಿದೆ. ಇಲ್ಲಿ ಕೊಲ್ಲುವುದು ಎಂಬುದರ ವಾಚ್ಯಾರ್ಥವನ್ನು ನಾವು ತೆಗೆದುಕೊಳ್ಳಬೇಕಿಲ್ಲ. ದುಷ್ಟರನ್ನು ಸಮಾಜ ತನ್ನದೇ ರೀತಿಯಲ್ಲಿ ಶಿಕ್ಷಿಸುತ್ತದೆ ಎಂಬ ಅರ್ಥವನ್ನು ಗ್ರಹಿಸಬೇಕು. ಇಂಥದೊಂದು ಭರವಸೆಯೇ ಅಲ್ಲವೆ ನಮಗೆ ಬೇಕಿರುವುದು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು