ಮಂಗಳವಾರ, ಡಿಸೆಂಬರ್ 1, 2020
21 °C

ದಿನದ ಸೂಕ್ತಿ| ಸುಖ ಎಂದರೇನು?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಯದೇವೋಪನತಂ ದುಃಖಾತ್‌ ಸುಖಂ ತದ್ರಸವತ್ತರಮ್‌ ।

ನಿರ್ವಾಣಾಯ ತರುಚ್ಛಾಯಾ ತಪ್ತಸ್ಯ ಹಿ ವಿಶೇಷತಃ ।।

ಇದರ ತಾತ್ಪರ್ಯ ಹೀಗೆ:

‘ಕಷ್ಟವನ್ನು ಅನುಭವಿಸಿದಮೇಲೆ ಬರುವ ಸುಖ ಬಹಳ ರುಚಿಯಾಗಿರುತ್ತವೆ. ಬಿಸಿಲಿನಲ್ಲಿ ನಡೆದು ಬಳಲಿದ ದಾರಿಗನಿಗೆ ಮರದ ನೆರಳು ಹೆಚ್ಚು ತಂಪನ್ನು ನೀಡುತ್ತದೆ.’

ಖಾರವಾಗಿ ಊಟಮಾಡೋಣ ಎಂದು ಸಿದ್ಧವಾಗುತ್ತೇವೆ. ಖಾರವನ್ನು ಹಂತಹಂತವಾಗಿ ಚಪ್ಪರಿಸುತ್ತೇವೆ. ಒಂದು ಹಂತದಲ್ಲಿ ಅದು ಹೆಚ್ಚಾಗುತ್ತದೆ. ಖಾರವನ್ನು ತಾಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಕೂಡಲೇ ನೀರನ್ನು ಕುಡಿಯುತ್ತೇವೆ. ನೀರು ಎಂದು ಉದಾಸೀನ ಮಾಡುತ್ತಿದ್ದ ನಮಗೆ ಆ ಕ್ಷಣ ಅದು ಅಮೃತಕ್ಕೆ ಸಮಾನವಾಗುತ್ತದೆ. ಜಗತ್ತಿನಲ್ಲಿ ಎಲ್ಲ ವಸ್ತುಗಳಿಗಿಂತಲೂ ನೀರೇ ಹೆಚ್ಚು ರುಚಿಯಾಗಿರುವಂಥದ್ದು ಎಂದು ಉದ್ಗರಿಸುತ್ತೇವೆ ಕೂಡ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಸುಭಾಷಿತ ಹೆಚ್ಚು ಕಡಿಮೆ ಇಂಥದೇ ಸಂಗತಿಯನ್ನು ಹೇಳುತ್ತಿರುವುದು. ನಮಗೆ ಜೀವನದಲ್ಲಿ ಸುಖದ ಬೆಲೆ ಗೊತ್ತಾಗುವುದಿಲ್ಲ; ಸುಖ ಎಲ್ಲಿಂದ ದೊರೆಯುತ್ತದೆ ಎಂಬುದೂ ಗಮನದಲ್ಲಿ ಇರುವುದಿಲ್ಲ; ಅಷ್ಟೇಕೆ, ನಾವು ಸುಖವನ್ನು ಸುಖವನ್ನಾಗಿ ಗುರುತಿಸುವುದರಲ್ಲೂ ಸೋಲುತ್ತಿರುತ್ತೇವೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಸದ್ಯದ ನಮ್ಮ ಪರಿಸ್ಥಿತಿಯನ್ನೂ ಇಲ್ಲಿ ಅವಲೋಕಿಸಬಹುದು.

ನಾವು ಸುಖ ಎಂದು ಏನೋನೋ ಊಹಿಸಿಕೊಂಡಿರುತ್ತೇವೆ. ಅದರಲ್ಲಿ ಸುಖವಿದೆ, ಇದರಲ್ಲಿ ಸುಖವಿದೆ – ಹೀಗೆಲ್ಲ ಅಂದುಕೊಂಡಿರುತ್ತೇವೆ. ಈ ಊಹೆಗಳಲ್ಲಿ, ಕಲ್ಪನೆಗಳಲ್ಲಿ ಕಳೆದುಹೋಗಿ, ನಿಜವಾದ ಸುಖ ನಮ್ಮಲ್ಲಿಯೇ ಇದ್ದರೂ ನಾವು ಉಪೇಕ್ಷಿಸುತ್ತಿರುತ್ತೇವೆ.

ಈಗ ಕರೊನಾ ವಕ್ಕರಿಸಿತು; ಲಾಕ್‌ಡೌನ್‌ಗಳು ನಡೆದವು. ಎಲ್ಲೂ ಹೊರಗೆ ಹೋಗಲು ಆಗದಂಥ ಪರಿಸ್ಥಿತಿ ಎದುರಾಯಿತು. ಆರು ತಿಂಗಳಿಗೆ ಹೋಲಿಸಿದರೆ ಈಗ ಸ್ವಲ್ಪವಾದರೂ ಹೊರಗೆ ಹೋಗುವಂಥ ಅವಕಾಶ ಒದಗುತ್ತಿದೆ. ಸ್ವಲ್ಪ ಹೊತ್ತು ಹೊರಗೆ ಹೋಗಲು ಅವಕಾಶ ಸಿಕ್ಕಿರುವುದಕ್ಕೇ ಈಗ ತುಂಬ ಸಂತೋಷವನ್ನು ನಾವು ಅನುಭವಿಸುತ್ತಿದ್ದೇವೆ, ಅಲ್ಲವೆ?

ಇದು ಹೇಗೆ?

ಈ ಮೊದಲು ನಮಗಿದ್ದ ಸ್ವಾತಂತ್ರ್ಯದ ಬೆಲೆ, ನೆಮ್ಮದಿಯ ಬೆಲೆ ಈಗ ಗೊತ್ತಾಗುವಂಥ ಸಮಯ ಬಂದಿದೆ. ಜೀವನದ ಒಂದೊಂದು ಕ್ಷಣಕ್ಕೂ ಇರುವ ಬೆಲೆ ಏನು ಎಂಬುದನ್ನು ಈಗಲಾದರೂ ಅರ್ಥಮಾಡಿಕೊಳ್ಳಬೇಕಿದೆ. ನಮ್ಮ ಆರೋಗ್ಯದ ಬೆಲೆಯನ್ನು ಅರ್ಥಮಾಡಿಕೊಳ್ಳಬೇಕಿದೆ. 

ಇನ್ನೂ ನಮ್ಮ ಕಷ್ಟದ ದಿನಗಳು ಮುಗಿದಿಲ್ಲ. ಆದರೆ ನಮಗೆ ಕಷ್ಟ ಎಂದರೆ ಏನು ಎಂದು ಅರ್ಥಮಾಡಿಕೊಳ್ಳುವ ಅವಕಾಶ ಒದಗಿಬಂದಿದೆ. ಹೀಗಾಗಿ ನಾವು ಕಳೆದುಕೊಂಡಿರುವ ಸುಖದ ದಿನಗಳೂ ನಮ್ಮ ನೆನಪಿಗೆ ಬರುತ್ತಿರುವುದು ಸುಳ್ಳಲ್ಲ. ನಾವೆಲ್ಲರೂ ಒಂದಾಗಿ ಸದ್ಯದ ಕಷ್ಟದಿಂದ ಪರಾಗಿ ನಮ್ಮ ಸುಖದ ದಿನಗಳನ್ನು ಮತ್ತೆ ದಕ್ಕಿಸಿಕೊಳ್ಳಬೇಕಿದೆ. ಕಷ್ಟದ ಮುಗಿದ ಮೇಲೆ ನಮಗೆ ಸುಖದ ರುಚಿ ಗೊತ್ತಾಗುವುದು ಎನ್ನುತ್ತಿದೆ ಸುಭಾಷಿತ. ಅದು ನೀಡಿರುವ ಉದಾಹರಣೆ ಕೂಡ ನಮ್ಮ ಅನುಭವಕ್ಕೆ ಬರುವಂಥದ್ದೇ: ಬಿಸಿಲಿನಲ್ಲಿ ನಡೆದು ಬಳಲಿದ ಪಯಣಿಗನಿಗೆ ಮರದ ನೆರಳು ಹೆಚ್ಚು ತಂಪನ್ನು ನೀಡುತ್ತದೆ. ನಮ್ಮ ಬಿಸಿಲಿನ ಪ್ರಯಾಣವೂ ಬೇಗ ಕೊನೆಗೊಳ್ಳಲಿ; ತಂಪಿನ ಸುಖ ಬೇಗ ಸಿಗಲಿ. ಇದಕ್ಕಾಗಿ ನಾವೆಲ್ಲರೂ ವಿವೇಕದಿಂದ ನಡೆದುಕೊಳ್ಳೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.