ಗುರುವಾರ , ಆಗಸ್ಟ್ 5, 2021
28 °C

ಸಜ್ಜನರ ಸಂಗ ಹೆಜ್ಜೇನ ಸವಿದಂತೆ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಕಿಂ ಮಧುನಾ ಕಿಂ ವಿಧುನಾ

ಕಿಂ ಸುಧಯಾ ಕಿಂ ಚ ವಸುಧಯಾಖಿಲಯಾ ।

ಯದಿ ಹೃದಯಹಾರಿಚರಿತಃ

ಪುರುಷಃ ಪುನರೇಪಿ ನಯನಯೋರಯನಮ್‌ ।।

ಇದರ ತಾತ್ಪರ್ಯ ಹೀಗೆ:

’ಜೇನುತುಪ್ಪ, ಚಂದ್ರ, ಅಮೃತ, ಸಮಸ್ತಭೂಮಂಡಲ – ಇವುಗಳಿಂದ ಏನಾದೀತು? ಮನಸ್ಸಿಗೊಪ್ಪುವ ನಡತೆಯಿಂದ ಕೂಡಿದ ಸತ್ಪುರುಷರು ಕಣ್ಣಿಗೆ ಗೋಚರವಾದರೆ ಅದೇ ಎಲ್ಲವೂ.‘

ನಾವು ಯಾವುದಕ್ಕೆ ಹಂಬಲಿಸಬೇಕು ಎನ್ನುವುದನ್ನು ಸುಭಾಷಿತ ಹೇಳುತ್ತಿದೆ; ಅಥವಾ ಯಾವುದರಿಂದ ನಮಗೆ ದಿಟವಾದ ತಂಪು ಒದಗುತ್ತದೆ ಎನ್ನುವುದನ್ನು ಹೇಳುತ್ತಿದೆ ಎಂದೂ ಹೇಳಬಹುದು.

ಜೀನುತುಪ್ಪ. ಇದರ ರುಚಿ ಯಾರಿಗೆ ತಾನೆ ಇಷ್ಟವಾಗದು? ರುಚಿಗೂ ಬರುತ್ತದೆ, ಔಷಧಕ್ಕೂ ಒದಗುತ್ತದೆ. ಮಕ್ಕಳಿಗೆ ಔಷಧವನ್ನು ಕೊಡುವಾಗಲೂ ಬಳುಸುವುದುಂಟು, ಔಷಧದ ಕಹಿ ಅವಕ್ಕೆ ಗೊತ್ತಾಗದಿರಲಿ ಎಂದು. ಅಷ್ಟರ ಮಟ್ಟಿಗೆ ಜೇನಿನ ಸವಿ ವೈಶ್ವಿಕವಾಗಿದೆ. ವೇದದಲ್ಲಿಯೂ ಜೇನನ್ನು ಕುರಿತ ಸೊಲ್ಲುಗಳಿವೆ; ಜಗತ್ತೇ ಮಧುಮಯ, ಎಂದರೆ ಎಲ್ಲವೂ ಜೇನಿನ ಸಿಹಿಯಂತೆ ಆಗಲಿ ಎಂಬ ಪ್ರಾರ್ಥನೆ ಅಲ್ಲಿದೆ.

ಚಂದ್ರನು ಕವಿಗಳಿಗೂ ಪ್ರೇಮಿಗಳಿಗೂ ಮಕ್ಕಳಿಗೂ ಶಾಸ್ತ್ರಕಾರರಿಗೂ, ನಮ್ಮ ಕಾಲದಲ್ಲಿ ವಿಜ್ಞಾನಿಗಳೂ ತುಂಬ ಪ್ರಿಯನಾದವನು. ಚಂದ್ರನ ದರ್ಶನವೇ ಮನಸ್ಸಿಗೆ ತಂಪಾದ ಅನುಭವವೂ ಆಹ್ಲಾದಕರ ಅನುಭೂತಿಯೂ ಒದಗುತ್ತದೆ.

ಅಮೃತದ ಕಲ್ಪನೆಯೇ ದಿವ್ಯವಾಗಿದೆ; ನಮ್ಮನ್ನು ಸಾವಿನಿಂದ ಪಾರುಮಾಡುವಂಥದ್ದು; ಅಲ್ಲ, ಸಾವನ್ನೇ ಇಲ್ಲವಾಗಿಸುವುದು. ಇದರ ಪ್ರಾಪ್ರಿಗಾಗಿ ದೇವತಗಳೂ ರಾಕ್ಷಸರೂ – ಇಬ್ಬರೂ ಒಂದಾದರು, ತಮ್ಮ ತಮ್ಮ ಆಜನ್ಮವೈರವನ್ನೂ ಪಕ್ಕಕ್ಕಿಟ್ಟು! ನಮ್ಮನ್ನು ಚಿರಂಜೀವಿಗಳನ್ನಾಗಿಸುವ ಅಮೃತವನ್ನು ಯಾರು ತಾನೆ ಬಯಸುವುದಿಲ್ಲ?

ಮನುಷ್ಯನಿಗೆ ತುಂಬ ಇಷ್ಟವಾದದ್ದು ಮೂರು ಸಂಗತಿಗಳು ಎಂದು ದಾಸರು ಒಂದು ಪಟ್ಟಿ ಕೊಡುತ್ತಾರೆ: ಹೆಣ್ಣು, ಹೊನ್ನು ಮತ್ತು ಮಣ್ಣು. ಮಣ್ಣು ಎಂದರೆ ಭೂಮಿಯ ಒಡೆತನ; ಅಧಿಕಾರ; ರಾಜತ್ವ; ನಮ್ಮ ಕಾಲದಲ್ಲಾದರೆ ಮಂತ್ರಿಗಿರಿ. ನಾವು ಯಾವುದೋ ಒಂದು ರಾಜ್ಯದ ಅಥವಾ ದೇಶದ ಮಂತ್ರಿಯಾಗುವುದೇ ದೊಡ್ಡ ಸಾಧನೆ. ಹೀಗಿರುವಾಗ ಇಡಿಯ ಭೂಮಂಡಲದ ಆಧಿಪತ್ಯವೇ ನಮಗೆ ದಕ್ಕಿದರೆ, ಬೇಡ ಎಂದು ಯಾರಾದರೂ ಹೇಳುವುದುಂಟೆ? 

ಆದರೆ ಸುಭಾಷಿತ ಹೇಳುತ್ತಿದೆ: ನೀವು ಯಾವುದರಿಂದ ಸುಖ, ಸಂತೋಷ, ನೆಮ್ಮದಿ, ತೃಪ್ತಿಗಳು ಸಿಗುತ್ತವೆ ಎಂದು ಭಾವಿಸಿಕೊಂಡಿದ್ದೀರೋ ಅವುಗಳಿಂದ ದಿಟವಾಗಿಯೂ ಸಿಗದು; ಸಜ್ಜನರ ಸಾಮೀಪ್ಯವೇ ನಮಗೆ ಹೆಚ್ಚಿನ ಸುಖವನ್ನೂ ನೆಮ್ಮದಿಯನ್ನೂ ತೃಪ್ತಿಯನ್ನೂ ಆಹ್ಲಾದವನ್ನೂ ನೀಡುವಂಥದ್ದು. ಸರ್ವಜ್ಞತ್ರಿಪದಿಯೊಂದು ಹೀಗಿದೆ:

’ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ
ದುರ್ಜನರ ಸಂಗ ಬಚ್ಚಲ
ಕೊಚ್ಚೆಯಂತಿಹದು ಸರ್ವಜ್ಞ’

ಸಜ್ಜನರ ಸಂಗವನ್ನೇ ಇಲ್ಲಿ ಜೇನಿನ ಸವಿಗೆ ಸಮೀಕರಿಸಲಾಗಿದೆ. 

ಸುಭಾಷಿತ ಹೇಳುತ್ತಿರುವುದು ಕೂಡ ಅದನ್ನೇ. ಜೇನುತುಪ್ಪ, ಚಂದ್ರ, ಅಮೃತ, ಸಮಸ್ತಭೂಮಂಡಲ – ಇವುಗಳಿಂದ ಏನೆಲ್ಲ ಸಂತೋಷ–ಪ್ರಯೋಜನಗಳು ಸಿಗುತ್ತವೆಯೋ ಅವೆಲ್ಲವೂ ಕೇವಲ ಸಜ್ಜನನ ಸ್ನೇಹವೇ ಒದಗಿಸುತ್ತದೆ. ಹೀಗಾಗಿಯೇ ಬಸವಣ್ಣನವರು ಕೂಡ ಹೀಗೆಂದರು:

’ಸಾರ: ಸಜ್ಜನರ ಸಂಗವ ಮಾಡುವುದು

ದೂರ: ದುರ್ಜನರ ಸಂಗ ಬೇಡವಯ್ಯಾ.

ಆವ ಹಾವಾದಡೇನು? ವಿಷವೊಂದೆ,

ಅಂತವರ ಸಂಗ ಬೇಡವಯ್ಯಾ.

ಅಂತರಂಗ ಶುದ್ಧವಿಲ್ಲದವರ ಸಂಗವು

ಸಿಂಗಿ, ಕಾಳಕೂಟ ವಿಷವೊ ಕೂಡಲಸಂಗಯ್ಯಾ.‘

ಬಸವಣ್ಣನವರ ವಚನದಲ್ಲಿ ಇನ್ನೊಂದು ಸ್ವಾರಸ್ಯವೂ ಉಂಟು. ಅವರು ಸಜ್ಜನರ ಸಾಮೀಪ್ಯವನ್ನು ಬಯಸಬೇಕು; ದುಷ್ಟರಿಂದ ದೂರ ಇರಬೇಕು – ಎಂದಷ್ಟೆ ಹೇಳುತ್ತಿಲ್ಲ; ಸಜ್ಜನರ ಗುಣ ಎಂಥದು ಎನ್ನುವುದನ್ನು, ’ದುರ್ಜನರ ಗುಣಗಳು ಎಂಥವು‘ ಎಂದು ಹೇಳುವ ಮೂಲಕ ನಿರೂಪಿಸಿದ್ದಾರೆ. ’ಅಂತರಂಗಶುದ್ಧವಿಲ್ಲದವರೇ ದುರ್ಜನರು; ಅವರು ಹಾವಿಗೆ ಸಮಾನ. ಅಂಥವರ ಸಹವಾಸಕ್ಕೆ ಹೋಗಬೇಡಿ‘ ಎಂದು ಹೇಳುತ್ತಲೇ ಆ ಸಹವಾಸ ಹೇಗಿರುತ್ತದೆ ಎನ್ನುವುದನ್ನೂ ಹೇಳಿದ್ದಾರೆ. ’ಸಿಂಹ - ಹೆಣ್ಣುಸಿಂಹದ ಸಂಗದಂತೆ, ಕಾಳಕೂಟದ ವಿಷದಂತೆ‘ ಅವರ ಸ್ನೇಹ ಅಪಾಯಕಾರಿ ಎಂಬ ಎಚ್ಚರಿಕೆಯನ್ನು ನೀಡುತ್ತ, ಸಜ್ಜನರ ಸಾಮೀಪ್ಯವನ್ನು ದಕ್ಕಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ಸಜ್ಜನರನ್ನು ಇಲ್ಲಿ ಸುಭಾಷಿತವು ಸೂಚಿಸುವ ಪದ ಸೊಗಸಾಗಿದೆ: ’ಹೃದಯಹಾರಿಚರಿತಃ‘ – ಹೃದಯವನ್ನು ಅಪಹರಿಸುವಂಥ ವ್ಯಕ್ತಿತ್ವವನ್ನು ಉಳ್ಳವರು. ಅಂಥವರು ಸಿಗುವುದು ತುಂಬ ಕಷ್ಟವೇ! ಆದರೆ ಸಿಕ್ಕಾಗ ಅಂಥವರು ನಮ್ಮಿಂದ ದೂರ ಸರಿಯದಂತೆ ನಾವು ಎಚ್ಚರವಾಗಿಯೂ ಇರಬೇಕೆನ್ನಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.