ಸೋಮವಾರ, ಮಾರ್ಚ್ 1, 2021
17 °C

ದಿನದ ಸೂಕ್ತಿ: ಜೀವನದ ಏಣಿ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಪ್ರಥಮೇ ನಾರ್ಜಿತಾ ವಿದ್ಯಾ ದ್ವಿತೀಯೇ ನಾರ್ಜಿತಂ ಧನಮ್ ।
ತೃತೀಯೇ ನಾರ್ಜಿತಂ ಪುಣ್ಯಂ ಚತುರ್ಥೇ ಕಿಂ ಕರಿಷ್ಯಸಿ ।।

ಇದರ ತಾತ್ಪರ್ಯ ಹೀಗೆ
‘ವಯಸ್ಸಿನ ಮೊದಲನೆಯ ಭಾಗದಲ್ಲಿ, ಎಂದರೆ ಬಾಲ್ಯದಲ್ಲಿ ವಿದ್ಯೆಯನ್ನು ಕಲಿಯಲಿಲ್ಲ; ಎರಡನೆಯ ಭಾಗದಲ್ಲಿ, ಎಂದರೆ ಯೌವನದಲ್ಲಿ ಹಣವನ್ನು ಗಳಿಸಲಿಲ್ಲ; ಮೂರನೆಯದು, ಎಂದರೆ ಇಳಿವಯಸ್ಸಿನಲ್ಲಿ ಪುಣ್ಯವನ್ನು ಸಂಪಾದಿಸಲಿಲ್ಲ. ಇನ್ನು ನಾಲ್ಕನೆಯ, ಎಂದರೆ ಮುಪ್ಪು ಬಂದಾಗ ಏನು ತಾನೆ ಮಾಡುವೆ?’

ನಮ್ಮೆಲ್ಲರ ಜೀವನಕ್ಕೂ ಅದರದ್ದೇ ಆದ ಒಂದು ವಿಕಾಸಕ್ರಮ ಇದೆ; ಬೆಳವಣಿಗೆಯ ಹಂತಗಳೂ ಇವೆ. ಆಯಾ ಕಾಲದಲ್ಲಿ ಯುಕ್ತವಾದುದನ್ನು ಮಾಡಿದರಷ್ಟೆ ಮುಂದಿನ ಹಂತದಲ್ಲಿ ಸಾರ್ಥಕತೆ ಒದಗುತ್ತದೆ ಎನ್ನುವುದು ಸುಭಾಷಿತದ ಆಶಯ.

ಸದ್ಯದ ಪರಿಸ್ಥಿತಿಯ ಉದಾಹರಣೆಯನ್ನೇ ಇಲ್ಲಿ ಅವಲೋಕಿಸಬಹುದು. ಕೊರೊನಾಗೆ ಈಗ ಲಸಿಕೆ ಬಂದಿದೆ ಎಂಬ ಸಂಭ್ರಮದಲ್ಲಿ ನಾವಿದ್ದೇವೆ. ಈ ಲಸಿಕೆಯ ತಯಾರಿಕೆ ಸುಮಾರು ಆರೆಂಟು ತಿಂಗಳ ಪರಿಶ್ರಮದಿಂದ ಸಿದ್ಧವಾಗಿದೆ. ಆದರೆ ಈ ಆರೆಂಟು ತಿಂಗಳ ಸಾಧನೆಯಷ್ಟೆ ಈ ಯಶಸ್ಸಿನ ಹಿಂದೆ ಇಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಹಲವು ದಶಕಗಳ ಕಾಲ ನಾವು ವಿಜ್ಞಾನಕ್ಷೇತ್ರದಲ್ಲಿ ಮಾಡಿರುವ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಒಂದೇ ಬಾರಿಗೆ ಯಾರಿಗೂ ಇಂಥ ಸಾಧನೆಯನ್ನು ಮಾಡಲು ಸಾಧ್ಯವಾಗದು. ಹಲವು ವರ್ಷಗಳ ಸಾಮೂಹಿಕ ಪರಿಶ್ರಮ–ಸಾಧನೆ–ಸಿದ್ಧಿಗಳಿಂದ ಮಾತ್ರವೇ ಇದು ಸಾಧ್ಯವಾಗುವಂಥದ್ದು. ನಾವು ವಿಜ್ಞಾನದಲ್ಲಿ ಮಾಡಿರುವ ಸಾಧನೆ ಈಗ ಕೊರೊನಾ ಕಾಲದಲ್ಲಿ ಒಂದೆರಡು ತಿಂಗಳಲ್ಲಿ ಮಾಡಿಕೊಂಡ ಸಿದ್ಧತೆ ಅಲ್ಲ; ಹಲವು ದಶಕಗಳ ಅರಿವು ನಮಗೆ ನೆರವಾಗಿದೆ ಎಂಬುದನ್ನು ನಾವು ಗಮನಿಸಬೇಕು. ನಮ್ಮ ಶಿಕ್ಷಣವ್ಯವಸ್ಥೆ, ಸರ್ಕಾರ, ಜನರ ಪ್ರತಿಭೆ–ಕ್ರಿಯಾಶೀಲತೆ ಇವೆಲ್ಲವೂ ಆಯಾ ಕಾಲದಲ್ಲಿ ನೀಡಿರುವ ಫಲವಾಗಿ ಈಗ ಕೆಲವೇ ತಿಂಗಳುಗಳಲ್ಲಿ ಲಸಿಕೆಯನ್ನು ತಯಾರಿಸಲು ಸಾಧ್ಯವಾಗಿದೆ.

ಹೀಗೆಯೇ ನಮ್ಮ ಜೀವನದಲ್ಲೂ ನಾವು ಆಯಾ ಕಾಲಧರ್ಮಕ್ಕೆ ಅನುಗುಣವಾಗಿ ನಮ್ಮ ಬದುಕನ್ನು ತುಂಬಿಸಿಕೊಳ್ಳಬೇಕಾಗುತ್ತದೆ. ಜೀವನದ ಈ ಹಂತಗಳನ್ನೂ ಈ ಹಂತಗಳ ಉದ್ಧೇಶವನ್ನೂ ಸುಭಾಷಿತ ಸೊಗಸಾಗಿ ಕಟ್ಟಿಕೊಟ್ಟಿದೆ. ’ವಯಸ್ಸಿನ ಮೊದಲನೆಯ ಭಾಗದಲ್ಲಿ, ಎಂದರೆ ಬಾಲ್ಯದಲ್ಲಿ ವಿದ್ಯೆಯನ್ನು ಕಲಿಯಬೇಕು; ಎರಡನೆಯ ಭಾಗದಲ್ಲಿ, ಎಂದರೆ ಯೌವನದಲ್ಲಿ ಹಣವನ್ನು ಗಳಿಸಬೇಕು; ಮೂರನೆಯದು, ಎಂದರೆ ಇಳಿವಯಸ್ಸಿನಲ್ಲಿ ಪುಣ್ಯವನ್ನು ಸಂಪಾದಿಸಬೇಕು.’ ಹೀಗೆ ನಾವು ಸಿದ್ಧವಾಗದಿದ್ದರೆ ಕೊನೆಗೆ ನಮ್ಮ ಜೀವನವೇ ವ್ಯರ್ಥವಾಗುತ್ತದೆ ಅಷ್ಟೆ ಎಂಬುದು ಸುಭಾಷಿತದ ಸ್ಪಷ್ಟ ಸಂದೇಶ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.