ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಧೈರ್ಯ ವಿವೇಕದ ಧ್ವನಿ

Last Updated 15 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕಷ್ಟ ಅದೆಷ್ಟೇ ಅಪಾರವಾದದ್ದು ಆಗಿದ್ದರೂ ಅದರ ಕುರಿತಾದ ಒಂದು ಸಂತೋಷಕರ ಸಂಗತಿಯೂ ಇದ್ದೇ ಇರುತ್ತದೆ; ಅದೆಂದರೆ ಇದು: 'ಕಷ್ಟ ಕಳೆದುಹೋಗುವುದು'.

ಕಷ್ಟ ಎಂಬುದು ದೂರದಲ್ಲಿರುವಾಗ, ಬೇರೆಯವರಿಗೆ ಒದಗಿದಾಗ ಧೈರ್ಯದ ಬಗೆಗಿನ ಉಪದೇಶ ನೀಡುವುದು ಸುಲಭ; ಅದೇ ಕಷ್ಟಗಳು ನಮ್ಮ ತಲೆಯನೇರಿ ಕುಳಿತುಬಿಟ್ಟಾಗ ‘ಧೈರ್ಯ’ ಅದು ಹೇಗಿರುತ್ತದೆ, ಹೇಗೆ ಕಾಣಿಸುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ನಾವು ಕಷ್ಟಗಳನ್ನು ಅನುಭವಿಸುವಾಗ ಅದು ಸಾಗರದಷ್ಟು ವಿಸ್ತಾರವಾಗಿಯೂ, ಕತ್ತಲಿನಷ್ಟು ದಟ್ಟವಾಗಿಯೂ, ಸಾವಿನಷ್ಟು ಭಯಂಕರವಾಗಿಯೂ ಕಾಣಿಸುವುದುಂಟು. ಆದರೆ ಒಂದು ವಿಷಯವನ್ನು ನಾವು ಮರೆಯಲೇಬಾರದು: ಮಾನವನ ಇತಿಹಾಸದಲ್ಲಿಯೇ ಆಗಲಿ, ವೈಯಕ್ತಿಕ ಜೀವನದಲ್ಲೇ ಆಗಲಿ – ಎಲ್ಲ ವಿಧವಾದ ಕಷ್ಟಗಳ ಆಯುಸ್ಸು ಬಲು ಕಡಿಮೆ; ಸುಖದ ಆಯುಸ್ಸಿನಂತೆಯೇ.

ಪ್ರತಿದಿನವೂ ಸಾವಿರಾರು ಕಷ್ಟಗಳು ನೂರಾರು ಸುಖಗಳು ಮೂರ್ಖನಿಗೆ ಒದಗುವುದು ವಿವೇಕಿಗಲ್ಲ – ಎಂಬ ಸೂಕ್ತಿಯೇ ಇದೆಯಲ್ಲ. ನಮ್ಮೆಲ್ಲಾ ಕಷ್ಟಗಳು ಒಂದು ದಿನ ಪೂರ್ತಿಯಾಗಿ ಕರಗಿ ಹೋಗುತ್ತದೆಯಾ? ಹಾಗೇನೂ ಇಲ್ಲವಲ್ಲ, ನಮ್ಮ ಬದುಕಿನ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಎಂಬುದಿಲ್ಲ, things come together and fall apart.

ಕಷ್ಟಗಳೇ ಇಲ್ಲದ ಬದುಕೊಂದನ್ನು ಕಲ್ಪಿಸಿಕೊಂಡು ಸಮಸ್ಯೆಗಳು ಎದುರಾದಾಗ ‘ಈ ಕಷ್ಟ ಹೀಗೆ ಬರಬಾರದಿತ್ತು, ಇದು ನಮ್ಮ ಯಾವುದೋ ತಪ್ಪಿಗೆ ದೊರಕಿದ ಶಿಕ್ಷೆ’ ಎಂದು ನಾವು ಅಂದುಕೊಳ್ಳುತ್ತೇವಲ್ಲ, ಅದೇ ಅಧೈರ್ಯದ ಹುಟ್ಟಿನ ನೆಲೆ, ಆತಂಕದ ಆರಂಭ. ಕಷ್ಟಕ್ಕೆ, ನೋವಿಗೆ, ಸಾವಿಗೆ ಹೊರತಾದ ಬದುಕು ಇರುತ್ತದೆ ಎಂಬುದು ಶುದ್ಧ ಸುಳ್ಳು. ಒಂದಲ್ಲ ಒಂದು ರೀತಿಯಿಂದ ದುಃಖ ನಮ್ಮೆಲ್ಲರ ಮನೆ ಬಾಗಿಲನ್ನು ತಟ್ಟಿಯೇ ತಟ್ಟುವುದು.

ಸದ್ಭಾವನೆಯಿಂದ ಮಾಡಿದ ಎಷ್ಟೋ ಕೆಲಸಗಳೂ ಮುಂದೊಂದು ದಿನ ನಮ್ಮ ತಪ್ಪನ್ನು ಎತ್ತಿ ತೋರಿಸಿ ದುಃಖವನ್ನು ತರಬಹುದು. ಯಾವುದು ನಮ್ಮ ಕೈಲಿದೆ ಯಾವುದು, ನಮ್ಮ ಕೈಮೀರಿದ್ದು ಎಂಬ ವ್ಯತ್ಯಾಸವೇ ಮರೆತುಹೋಗಿ ನಮ್ಮನ್ನು ನಾವು ದೂಷಿಸಿಕೊಳ್ಳುವುದು ಭಯಗ್ರಸ್ತ ಪ್ರತಿಕ್ರಿಯೆಯೇ ಹೌದು. ದುಃಖ ಮಾನವ ಬದುಕಿನ ಸಾರ್ವಕಾಲಿಕ ಸತ್ಯ, ದುಃಖದ ಆಗಮನ ನಿರ್ಗಮನ ನಮ್ಮ ಸೀಮಿತ ಲೆಕ್ಕಾಚಾರವನ್ನು ಮೀರಿದ್ದು ಎನ್ನುವುದೇ ಧೈರ್ಯದ ಮೊದಲ ಮಾತು.

ಸಮುದ್ರದ ಯಾವ ಅಲೆಯೂ ಮೊದಲಿನದೂ ಅಲ್ಲ ಕೊನೆಯದೂ ಅಲ್ಲ; ಅದು ಸಮುದ್ರದ ಅವಿಚ್ಛಿನ್ನ ಸ್ವಭಾವ ಎಂದಮೇಲೆ ಭಯವೇಕೆ? ಇಂದು ರೋಗ-ರುಜಿನವಿರಬಹುದು, ನಾಳೆ ಆರ್ಥಿಕ ಸಂಕಷ್ಟಗಳಿರಬಹುದು, ಮುಂದೊಂದು ದಿನ ಭಾವನಾತ್ಮಕ ನೋವು, ಒಂಟಿತನವಿರಬಹುದು – ಆದರೆ ಅದ್ಯಾವುದೂ ನಮ್ಮ ಹಣೆಬರಹವನ್ನು ಬರೆದಿಡುವುದಿಲ್ಲ; ನಮ್ಮ ಜೀವನವನ್ನು ನಾವು ಮತ್ತೆ ಕಟ್ಟಿಕೊಳ್ಳಲಾರದಷ್ಟು ಹಾಳುಗೆಡವಲು ಸಾಧ್ಯವಿಲ್ಲ ಎಂಬುದು ಧೈರ್ಯದ ನೇರ ಮಾತು. ಎಂಥದ್ದೇ ದುರಿತವನ್ನು ಎದುರಿಸುವ ಅಂತಃಸತ್ತ್ವ ನಮ್ಮೊಳಗಿದೆ ಎಂಬ ನಂಬಿಕೆಯೇ ಧೈರ್ಯದ ಮೂಲ.

ಭಯದ ಅಭಿವ್ಯಕ್ತಿ ಹೀಗೇ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಕೆಲವೊಮ್ಮೆ ಭಯ ನಿಷ್ಕ್ರಿಯತೆಯಂತೆ ಕಂಡರೆ, ಕೆಲವೊಮ್ಮೆ ಅತಿಯಾದ ಗೊಂದಲಮಯ ಚಟುವಟಿಕೆಯಂತೆ ಕಾಣಿಸುತ್ತದೆ. ಭಯ ಒಮ್ಮೊಮ್ಮೆ ಖಿನ್ನತೆಯಂತೆ, ಮತ್ತೊಮ್ಮೆ ಸಿಟ್ಟು, ದುಷ್ಟತನ, ಅನರ್ಥಕಾರಿ ಮಾತು, ಕೆಲಸಗಳಂತೆ ಕಾಣಿಸುತ್ತದೆ. ಅಧೈರ್ಯ ನಮ್ಮಲ್ಲಿನ ಸಂಪನ್ಮೂಲಗಳನ್ನು ಮರೆಸಿ, ಕಷ್ಟದಿಂದ ಹೊರ ಬರುವ ದಾರಿಯನ್ನು ಕಾಣೆಯಾಗಿಸಿ ದಿಗ್ಭ್ರಮೆಯನ್ನು ಹುಟ್ಟಿಸುತ್ತದೆ. ಭಯ ನಮ್ಮ ಕಷ್ಟಗಳಿಗೆಲ್ಲ ಯಾರನ್ನಾದರೂ ಹೊಣೆಯಾಗಿಸುವುದಕ್ಕೆ ಹವಣಿಸುತ್ತಿದ್ದರೆ. ಧೈರ್ಯ ‘ನಾವೆಲ್ಲರೂ ಈ ಕಷ್ಟದಲ್ಲಿ ಭಾಗಿ, ಸೇರಿ ಗೆಲ್ಲೋಣ’ ಎಂಬ ಧ್ವನಿ.

ಭಯ ಸ್ವಾರ್ಥದ ಮುಖವಾದರೆ, ಧೈರ್ಯ ಎಲ್ಲರ ಕಷ್ಟಕ್ಕೂ ಒದಗುವ ಹೆಗಲು. ಭಯ ಬಲುಮಾತಿನ ಸರಿ ತಪ್ಪುಗಳ ತಕ್ಕಡಿಯಾದರೆ, ಧೈರ್ಯ ಮೌನದ ಕಾರುಣ್ಯದ ಸಮತೆಯ ಮಡಿಲು. ಭಯ ಎಂದರೆ ಕಾದಾಡುವುದು ಅಥವಾ ಕಾಲ್ಕಿತ್ತುವುದು; ಧೈರ್ಯ ಸಾವಧಾನದಿಂದ ಪರಿಸ್ಥಿತಿಯನ್ನು ಅವಲೋಕಿಸುವುದು.

ಧೈರ್ಯ ಏಕಕಾಲದಲ್ಲಿ ಹೃದಯವನ್ನು ಆರ್ದ್ರಗೊಳಿಸುವ ಮತ್ತು ನಿರ್ಧಾರಗಳನ್ನು ಗಟ್ಟಿಗೊಳಿಸುವ ವಿವೇಕದ ಧ್ವನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT