ಬುಧವಾರ, ಆಗಸ್ಟ್ 17, 2022
30 °C

ದಿನದ ಸೂಕ್ತಿ: ಸಾರ್ಥಕತೆ ಎಲ್ಲಿದೆ?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಅಗುಣಸ್ಯ ಹತಂ ರೂಪಂ ಅಶೀಲಸ್ಯ ಹತಂ ಕುಲಮ್‌ ।
ಅಸಿದ್ಧೇಸ್ತು ಹತಾ ವಿದ್ಯಾ ಅಭೋಗಸ್ಯ ಹತಂ ಧನಮ್‌ ।।

ಇದರ ತಾತ್ಪರ್ಯ ಹೀಗೆ: ‘ಗುಣವಿಲ್ಲದ ರೂಪ, ಶೀಲವಿಲ್ಲದ ಕುಲ, ಸಿದ್ಧಿಯನ್ನು ಪಡೆಯದ ವಿದ್ಯೆ, ಅನುಭವಿಸದೆ ಇರುವವನ ಹಣ – ಇವು ನಾಲ್ಕು ಕೂಡ ಹತವಾದಂತೆಯೇ.’

ಸಾಮಾನ್ಯವಾಗಿ ನಮ್ಮ ಎಣಿಕೆಯಲ್ಲಿ ರೂಪ, ಕುಲ, ವಿದ್ಯೆ, ಹಣ – ಇವು ತುಂಬ ಮಹತ್ವವಾದದ್ದು. ಆದರೆ ಇವು ಸ್ವಯಂ ಮಹತ್ವದ್ದು ಎನಿಸದು, ಅವುಗಳ ಜೊತೆಗೆ ಇನ್ನಷ್ಟು ಗುಣಗಳು ಸೇರಿಕೊಂಡರೆ ಮಾತ್ರ ಇವುಗಳಿಗೆ ಮಹತ್ವ ಎಂಬುದನ್ನು ಸುಭಾಷಿತ ಹೇಳುತ್ತಿದೆ.

ರೂಪವನ್ನು ನಾವು ಇಷ್ಟಪಡುತ್ತೇವೆ; ಆರಾಧಿಸುತ್ತೇವೆ. ರೂಪವನ್ನೇ ನಾವು ಗುಣ ಎಂದೂ ಅಂದುಕೊಳ್ಳುತ್ತೇವೆ. ಆದರೆ ಸುಭಾಷಿತ ಹೇಳುತ್ತಿದೆ: ಗುಣವಿಲ್ಲದ ರೂಪ ವ್ಯರ್ಥ; ರೂಪವಷ್ಟೇ ಇದ್ದರೆ ಆಗ ಅದು ಇದ್ದೂ ಇಲ್ಲದಂತೆಯೇ ಸರಿ. ಗುಣ ಎಂದರೆ ಒಳ್ಳೆಯ ನಡತೆ; ರೂಪವೇ ನಡತೆ ಅಲ್ಲವಷ್ಟೆ!

ಕುಲ ಎಂದರೆ ವಂಶ, ಕುಟುಂಬ. ನಾವು ಯಾವುದೋ ಒಂದು ದೊಡ್ಡ ಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೇ ದೊಡ್ಡವರಾಗುವುದಿಲ್ಲ. ಶೀಲಗಳನ್ನು ರೂಢಿಸಿಕೊಂಡರೆ ಮಾತ್ರವೇ ದೊಡ್ಡವರು ಆಗುವುದು. ಶೀಲ ಎಂದರೆ ಮಾನಸಿಕ ಮತ್ತು ದೈಹಿಕ ಶುದ್ಧ ನಡೆವಳಿಕೆಗಳು; ನೈತಿಕತೆ. ನಮ್ಮ ತಾತನೋ ಅವರಪ್ಪನೋ ದೊಡ್ಡ ವ್ಯಕ್ತಿಗಳಾಗಿದ್ದರು ಎಂದಮಾತ್ರಕ್ಕೆ ನಾವೂ ದೊಡ್ಡವರು ಆಗುವುದಿಲ್ಲ; ನಾವು ದೊಡ್ಡತನವನ್ನು ರೂಢಿಸಿಕೊಳ್ಳಬೇಕು, ಅಲ್ಲವೆ?

ಶಿಕ್ಷಣದ ಬಗ್ಗೆ ನಮಗೆ ಇಂದು ತುಂಬ ವ್ಯಾಮೋಹ. ಆದರೆ ಸುಭಾಷಿತ ಹೇಳುತ್ತಿದೆ – ನೀವು ವಿದ್ಯಾವಂತರು ಎಂದೆನಿಸಿಕೊಂಡರಷ್ಟೆ ಸಾಲದು, ಅದರ ಸಿದ್ಧಿಯನ್ನೂ ಪಡೆದುಕೊಂಡರೆ ಮಾತ್ರ ನಿಮ್ಮ ವಿದ್ಯೆಗೆ ಬೆಲೆ. ಸಿದ್ಧಿಯನ್ನು ಪಡೆಯುವುದು ಎಂದರೆ ನಾವು ಕಲಿತ ವಿದ್ಯೆ ಜೀವನಕ್ಕೆ ಒದಗಬೇಕು; ಜೀವನವನ್ನು ರೂಪಿಸಿಕೊಳ್ಳಲು ಅದು ನೇರವಾಗಿ ಪ್ರಯೋಜನಕ್ಕೆ ಬರಬೇಕು.

ಹಣ. ಇದು ಇರುವುದಾದರೂ ಏಕೆ? ಕೆಲವರು ಹಣ ಇರುವುದು ಕೂಡಿಡುವುದಕ್ಕೆ ಮಾತ್ರ ಎಂದುಕೊಂಡಿರುತ್ತಾರೆ. ಆದರೆ ನಮ್ಮ ಸಂಪಾದನೆ ನಮ್ಮ ನೆರವಿಗೆ ಬರಬೇಕು. ಅದರಿಂದ ನಮ್ಮ ಜೀವನವೂ ಚೆನ್ನಾಗಿ ಆಗಬೇಕು; ನಮ್ಮ ಮನೆಯವರ ಜೀವನವೂ ಚೆನ್ನಾಗಿ ಆಗಬೇಕು. ಸಮಾಜದ ಇತರ ನಾಲ್ಕು ಜನರ ಜೀವನವೂ ಚೆನ್ನಾಗಿ ಆಗಬೇಕು.

ಯಾವುದೇ ಸಾಧನೆ, ವಸ್ತುಗಳು ನಿಜವಾಗಿಯೂ ಸಾರ್ಥಕ ಎನಿಸಿಕೊಳ್ಳುವುದು ಅವುಗಳ ಜೀವನಕ್ಕೆ ಪೋಷಕವಾದಾಗಲೇ. ನಮ್ಮ ಬಳಿ ನೂರಾರು ಕೋಟಿ ಆಸ್ತಿ ಇರಬಹುದು; ಆದರೆ ಅದರ ಒಂದೇ ಒಂದು ಪೈಸೆಯಷ್ಟನ್ನೂ ನಾವು ಅನುಭವಿಸಲು ಆಗುತ್ತಿಲ್ಲ ಎಂದಾದಲ್ಲಿ, ಅ‌ಷ್ಟು ಹಣ ಇದ್ದೂ ಏನು ಪ್ರಯೋಜನ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು