ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಹಣಕ್ಕೆ ಮೂರು ಗತಿಗಳು

Last Updated 7 ಜುಲೈ 2020, 2:20 IST
ಅಕ್ಷರ ಗಾತ್ರ

ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ ।
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ।।

ಇದರ ತಾತ್ಪರ್ಯ ಹೀಗೆ

‘ದಾನ, ಭೋಗ ಮತ್ತು ನಾಶ – ಇವು ಮೂರು ಹಣಕ್ಕಿರುವ ಗತಿಗಳು; ಯಾರು ದಾನ ಮಾಡುವುದಿಲ್ಲವೋ ತಾವೂ ಅನುಭವಿಸುವುದಿಲ್ಲವೋ ಅಂಥವರ ಹಣಕ್ಕೆ ಮೂರನೆಯ ಗತಿಯೇ ಆಗುತ್ತದೆ.‘

ಯಾವುದು ಮೂರನೇ ಗತಿ? ಅದೇ ನಾಶ.

ಸದ್ಯದ ಪರಿಸ್ಥಿತಿಗೆ ಹೇಳಿಮಾಡಿಸಿದಂತಿದೆ ’ನೀತಿಶತಕ‘ದ ಈ ಪದ್ಯ. ಹಣವನ್ನು, ಸಂಪತ್ತನ್ನು ಯದ್ವಾ ತದ್ವಾ ಸಂಪಾದಿಸಿರುವ ಧನಿಕರೂ ರಾಜಕಾರಣಿಗಳೂ ತಪ್ಪದೆ ಈ ಶ್ಲೋಕದ ಕಡಗೆ ಗಮನವನ್ನು ಹರಿಸಲಿ ಎಂಬ ಆಶಯದೊಂದಿಗೆ ವಿವರಣೆಯ ಕಡೆಗೆ ತಿರುಗೋಣ.

ಹಣಕ್ಕೆ ಮೂರು ಅವಸ್ಥೆಗಳಿವೆ; ಅದು ಈ ಮೂರು ಸ್ಥಿತಿಗಳಲ್ಲಿಯೇ ತನ್ನ ಗತಿಯನ್ನು ಕಾಣುತ್ತದೆ ಎಂಬ ನಿಲವು ಈ ಸುಭಾಷಿತದ್ದು. ಈ ಮೂರು ಅವಸ್ಥೆಗಳು ಯಾವುವೆಂದರೆ ಮೊದಲನೆಯದು ದಾನ, ಎರಡನೆಯದು ಭೋಗ ಮತ್ತು ಮೂರನೆಯದು ನಾಶ.

ದಾನ ಎಂದರೆ ಇನ್ನೊಬ್ಬರಿಗೆ ಕೊಡುವುದು. ನಮ್ಮಲ್ಲಿರುವ ಸಂಗ್ರಹವನ್ನು ನಿರಂತರವಾಗಿ ಖಾಲಿ ಮಾಡಿಕೊಳ್ಳಬೇಕು; ಎಂದರೆ ನಮ್ಮ ಸಂಪತ್ತನ್ನು ಯೋಗ್ಯರಾದವರಿಗೆ ದಾನವಾಗಿ ನೀಡಬೇಕು. ದಾನ – ಎಂದರೆ ವಿತರಣಶೀಲತೆ; ಹಂಚುವುದು. ಈ ಹಂಚುವಿಕೆಯೇ ಸಮಾಜಚಕ್ರದ ತಿರುಗುವಿಕೆಗೆ ಮೂಲದ್ರವ್ಯ. ಹೀಗೆ ದಾನ ಮಾಡುವುದಕ್ಕಾಗಿಯೇ ನಾವು ಸಂಪಾದಿಸಬೇಕು ಎಂದು ನಮ್ಮ ಪರಂಪರೆ ಒತ್ತಿಹೇಳುತ್ತದೆ.ಅದತ್ತದಾನಾಚ್ಚ ಭವೇದ್ದರಿದ್ರಃ – ದಾನ ಕೊಡದವನು ಬಡವನಾಗುತ್ತಾನೆ ಎಂಬ ಮಾತು ಕೂಡ ಇದೆಯೆನ್ನಿ!

ಹೌದು, ಸಮಾಜದಲ್ಲಿ ತುಂಬ ಧನವಂತರಿದ್ದಾರೆ; ಭ್ರಷ್ಟಾಚಾರದಿಂದ ಸಂಪಾದಿಸುವವ ಸಂಖ್ಯೆಯೇ ಹೆಚ್ಚು ಎಂಬ ಭಾವನೆಗೆ ಅವಕಾಶವಾಗುವಂಥ ರೀತಿಯಲ್ಲೇ ನಮ್ಮ ಪರಿಸರದ ವಾತಾವರಣ ಇದೆಯೆನ್ನಿ! ಇಂದು ಸಮಾಜ ದೊಡ್ಡ ಆತಂಕವನ್ನು ಎದುರಿಸುತ್ತಿದೆ. ಇಂಥ ಸಂಕಷ್ಟದ ಸಮಯದಲ್ಲಿಯಾದರೂ ರಾಜಕಾರಣಿಗಳು, ಧನಿಕರು ಅವರ ಅಕ್ರಮ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಸಮಾಜಕ್ಕಾಗಿ ವಿನಿಯೋಗಿಸಲು ಮುಂದಾಗಬೇಕು.

ಎಷ್ಟೋ ಅನಾಚಾರಗಳನ್ನು ಮಾಡಿ ಹಣವನ್ನು ಸಂಪಾದಿಸುವುದಾದರೂ ಏಕೆ? ಭೋಗಿಸಲು ತಾನೆ? ಮಜಾ ಮಾಡಲು! ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂಥ ಭೋಗಕ್ಕೂ ಅವಕಾಶ ಇಲ್ಲವಾಗಿದೆ; ಮಾತ್ರವಲ್ಲ, ನಾವು ಗರಿಷ್ಠ, ಎಂದರೆ ಎಷ್ಟು ಭೋಗವನ್ನು ಅನುಭವಿಸಲು ಸಾಧ್ಯ? ನಮ್ಮ ಶರೀರ ಎಷ್ಟು ಭೋಗವನ್ನು ತಡೆದುಕೊಂಡೀತು.

ಸುಭಾಷಿತ ಹೇಳುತ್ತಿದೆ, ದಾನವನ್ನೂ ಮಾಡದೆ, ತಾನೂ ಭೋಗಿಸದೆ ಉಳಿಸಿಕೊಂಡ ಹಣಕ್ಕೆ ಮೂರನೆಯ ಗತಿ, ಎಂದರೆ ನಾಶವೇ ಗಟ್ಟಿ; ನಾವು ಏನೇನೋ ತಿಪ್ಪರಲಾಗ ಹಾಕಿ ಸಂಪಾದಿಸಿದ ಸಂಪತ್ತು ಪರರ ಪಾಲಾಗುತ್ತದೆಯಷ್ಟೆ! ನಮ್ಮ ಮುಂದಿನ ಕ್ಷಣ ಏನಾಗುತ್ತದೆ – ಎಂದು ನಮಗೆ ಗೊತ್ತಿಲ್ಲ. ಹೀಗಿರುವಾಗ ನಾವು ಸಂಪಾದಿಸಿದ್ದನ್ನು ನಾವೇ ಮುಂದೆ ಅನುಭವಿಸುತ್ತೇವೆ ಎನ್ನುವುದಕ್ಕೆ ಸಾಕ್ಷ್ಯವಾದರೂ ಏನು?

ಆದುದರಿಂದ ನಾವು ಕೂಡಿಟ್ಟಿರುವ ಹಣವನ್ನು ಸಮಾಜಕ್ಕೆ ದಾನ ಮಾಡೋಣ. ಏಕೆಂದರೆ ಹಣಕ್ಕಿರುವ ಮೂರು ಗತಿಗಳಲ್ಲಿ ಇದೇ ಶ್ರೇಷ್ಠವಾದದ್ದು; ಮೊದಲನೆಯ ದಾರಿ; ಋಜುಮಾರ್ಗ; ಸರಿಯಾದ ದಾರಿ. ಇಲ್ಲವಾದಲ್ಲಿ, ನಾಳೆ ಯಾರೋ ಅಪರಿಚಿತರು ಅದನ್ನು ಅನುಭವಿಸುತ್ತಾರೆ, ಅಷ್ಟೆ!

ಪ್ರಜಾವಾಣಿ Podcast

ದಿನದ ಸೂಕ್ತಿಯನ್ನು ಕೇಳಲು ಇಲ್ಲಿಕ್ಲಿಕ್‌ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT