ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಾ, ಹಟ್ಟಿಮಾರಿ ಹಬ್ಬ!

Last Updated 25 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಶೂನ್ಯ ಮಾಸ ಕಳೆಯುತ್ತಲೆ ಮದುವೆ, ಗೃಹಪ್ರವೇಶ ಇತ್ಯಾದಿ ಶುಭಕಾರ್ಯಗಳು ಗರಿಬಿಚ್ಚಿಕೊಳ್ಳುತ್ತವೆ. ಡಲ್ ಹೊಡೆಯುತ್ತಿದ್ದ ಚೌಲ್ಟ್ರಿ, ಪಾರ್ಟಿ ಹಾಲ್‍ಗಳು, ಬ್ಯೂಟಿ ಪಾರ್ಲರ್‌ಗಳು ಚೇತರಿಸಿಕೊಳ್ಳುತ್ತವೆ. ಇದರ ಬೆನ್ನಲ್ಲೆ ಗ್ರಾಮೀಣ ಪ್ರದೇಶದಲ್ಲಿ ಹಟ್ಟಿ ಹಬ್ಬದ ನೆಪದಲ್ಲಿ ಬಡಿಯುವ ಜೋರಾದ ತಮಟೆಯ ಸದ್ದು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ ನಗರದ ಭೂಷಣದ ಮುಂದೆ ಕೇಳಿಸುವುದೂ ಇಲ್ಲ, ಕಾಣಿಸುವುದೂ ಇಲ್ಲ.

ತುಮಕೂರು ಸೀಮೆಯಲ್ಲಿ ಶಿವರಾತ್ರಿ ಆಸುಪಾಸಿನಲ್ಲಿ ಆಚರಣೆಗೆ ಬರುವ ಮಾರಿಹಬ್ಬ ಸಾಂಸ್ಕೃತಿಕವಾಗಿ ವಿಶಿಷ್ಟವಾದುದು. ‘ಊರಮಾರಿ’ ಮತ್ತು ‘ಹಟ್ಟಿಮಾರಿ’ ಎಂದು ಎರಡು ವಿಧದಲ್ಲಿ ‘ಮಾರಿಹಬ್ಬ’ ಆಚರಿಸಲ್ಪಡುತ್ತದೆ. ಗ್ರಾಮದ ಎಲ್ಲ ಜಾತಿಯವರೂ ಸೇರಿ ಆಚರಿಸುವುದು ಊರಮಾರಿಯಾದರೆ ದಲಿತರು ಮಾತ್ರವೇ ಆಚರಿಸುವುದು ಹಟ್ಟಿಮಾರಿಯಾಗಿದೆ. ಊರಮಾರಿಗೆ ‘ಉಳ್ಳಿಕಾಳು ಮಾರಿ’ ಅಂತ ಇನ್ನೊಂದು ಹೆಸರಿದೆ. ಒಂದು ಕಾಲದ ಬಡವರ ಕನಿಷ್ಠ ಆಹಾರದಂತಿದ್ದ ಉಳ್ಳಿಕಾಳಿನಿಂದ ತಯಾರಿಸಿದ ಹಿಂಡಿ, ಕಾಯಾಲು ಊರಮಾರಿಯ ವಿಶೇಷವಾದರೆ, ಬಲಿಮಾಂಸದೂಟ ಹಟ್ಟಿಮಾರಿಯ ವಿಶೇಷ. ಆಹಾರಭ್ಯಾಸವನ್ನು ಬದಿಗಿಟ್ಟು ನೋಡುವುದಾದರೆ ಹಟ್ಟಿಮಾರಿ ಒಂದು ಆಚರಣೆಯಾಗಿ ಗಮನಿಸಲೇಬೇಕಾದ ಹಬ್ಬ.

ನಾಳೆ ನಾಡಿದ್ದರಲ್ಲಿ ಊರಮಾರಿ ಎನ್ನುವಾಗ ಆ ಊರಿನ ದಲಿತರು ಊರೆಲ್ಲ ಆಡಿಕೊಂಡು ದವಸ ಧಾನ್ಯಗಳನ್ನು ಎತ್ತುತ್ತಾರೆ. ಆ ಜಾತಿ ಈ ಜಾತಿ ಎನ್ನದೆ ಎಲ್ಲ ಜಾತಿಯವರೂ ತಮ್ಮ ಮನೆಮುಂದೆ ತಮಟೆ ಬಡಿದುಕೊಂಡು ಬರುವ ಕುಲ್ವಾಡಿಯವರಿಗೆ (ಊರಚಾಕರಿ ಮಾಡುವವರು) ಕಾಯಿ, ಬೇಳೆ, ಅಕ್ಕಿ, ರಾಗಿ, ಖಾರ, ಸಂಬಾರ ಇತ್ಯಾದಿಯನ್ನು ಉದಾರವಾಗಿ ನೀಡುತ್ತಾರೆ. ಊರಮಾರಿಯಾಗಲಿ ಹಟ್ಟಿಮಾರಿಯಾಗಲಿ ಸರಿ ದಿನಗಳಾದ ಶುಕ್ರವಾರ, ಭಾನುವಾರ ಇಲ್ಲವೆ ಮಂಗಳವಾರದಂದೆ ಬರುವುದು. ದಲಿತರ ಮನೆ ಎಣಿಸಿ ತಮ್ಮ ಶಕ್ತಾನುಸಾರ ದುಡ್ಡು ಹಾಕಿಕೊಂಡು ಬಲಿ ಪ್ರಾಣಿಯನ್ನು ತಂದು ಕಟ್ಟಿಕೊಳ್ಳುತ್ತಾರೆ. ಹಟ್ಟಿಯ ಮಧ್ಯಭಾಗದಲ್ಲಿ ಹಸಿಚಪ್ಪರ ಹಾಕಿ, ಅದರೊಳಗೆ ಮಣ್ಣಿನ ಇಲ್ಲವೆ ರಾಗಿಮುದ್ದೆಯ ಇಲ್ಲವೆ ಹುಣುಸೆ ಹಣ್ಣಿನಿಂದ ಮಾರಿ ಆಕೃತಿಯನ್ನು ತಿದ್ದುತ್ತಾರೆ.

ಹೊಸ ಕುಂಬದಲ್ಲಿ (ಮಣ್ಣಿನ ಮಡಕೆ) ಅರಿಶಿನ ಕುಂಕುಮ ಒಣಗಿಸಿ ಅದರ ಮೇಲೆ ಮಾರಿ ಆಕೃತಿಯನ್ನು ಪ್ರತಿಷ್ಠಾಪಿಸಿ ಬತ್ತಿಯಿಂದ ಹೊಸೆದ ಮಾರಿ ದೀಪ ಉರಿಸುತ್ತಾರೆ. ಮಾರಿ ದೀಪ ಆರುವಂತಿಲ್ಲ. ರಾತ್ರಿಯಾಗುತ್ತಲೆ ಮಾರಿಗೆ ಎದುರಾಗಿ ಗಟೆಯನ್ನು ಹುಕ್ಕಿಸುತ್ತಾರೆ. ಗಟೆ ಎಂದರೆ ಒಂದು ಕುಂಬದಲ್ಲಿ ಮದ್ಯವನ್ನು ತುಂಬಿ ಅದಕ್ಕೆ ಬೇವಿನ ಸೊಪ್ಪನ್ನು ಇಟ್ಟಿರುತ್ತಾರೆ. ಮಾರಿಗೆ ಬಲಿ ಒಡೆದು, ಊರೆಲ್ಲ ಎತ್ತಿ ತಂದಿದ್ದ ದವಸ ಧಾನ್ಯಗಳನ್ನು ಬೆರೆಸಿ ಸಾಮೂಹಿಕವಾಗಿ ಅಡುಗೆ ತಯಾರಿಸುತ್ತಾರೆ. ಬಂದ ನೆಂಟರಿಷ್ಟರೆಲ್ಲ ಒಂದೆಡೆ ಸೇರಿ ಮಾಂಸ ಮದ್ಯ ಸೇವಿಸುತ್ತಾರೆ. ಆದರೆ ಕುಲ್ವಾಡಿ ಮನೆತನದ ಆರು ಮಂದಿ ಮಾತ್ರ ಉಪವಾಸ ಇರುತ್ತಾರೆ.

ಊಟ ಸೇವಿಸಿ ಎಲ್ಲ ಮಲಗಿದ ನಂತರ ಮಧ್ಯರಾತ್ರಿ ಈ ಆರು ಮಂದಿಯಲ್ಲಿ ಇಬ್ಬರು ತಮಟೆ ಬಡಿಯುವವರಾದರೆ, ಇನ್ನಿಬ್ಬರು ಬೆಂಕಿ ಕಿಡಿ ಹಿಡಿದಿರುತ್ತಾರೆ. ಇನ್ನಿಬ್ಬರು ತಾವು ಬಲಿಕೊಟ್ಟ ಪ್ರಾಣಿಯ ಕರ್ಚನ್ನೆಲ್ಲ (ಕಳ್ಳು ಪಚಿಡಿ) ಒಂದು ಕುಡುಕೆಯಲ್ಲಿ ತುಂಬಿಕೊಂಡು ಅದಕ್ಕೆ ಬಲಿ ಅನ್ನ ಇತ್ಯಾದಿ ಬೆರೆಸಿ ಭುಜದ ಮೇಲೆ ಹೊತ್ತುಕೊಂಡು ಇಡೀ ಗ್ರಾಮದ ಸುತ್ತ ‘ಊರೆಚ್ಲಿ ಊರೆಚ್ಲಿ’ (ಊರು ಹೆಚ್ಚಲಿ) ಅಂತ ಕೂಗಿಕೊಂಡು ಚರಗ (ಪ್ರಾಣಿಯ ಕಳ್ಳು ಪಚಿಡಿ) ಚೆಲ್ಲಿಕೊಂಡು ಬರುತ್ತಾರೆ. ಚರಗ ಚಲ್ಲುವ ವೇಳೆಯಲ್ಲಿ ಗ್ರಾಮವೆಲ್ಲ ಬಾಗಿಲು ದೂಡಿಕೊಂಡು ಮಲಗಿರಬೇಕು, ಯಾರೂ ಇದನ್ನು ನೋಡಕೂಡದು ಎಂಬ ಪ್ರತೀತಿ ಕೂಡ ಇದೆ. ಚರಗದ ನಂತರವೇ ಕುಲ್ವಾಡಿಗಳ ಗಟೆ ಮತ್ತು ಊಟ.

ಆ ಊರಿನಲ್ಲಿ ಅದೆಷ್ಟೇ ಮರ್ಯಾದೆ ಹತ್ಯೆ ಆಗಿರಲಿ, ಅಸ್ಪೃಶ್ಯತೆ ಇರಲಿ, ಮೇಲ್ಜಾತಿಗರು ಹಟ್ಟಿಗರನ್ನು ಹೇಗೆಲ್ಲ ನಡೆಸಿಕೊಂಡಿದ್ದರೂ ಹಟ್ಟಿಮಾರಿಯಲ್ಲಿ ಹಟ್ಟಿಗರು ದ್ವೇಷಾಸೂಯೆಗಳನ್ನು ಬಿಟ್ಟು ಊರು ಹೆಚ್ಚಲಿ, ಸಮೃದ್ಧಿಯಾಗಲಿ ಎಂದು ಉಪವಾಸ ಇದ್ದು ಕೋರುವುದು ದಲಿತರ ಉದಾತ್ತ ನಡೆಗೆ ನಿದರ್ಶನವಾಗಿದೆ.

ಈ ವಿಶಿಷ್ಟ ಆಚರಣೆಯ ಹಟ್ಟಿಮಾರಿ ಹಬ್ಬ ಹಿಂದೆ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿದ ಜನತೆ ತಮ್ಮ ಜನವಸತಿಗೆ ಯಾವುದೇ ಮಾರಿಗಳು ತಗುಲದೆ ಇರಲಿ ಎಂಬ ಸದಾಶಯದಿಂದ ಆಚರಣೆಗೆ ಬಂದಿತೆನ್ನಲಾಗಿದೆ. ಚರಗ ಚೆಲ್ಲುವ ಆಚರಣೆ ಅಸ್ಪೃಶ್ಯರ ಪುರಾಣ ಸ್ಮೃತಿಯಾದ ಆದಿಜಾಂಬವ ಮುನಿ ಹರಿದಾಡುತ್ತಿದ್ದ ಭೂಮಿಗೆ ತನ್ನ ಮಗ ಹೆಪ್ಪುಮುನಿಯನ್ನು ಬಲಿಕೊಟ್ಟು, ಆತನ ರಕ್ತವನ್ನು ಚಿಮ್ಮಿ ಭೂಮಿಯನ್ನು ಹೆಪ್ಪುಗೊಳಿಸಿ ಸಕಲ ಜೀವರಾಶಿಗಳ ಸೃಷ್ಟಿಗೆ ಕಾರಣನಾದನೆಂಬ ಪುರಾಣವನ್ನು ಜೀವಂತವಾಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT