ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಶಿವನಿಂದ ವೇದ ತಿಳಿದ ವಿಷ್ಣು

ಅಕ್ಷರ ಗಾತ್ರ

ರುದ್ರಸಂಹಿತೆಯ ಸೃಷ್ಟಿಖಂಡದಲ್ಲಿ ಶಿವತತ್ವವರ್ಣನ ಎಂಬ ಒಂಬತ್ತನೆಯ ಅಧ್ಯಾಯವಿದೆ. ಇದರಲ್ಲಿ ಬ್ರಹ್ಮ-ವಿಷ್ಣು ಮುಂದೆ ಶಿವ ತನ್ನ ಪತ್ನಿಯೊಂದಿಗೆ ಪ್ರತ್ಯಕ್ಷನಾಗಿ ವಿಷ್ಣುವಿಗೆ ವೇದಗಳನ್ನು ಉಪದೇಶಿಸಿದ ವಿವರವಿದೆ. ಅದನ್ನು ಬ್ರಹ್ಮ ಹೀಗೆ ವರ್ಣಿಸುತ್ತಾನೆ.

‘ವಿಷ್ಣುವು ಮಾಡಿದ ಶಿವಸ್ತೋತ್ರವನ್ನು ಕೇಳಿ ಕರುಣಾಶಾಲಿಯಾದ ಮಹೇಶ್ವರನು ಸುಪ್ರಸನ್ನನಾಗಿ ಉಮೆಯೊಡನೆ ಪ್ರತ್ಯಕ್ಷನಾದ. ಆ ಪರಶಿವನ ವೈಭವವನ್ನೇನೆಂದು ಹೇಳಲಿ? ಆತನಿಗೆ ಐದು ಮುಖಗಳು. ಮೂರು ಕಣ್ಣುಗಳು. ಹಣೆಯ ಅಂಚಿನಲ್ಲಿ ಬಾಲಚಂದ್ರನ ಮೆರುಗು. ಶುಭ್ರವಾದ ಮೈಬಣ್ಣ. ದೊಡ್ಡ ದೊಡ್ಡ ಕಣ್ಣುಗಳು. ಮೈಎಲ್ಲಾ ಭಸ್ಮದಿಂದ ಉದ್ಧೂಲಿತ. ಹತ್ತು ಕೈಗಳು, ಕಪ್ಪಾದ ಕೊರಳು. ನಾನಾ ವಿಧವಾದ ಒಡವೆಗಳು ಅಲಂಕರಿಸಿದ್ದವು. ಆತನ ಸರ್ವಾಂಗಗಳೂ ಸೌಂದರ್ಯದಿಂದ ಉಜ್ವಲವಾಗಿದ್ದವು. ಅವನ ಪ್ರಶಸ್ತವಾದ ಲಲಾಟವು, ಅಡ್ಡಡ್ಡವಾಗಿರುವ ಮೂರು ಭಸ್ಮರೇಖೆಗಳಿಂದ ಸುಶೋಭಿತವಾಗಿತ್ತು.

‘ತನ್ನ ಅರ್ಧಾಂಗಿಯೊಡನೆ, ಅದ್ಭುತರೂಪದಿಂದ ಆವಿರ್ಭವಿಸಿದ ದೇವದೇವನಾದ ಶಿವನನ್ನು ಕಂಡು ನಾನು ಮತ್ತು ವಿಷ್ಣು ಆತನನ್ನು ಸ್ತೋತ್ರಮಾಡಿದೆವು. ಕರುಣಾನಿಧಿಯಾದ ಆ ಮಹೇಶ್ವರನು ಪ್ರಸನ್ನವಾದ ಮನಸ್ಸುಳ್ಳವನಾಗಿ ವಿಷ್ಣುವಿಗೆ ವೇದಗಳನ್ನು ಮತ್ತು ರಹಸ್ಯವಾದ ತತ್ವಜ್ಞಾನವನ್ನು ಉಪದೇಶಿಸಿದ. ಅದನ್ನೆಲ್ಲಾ ವಿಷ್ಣು ಕೃಪೆ ಮಾಡಿ ನನಗೆ ಹೇಳಿದ. ವಿಷ್ಣು ಧನ್ಯನಾಗಿ, ಮುಕುಲಿತ ಹಸ್ತನಾಗಿ, ನನ್ನೊಡನೆ ಮಹೇಶ್ವರನನ್ನು ನಮಸ್ಕರಿಸಿದ.

‘ನಂತರ ಶಿವನಲ್ಲಿ ವಿಷ್ಣು ಹೀಗೆ ಪ್ರಾರ್ಥಿಸಿದ: ಓ ಪ್ರಭುವೇ, ನೀನು ಸುಪ್ರೀತನಾಗುವ ಬಗೆ ಹೇಗೆ? ನಿನ್ನನ್ನು ನಾನು ಹೇಗೆ ಪೂಜಿಸಬೇಕು? ನ ಯಾವ ರೀತಿ ಧ್ಯಾನಿಸಬೇಕು? ನೀನು ಒಲಿಯುವ ರೀತಿಯಾದರೂ ಹೇಗೆ? ಮಹಾದೇವ! ನಿನ್ನ ಅಪ್ಪಣೆಯಂತೆ, ನಿನ್ನ ಪ್ರೀತಿಯನ್ನು ಅನವರತವೂ ಸಂಪಾದಿಸಲು, ನಾವೀರ್ವರೂ ಸದಾ ಏನನ್ನು ಆಚರಿಸಬೇಕು? ಆಜ್ಞಾಪಿಸು. ನಾವೀರ್ವರೂ ನಿನ್ನನ್ನೇ ಆಶ್ರಯಿಸಿರುವವರೆಂದು ತಿಳಿದು, ನಮ್ಮಲ್ಲಿ ಕೃಪೆಯಿಟ್ಟು, ಇವೆಲ್ಲವನ್ನೂ ತಿಳಿಸು’ ಎಂದು ವಿಷ್ಣು ಕೋರಿದ.

ಆಗ ವಿಷ್ಣುವಿಗೆ ಶಿವ ಹೇಳಿದ್ದನ್ನು ಬ್ರಹ್ಮನು ನಾರದನಿಗೆ ಹೀಗೆ ವರ್ಣಿಸುತ್ತಾನೆ: ‘ಕರುಣಾಶಾಲಿಯೂ ಸುಪ್ರಸನ್ನನೂ ಆದ ಶಿವನು ನಮ್ಮೀ ಮಾತನ್ನು ಕೇಳಿ, ಪ್ರಸನ್ನಚಿತ್ತನಾಗಿ, ಪ್ರೀತಿಯಿಂದ, ಓ ದೇವಶ್ರೇಷ್ಠರೇ, ನಿಮ್ಮೀರ್ವರ ಭಕ್ತಿಗೆ ನಾನು ಮೆಚ್ಚಿದೆ. ನಾನು ಸುಪ್ರೀತನಾಗಿದ್ದೇನೆ. ನಿಮ್ಮ ಭಯವೆಲ್ಲವನ್ನೂ ಬಿಟ್ಟುಬಿಡಿ. ಯಾವಾಗಲೂ ಈ ನನ್ನ ಲಿಂಗವನ್ನು ಪೂಜಿಸಬೇಕು. ಅದನ್ನು ಧ್ಯಾನಿಸಬೇಕು. ಹಾಗೆಯೇ ಅದನ್ನು ನಿರ್ಮಿಸಬೇಕು. ಲಿಂಗಸ್ವರೂಪದಿಂದ ನನ್ನನ್ನು ಅರ್ಚಿಸಿದರೆ ನಾನು ಒಲಿದು ನಾನಾ ವಿಧವಾದ ಫಲಗಳನ್ನೂ ಇಷ್ಟಾರ್ಥಗಳನ್ನೂ ಬಹುವಿಧವಾಗಿ ನೀಡುವೆನು.

‘ಎಲೈ ಸುರಶ್ರೇಷ್ಠರೇ, ನಿಮ್ಮೀರ್ವರಿಗೆ ಒಂದು ವೇಳೆ ದುಃಖ ಬಂದಾಗ, ನನ್ನ ಲಿಂಗವನ್ನು ಪೂಜಿಸಿದರೆ ನಿಮ್ಮ ದುಃಖವೆಲ್ಲವೂ ಪರಿಹಾರವಾಗುವುದು. ನೀವೀರ್ವರೂ ನನ್ನ ಮಾಯೆಯ ದೆಸೆಯಿಂದಲೇ, ಸರ್ವೇಶ್ವರವಾದ ನನ್ನ ಎಡಬಲ ಭಾಗಗಳಿಂದ ಹುಟ್ಟಿರುವಿರಿ. ಪರಮಪುರುಷವಾದ ನನ್ನ ಬಲಪಾರ್ಶ್ವದಿಂದ ಮೂರು ಲೋಕಗಳಿಗೂ ಪಿತಾಮಹನೆನಿಸಿದ ಈ ಬ್ರಹ್ಮನೂ, ಎಡ ಪಾರ್ಶ್ವದಿಂದ ವಿಷ್ಣುವಾದ ನೀನೂ ಹುಟ್ಟಿದಿರಿ. ನಿಮ್ಮ ವಿಷಯದಲ್ಲಿ ನಾನು ಬಹಳ ಸುಪ್ರೀತನಾಗಿದ್ದೇನೆ. ನಿಮಗೆ ಇಷ್ಟವಾದ ವರಗಳನ್ನು ನೀಡುವೆನು. ನನ್ನ ಒಪ್ಪಿಗೆಯಂತೆ ನಿಮ್ಮೀರ್ವರಿಗೂ ನನ್ನಲ್ಲಿ ದೃಢವಾದ ಭಕ್ತಿಯು ನೆಲಸಲಿ.

‘ಮಣ್ಣಿನಿಂದಲೇ ನನ್ನ ಮೂರ್ತಿಯನ್ನು ಮಾಡಿ. ಅದಕ್ಕೆ ನಾನಾವಿಧವಾದ ಸೇವೆಯನ್ನು ಸಲ್ಲಿಸಿರಿ. ನೀವು ಸುಖವನ್ನು ಹೊಂದುವಿರಿ. ಎಲೈ ಬ್ರಹ್ಮನೇ, ನೀನು ನನ್ನ ಅಪ್ಪಣೆಯನ್ನು ಪರಿಪಾಲಿಸುತ್ತಾ ಜಗತ್ತನ್ನು ಸೃಷ್ಟಿಸು. ಓ ವತ್ಸ ಹರಿ, ಹೀಗೆಯೇ ನೀನೂ, ಚರಾಚರಾತ್ಮಕವಾದ ಈ ಜಗತ್ತನ್ನು ನನ್ನ ಅಪ್ಪಣೆಯಂತೆ ಪಾಲಿಸುತ್ತಿರು’ ಎಂದು ತಮಗೆ ಶಿವ ಸೂಚಿಸುತ್ತಾನೆ.

ಹೀಗೆ, ಯಾವ ವಿಧಿಯನ್ನು ಅನುಸರಿಸಿ ಪೂಜಿಸಿದರೆ, ಆ ಶಂಭುವು ನಾನಾ ಮುಖವಾಗಿ ಫಲಗಳನ್ನು ಕೊಡುವನೋ, ಅಂಥ ಶುಭಕರವಾದ ಪೂಜಾವಿಧಿಯನ್ನು ನಮಗೆ ತಿಳಿಸಿದನು ಎಂದು ಬ್ರಹ್ಮ ತನ್ನ ಮಗ ನಾರದನಿಗೆ ಹೇಳುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT