ಭಾನುವಾರ, ಆಗಸ್ಟ್ 14, 2022
26 °C

ದಿನದ ಸೂಕ್ತಿ: ಜೀವನದ ವ್ಯಾಕರಣ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಸ ಸ್ನಿಗ್ಧೋsಕುಶಲಾನ್ನಿವಾರಯತಿ ಯಸ್ತತ್ಕರ್ಮ ಯನ್ನಿರ್ಮಲಂ

ಸಾ ಸ್ತ್ರೀ ಯಾನುವಿಧಾಯಿನೀ ಸ ಮತಿಮಾನ್‌ ಯಃ ಸದ್ಭಿರಭ್ಯರ್ಚ್ಯತೇ ।

ಸಾ ಶ್ರೀರ್ಯಾ ನ ಮದಂ ಕರೋತಿ ಸ ಸುಖೀ ಯಸ್ತೃಷ್ಣಯಾ ಮುಚ್ಯತೇ

ತನ್ಮಿತ್ರಂ ಯದಕೃತ್ರಿಮಂ ಸ ಪುರುಷೋ ಯಃ ಖಿದ್ಯತೇ ನೇಂದ್ರಿಯೈಃ ।।

ಇದರ ತಾತ್ಪರ್ಯ ಹೀಗೆ:

‘ಕೆಟ್ಟಕೆಲಸದಿಂದ ತಪ್ಪಿಸುವವನು ಹಿತೈಷಿ; ಯಾವುದು ನಿರ್ಮಲವಾದುದೋ ಅದೀಗ ಕೆಲಸ; ಯಾವಳು ವಿಧೇಯಳಾಗಿರುವಳೋ ಅವಳೇ ಸ್ತ್ರೀ; ಯಾರನ್ನು ಸಜ್ಜನರು ಸತ್ಕಾರಮಾಡುವರೋ ಅವನೇ ಬುದ್ಧಿವಂತ; ಯಾವುದು ಮದವನ್ನು ಉಂಟುಮಾಡುವುದಿಲ್ಲವೋ ಅದೇ ಐಶ್ವರ್ಯ; ಆಸೆಯಿಂದ ಬಿಡಿಸಿಕೊಂಡವನೇ ಸುಖಿ; ಮೋಸವನ್ನು ಮಾಡದಿರುವವನೇ ಮಿತ್ರ; ಯಾವನು ಇಂದ್ರಿಯಗಳ ದೆಸೆಯಿಂದ ದುಃಖಕ್ಕೆ ಒಳಗಾಗುವುದಿಲ್ಲವೋ ಅವನೇ ಪುರುಷ.’

ಕೆಲವೊಂದು ವಿವರಗಳ ದಿಟವಾದ ಸ್ವರೂಪ ಏನಾಗಿರಬೇಕು, ಏನಾಗಿದ್ದರೆ ಚೆನ್ನ – ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಹಿತೈಷಿ ಎಂದರೆ ಯಾರು? ಎಲ್ಲದರಲ್ಲೂ ಎಂದಿಗೂ ನಮ್ಮ ಜೊತೆಯಲ್ಲಿರುವವನನ್ನೇ ಹಿತೈಷಿ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಸುಭಾಷಿತ ಅದನ್ನು ಬೇರೆಯೇ ರೀತಿಯಲ್ಲಿಯೇ ವ್ಯಾಖ್ಯಾನಿಸಿದೆ. ನಾವು ಕೆಟ್ಟಕೆಲಸ ಮಾಡದಂತೆ ತಡೆಯುವವನೇ ಹಿತೈಷಿ.

ಕೆಲಸ ಎಂಬುದನ್ನು ವ್ಯಾಖ್ಯಾನಿಸಿರುವ ಪರಿ ತುಂಬ ಮನೋಜ್ಞವಾಗಿದೆ. ಯಾವುದು ನಿರ್ಮಲವಾದುದೋ ಅದೇ ಕೆಲಸ. ನಾವು ಮಾಡುವುದೆಲ್ಲವೂ ಕೆಲಸ ಆಗಲಾರದು; ಅದರಲ್ಲಿ ಕಪಟ ಇರಬಾರದು, ಮೋಸ ಇರಬಾರದು, ಕಲ್ಮಶ ಇರಬಾರದು; ಅದೇ ಕೆಲಸ.

ವಿಧೇಯಳಾಗಿರುವವಳೇ ಸ್ತ್ರೀ – ಎಂದಿದೆ ಸುಭಾಷಿತ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲೂ ಸಾಧ್ಯತೆಯುಂಟು. ವಿಧೇಯಳಾಗಿರುವುದು ಎಂದರೆ ದಾಸ್ಯದಲ್ಲಿರುವುದು ಎಂದಲ್ಲ; ಸಂದರ್ಭವನ್ನು ಅರಿತುಕೊಂಡು ಅದಕ್ಕೆ ಉಚಿತವಾದ ರೀತಿಯಲ್ಲಿ ನಡೆದುಕೊಳ್ಳುವುದೇ ವಿಧೇಯತೆ. ಇದು ಕೇವಲ ಸ್ತ್ರೀಯರು ಮಾತ್ರ ಅನ್ವಯಿಸಿಕೊಳ್ಳಬೇಕಾದ ಗುಣವಲ್ಲ; ಗಂಡಸರಿಗೂ ಅನ್ವಯಿಸಿಕೊಳ್ಳಬೇಕಾದ ಗುಣ. ಇಬ್ಬರೂ ಹೀಗೆ ಸೌಹಾರ್ದದಿಂದ ನಡೆದುಕೊಂಡಾಗ ಮಾತ್ರ ಸಂಸಾರದಲ್ಲಿ ಸಂತೋಷ–ನೆಮ್ಮದಿ ಮೂಡಲು ಸಾಧ್ಯ.

ಹೆಚ್ಚು ಪುಸ್ತಕಗಳನ್ನು ಓದಿರುವವನು ಅಥವಾ ಡಿಗ್ರಿಗಳನ್ನು ಸಂಪಾದಿಸಿರುವವನು ನಿಜವಾದ ಬುದ್ಧಿವಂತ ಅಲ್ಲ; ಯಾರಿಗೆ ಸಜ್ಜನರು ಸತ್ಕಾರಮಾಡುತ್ತಾರೋ ಅವರೇ ಬುದ್ಧಿವಂತ. ಎಂದರೆ ಸಜ್ಜನಿಕೆಗೂ ಬುದ್ಧಿಗೂ ಸಂಬಂಧ ಇದೆ ಎಂದಾಯಿತು. ಸಜ್ಜನಿಕೆಯೇ ನಿಜವಾದ ಬುದ್ಧಿವಂತಿಕೆ ಎನ್ನುವುದು ಧ್ವನಿ.

ಐಶ್ವರ್ಯ ಹೆಚ್ಚಿದಷ್ಟೂ ಗರ್ವ–ಮದಗಳೂ ಬೆಳೆಯುತ್ತಹೋಗುವುದು ಸಹಜ. ಆದರೆ ಸಂಪತ್ತನ್ನು ಉಳ್ಳವರೆಲ್ಲರೂ ಮದದಿಂದಲೇ ನಡೆದುಕೊಳ್ಳುತ್ತಾರೆ ಎಂದೇನಿಲ್ಲ. ಕೆಲವರು ಖಾಲಿ ಕೈಯಲ್ಲಿ ಇರುವವರೂ ಮದದಿಂದ ನಡೆದುಕೊಳ್ಳಬಹುದು. ನಮಗೆ ಯಾವುದು ಮದವನ್ನು ಉಂಟುಮಾಡುವುದಿಲ್ಲವೋ ಅದೇ ನಿಜವಾದ ಐಶ್ವರ್ಯ. 

ಸುಖಿ ಯಾರು? ನಮ್ಮ ಪ್ರಕಾರ, ಯಾರಲ್ಲಿ ಹೆಚ್ಚು ವಸ್ತುಗಳ ಸಂಗ್ರಹವಿದೆಯೋ ಅವನೇ ಸುಖಿ ಎಂಬುದು ಅಲ್ಲವೆ? ಎಂದರೆ ಆಸೆಗಳ ಹಿಂದೆ ಬಿದ್ದಿರುವವರು ಸುಖಿಗಳು ಎಂದಾಗುತ್ತದೆ. ಆದರೆ ಸುಭಾಷಿತ ಹೇಳುತ್ತಿದೆ: ಆಸೆಗಳನ್ನು ಬಿಟ್ಟವನೇ ಸುಖಿ.

ಸ್ನೇಹದ ದೊಡ್ಡ ಗುಣ ಎಂದರೆ ನಂಬಿಕೆ; ಪರಸ್ಪರ ಮೋಸ ಮಾಡದೆ ವಿಶ್ವಾಸದಿಂದ ನಡೆದುಕೊಳ್ಳುವುದೇ ಮಿತ್ರತ್ವದ ದಿಟವಾದ ಲಕ್ಷಣ. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು: ಮೋಸಮಾಡದವನು ಮಿತ್ರ.

ಕೊನೆಯದಾಗಿ ಸುಭಾಷಿತ ಪುರುಷ, ಎಂದರೆ ಮನುಷ್ಯ ಎಂದರೆ ಯಾರು, ಎಂದು ಹೇಳಿದೆ. ಇಂದ್ರಿಯಗಳಿಂದ ಯಾರು ದುಃಖಕ್ಕೆ ಒಳಗಾಗುವುದಿಲ್ಲವೋ ಅವನೇ ನಿಜವಾದ ಪುರುಷ. ಇಂದ್ರಿಯಗಳ ಸುಖಕ್ಕೆ ನಾವೆಲ್ಲರೂ ಹಾತೊರೆಯುತ್ತಿರುತ್ತೇವೆ. ಅದು ಸಿಗದೆಹೋದಾಗ ದುಃಖಕ್ಕೆ ವಶರಾಗುತ್ತೇವೆ. ಹೀಗೆ ಇಂದ್ರಿಯಗಳ ಬಲೆಗೆ ಬೀಳದವನೇ ದಿಟದ ಪುರುಷ ಎಂದು ಸಾರಿದೆ, ಸುಭಾಷಿತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು