ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಬೆಳಕಲ್ಲಿ ಬಾಳು ಬೆಳಗೋಣ ಬನ್ನಿ

Last Updated 25 ಏಪ್ರಿಲ್ 2020, 20:06 IST
ಅಕ್ಷರ ಗಾತ್ರ
ADVERTISEMENT
""

ಈ ದೀಪದ ಬೆಳಗು ನೋಡಿ. ಅದು ಕತ್ತಲೆಯನ್ನು ಹೊಡೆದೋಡಿಸುತ್ತದೆ. ದೀಪ ಯಾವುದಾದರೇನು? ಎಲ್ಲಿದ್ದರೇನು? ಅದಕ್ಕೆ ಗೊತ್ತಿರುವುದೊಂದೇ ಕೆಲಸ ಬೆಳಕು ನೀಡುವುದು. ಹಣತೆ ಇರಲಿ, ನೀಲಾಂಜನವಿರಲಿ, ಬೆಳಕು ನೀಡುವುದಷ್ಟೇ ಅವುಗಳ ಕೆಲಸ. ಬೆಳಕು ನೀಡುತ್ತಲೇ ಅವು ಸವೆಯುತ್ತವೆ. ಎಣ್ಣೆ ಇದ್ದಷ್ಟೂ ಹೊತ್ತು, ಬತ್ತಿ ಇದ್ದಷ್ಟೂ ಹೊತ್ತು ಬೆಳಕು ಹಂಚುತ್ತವೆ.

ಅದರಂತೆಯೇ ನಮ್ಮ ಪ್ರಾಣವೂ. ಜೀವವೂ. ನಮ್ಮೊಳಗಿನ ಜೀವ ಸಹ ಒಂದು ದೀಪವಿದ್ದಂತೆ. ನಮ್ಮ ಜೀವನವೇ ಇದಕ್ಕೆ ನಿಡುಬತ್ತಿ ಮತ್ತು ಎಣ್ಣೆ. ನಾವು ಮಾಡಬೇಕಿರುವುದು ಬರಿಯ ಬೆಳಕು ನೀಡುವ ಕೆಲಸ. ಸಣ್ಣದಾಗಿ ಬೆಳಗುತ್ತ, ಯಾವುದೇ ಕಾವಿಲ್ಲದೆ, ಝಳವಿಲ್ಲದೆ, ಹಿತೋಷ್ಣವನ್ನು ನೀಡುತ್ತ ಬೆಳಗಬೇಕು. ನಮ್ಮನೆಯಲ್ಲೂ, ದೇವರ ಗುಡಿಯಲ್ಲಿಯೂ ಬೆಳಗುವ ದೀಪದಂತೆಯೇ ನಾವಾಗಬೇಕು. ನಾವೇ ದೀಪವಾಗಬೇಕು. ಬೆಳಕಿನ ಕುಡಿಮಾತ್ರ ಹಂಚಬೇಕು. ಕಿಡಿಯಲ್ಲ. ಕಿಡಿಯ ವಿಷಯ ಬಂದಾಗ ಅಕ್ಕನ ವಚನವಿದೆ.

‘‘ಸಂಗದಿಂದಲ್ಲದೆ ಅಗ್ನಿ ಹುಟ್ಟದು/ ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು/ ಸಂಗದಿಂದಲ್ಲದೆ ಸರ್ವಸುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು
ಪರಮಸುಖಿಯಾದೆನಯ್ಯಾ’’

ಕಲ್ಲು–ಕಲ್ಲುಗಳ ಸಂಗ ಮತ್ತು ಸಂಘರ್ಷದಿಂದ ಬೆಂಕಿ ಹುಟ್ಟಿತು. ಸಂಗದ ಸಂಘರ್ಷದ ಪರಿಣಾಮ ಬೆಳಕಾಗಬೇಕು. ಸಂಗದ ಆಯ್ಕೆ ಹೆಂಗಿರಬೇಕು. ಮಣ್ಣಿನ ಸಂಗವಿಲ್ಲದಿದ್ದರೆ ಬೀಜ ಮೊಳಕೆಯೊಡೆದು, ಬೆಳೆಯುವುದಿಲ್ಲ. ಮಣ್ಣಾಗುವುದು ಸುಲಭ. ಮಣ್ಣಿಂದೇಳಬೇಕು. ಹೀಗೆಯೇ ನಮ್ಮ ಸಂಗದ ಆಯ್ಕೆ ಹೇಗಿರಬೇಕೆಂದರೆ ಕೇವಲ ಆನಂದಕ್ಕಾಗಿ, ಹೊಸ ಸೃಷ್ಟಿಗಾಗಿ, ಸುಂದರ ಬದುಕಿಗಾಗಿ ಸಂಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಸಂಗದೊಳಗೊಂದಾಗಬೇಕು. ಸಂಗಮ್‌ ಶರಣಂ ಗಚ್ಛಾಮಿ ಎಂದು ಗೌತಮ ಬುದ್ಧ ಹೇಳಿದರು. ಸಂಗದಲ್ಲಿ ಶ್ರೇಷ್ಠರಾಗುವ ವ್ಯಸನವಿರಕೂಡದು. ಶರಣಾಗಬೇಕು. ಹಾಗೆ ಶರಣಾಗುವುದೇ, ಹಾಗೆ ಒಂದಾಗುವುದೇ ನಮ್ಮ ಬದುಕಾಗಬೇಕು. ಅದು ಬೆಳಕು ನೀಡುತ್ತದೆ. ನಾವೂ ನಮ್ಮ ಜೀವನದಲ್ಲಿ ಯಾವ ನಿರೀಕ್ಷೆಗಳಿಲ್ಲದೇ ಸಂಗ ಮಾಡಬೇಕು. ನಿರೀಕ್ಷೆಗಳಿರದ ಸಂಗದಲ್ಲಿ ಸೌಂದರ್ಯವಿರುತ್ತದೆ. ನಿರಾಸೆ ಇರುವುದಿಲ್ಲ.

ಸತ್ಸಂಗವೆಂಬುದು ಹೀಗೆಯೆ. ಯಾವ ಹೃದಯದಲ್ಲಿ ಆಸೆ, ದುರಾಸೆ, ಮತ್ಸರ, ವಂಚನೆಗಳಿಲ್ಲವೋ, ಇನ್ನೊಬ್ಬರ ಉನ್ನತಿಗೆ ಸಂತಸಪಡುವ ಮನಸಿದೆಯೋ, ದುಃಖವಿದ್ದಲ್ಲಿ ಸಂತೈಸುವ ಹೃದಯವಿದೆಯೋ, ಅಗತ್ಯವಿದ್ದಲ್ಲಿ ಕೈ ಎತ್ತಿ ನೀಡುವ ಧಾರಾಳಿ ಹೃದಯವಿದೆಯೋ ಅಂಥವರ ಸಾಂಗತ್ಯ ಮಹಾ ಸತ್ಸಂಗವೆನಿಸಿಕೊಳ್ಳುತ್ತದೆ. ಮನಸಿಗೆ ಸಮಾಧಾನ ನೀಡುವುದು ಇಂಥ ಸಂಗಗಳು. ಇವನ್ನು ಆಯ್ಕೆ ಮಾಡಿಕೊಳ್ಳಬೇಕು.

ಬೆಳಗಿನ ಹಿತವಾದ ವಾತಾವರಣದಲ್ಲಿ ಈ ತಂಗಾಳಿಯನ್ನು ದೀರ್ಘವಾಗಿ ಉಸಿರಾಡಿ. ಹೀಗೆ ಉಸಿರಾಡುತ್ತಲೇ ಕಿವಿ ಹಿಗ್ಗಲಿಸಿ. ಅದೆಷ್ಟೋ ಶುಕಪಿಕಗಳು ಚಿಲಿಪಿಲಿ ಎನ್ನುತ್ತ ತಮ್ಮ ಕಲರವದಿಂದಲೇ ಸಂಭ್ರಮ ಪಡುತ್ತಿವೆ. ಬಾನಾಡಿಗಳು ರೆಕ್ಕೆ ಬೀಸಿ, ಈ ಬಾನಗಲ ಹಾರುವೆ ಎಂಬಂತೆ ಹಾರುತ್ತಿವೆ. ಅವುಗಳಿಗೆ ಕೈ ಬೀಸುವಂತೆ ಮರಗಳು ವಾಲಾಡುತ್ತಿವೆ. ಇವು ಭಗವಂತನ ಉತ್ಸವ. ಇದು ಸಂಭ್ರಮ.

ಜೀವನವನ್ನು ಸಂಭ್ರಮಿಸುವ ಪರಿ. ಸೃಷ್ಟಿಯ ಈ ಸೌಂದರ್ಯ ವನ್ನು ಯಾವತ್ತಾದರೂ ಅನುಭವಿಸಿದ್ದೇವೆಯೇ? ಇಂಥ ಸುಂದರ ಅನುಭೂತಿ ನೀಡಿರುವ ಸೃಷ್ಟಿಕರ್ತನಿಗೆ ಕೃತಜ್ಞತೆಗಳನ್ನು ಸೂಚಿಸಿದ್ದೇವೆಯೇ? ಕೃತಜ್ಞರಾಗಿರಬೇಕು. ಮನುಷ್ಯನಲ್ಲಿ ಧನ್ಯವಾದ ಹೇಳುವ ಭಾವ ಮೂಡಿದಾಗಲೇ ಜಗತ್ತು ಸುಂದರವಾಗುತ್ತದೆ.

ಎಲ್ಲ ಗ್ರಹಗಳೂ ದೇವಸೃಷ್ಟಿಯೆ. ಆದರೆ ಜೀವ ಮತ್ತು ಜೀವನ ಇರುವುದು ಈ ಭೂಮಂಡಲದಲ್ಲಿ ಮಾತ್ರ. ಆದರೆ ಯಾವತ್ತಾದರೂ ನಾವು ಈ ಬೆಳಕಿಗೆ, ಈ ಉಸಿರಿಗೆ, ಈ ಜೀವಜಲಕ್ಕೆ ಋಣಿಯಾಗಿದ್ದೇವೆಯೇ? ಅದೆಷ್ಟು ಕೊರತೆಗಳನ್ನು ಪಟ್ಟಿ ಮಾಡ್ಕೊಂಡು ಬದುಕುತ್ತೇವೆ. ಹಣದ ಕೊರತೆ, ಮನೆ ಕೊರತೆ, ಅಂತಸ್ತಿನ ಕೊರತೆ.. ಈ ಕೊರತೆಗಳಿರದ ದಿನ ಸಿರಿವಂತರಾಗುವಿರಿ. ಅವನ್ನು ಗಳಿಸಬೇಕಂತಲ್ಲ. ಇರುವುದರಲ್ಲಿ ತೃಪ್ತಿ ಪಡಬೇಕು.ದೇವರು ನೀಡಿರುವ ಜೀವ, ಜೀವನ ಎರಡನ್ನೂ ಸದುಪಯೋಗಪಡಿಸಿಕೊಳ್ಳಬೇಕು. ನಮಗೆ ನೀಡಿರುವ ಕಂಗಳು, ಕಿವಿ, ಕೈ, ಕಾಲುಗಳನ್ನು ದುಡಿಸಿಕೊಳ್ಳಬೇಕು. ಒಂದು ವೇಳೆ ದುಡಿಸಿಕೊಳ್ಳದಿದ್ದರೆ ನಾವದನ್ನು ಕಳೆದುಕೊಳ್ಳುತ್ತೇವೆ.

ಯಾವ ಸತ್ಕಾರ್ಯಕ್ಕಾಗಿ ಬಳಸಬೇಕು? ಸದುದ್ದೇಶಗಳಿಗಾಗಿ ಬಳಸಬೇಕು ಎಂಬುದು ನಮ್ಮ ಸಂಗದಿಂದಲೇ ದೊರೆಯುತ್ತದೆ. ಸತ್ಸಂಗದಿಂದ, ಸತ್ಕಾರ್ಯಕ್ಕಾಗಿ, ಸದುದ್ದೇಶಕ್ಕಾಗಿ ಬದುಕುವಾಗಲೇ ಮನಸು ನಲಿಯುತ್ತದೆ. ಅರಳುತ್ತದೆ. ಮನಸಿನಿಂದ ಮಾಧುರ್ಯವು ಹರಡುತ್ತ ಹೋಗುತ್ತದೆ. ಅದು ಬದುಕನ್ನು ಸುಂದರಗೊಳಿಸುತ್ತದೆ. ಸತ್ಯದ ಬದುಕು ಅದೇನೆ. ಯಾವ ನಿರೀಕ್ಷೆ ಇಲ್ಲದೆ, ಒಳಿತನ್ನು ಮಾಡುತ್ತ ಹೋಗುವುದು. ಹೀಗೆ ಆಗಲು ಸತ್ಯದ ಮಾತು ಬೇಕು. ಸತ್ಯದ ಮಾತೆಂದರೆ ಯಾವುದು?

‘‘ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ ಒ೦ದರಗಳಿಗೆಯಿತ್ತಡೆ
ನಿಮ್ಮನಿತ್ತೆ ಕಾಣಾ ರಾಮನಾಥಾ’’

ನಮ್ಮ ಮನಃಸ್ಥಿತಿಯನ್ನು ಇಷ್ಟು ಗಟ್ಟಿಗೊಳಿಸಬೇಕಿದೆ. ಆನೆ ಕೊಟ್ಟರೆ ಬೇಡ, ಸಿರಿ ಸಂಪತ್ತು ನೀಡಿದರೂ ಬೇಡ, ರಾಜ್ಯ, ಅಧಿಕಾರ ನೀಡಿದರೂ ಬೇಡ. ಆದರೆ ಒಂದರೆಗಳಿಗೆಗೆ ಶರಣರ ಸೂಳ್ನುಡಿಯನ್ನು ಕೇಳುವ ಅವಕಾಶ ನೀಡಿದರೆ ನಿಮ್ಮನಿತ್ತೆ ಕಾಣಾ ಅಂದರೆ ಚಂದದ ಮಾತೊಂದು, ಶರಣರ ಮಾತೊಂದು ಆಸರೆಗೆ ದೊರೆತರೆ, ದೇವರನ್ನೂ ಬಿಟ್ಟೇನು ಎನ್ನುತ್ತಾರೆ ಜೇಡರ ದಾಸಿಮಯ್ಯ. ಬಟ್ಟೆ ನೇಯುವ ಸಂತರೊಬ್ಬರು ದೇವರನ್ನು ತ್ಯಜಿಸುವುದು, ಇಂಥ ಶರಣರ ಸಂಗಕ್ಕೆ. ಶರಣ ಸಂಸ್ಕೃತಿಯ ಮಾತುಗಳಿಗೆ. ಮಾತಾಡುವುದು ಶಬ್ದಗಳಿಂದ. ಅದಕ್ಕೇ ಶಬ್ದ ಬ್ರಹ್ಮ ಅಂತ ಕರೀತಾರೆ. ಬ್ರಹ್ಮ ಸೃಷ್ಟಿಕರ್ತ. ಶಬ್ದಗಳೂ... ನೀವು ಎಂಥ ಪದಗಳನ್ನು ಬಳಸುವಿರಿ ಎಂಬುದರಿಂದ ನಿಮ್ಮ ಸೃಷ್ಟಿ ಎಂಥದ್ದು ಎಂಬುದು ನಿರ್ಧಾರವಾಗುತ್ತದೆ. ಚಂದದ ಪದ ಬಳಿಸಿ ನೋಡಿ, ಎಲ್ಲರ ನಗುಮೊಗವೂ ನಿಮಗೆ ಸಂತಸ ನೀಡುತ್ತದೆ. ಕೆಟ್ಟದೊಂದು ಮಾತಾಡಿ ನೋಡಿ.. ಅವರೂ ಹಣೆಗಂಟಿಕ್ಕುತ್ತಾರೆ. ಅದೇ ಅಸಮಾಧಾನವೇ ನಿಮಗೆ ಮರಳಿಬರುತ್ತದೆ. ನಾವು ಬಳಸುವ ಪದಗಳೇ ನಮ್ಮನ್ನು ಸೃಷ್ಟಿಸುತ್ತವೆ.

‘ಅಯ್ಯಾ ಎಂದರೆ... ಎಲವೋ ಎಂದರೆ...’ ನಿಮಗೀ ವಚನ ತಿಳಿಯದಿಲ್ಲ. ಸ್ವರ್ಗ– ನರಕ ಎರಡನ್ನೂ ನಾವೇ ಸೃಷ್ಟಿಸ್ತೀವಿ. ನಮ್ಮ ನಮ್ಮ ಮಾತುಗಳಿಂದ. ನಾವೆಲ್ಲಿ ಬದುಕಬೇಕು ಎಂಬುದನ್ನು ನಮ್ಮ ಮಾತು, ನಮ್ಮ ಸಂಗ, ನಮ್ಮ ಮನಸು ನಿರ್ಧರಿಸುತ್ತದೆ. ರವೀಂದ್ರನಾಥಟ್ಯಾಗೋರ್‌ ಅವರು ತಮ್ಮ ರಚನೆಯಲ್ಲಿ ನಾವು ದೇವರ ಅತಿಥಿಗಳು. ನಾವಿಲ್ಲಿ ನಾಲ್ಕು ದಿನ ಇದ್ದು ಹೋಗು
ವವರು ಅಂತ್ಹೇಳ್ತಾರೆ. ಹಾಗೆ ಬಂದು ಹೋಗುವ ಅತಿಥಿಗಳಾದ ನಾವು ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ದೇಹವೆಂಬುದು ದೇಗುಲ.

ಭೂಮಂಡಲವೆಂಬುದು ನಮ್ಮ ಮನೆ. ದೇಹವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಸ್ವಚ್ಛವೆಂದರೆ ಬರಿಯ ಐಹಿಕ ಸ್ನಾನಗಳಲ್ಲ. ಕೊಳೆಯೆಂಬುದು ಎಲ್ಲಿಯೂ ಇರಕೂಡದು. ಮಾಡುವ ಕೆಲಸಗಳಲ್ಲಿ, ಯೋಚಿಸುವ ಮನಸಿನಲ್ಲಿ. ದೇಹ ಸದೃಢಗೊಳಿಸುತ್ತಲೇ ಮನಸು ಸಿರಿವಂತಗೊಳಿಸಬೇಕು.ನಾವಿರುವ ಮನೆ ಭೂಮಂಡಲವನ್ನೂ ಸ್ವಚ್ಛವಾಗಿರಿಸಿಕೊಳ್ಳಬೇಕು. ಸೂರ್ಯ ಪ್ರತಿದಿನ ಬೆಳಗುತ್ತಾನೆ. ಅದಮ್ಯ ಬೆಳಕು ನೀಡುತ್ತಾನೆ. ಯಾವತ್ತಾದರೂ ನಮ್ಮಿಂದ ಏನಾದರೂ ನಿರೀಕ್ಷಿಸಿರುವನೆ? ನಾವು ಎಂದಾದರೂ ಅವನ ಕಾಯಕಕ್ಕೆ ಪ್ರತಿಯಾಗಿ ಕೃತಜ್ಞರಾಗಿದ್ದೇವೆಯೇ? ನೀರು ಸೃಷ್ಟಿಯ ಅದ್ಭುತ ಸಂಪತ್ತು. ಅದನ್ನು ಚಿನ್ನದಂತೆ ಬಳಸಿರುವೆವೆ? ಉಳಿಸಿರುವೆವೆ? ಯಾವತ್ತಾದರೂ ಮಿಗಿಸಬೇಕಿದು ಎಂದು ಯೋಚಿಸಿದ್ದೇವೆಯೇ?

ಎಲ್ಲಕ್ಕೂ ಸುಂಕ ಕೊಡುವ ಈ ದಿನಗಳಲ್ಲಿ ದೇವರು ನೀಡಿರುವುದಕ್ಕೆ ಕೃತಜ್ಞರಾಗಿರಬೇಕು. ಅದನ್ನು ಆಗಾಗ ವ್ಯಕ್ತಪಡಿಸಬೇಕು. ಅದು ಪ್ರಾರ್ಥನೆಯಿಂದ ಮಾತ್ರ ಸಾಧ್ಯ. ಹೀಗೆ ಪ್ರಾರ್ಥಿಸುವಾಗ ಆನಂದ ಪಡೆದರೆ, ನೀವು ಆನಂದವನ್ನೇ ಹಂಚುತ್ತಿರುವಿರಿ ಎಂದರ್ಥ. ದೇವರು ನೀಡಿರುವ ಈ ಜೀವನಕ್ಕೆ, ಜೀವನಾಧಾರಕ್ಕಾಗಿ ಆತ ನೀಡಿದ ಸಂಪನ್ಮೂಲಗಳನ್ನು ಬಳಸುತ್ತಿರುವಾಗ ನಾವೂ ಏನಾದರೂ ಮರಳಿಸಲೇಬೇಕು. ಹಾಗೆ ಮರಳಿಸುವುದಾದರೆ ಒಳಿತನ್ನೇ ಮರಳಿಸಿದರೆ ಸಾಕು. ವಿನೀತರಾದರೆ ಸಾಕು. ಜೀವನಪ್ರೀತಿ ಉಳಿಸಿಕೊಂಡರೆ ಸಾಕು. ಸಾಕೆಂಬುದು ಮನಸಿನೊಳು ಬಂದರೂ ಸಾಕು, ಕೊರತೆಯನ್ನು ಮೀರಿ ಸಿರಿವಂತರಾಗ್ತೀವಿ. ಸಂಗದಲ್ಲಿ ಸಹಿಷ್ಣುಗಳಾಗ್ತೀವಿ. ಜೀವಜ್ಯೋತಿ ಹಾಗೆಯೇ ಬೆಳಗುತ್ತದೆ. ಆ ಬೆಳಕು ಎಲ್ಲರೊಳಗೊಂದಾಗುತ್ತದೆ.

(ಲಾಕ್‌ಡೌನ್‌ಗಿಂತ ಮುಂಚೆ ಹುಬ್ಬಳ್ಳಿಯ ಗೋಕುಲ ಮೈದಾನದಲ್ಲಿ ಮಾಡಿರುವ ಪ್ರವಚನಗಳ ಸಂಗ್ರಹ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT