ಸೋಮವಾರ, ಏಪ್ರಿಲ್ 12, 2021
31 °C

ದಿನದ ಸೂಕ್ತಿ| ಹಣದ ಶಕ್ತಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ನ ವಿತ್ತಂ ದರ್ಶಯೇತ್ಪ್ರಾಜ್ಞಃ ಕಸ್ಯಚಿತ್ಸ್ವಲ್ಪಮಪ್ಯಹೋ ।

ಮುನೇರಪಿ ಯತಸ್ತಸ್ಯ ದರ್ಶನಾಚ್ಚಲತೇ ಮನಃ ।।

ಇದರ ತಾತ್ಪರ್ಯ ಹೀಗೆ:

‘ತಿಳಿದವನು ಯಾರಿಗೂ ಸ್ವಲ್ಪ ಹಣವನ್ನೂ ತೋರಿಸಬಾರದು, ಎಚ್ಚರಿಕೆ! ಏಕೆಂದರೆ ಅದನ್ನು ನೋಡುವುದರಿಂದ ಮುನಿಯ ಮನಸ್ಸು ಕೂಡ ಚಂಚಲವಾಗುತ್ತದೆ.’

ಹಣವನ್ನು ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ – ಎಂಬ ಮಾತೊಂದಿದೆ, ಅಲ್ಲವೆ? ಹೆಚ್ಚು ಕಡಿಮೆ ಇದೇ ಅಭಿಪ್ರಾಯವನ್ನು ಈ ಸುಭಾಷಿತವೂ ಹೇಳುತ್ತಿದೆ.

ನಮ್ಮ ಜೀವನದಲ್ಲಿ ನಾವು ಹಣಕ್ಕೆ ಕೊಡುವಷ್ಟು ಮಹತ್ವವನ್ನು ಬೇರೆ ಯಾವುದಕ್ಕೂ ಕೊಡದಂಥ ಸ್ಥಿತಿಗೆ ತಲಪಿರುವುದು ಸುಳ್ಳಲ್ಲ. ಹಣವೊಂದಿದ್ದರೆ ಸಾಕು, ಏನು ಬೇಕಾದರೂ ಮಾಡಬಹುದು ಎಂಬ ಸಮೀಕರಣಕ್ಕೂ ನಾವು ಬಂದಿದ್ದೇವೆ. ಈ ಕಾರಣದಿಂದಲೇ ಹಣವನ್ನು ಸಂಪಾದಿಸಲು ಏನು ಬೇಕಾದರೂ ಮಾಡಲೂ ನಾವು ಸಿದ್ಧವಾಗುತ್ತಿರುವುದು.

ಬುದ್ಧಿವಂತನಾದವನು ಹಣವನ್ನು ಯಾರಿಗೂ ತೋರಿಸಲೇಬಾರದು ಎಂದು ಹೇಳುತ್ತಿದೆ ಸುಭಾಷಿತ. ಮುನಿಯ ಮನಸ್ಸು ಕೂಡ ಹಣವನ್ನು ಕಂಡು ಚಂಚಲವಾಗುತ್ತದೆಯಂತೆ. ಮುನಿಯಾದವನು ಸಂಯಮವನ್ನು ಸಾಧಿಸಿದವನು; ಎಂಥ ಪ್ರಲೋಭನೆಗಳಿಗೂ ವಶನಾಗದವನು. ಅಂಥವನೇ ಹಣವನ್ನು ನೋಡಿದ ಕೂಡಲೇ ಬದಲಾಗುತ್ತಾನೆ ಎಂದರೆ ಹಣದ ಆಕರ್ಷಕಶಕ್ತಿ ಎಂಥದು ಎಂಬುದನ್ನು ಸ್ಪಷ್ಟಪಡಿಸುತ್ತಿದೆ, ಸುಭಾಷಿತ. ಹಣ ಇಲ್ಲದಿದ್ದಾಗ ನಾವೆಲ್ಲರೂ ಸಂಯಮವಂತರೇ. ಆದರೆ ಒಮ್ಮೆ ಹಣ ನಮ್ಮ ಕಣ್ಣ ಮುಂದೆ ಕಾಣಿಸಿದರೆ ಆಗ ನಮ್ಮ ನಿಜವಾದ ಸ್ವಭಾವ ಹೊರಗೆ ಬರುತ್ತದೆ. ಆ ಹಣವನ್ನು ಹೇಗಾದರೂ ಮಾಡಿ ನಮ್ಮದನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಹಣದ ಶಕ್ತಿಯೇ ಅಂಥದ್ದು.

ಹಣಕ್ಕೆ ಇಷ್ಟು ಶಕ್ತಿ ಹೇಗೆ ಬಂದಿತು – ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಹಣದ ಶಕ್ತಿಯ ಮೂಲಗಳು ಹತ್ತುಹಲವು. ಅಂಥ ಒಂದನ್ನು ಈ ಸುಭಾಷಿತ ಹೇಳುತ್ತಿದೆ:

ಇಹ ಲೋಕೇsಪಿ ಧನಿನಾಂ ಪರೋsಪಿ ಸ್ವಜನಾಯತೇ ।

ಸ್ವಜನೋsಪಿ ದರಿದ್ರಾಣಾನಂ ಸರ್ವದಾ ದುರ್ಜನಾಯತೇ ।।

’ಈ ಲೋಕದಲ್ಲಿ ಐಶ್ವರ್ಯವಂತರಿಗೆ ಶತ್ರುವೂ ಸ್ವಜನನಾಗುತ್ತಾನೆ; ಬಡವರಿಗಾದರೋ ಸ್ವಂತ ಜನರೂ ಶತ್ರುಗಳಾಗಿಬಿಡುತ್ತಾರೆ‘ ಎನ್ನುತ್ತಿದೆ, ಈ ಶ್ಲೋಕ.

ಹಣ ಇದ್ದರೆ ಶತ್ರುಗಳೂ ಮಿತ್ರರಾಗುತ್ತಾರೆ, ಹಣ ಇಲ್ಲದಿದ್ದಾಗ ಮಿತ್ರರೂ ಶತ್ರುಗಳಾಗುತ್ತಾರೆ ಎಂದ ಮೇಲೆ ಯಾರು ತಾನೆ ಹಣವನ್ನು ಹೊಂದಬೇಕು ಎಂದು ಬಯಸದೇ ಇದ್ದಾರು? 

ಹಣದ ಶಕ್ತಿ ಇಷ್ಟೆಲ್ಲ ಇದ್ದರೂ ನಾವು ಒಂದನ್ನು ಮರೆಯಬಾರದು. ಹಣ ಅದರಷ್ಟಕ್ಕೇ ಅದು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ; ಇವೆರಡೂ ಅದನ್ನು ಬಳಸುವವರ ಸಂಸ್ಕಾರವನ್ನು ಅನುಸರಿಸುತ್ತದೆಯಷ್ಟೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.