ಮಂಗಳವಾರ, ಏಪ್ರಿಲ್ 20, 2021
29 °C

ದಿನದ ಸೂಕ್ತಿ| ಬಡತನದ ಬೇಗೆ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ದಾರಿದ್ರ್ಯಾತ್‌ ಪುರುಷಸ್ಯ ಬಾಂಧವಜನೋ ವಾಕ್ಯೇ ನ ಸಂತಿಷ್ಠತೇ

ಸತ್ತ್ವಂ ಹಾಸ್ಯಮುಪೈತಿ ಶೀಲಶಶಿನಃ ಕಾಂತಿಃ ಪರಿಮ್ಲಾಯತೇ ।

ನಿರ್ವೈರಾ ವಿಮುಖೀಭವಂತೀ ಸುಹೃದಃ ಸ್ಫೀತಾ ಭವಂತ್ಯಾಪದಃ

ಪಾಪಂ ಕರ್ಮ ಚ ಯತ್‌ ಪರೈರಪಿಕೃತಂ ತತ್ತಸ್ಯಸಂಭಾವ್ಯತೇ ।।

ಇದರ ತಾತ್ಪರ್ಯ ಹೀಗೆ:

‘ಬಡವನ ಮಾತಿಗೆ ನಂಟರು ಬೆಲೆ ಕೊಡುವುದಿಲ್ಲ. ಅವನ ಶಕ್ತಿ–ಧೈರ್ಯಗಳು ಹಾಸ್ಯಕ್ಕೆ ಗುರಿಯಾಗುತ್ತವೆ. ಚಂದ್ರನ ಕಾಂತಿಯು ಹಗಲಿನಲ್ಲಿ ಬಾಡುವಂತೆ ಅವನ ಒಳ್ಳೆಯತನವೂ ಮಸಕಾಗುತ್ತದೆ. ಹಗೆತನಕ್ಕೆ ಕಾರಣವಿಲ್ಲದಿದ್ದರೂ ಮಿತ್ರರು ದೂರವಾಗುತ್ತಾರೆ. ಕಷ್ಟಗಳು ಹೆಚ್ಚುತ್ತವೆ. ಬೇರೆಯವರು ಮಾಡಿದ ಪಾಪದ ಕೆಲಸಗಳಿಗೂ ಇವನೇ ಹೊಣೆಯಾಗುತ್ತಾನೆ.’

ಬಡತನದ ಕರಾಳಮುಖಗಳನ್ನು ಈ ಸುಭಾಷಿತ ಅನಾವರಣ ಮಾಡುತ್ತಿದೆ.

ಹಣ ಇಲ್ಲದವನ ಮಾತಿಗೆ ಯಾರು ತಾನೆ ಬೆಲೆ ಕೊಡುತ್ತಾರೆ; ನಂಟರೇ ಬೆಲೆ ಕೊಡುವುದಿಲ್ಲ, ಇನ್ನು ಬೇರೆಯವರು ಕೊಡುತ್ತಾರೆಯೆ? ಬಡವನಿಗೆ ಎಷ್ಟು ಶಕ್ತಿ–ಸಾಮರ್ಥ್ಯಗಳು ಇದ್ದರೆ ತಾನೆ ಏನು ಪ್ರಯೋಜನ? ಅವನ ಶಕ್ತಿಯನ್ನು ಕೂಡ ಎಲ್ಲರೂ ಬಲಹೀನವನ್ನಾಗಿ ಕಂಡು ಅಪಹಾಸ್ಯಮಾಡುತ್ತಾರೆಯೆ ಹೊರತು ಅದನ್ನು ಗುರುತಿಸುವುದಿಲ್ಲವಷ್ಟೆ. ಬಡವನಲ್ಲಿ ಎಷ್ಟು ಒಳ್ಳೆಯ ಗುಣಗಳಿದ್ದರೂ, ಹಣ ಇಲ್ಲದ ಒಂದೇ ಒಂದು ‘ಅವಗುಣ‘ದ ಕಾರಣದಿಂದಾಗಿ, ಅವನ್ನು ಯಾರೂ ಲೆಕ್ಕಿಸುವುದೇ ಇಲ್ಲ. ಶತ್ರುಗಳಿರಲಿ, ಮಿತ್ರರೂ ಬಡವನಿಂದ ದೂರ ಸರಿಯುತ್ತಾರೆ. ಬಡತನದಲ್ಲಿ ಕಷ್ಟಗಳು ಹೆಚ್ಚು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ. ಇವೆಲ್ಲ ಸಮಸ್ಯೆಗಳನ್ನು ಮೀರಿದ ಇನ್ನೊಂದು ಸಮಸ್ಯೆಯನ್ನು ಬಡವನು ಎದುರಿಸುತ್ತಾನೆ. ಅದೇನೆಂದರೆ, ಬೇರೆಯವರು ಮಾಡಿದ ಕೆಟ್ಟ ಕೆಲಸಗಳಿಗೆ ಅವನನ್ನು ಬಲಿಪಶುವನ್ನಾಗಿಸಲಾಗುತ್ತದೆ.

ಇನ್ನೊಂದು ಸುಭಾಷಿತ ಬಡತನದ ಕಷ್ಟಪರಂಪರೆಯನ್ನು ಹೀಗೆಂದಿದೆ:

‘ಬಡತನದಿಂದ ನಾಚಿಕೆ ಉಂಟಾಗುತ್ತದೆ; ನಾಚಿಕೆಯಿಂದ ಅವನಲ್ಲಿ ಹೆದರಿಕೆ ಆರಂಭವಾಗುತ್ತದೆ; ಎದೆಗುಂದಿದ ಬಡವನಿಗೆ ಅಪಮಾನ ಎದುರಾಗುತ್ತದೆ; ಅಪಮಾನದಿಂದ ಯಾವ ಕೆಲಸವನ್ನು ಮಾಡಲಾಗದಷ್ಟು ಬೇಸರ ಅವನಲ್ಲಿ ಮೂಡುತ್ತದೆ; ಈ ಬೇಸರಿಕೆಯಿಂದ ಅವನಲ್ಲಿ ದುಃಖ ಆವರಿಸುತ್ತದೆ. ಈ ದುಃಖದ ಮೋಡದಿಂದ ಅವನಲ್ಲಿ ಯೋಚನೆಯ ಶಕ್ತಿಯನ್ನೇ ಕುಂದಿಸುತ್ತದೆ; ವಿವೇಕವನ್ನು ಕಳೆದುಕೊಂಡ ಅವನು ಹಾಳಾಗುವುದು ನಿಶ್ಚಯವಷ್ಟೆ. ಹೀಗೆ ಬಡವನಿಗೆ ಕಷ್ಟಗಳ ಪರಂಪರೆಯೇ ಉಂಟಾಗುತ್ತದೆ.’

ಬಡವನನ್ನು ಕೀಳಾಗಿ ನೋಡುವುದೋ ಅಥವಾ ಹೆದರಿಸುವುದೋ ಸುಭಾಷಿತದ ಉದ್ದೇಶ ಅಲ್ಲ; ನಮ್ಮ ಸಮಾಜದ ಮಾನಸಿಕತೆಯನ್ನು ಅದು ವಿವರಿಸುತ್ತಿದೆ; ಹಣಕ್ಕೆ ಮಾತ್ರವೇ ಮನ್ನಣೆ ಕೊಡುವ ಅದರ ದುರ್ಗುಣವನ್ನು ಅದು ನಿರೂಪಿಸುತ್ತಿದೆಯಷ್ಟೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.