ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಮನೆಯೇ ತಪೋವನ

Last Updated 27 ಅಕ್ಟೋಬರ್ 2020, 1:33 IST
ಅಕ್ಷರ ಗಾತ್ರ

ವನೇಷು ದೋಷಾಃ ಪ್ರಭವಂತಿ ರಾಗಿಣಾಂ

ಗೃಹೇಷು ಪಂಚೇಂದ್ರಿಯನಿಗ್ರಹಸ್ತಪಃ ।

ಅಕುತ್ಸಿತೇ ಕರ್ಮಣಿ ಯಃ ಪ್ರವರ್ತತೇ

ನಿವೃತ್ತರಾಗಸ್ಯ ಗೃಹಂ ತಪೋವನಮ್‌ ।।

ಇದರ ತಾತ್ಪರ್ಯ ಹೀಗೆ:

‘ಸಂಸಾರಸಕ್ತನಿಗೆ ಕಾಡಿನಲ್ಲೂ ತಪಸ್ಸಿಗೆ ವಿಘ್ನಗಳು ಉಂಟಾಗುತ್ತವೆ. ಅಂತೆಯೇ ಮನೆಯಲ್ಲಿ ಇದ್ದುಕೊಂಡೇ ಇಂದ್ರಿಯಗಳನ್ನು ನಿಗ್ರಹಿಸಿಕೊಂಡರೆ ಅದೇ ತಪಸ್ಸಾಗುತ್ತದೆ. ಒಳ್ಳೆಯ ಕಾರ್ಯದಲ್ಲಿ ತೊಡಗಿರುವ ರಾಗರಹಿತನಿಗೆ ಮನೆಯೇ ತಪೋವನವಾಗುತ್ತದೆ.’

ಕೆಲವರು ರಾಜಕಾರಣಿಗಳು ಮಂತ್ರಿಗಳಾಗಬೇಕು ಹಪಾಹಪಿಸುತ್ತಿರುತ್ತಾರೆ. ಅವರ ಬೆಂಬಲಿಗರಿಂದ ಘೋಷಣೆಗಳನ್ನೂ ಕೂಗಿಸುತ್ತಿರುತ್ತಾರೆ. ’ನೀವು ಮಂತ್ರಿ ಆಗಲೇಬೇಕೆಂಬ ಆಗ್ರಹ ಏಕೆ‘ ಎಂದು ಆ ರಾಜಕಾರಣಿಗಳನ್ನು ಕೇಳಿ. ಅವರು ಕೊಡುವ ಉತ್ತರ ಒಂದೇ: ’ಜನಸೇವೆ ಮಾಡಲು ಅವಕಾಶವನ್ನು ಕೇಳುತ್ತಿದ್ದೇನೆ.’

ಇಲ್ಲೊಂದು ಪ್ರಶ್ನೆ ಏಳುತ್ತದೆ. ಜನಸೇವೆ ಮಾಡಲು ಮಂತ್ರಿಗಿರಿ ಅನಿವಾರ್ಯವೆ? ಮಂತ್ರಿಯಾಗದೆಯೂ ಜನಸೇವೆಯನ್ನು ಮಾಡಬಹುದಲ್ಲವೆ? ಎಷ್ಟೋ ಜನರು, ಅವರ ಹೆಸರುಗಳು ಕೂಡ ಸಮಾಜಕ್ಕೆ ಗೊತ್ತಿರುವುದಿಲ್ಲ, ಸಮಾಜಸೇವೆಯಲ್ಲಿ ಮಗ್ನರಾಗಿರುತ್ತಾರಲ್ಲವೆ?

ಇದರಿಂದ ಏನು ಸ್ಪಷ್ಟವಾಗುತ್ತದೆ? ಸೇವೆ ಮಾಡಲು, ಸೇವೆ ಮಾಡಬೇಕೆಂಬ ಮನೋಧರ್ಮ ಮತ್ತು ಸ್ವಭಾವ ಮುಖ್ಯವೆ ಹೊರತು, ಮಂತ್ರಿಪದವಿಯೋ ಶಾಸಕಪದವಿಯೋ ಅಲ್ಲವಷ್ಟೆ. ಸಾಮಾನ್ಯ ವ್ಯಕ್ತಿಯಾಗಿದ್ದುಕೊಂಡೂ ಜನಸೇವೆಯನ್ನು ಮಾಡಬಹುದು.

ಸುಭಾಷಿತ ಇದೇ ವಿಷಯವನ್ನು ಇನ್ನೊಂದು ಉದಾಹರಣೆಯ ಮೂಲಕ ಹೇಳುತ್ತಿದೆ.

ತಪಸ್ಸು ಮಾಡಲು ಏನು ಬೇಕು? ಏಕಾಂತ ಬೇಕು – ಎಂದು ಸಹಜವಾಗಿಯೇ ಉತ್ತರಿಸುತ್ತೇವೆ. ಏಕಾಂತ ಎಲ್ಲಿ ಸಿಗುತ್ತದೆ? ಅದು ನಾಡಿನಲ್ಲಿ ಸಿಗದು; ಇಲ್ಲಿ ಗಲಾಟೆ, ದೊಂಬಿ. ಹೀಗಾಗಿ ಕಾಡಿನಲ್ಲಿ ಮಾತ್ರವೇ ತಪಸ್ಸಿಗೆ ಬೇಕಾದ ಪ್ರಶಾಂತ ವಾತಾವರಣ ಸಿಗುತ್ತದೆ – ಎಂದು ಕಾಡಿಗೆ ಹೋಗುತ್ತೇವೆ. ಆದರೆ ಅಲ್ಲಿ ತಪಸ್ಸು ಸಿದ್ಧಿಸುವುದಿಲ್ಲ. ಏಕೆಂದರೆ ನಮಗೆ ತಪಸ್ಸಿಗೆ ಬೇಕಾದ ಮಾನಸಿಕ ಸಿದ್ಧತೆಯೇ ಇರುವುದಿಲ್ಲ. ತಪಸ್ಸಿಗೆ ಬೇಕಾದ ಮನಸ್ಸು ನಮ್ಮಲ್ಲಿ ಸಹಜವಾಗಿದ್ದರೆ ನಾವು ಮನೆಯಲ್ಲಿ ಇದ್ದುಕೊಂಡೇ ಅದನ್ನು ಸಾಧಿಸಬಹುದು. ತಪಸ್ಸಿಗೆ ತೊಡಗುವ ಮೊದಲು ನಾವು ರಾಗ–ದ್ವೇಷಗಳಿಂದ ಮುಕ್ತರಾಗಿರಬೇಕು. ಇದು ನಮಗೆ ಸಾಧ್ಯವಾದರೆ ಆಗ ನಮ್ಮ ಮನೆಯೇ ನಮಗೆ ತಪೋವನವಾಗಿ ಒದಗಬಲ್ಲದು.

ಒಳ್ಳೆಯ ಲೇಖನ ಬರೆಯಲು ನಮಗೆ ಬೇಕಾಗಿರುವುದು ಆ ವಿಷಯದಲ್ಲಿ ತಜ್ಞತೆ ಮತ್ತು ಶೈಲಿ. ಇದನ್ನು ಬಿಟ್ಟು ನನಗೆ ಒಳ್ಳೆಯ ಪೆನ್‌ ಕೊಟ್ಟರೆ ಒಳ್ಳೆಯ ಲೇಖನ ಬರೆಯುವೆ, ಒಳ್ಳೆಯ ಪೇಪರ್ ಕೊಟ್ಟರೆ ಒಳ್ಳೆಯ ಲೇಖನ ಬರೆಯುವೆ – ಎಂದರೆ ಆ ಮಾತನ್ನು ಕೇಳಿದವರು ಏನಂದಾರು?

ಇಂಥ ಹಲವು ವಿವರಗಳನ್ನು ನಮ್ಮ ನಿತ್ಯಜೀವನದಲ್ಲಿ ಕಾಣಬಹುದು. ನಮ್ಮ ಯಶಸ್ಸು, ಸಾಧನೆ, ಅಷ್ಟೇಕೆ ನಮ್ಮ ಸುಖ–ಸಂತೋಷಗಳು – ಈ ಎಲ್ಲವೂ ನಮಗೆ ಸಿಗುವ ಬಾಹ್ಯ ಸಲಕರಣೆಗಳನ್ನು ಅವಲಂಬಿಸಿರುತ್ತವೆ ಎಂದು ಭಾವಿಸಿಕೊಂಡಿರುತ್ತೇವೆ. ಆದರೆ ನಿಜವಾಗಿಯೂ ನಮ್ಮ ಯಶಸ್ಸಿಗೆ ಬೇಕಾಗಿರುವುದು ಅದಕ್ಕೆ ಪೂರಕವಾದ ನಮ್ಮ ಅಂತರಂಗದ ಶಕ್ತಿ–ಸಿದ್ಧತೆ; ನಮ್ಮ ಸಂತೋಷಕ್ಕೆ ಬೇಕಾಗಿರುವುದು ಸಂತೋಷವನ್ನು ಗುರುತಿಸುವಂಥ, ಅದನ್ನು ಸವಿಯುವಂಥ ಭಾವ–ಬುದ್ಧಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT