ಬುಧವಾರ, ಸೆಪ್ಟೆಂಬರ್ 22, 2021
23 °C

ಬಕ್ರೀದ್‌| ತ್ಯಾಗ, ಸೋದರತ್ವ ಸಾರುವ ಹಬ್ಬ

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

Prajavani

ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ‘ಬಕ್ರೀದ್‌’ ಕೂಡ ಒಂದು. ಇಸ್ಲಾಮಿಕ್‌ ಕ್ಯಾಲೆಂಡರಿನ ‘ದುಲ್‌ಹಜ್ಜ್‌’ ತಿಂಗಳ 10ರಂದು ಈ ಹಬ್ಬ ಆಚರಿಸಲಾಗುತ್ತದೆ. ಇಸ್ಲಾಮಿನ ಇತಿಹಾಸವನ್ನು ಸ್ಮರಿಸುವ ಈ ಹಬ್ಬ ಮನುಷ್ಯನಲ್ಲಿ ಮುಖ್ಯವಾಗಿ ಇರಬೇಕಾದ ಸಹೋದರತೆ, ತ್ಯಾಗ, ಸಮರ್ಪಣಾ ಮನೋಭಾವ, ಬದ್ಧತೆಯ ಗುಣಗಳನ್ನು ನೆನಪಿಸುತ್ತದೆ. 

ಸುಮಾರು ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ‘ಬಕ್ರೀದ್’ ಆಚರಿಸಲಾಗುತ್ತದೆ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್‌ ಅವರಿಗಿಂತ ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಪ್ರವಾದಿ. ಹಜ್‌ ಯಾತ್ರೆಗೆ ಸೌದಿ ಆರೇಬಿಯಾದ ಮಕ್ಕಾಕ್ಕೆ ತೆರಳಿದವರು ನಡೆಸುವ ಧಾರ್ಮಿಕ ವಿಧಿ-ವಿಧಾನ ಈ ಹಬ್ಬದೊಂದಿಗೆ ಕೊನೆಗೊಳ್ಳುತ್ತದೆ.

ಹಬ್ಬದ ಆಚರಣೆ, ಪ್ರಾಮುಖ್ಯ: ಹಬ್ಬದ ದಿನ ಬೆಳಿಗ್ಗೆ ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ನಮಾಜ್‌ ಇರುತ್ತದೆ. ಮಕ್ಕಳು, ಹಿರಿಯರು ಹೊಸ ಉಡುಪು ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ಪರಸ್ಪರ ಶುಭಾಶಯ ತಿಳಿಸಿ, ಗೆಳೆಯರ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡಿ ಸೌಹಾರ್ದತೆಯ ಸಂದೇಶವನ್ನು ಸಾರುತ್ತಾರೆ. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಗೆಳೆಯರು, ಬಂಧುಗಳನ್ನು ಆಹ್ವಾನಿಸಿ ಜೊತೆಯಾಗಿ ಊಟ ಮಾಡಿ, ಸಂಭ್ರಮ ಹಂಚಿಕೊಳ್ಳುವರು.

ಹಬ್ಬದ ದಿನ ದಾನವಾಗಿ ದೊರೆಯುವ ಮಾಂಸ, ಹಣ, ದಿನಸಿ ಸಾಮಗ್ರಿಗಳಿಂದ ಎಷ್ಟೋ ಬಡ ಕುಟುಂಬಗಳು ಪ್ರಯೋಜನ ಪಡೆಯುತ್ತವೆ. ಶ್ರೀಮಂತರು ಮತ್ತು ಬಡವರ ನಡುವೆ ನಂಬಿಕೆ, ವಿಶ್ವಾಸ ಮೂಡುತ್ತದೆ. ಬಕ್ರೀದ್‌ ಹೆಸರಿನಲ್ಲಿ ನಡೆಯುವ ಸೌಹಾರ್ದ ಕೂಟಗಳು ಸಮಾಜದಲ್ಲಿ ಶಾಂತಿ ನೆಲೆಸಲು ಹಾದಿಯೊದಗಿಸುತ್ತದೆ. ಹೊಸ ಬಟ್ಟೆ, ಹಬ್ಬದ ಉಡುಗೊರೆ, ವಿಶೇಷ ಖಾದ್ಯಗಳ ತಯಾರಿಗೆ ಅಗತ್ಯ ವಸ್ತುಗಳ ಖರೀದಿಯು ಹಲವು ಕೋಟಿ ರೂಪಾಯಿಗಳ ವಹಿವಾಟಿಗೆ ಕಾರಣವಾಗಿ, ಆರ್ಥಿಕತೆಯ ಮೇಲೂ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ.

ಜಾನುವಾರು ಬಲಿ ಏಕೆ?: ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದಿದ್ದ ಘಟನೆಯೊಂದರ ನೆನಪಿನಲ್ಲಿ ಹಬ್ಬದ ದಿನ ಜಾನುವಾರು ಬಲಿ ನೀಡಲಾಗುತ್ತದೆ. 

ಅಲ್ಲಾಹನ ಆದೇಶದಂತೆ ಇಬ್ರಾಹಿಂ, ತಮ್ಮ ಪುತ್ರ ಇಸ್ಮಾಯಿಲ್‌ ಅವರನ್ನು ಬಲಿಯರ್ಪಿಸಲು ಮುಂದಾಗುತ್ತಾರೆ. ತಮ್ಮ ಮಗನನ್ನೇ ದೇವರ ಇಚ್ಛೆಯಂತೆ ಬಲಿ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿಯರ್ಪಿಸುವಂತೆ ಸೂಚಿಸುತ್ತಾರೆ ಎಂಬುದು ಮುಸ್ಲಿಮರ ನಂಬಿಕೆ. ಪ್ರವಾದಿ ಇಬ್ರಾಹಿಂಗೆ ತಮ್ಮ ಜೀವನದಲ್ಲಿ ಎದುರಾದ ಕೊನೆಯ ಪರೀಕ್ಷೆ ಇದಾಗಿತ್ತು.

ಆರ್ಥಿಕವಾಗಿ ಸಬಲರಾಗಿರುವ ಪ್ರತಿಯೊಬ್ಬರೂ ಪ್ರಾಣಿಬಲಿ ನೀಡ
ಬೇಕು. ಬಲಿ ಅರ್ಪಿಸಿದ ಪ್ರಾಣಿಯಿಂದ ಲಭಿಸಿದ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಅಂಶವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚಬೇಕು.

ಪವಿತ್ರ ಹಜ್‌: ಹಜ್‌ ಯಾತ್ರೆಯ ಸಂದರ್ಭದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್‌ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಪ್ರತಿವರ್ಷವೂ ಹಜ್‌ನಲ್ಲಿ ವಿಶ್ವದ ವಿವಿಧ ದೇಶಗಳ 20 ಲಕ್ಷಕ್ಕೂ ಅಧಿಕ ಯಾತ್ರಿಕರು ಪಾಲ್ಗೊಳ್ಳುವರು. ಈ ಬಾರಿ ಕೋವಿಡ್‌ ಕಾರಣ ಸೌದಿ ಅರೇಬಿಯಾ ಸರ್ಕಾರ ವಿದೇಶಿಯರಿಗೆ ಅವಕಾಶ ನೀಡಿಲ್ಲ. ತನ್ನ ದೇಶದ 60 ಸಾವಿರ ಮಂದಿಗೆ ಅನುಮತಿ ನೀಡಿದೆ. ಕೋವಿಡ್‌ ಲಸಿಕೆ ಪಡೆದ 18ರಿಂದ 65 ವರ್ಷದೊಳಗಿನವರು ಮಾತ್ರ ಈ ಬಾರಿಯ ಹಜ್‌ನಲ್ಲಿ ಪಾಲ್ಗೊಂಡರು.

ಕೋವಿಡ್‌ ಕರಿನೆರಳಲ್ಲೇ ಆಚರಣೆ

ಕಳೆದ ವರ್ಷದಂತೆ ಈ ಬಾರಿಯೂ ಕೋವಿಡ್‌ ಕರಿನೆರಳಲ್ಲೇ ‘ಬಕ್ರೀದ್‌’ ಆಚರಣೆ ನಡೆಯಲಿದೆ. ಈದ್ಗಾ ಮೈದಾನಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಕೋವಿಡ್‌ನ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಸೀದಿಗಳ ಸಾಮರ್ಥ್ಯದ ಶೇ 50ರಷ್ಟು ಮಂದಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು