ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿಯ ಸಾರ: ಆಂತರ್ಯದ ಹಾಗೂ ಊರ್ಧ್ವಮುಖ ಪ್ರಯಾಣ

Published 14 ಅಕ್ಟೋಬರ್ 2023, 21:30 IST
Last Updated 14 ಅಕ್ಟೋಬರ್ 2023, 21:30 IST
ಅಕ್ಷರ ಗಾತ್ರ

'ನವ' ಎಂಬುದಕ್ಕೆ ಎರಡು ಅರ್ಥಗಳಿವೆ. ಒಂದು ‘ಒಂಬತ್ತು’ ಮತ್ತು ಇನ್ನೊಂದು ಅರ್ಥ ‘ಹೊಸತು’ಎಂದು. ಹಾವು ತನ್ನ ಪೊರೆ ಕಳಚುವಂತೆ, ನಾವೂ ಸಹ ನಮ್ಮ ಹಳೆಯದನೆಲ್ಲಾ ತ್ಯಜಿಸಿ ನಮ್ಮ ಪ್ರಜ್ಞೆಯನ್ನು ಹೊಸದಾಗಿಸಿಕೊಳ್ಳಬೇಕು. 'ರಾತ್ರಿ' ಎಂದರೆ ಇರಳು ಅದು ನಮಗೆ ಆಹ್ಲಾದ ಕರವಾದ ವಿಶ್ರಾಂತಿಯನ್ನು ಕೊಡುತ್ತದೆ. ನಾವು ಮೂರು ರೀತಿಯ ಬಾಧೆಗಳಿಂದ ಬಳಲುತ್ತಿದ್ದೇವೆ. ಒಂದು ಒಳಗಿನಿಂದ ಹುಟ್ಟುವ ಸಂಕಟ ಮತ್ತು ಇನ್ನೊಂದು ಬಾಹ್ಯವಾಗಿ ಹುಟ್ಟುವ ಸಂಕಟ. ಮೂರನೆಯದು ಇವೆರಡರ ಮಧ್ಯೆ ಇರುವ ಅತಿ ಸೂಕ್ಷ್ಮವಾದ ನೋವು. ರಾತ್ರಿಯು ನಮ್ಮನ್ನು ಈ ಮೂರು ಯಾತನೆಗಳಿಂದ ಮುಕ್ತಗೊಳಿಸುತ್ತದೆ ಹಾಗು ಮನಸ್ಸು, ದೇಹ ಮತ್ತು ಪ್ರಜ್ಞೆಗೆ ವಿಶ್ರಾಂತಿ ನೀಡುತ್ತದೆ. ನೀವು ಮಲಗಿದಾಗ ಏನಾಗುತ್ತದೆ? ಆ ಕ್ಷಣ ನೀವು ನಿಮ್ಮ ಎಲ್ಲಾ ಚಿಂತೆಗಳಿಂದ ಮುಕ್ತರಾಗಿರುತ್ತೀರಿ..

ಈ ಒಂಬತ್ತು ರಾತ್ರಿಗಳು ಅಥವಾ ನವರಾತ್ರಿಯ ಸಮಯದಲ್ಲಿ, ನಿಮ್ಮ ಮನಸ್ಸು ದೈವಿಕ ಪ್ರಜ್ಞೆಯಲ್ಲಿರಬೇಕು. ಮಗು ಹುಟ್ಟುವ ಮೊದಲು ಒಂಬತ್ತು ತಿಂಗಳವರೆಗೆ ತಾಯಿಯ ಗರ್ಭದಲ್ಲಿ ಇರುವಂತೆ, ಈ ಒಂಬತ್ತು ಹಗಲು ರಾತ್ರಿಗಳಲ್ಲಿ, ಒಬ್ಬರು ಒಳಮುಖವಾಗಿ ಹೋಗಿ ಮೂಲವನ್ನು ನೆನಪಿಸಿಕೊಳ್ಳಬೇಕು. ಈ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ: “ನಾನು ಹೇಗೆ ಹುಟ್ಟಿದೆ? ನನ್ನ ಮೂಲ ಯಾವುದು?" ನೀವು ನಿಮ್ಮ ಪ್ರಜ್ಞೆಯ ಬಗ್ಗೆ ಆಲೋಚಿಸಬೇಕು ಮತ್ತು ಈ ಒಂಬತ್ತು ದಿನಗಳನ್ನು ಒಂಬತ್ತು ತಿಂಗಳುಗಳಾಗಿ ಕಾಣಿರಿ.

ಈ ಒಂಬತ್ತು ದಿನಗಳ ಆಚರಣೆಯು ಒಬ್ಬನನ್ನು ತನ್ನ ಒಳ ಮುಖವಾಗಿ ಹೋಗಿ ಅತ್ಯುನ್ನತೆಗೆ ತಲುಪುಸುವ ಉದ್ದೇಶವಾಗಿದೆ. ಇದು ಆಂತರ್ಯದ ಹಾಗೂ ಊರ್ಧ್ವಮುಖ ಪ್ರಯಾಣ. ಈ ಶ್ರೇಷ್ಠವಾದ ದಿನಗಳಂದು ಸಣ್ಣಪುಟ್ಟ ಚಿಂತೆ ಕಿರಿಕಿರಿಗಳನ್ನು ಮಾಡಿಕೊಂಡು ನಿಮ್ಮ ಗುರಿಯಿಂದ ದೂರ ಸರಿಯದಿರಿ. ನಮ್ಮ ಮನಸ್ಸು ಎಷ್ಟು ಸೂಕ್ಷ್ಮವೆಂದರೆ ಇನ್ನೊಬ್ಬರ ಒಂದು ಚಿಕ್ಕ ನೆಗಡಿಯ ಸೀನು ಅಥವಾ ಇನ್ನೊಬ್ಬರ ಗೊರಕೆಯ ಸೂಕ್ಷ್ಮವಾದ ಶಬ್ದದಿಂದಲೂ ಕಿರಿಕಿರಿಗೊಂಡು ಮನಸ್ಸು ತನ್ನ ಗುರಿಯಿಂದ ದೂರ ಉಳಿದುಕೊಳ್ಳುತ್ತದೆ. ಈ ರೀತಿಯ ವೈಪರಿತ್ಯವನ್ನು ನಮ್ಮ ಮನಸ್ಸು ನಕಾರಾತ್ಮಕ ವಿಚಾರಗಳನ್ನು ಮಾಡುತ್ತಿದೆ ಎಂದು ನಾವು ಅರಿತಾಗ, ನಾವು ಜಾಗೃತರಾಗಿ ಬುದ್ದಿವಂತರಾಗುತ್ತೇವೆ. ಈ ಮಂಗಳಕರವಾದ ಒಂಬತ್ತು ದಿನಗಳಲ್ಲಿ, ಮೂರು ರಾತ್ರಿಗಳು ಮೂರು ಗುಣಗಳಿಗೆ ಸಂಬಂಧಿಸಿವೆ - ತಮಸ್ಸು, ರಜಸ್ಸು ಮತ್ತು ಸತ್ವ. ಒಂಬತ್ತು ದಿನಗಳಲ್ಲಿ, ನಾವು ನಮ್ಮ ಮನಸ್ಸನ್ನು ಸಮಾಧಾನ ರೀತಿಯಲ್ಲಿ ಶಾಂತಿಯುತವಾಗಿ ಇಟ್ಟುಕೊಳ್ಳಬೇಕು. ಯಾವುದೇ ಘರ್ಷಣೆಗಳು ಉದ್ಭವಿಸಿದರೂ, ಎಲ್ಲವನ್ನೂ ಪಕ್ಕಕ್ಕೆ ಇರಿಸಿ ಮತ್ತು ನಿಮ್ಮ ಮುಗ್ಧತೆಗೆ ಹಿಂತಿರುಗಿ.

ಈ ಇಡೀ ಬ್ರಹ್ಮಾಂಡವು ದೇವಿ ಶಕ್ತಿಯಿಂದ ಕೂಡಿದೆ. ಈ ಇಡೀ ಬ್ರಹ್ಮಾಂಡವು ಆ ಕಂಪಿಸುವ ಮತ್ತು ಮಿನುಗುವ ಪ್ರಜ್ಞೆಯಿಂದ ಮಾಡಲ್ಪಟ್ಟಿದೆ ಮತ್ತು ನಮ್ಮ ದೇಹವು ಕಾಣದ ಅರಿವಿನ ಸಾಗರದಲ್ಲಿ ತೇಲುವ ಚಿಪ್ಪುಗಳಂತಿವೆ. ನೀವು ಅದನ್ನು ನೋಡಲು ಸಾಧ್ಯವಿಲ್ಲ, ಆದರೆ ನೀವು ಅದನ್ನು ಅನುಭವಿಸಬಹುದು. ಆದ್ದರಿಂದ, ಈ ಒಂಬತ್ತು ದಿನಗಳಲ್ಲಿ, ನೀವು ಅಜ್ಞಾತವನ್ನು ಅನುಭವಿಸಬೇಕು. ಮಾಡಿದ ಎಲ್ಲಾ ಪೂಜೆ - ಪುನಸ್ಕಾರದ ಅರ್ಥವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿಲ್ಲವಾದರೂ, ನಾವು ನಮ್ಮ ಹೃದಯ ಮತ್ತು ಮನಸ್ಸನ್ನು ತೆರೆದು ಕುಳಿತುಕೊಳ್ಳಬೇಕು ಮತ್ತು ಅದು ಸೃಷ್ಟಿಸುವ ಕಂಪನಗಳನ್ನು ಅನುಭವಿಸಬೇಕು.

ರೈತನು ಹೊಲವನ್ನು ಉಳುಮೆ ಮಾಡುತ್ತಾನೆ, ಬೀಜಗಳನ್ನು ಬಿತ್ತುತ್ತಾನೆ, ನೀರನ್ನು ಸಿಂಪಡಿಸುತ್ತಾನೆ ಮತ್ತು ನಂತರ ಗೊಬ್ಬರವನ್ನು ಹಾಕುತ್ತಾನೆ ಮತ್ತು ಸಸ್ಯಗಳಿಗೆ ಹಾಕಬೇಕಾದ ಕೀಟನಾಶಕಗಳನ್ನು ಸಹ ನೋಡಿಕೊಳ್ಳುತ್ತಾನೆ. ಆದರೆ ಗ್ರಾಹಕರು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಗ್ರಾಹಕರು ಈ ಸಂಪೂರ್ಣ ಕೃಷಿ ಪ್ರಕ್ರಿಯೆಯಿಂದ ಹೊರಬರುವ ಹಣ್ಣುಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಅಂತೆಯೇ, ಕ್ಷೇತ್ರದಲ್ಲಿನ ಪರಿಣಿತರು ಪೂಜೆ ಮತ್ತು ಆಚರಣೆಗಳು ಅಥವಾ ಯಜ್ಞಗಳನ್ನು ನಿರ್ವಹಿಸುತ್ತಾರೆ, ಕಂಪನಗಳನ್ನು ಸೃಷ್ಟಿಸಲು ಬೇಕಾದ ಎಲ್ಲವನ್ನೂ ಮಾಡುತ್ತಾರೆ. ನಮ್ಮ ಕೆಲಸವೆಂದರೆ ನಮ್ಮ ಹೃದಯ ಮತ್ತು ಮನಸ್ಸನ್ನು ತೆರೆದು ಕುಳಿತುಕೊಳ್ಳುವುದು. ನಾವು ಸುಮ್ಮನೆ ನಗುತ್ತಾ ಆಶೀರ್ವಾದ ಪಡೆಯುವುದಾಗಿದೆ. ಎಲ್ಲಾ ಆಚರಣೆಗಳು ಮತ್ತು ಪದ್ಧತಿಗಳೊಂದಿಗೆ ಸರಿಯಾದ ರೀತಿಯಲ್ಲಿ ಮಾಡಿದ ಎಲ್ಲಾ ಪಠಣಗಳು ಪ್ರಜ್ಞೆಯನ್ನು ಶುದ್ಧೀಕರಣಗೊಳಿಸಿ ಮತ್ತು ಉನ್ನತಿಯನ್ನು ತರುತ್ತವೆ. ನಾವು ಅದನ್ನು ಸರಳವಾಗಿ ಆನಂದಿಸಬೇಕು.

ನವರಾತ್ರಿ ಅಥವಾ ಒಂಬತ್ತು ರಾತ್ರಿಗಳು ಮುಗಿದ ನಂತರ, ನಾವು ವಿಜಯದಶಮಿ ಆಚರಿಸುತ್ತೇವೆ. ಇದು ದೈವಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ದಿನವಾಗಿದೆ. ಈ ದಿನದಂದು ನಾವು ಆಶೀರ್ವಾದವನ್ನು ಅನುಭವಿಸಿ, ಗೌರವ ಹಾಗೂ ಕೃತಜ್ಞತಾ ಭಾವವನ್ನು ಹೊಂದೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT