ಸೋಮವಾರ, ನವೆಂಬರ್ 23, 2020
24 °C

ದಿನದ ಸೂಕ್ತಿ: ಸರಿಯಾದ ಸಮಯದಲ್ಲಿ ಸರಿಯಾದ ಕೆಲಸ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavanಜ್ಞಾನ–ಸಾಂದರ್ಭಿಕ ಚಿತ್ರ

ಅಜರಾಮರವತ್‌ ಪ್ರಾಜ್ಞೋ ವಿದ್ಯಾಮರ್ಥಂ ಚ ಸಾಧಯೇತ್‌ ।

ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್‌ ।।

ಇದರ ತಾತ್ಪರ್ಯ ಹೀಗೆ:

’ನನಗೆ ಮುಪ್ಪೂ ಇಲ್ಲ, ಮರಣವೂ ಇಲ್ಲ – ಎಂಬಂತೆ ಬುದ್ಧಿಶಾಲಿಯಾದವನು ವಿದ್ಯೆಯನ್ನೂ ಧನವನ್ನೂ ಸಂಪಾದಿಸಬೇಕು. ಮೃತ್ಯು ಬಂದು ಜುಟ್ಟನ್ನು ಹಿಡಿದುಕೊಂಡಿದೆಯೋ ಎಂಬಂತೆ ಹೆದರಿಕೆಯಿಂದ ಧರ್ಮವನ್ನಾಚರಿಸಬೇಕು.’

ಒಂದೇ ವಸ್ತು ಅಥವಾ ವಿಷಯ ಒಂದು ಸಂದರ್ಭದಲ್ಲಿ ನಮ್ಮ ಪರವಾಗಿ ಒದಗಬಹುದು, ಇನ್ನೊಂದು ಸಂದರ್ಭದಲ್ಲಿ ಅದು ನಮ್ಮ ವಿರುದ್ಧವಾಗಿಯೇ ನಿಲ್ಲಬಹುದು. ಇದನ್ನು ಸುಭಾಷಿತ ಸೊಗಸಾಗಿ ಹೇಳಿದೆ; ಜೊತೆಗೆ ಅದನ್ನು ಬಳಸಿಕೊಂಡು ಜೀವನಕ್ಕೆ ಬೇಕಾದ ವಿವೇಕದ ಮಾತುಗಳನ್ನೂ ಹೇಳಿದೆ.

ನಾವು ವಿದ್ಯೆಯನ್ನು ಮತ್ತು ಹಣವನ್ನು ಹೇಗೆ ಸಂಪಾದಿಸಬೇಕು? ಒಂದೇ ದಿನದಲ್ಲಿ ನಾವು ವಿದ್ಯೆಯನ್ನು ಸಂಪಾದಿಸಲು ಆಗುವುದಿಲ್ಲ; ಕ್ರಮೇಣ ಸಂಪಾದಿಸಬೇಕು. ಹೀಗೆಯೇ ಧನವನ್ನು ಕೂಡ ಒಂದೊಂದೇ ರೂಪಾಯಿಯನ್ನೂ, ಎಂದರೆ ನಿರಂತರ ಪರಿಶ್ರಮದಿಂದ ಸಂಪಾದಿಸಬೇಕಾಗುತ್ತದೆ. ಭ್ರಷ್ಟಾಚಾರದಿಂದ ಹಣವನ್ನು ಸಂಪಾದಿಸುವವರ ಬಗ್ಗೆಯಾಗಲೀ, ಅನೈತಿಕವಾಗಿ ಡಿಗ್ರಿಗಳನ್ನು ಸಂಪಾದಿಸುವವರ ಬಗ್ಗೆಯಾಗಲೀ ಸುಭಾಷಿತ ಮಾತನಾಡುತ್ತಿಲ್ಲ ಎಂಬುದನ್ನು ನಾವು ಗಮನಿಸಬೇಕು. ಯಾರಿಗೆ ಪ್ರಾಮಾಣಿಕವಾಗಿ ವಿದ್ಯೆಯನ್ನೂ ಧನವನ್ನೂ ಧರ್ಮವನ್ನೂ ಸಂಪಾದಿಸಬೇಕೆಂದು ತುಡಿತ ಇದೆಯೋ ಅಂಥವರನ್ನು ಗಮನದಲ್ಲಿಟ್ಟುಕೊಂಡು ಮಾತನಾಡುತ್ತಿದೆ.

ವಿದ್ಯೆಯೊಂದರ ಕಲಿಕೆಯನ್ನೂ ಹಣದ ಸಂಪಾದನೆಯನ್ನೂ ಮುಂದೂಡಿದರೆ ಸಮಸ್ಯೆ ಆಗುತ್ತದೆ. ವಯಸ್ಸಿನ ಜೊತೆಗೆ ನಮ್ಮ ಬೌದ್ಧಿಕ ಕ್ಷಮತೆಯೂ ದೈಹಿಕ ಕ್ಷಮತೆಯೂ ಕಡಿಮೆಯಾಗುತ್ತಹೋಗುತ್ತದೆ; ಇದು ಅನಿವಾರ್ಯ. ಆದರೆ ವಿದ್ಯೆಯನ್ನು ಇಷ್ಟು ದಿನಗಳಲ್ಲಿ ಅಥವಾ ಇಷ್ಟು ವರ್ಷಗಳಲ್ಲಿ ಪೂರ್ಣವಾಗಿ ಸಂಪಾದಿಸಿಬಿಡುವೆ ಎನ್ನುವಂತಿಲ್ಲ. ಹೀಗೆಯೇ ಧನಸಂಪಾದನೆಯ ವಿಷಯದಲ್ಲೂ ಆಗುತ್ತದೆ. ವಿದ್ಯೆ ಎನ್ನುವಂಥದ್ದು ಸಾಗರ; ಒಬ್ಬ ವ್ಯಕ್ತಿ ಜೀವನಪೂರ್ತಿ ತಿಳಿದುಕೊಳ್ಳಲು ತೊಡಗಿದರೂ ಎಲ್ಲವನ್ನೂ  ತಿಳಿದುಕೊಳ್ಳಲು ಸಾಧ್ಯವಾಗದು. ಹೀಗೆಂದು ನಾವು ಕಲಿಕೆಯನ್ನು ನಿಲ್ಲಿಸುವಂತೆಯೂ ಇಲ್ಲ. ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ; ಹೀಗಾಗಿ ನಾನು ಏಕಾದರೂ ಓದಬೇಕು – ಎಂದು ಯೋಚಿಸುವುದು ತರವಲ್ಲ. ನಾನು ಎಂದಿಗೂ ಇರುವೆ; ಹೀಗಾಗಿ ನಾನು ಎಲ್ಲವನ್ನೂ ತಿಳಿದುಕೊಳ್ಳಬಲ್ಲೆ – ಎಂಬ ಉತ್ಸಾಹದಿಂದಲೇ ಕಲಿಕೆಯಲ್ಲಿ ತೊಡಗಬೇಕು. ಇಲ್ಲವಾದರೆ ಏನನ್ನೂ ಪ್ರಯತ್ನಿಸದೆಯೇ ಸೋಲನ್ನು ಒಪ್ಪಿಕೊಂಡಂತಾಗುತ್ತದೆ. ಸುಭಾಷಿತ ಅಂಥ ಮಾನಸಿಕತೆಯ ಬಗ್ಗೆ ಎಚ್ಚರಿಸುತ್ತದೆ.

ವಿದ್ಯೆ ಮತ್ತು ಹಣದ ಸಂಪಾದನೆಯಲ್ಲಿ ಗಡಿಬಿಡಿ ಮಾಡಬಾರದು, ಸರಿ. ಆದರೆ ಇದೇ ವಿಧಾನ ಧರ್ಮಾಚರಣೆಯ ವಿಷಯದಲ್ಲಿ ಅನ್ವಯ ಆಗದು ಎಂದೂ ಸುಭಾಷಿತ ಎಚ್ಚರಿಸುತ್ತದೆ. ಉದಾಹರಣೆಗೆ ಹೇಳುವುದಾದರೆ, ಯಾರಿಗೋ ನಾವು ಸಹಾಯ ಮಾಡಬೇಕು ಎಂದು ಮನಸ್ಸಾಗುತ್ತದೆ. ಈ ತಿಂಗಳೇ ಏಕೆ, ಮುಂದಿನ ತಿಂಗಳು ಮಾಡೋಣ ಬಿಡು – ಎಂಬ ಆಲೋಚನೆಯೂ ಬರಬಹುದು. ಆದರೆ ಮುಂದಿನ ತಿಂಗಳು ಏನಾಗುತ್ತದೆ ಎಂದು ಹೇಳಬಲ್ಲವರು ಯಾರು? ಆಗ ನಮ್ಮಲ್ಲಿ ಸಹಾಯ ಮಾಡಬಲ್ಲ ಚೈತನ್ಯವೇ ನಾಶವಾಗಿರಬಹುದು; ನಮಗೇ ಇನ್ನೊಬ್ಬರು ಸಹಾಯ ಮಾಡಬೇಕಾದಂಥ ಸ್ಥಿತಿ ಬರಬಹುದು. ಆ ವ್ಯಕ್ತಿಯೇ ಇಲ್ಲವಾಗಬಹುದು. ಹೀಗೆ ಏನೂ ಆಗಬಹುದು. ಹೀಗಾಗಿ ನಾಳೆ ಏನಾಗುವುದೋ ಎಂಬ ಹೆದರಿಕೆಯಿಂದಲೇ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಏಕೆಂದರೆ ನಾಳೆ ನಮಗೆ ಹಾಗೆ ಮಾಡುವ ಶಕ್ತಿ–ಮನಸ್ಸು – ಎರಡೂ ಇಲ್ಲವಾಗಬಹುದು. ಯೋಚಿಸಿ ನೋಡಿ; ಕೆಲವೊಂದನ್ನು ನಿಧಾನವಾಗಿ ಮಾಡಬೇಕು; ಕೆಲವೊಂದನ್ನು ಆ ಕೂಡಲೇ ಮಾಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.