ಬುಧವಾರ, ಮೇ 18, 2022
25 °C

ಸನ್ಮಾರ್ಗದಲ್ಲಿದೆ ಸ್ವರ್ಗಸುಖ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಮನುಷ್ಯನ ಮನಸ್ಸನ್ನು ಮರ್ಕಟಕ್ಕೆ ಹೋಲಿಸಲಾಗುತ್ತೆ. ಮಂಗನಂತೆ ಮನುಷ್ಯನ ಮನಸ್ಸು ಒಂದೆಡೆ ಸ್ತಿಮಿತದಲ್ಲಿರುವುದಿಲ್ಲ. . ಹೀಗೆ ಅವನ ಮನಸ್ಸು ಚಂಚಲಗೊಳ್ಳುವುದರಿಂದಲೇ ಜ್ಞಾನ ಬೆಳೆದಿದೆ ಅನ್ನುವವರೂ ಇದ್ದಾರೆ. ಮನುಷ್ಯನ ಚಂಚಲಿಸುವ ಬುದ್ಧಿಗೆ ಸಾತ್ವಿಕತೆಯ ಕಡಾಣಿ ಹಾಕದಿದ್ದರೆ, ಅಡ್ಡದಾರಿ ಹಿಡಿದು ಮುಗ್ಗರಿಸಿಬೀಳುತ್ತದೆ. ಇದಕ್ಕಾಗಿ ಮನುಷ್ಯನ ಜೀವನಪಥದಲ್ಲಿ ಧರ್ಮದ ಹಾಸು ಬೆಸೆಯಲಾಗಿದೆ. ಹೀಗಿದ್ದರೂ ಮನುಷ್ಯನ ಮನಸ್ಸು ಅಂಕಿತಕ್ಕೆ ಸಿಗದೆ ಪೇಚಾಡುತ್ತದೆ. ಏಕೆಂದರೆ, ಭಗವಂತ ಮನುಷ್ಯನನ್ನು ತನ್ನ ಅಂಗೈಯ ಬ್ರಹ್ಮಾಂಡದಲ್ಲಿ ಕುಣಿಸುತ್ತಿರುತ್ತಾನೆ. ದೇವರ ಮಾಯಾಜಾಲ ಅರಿಯದ ಮನುಷ್ಯ ತಾನೇ ಬುದ್ಧಿವಂತ ಅಂತ ಭ್ರಮಿಸಿ ಸಂಭ್ರಮಿಸುತ್ತಾನೆ.

ಮನುಷ್ಯ ಭೂಮಿಗೆ ಬಂದು ಲಕ್ಷಾಂತರ ವರ್ಷಗಳಾಗಿರಬಹುದು. ಆದರೆ ಅವನ ಆಯುಷ್ಯ ನೂರರ ಆಚೀಚೆ ಅಷ್ಟೆ. ಅದಕ್ಕಿಂತ ಹೆಚ್ಚು ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಅನ್ನೋದೆ ಅವನ ಮಿತಿಯನ್ನು ಹೇಳುತ್ತದೆ. ಹೀಗಿದ್ದರೂ ತಮ್ಮ ಜೀವ, ಜೀವನ ಶಾಶ್ವತ ಎಂದು ಮೆರೆಯುತ್ತಿದ್ದಾನೆ. ಆಯುಷ್ಯ ಕಳೆದು ಮರಳಿ ಹೋಗುವಾಗ ಏನನ್ನೂ ಕೊಂಡೊಯ್ಯದ ಕಟುಸತ್ಯ ಕಾಲದಿಂದ ಕಾಲಕ್ಕೆ ಕಾಣುತ್ತಿದ್ದರೂ, ಅತ್ಯಾಸೆ ಪಡುವ ಜನ ಹುಟ್ಟುತ್ತಲೇ ಇದ್ದಾರೆ. 

ಮನುಷ್ಯ ಬೆಳೆದಂತೆ ಜ್ಞಾನ ಬೆಳೆಯುತ್ತೆ. ಜ್ಞಾನ ಬೆಳೆದಂತೆ ಅವನ ವಿವಿಧ ಜ್ಞಾನವೂ ಬೆಳೆಯುತ್ತೆ. ಅಷ್ಟಕ್ಕೆ ತಾನೇ ಸರ್ವಜ್ಞ ಅಂದುಕೊಂಡು ನೂರುವರ್ಷದ ಜೀವನಕ್ಕಾಗಿ ನೂರುಜನ್ಮಕ್ಕೆ ಆಗುವಷ್ಟು ಸುಖ ಬಯಸುತ್ತಿದ್ದಾನೆ. ಇದಕ್ಕಾಗಿ ಮಾಡಬಾರದ ಕುಕೃತ್ಯಗಳನ್ನೆಲ್ಲ ಮಾಡುತ್ತಿದ್ದಾನೆ. ಅವನ ಎಷ್ಟೇ ಆಸೆ ತೀರಿದರೂ ತೃಪ್ತಿ ಇಲ್ಲದೆ, ಮತ್ತಷ್ಟು ಆಸೆಗಾಗಿ ಹಾತೊರೆಯುತ್ತಿದ್ದಾನೆ. ಏಕೆಂದರೆ, ಆಸೆ ಎಂಬ ಭೂತ ಮನದೊಳಗಿಟ್ಟುಕೊಂಡ ಮಾನವನಿಗೆ ಎಷ್ಟು ಸಿಕ್ಕಿದರೂ ಸಾಲುವುದಿಲ್ಲ. ಹೀಗಾಗಿ ನೂರು ಬೇಕೆಂಬವನಿಗೆ ಸಾವಿರದಾಸೆ, ಸಾವಿರದಾಸೆಯವನಿಗೆ ಲಕ್ಷ ಬೇಕು. ಲಕ್ಷದವನಿಗೆ ಕೋಟಿ ಬೇಕೆಂಬ ಅತೃಪ್ತತೆಯಲ್ಲೆ ಸಂಕಟಪಡುತ್ತಾನೆ.

 ಇರುವುದ ಬಿಟ್ಟು, ಇಲ್ಲದಿರುವುದೆಡೆಗೆ ಹೆಚ್ಚು ಆಸೆಪಡುವುದು. ತನ್ನ ಇರವನ್ನೇ ಚೆನ್ನಾಗಿ ಇಟ್ಟುಕೊಳ್ಳಲಾರದ ಮಾನವ, ಈಗ ಭೂಮಿಯಾಚೆ ಬದುಕುವ ಯೋಚನೆ ಮಾಡುತ್ತಿದ್ದಾನೆ. ಭೂಮಿಯನ್ನು ಹಾಳು ಮಾಡುವುದನ್ನು ಬಿಟ್ಟರೆ, ವಸುಂಧರೆಯೇ ಬ್ರಹ್ಮಾಂಡದಲ್ಲಿ ಸುಂದರವಾಗಿರುತ್ತದೆ ಎಂಬ ಸರಳ ಸತ್ಯ ಅರಿಯದೆ, ಭೂಮಿ ಹಾಳಾದ ನಂತರ ಮತ್ತೊಂದು ತಾಣಕ್ಕೆ ಹಾರುವ ದುರಾಲೋಚನೆ ಮಾಡುತ್ತಿದ್ದಾನೆ. ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟು, ಸುಡುಗಾಡಿನಲ್ಲಿ ಶಾಂತಿ ಬಯಸಿದಂತೆ.

ಮನುಷ್ಯ ಭೂಗ್ರಹ ಕುಲಗೆಡಿಸಲು ವಿನಾಶಕಾರಿ ಬುದ್ಧಿಪ್ರಯೋಗಿಸುತ್ತಿರುವುದು ಕಣ್ಣೆದುರೆ ಕಾಣುತ್ತಿದೆ. ಹೀಗಿದ್ದರೂ ಅವನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇಲ್ಲ. ನೆರಳು ನೀಡುತ್ತಿರುವ ಮರ ಕಡಿದು, ಚಿಗುರದ ಮರದಡಿ ಆಶ್ರಯ ಬಯಸುತ್ತಿದ್ದಾನೆ. ತಾನೇ ಸೃಷ್ಟಿಸಿಕೊಂಡಿರುವ ಕೃತ್ರಿಮ ಪ್ರಪಂಚಕ್ಕೆ ಕಡಿವಾಣ ಹಾಕಿ, ನೆಮ್ಮದಿ ಬದುಕು ಕಟ್ಟಿಕೊಳ್ಳುವ ಬದಲು, ಸಿಗದ ಗಗನ ಕುಸುಮಕ್ಕಾಗಿ ತಿಂಗಳಿನಿಂದ ಮಂಗಳನತ್ತ ಅಲೆಯುತ್ತಿದ್ದಾನೆ.

ಮನುಷ್ಯರನ್ನಷ್ಟೆ ಭೂತಾಯಿ ಹಡೆದಿಲ್ಲ. ಕೋಟ್ಯಂತರ ಜೀವರಾಶಿಗಳನ್ನು ಹೆತ್ತಿದ್ದಾಳೆ. ಇಲ್ಲಿ ಹುಟ್ಟಿದ ಯಾವ ಜೀವಿಯೂ ಕೀಳಲ್ಲ, ಯಾವುದೂ ಮೇಲೂ ಅಲ್ಲ. ನಮ್ಮನ್ನೆಲ್ಲ ಹೆತ್ತು ಹೊತ್ತು ಸಾಕುತ್ತಿರುವ ಭೂತಾಯಿಗೆ ಎಲ್ಲ ಜೀವಿಗಳೂ ಒಂದೇ. ಆ ತಾಯಿ ತನಗೇ ಏನು ಬೇಕೊ ಅದನ್ನು ಸೃಷ್ಟಿಸಿದ್ದಾಳೆ. ನಮಗೆ ಉಪಯೋಗವಿಲ್ಲ ಎಂದ ಮಾತ್ರಕ್ಕೆ ಅದನ್ನು ಒಸಕಿ ಹಾಕುವ ದುರ್ಬುದ್ಧಿ ಬೆಳೆಸಿಕೊಳ್ಳಬಾರದು. ನಮ್ಮ ಸುಖಕ್ಕಾಗಿ ಜಗತ್ತಿದೆ ಅಂತ, ನಮಗೆ ಬೇಕೆನಿಸಿದ್ದು ದಕ್ಕಬೇಕೆಂದುಕೊಳ್ಳುವುದು ಮೂರ್ಖತನ. ಇಂಥ ಮನುಷ್ಯನ ಹುಚ್ಚುತನಗಳು ಪ್ರಳಯಕ್ಕೆ ನಾಂದಿಯಾಗಬಾರದೆಂದೇ ‘ಸಚ್ಚಿದಾನಂದ’ಪ್ರಭು ಧರ್ಮಸೂತ್ರ ಹೆಣೆದಿದ್ದಾನೆ. ಅದನ್ನನುಸರಿಸಿ ಮನುಷ್ಯ ಸನ್ಮಾರ್ಗದಲ್ಲಿ ನಡೆದರೆ ಭುವಿಯೇ ಸ್ವರ್ಗ.

.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು