ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–24

Last Updated 27 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ನಿಡಿದೊಂದು ಕೋಲುವನು ಕಡಿದು ಎರಡು ಮಾಡಿ

ಅಡಿಯ ಹೆಣ್ಣ ಮಾಡಿ, ಒಡತಣದ ಗಂಡ ಮಾಡಿ

ನಡುವೆ ಹೊಸೆದಡೆ ಹುಟ್ಟಿದ ಕಿಚ್ಚು

ಹೆಣ್ಣೊ ಗಂಡೊ? ರಾಮನಾಥ.

ಜೇಡರ ದಾಸಿಮಯ್ಯ

ದೇವರುಗಳನ್ನೂ ಒಳಗೊಂಡಂತೆ, ಸಕಲ ಜೀವರಾಶಿಗೂ ಜನ್ಮ ಕೊಟ್ಟ ತಾಯಿ ಹೆಣ್ಣೆಂಬುದು ನಿಸರ್ಗಸತ್ಯ. ಜೀವಸೃಷ್ಟಿಯ ಸಾಮರ್ಥ್ಯವಿರುವಕಾರಣಕ್ಕೆ ಹೆಣ್ಣುಜೀವವನ್ನು ತಾಯಿದೇವರೆಂದೇ ಗೌರವಿಸಲಾಗಿದೆ. ಆದರೆ, ಹೀಗೆ ದೇವತ್ವದ ಪಟ್ಟ ಕಟ್ಟುತ್ತಲೇ, ತನ್ನೆಲ್ಲ ಸುಖ-ಸಂತೋಷಗಳಿಗೆ ಹೆಣ್ಣುಜೀವವನ್ನೇ ಬಳಸಿಕೊಂಡು, ಮತ್ತೊಂದು ಕಡೆಗೆ ಅವಳನ್ನು ಅಸ್ಪೃಶ್ಯಳನ್ನಾಗಿಸಿ, ಎರಡನೆಯ ದರ್ಜೆಯ ಸ್ಥಾನದಲ್ಲಿಟ್ಟು ಶೋಷಣೆ ಮಾಡುತ್ತ ಬಂದದ್ದು ಮಾತ್ರ ನಮ್ಮ ಪರಂಪರೆಯ ದ್ವಂದ್ವನೀತಿಗೆ ಸಾಕ್ಷಿ. ದೈಹಿಕ ಮತ್ತು ಜೈವಿಕ ಭಿನ್ನತೆಗಳ ಕಾರಣ ಕೊಟ್ಟು, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ರಿಯೆಗಳಿಂದ ಅವಳನ್ನು ದೂರವಿಟ್ಟದ್ದಂತೂ ಅಮಾನವೀಯ ದೌರ್ಜನ್ಯ. ಹೀಗೆ ಪರಂಪರೆಯ ಕ್ರೂರ ಶೋಷಣೆಗೆ ಸಿಕ್ಕು ಕಾಲದುದ್ದಕ್ಕೂ ನಲುಗುತ್ತ ಬಂದ ಮಹಿಳೆಯನ್ನು ಎಲ್ಲ ರೀತಿಯಲ್ಲೂ ಪುರುಷನ ಸಮಾನ ನೆಲೆಗೆ ತಂದು ನಿಲ್ಲಿಸಿದ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ತಮ್ಮ ಸಮಗ್ರ ಕ್ರಾಂತಿಯಲ್ಲಿ ಮಹಿಳೆಗೆ ಮುಂಚೂಣಿಯ ಸ್ಥಾನ ಕೊಟ್ಟು, ಅವಳಲ್ಲಿದ್ದ ಸ್ವಂತಿಕೆ, ಸ್ವೋಪಜ್ಞತೆ ಮತ್ತು ಅಸ್ಮಿತೆಗಳನ್ನು ಜಾಗೃತ ಮಾಡಿಕೊಟ್ಟದ್ದಷ್ಟೇ ಅಲ್ಲ; ದೈಹಿಕ ಭಿನ್ನತೆಗಳೇನೇ ಇದ್ದರೂ ಅವಳ ಆತ್ಮವೂ ಶ್ರೇಷ್ಠವಾದದ್ದೇ ಎಂದು ಸಾರಿದ್ದು ಶರಣರು ಮಾಡಿದ ಬಹುದೊಡ್ಡ ಕ್ರಾಂತಿ. ಎಷ್ಟೆಲ್ಲ ಪ್ರಯತ್ನ ಮಾಡಿದರೂ, ಮೇಲ್ವರ್ಣದ ಪುರುಷರ ಮಡಿಮೈಲಿಗೆತನದಿಂದಾಗಿ ಮಹಿಳೆ ಮತ್ತೆಯೂ ಕೆಳದರ್ಜೆಯ ಪ್ರಜೆಯಾಗಿಯೇ ಇರಬೇಕಾಗಿ ಬಂದಾಗ, ಆ ಮೂಲಭೂತವಾದಿತನವನ್ನು ಶರಣರು ವೈಜ್ಞಾನಿಕ ಪ್ರಯೋಗಗಳ ಮೂಲಕ ನಿವಾರಿಸಲು ಪ್ರಯತ್ನಿಸಿದರು. ಜೇಡರ ದಾಸಿಮಯ್ಯನ ಈ ವಚನ ಅಂಥ ವೈಜ್ಞಾನಿಕ ಪ್ರಯೋಗದ ಒಂದು ಮಾದರಿ.

ಈ ಪ್ರಯೋಗವನ್ನು ಯಾರಾದರೂ ಮಾಡಬಹುದು. ಜೇಡರ ದಾಸಿಮಯ್ಯನ ಪ್ರಕಾರ ಇದರ ಪ್ರಾತ್ಯಕ್ಷಿಕೆಗಾಗಿ ಒಂದು ನಿಡಿದಾದ ಕೋಲನ್ನು ತೆಗೆದುಕೊಳ್ಳಬೇಕು. ಆ ಕೋಲನ್ನು ಕತ್ತರಿಸಿ ಎರಡು ತುಂಡು ಮಾಡುವುದು ಪ್ರಸ್ತುತ ಪ್ರಯೋಗದ ಮೊದಲ ಹಂತ. ಹೀಗೆ ಕತ್ತರಿಸಿದ ನಂತರ, ಕೋಲಿನ ಕೆಳಗಿನ ಭಾಗವನ್ನು ಹೆಣ್ಣೆಂದೂ, ಅದರ ಜೊತೆಗಿನ ಮೇಲ್ಭಾಗವನ್ನು ಗಂಡೆಂದೂ ಕರೆಯಲು ಆತ ಹೇಳುತ್ತಾನೆ. ಈಗ ಎರಡೂ ತುಂಡುಗಳ ಕೊನೆಯ ತುದಿಗಳನ್ನು ಜೋರಾಗಿ ಹೊಸೆಯಬೇಕು. ಈ ಘರ್ಷಣೆ ವೇಗವಾಗಿ ನಡೆದಂತೆ ಸಹಜವಾಗಿಯೇ ಬೆಂಕಿ ಹೊತ್ತಿಕೊಳ್ಳುತ್ತದೆ. ಹೀಗೆ ಹೊತ್ತಿಕೊಳ್ಳುವ ಬೆಂಕಿಯನ್ನು ಗಂಡು ಎನ್ನಬೇಕೋ ಅಥವಾ ಹೆಣ್ಣು ಎನ್ನಬೇಕೋ? ಇದು, ಜೇಡರ ದಾಸಿಮಯ್ಯನು ಸ್ತ್ರೀಶೊಷಕರಿಗೆ ಕೇಳುವ ಮುಖ್ಯ ಪ್ರಶ್ನೆ.

ಇಲ್ಲೇ ಇದೆ ಈ ವೈಜ್ಞಾನಿಕ ಪ್ರಯೋಗದ ಪಕ್ಕಾ ಪರಿಣಾಮ. ಕೋಲನ್ನು ಹೆಣ್ಣು ಮತ್ತು ಗಂಡೆಂದು ಪ್ರತ್ಯೇಕ ಹೆಸರಿಟ್ಟು ಹೊಸೆದಾಗಲೂ ಹುಟ್ಟಿದ ಬೆಂಕಿ ಹೆಣ್ಣೂ ಆಗದು, ಗಂಡೂ ಆಗದು. ಅದು ಕೇವಲ ಬೆಂಕಿ ಮಾತ್ರ. ಅದಕ್ಕೆ ಸ್ತ್ರೀಲಿಂಗ ಅಥವಾ ಪುಲ್ಲಿಂಗ ಎಂಬ ಯಾವ ಭೇದವೂ ಇಲ್ಲ. ಅದು, ಲಿಂಗವಿವಕ್ಷೆಯೇ ಇಲ್ಲದ ಬರೀ ಬೆಂಕಿ. ಪಂಚಭೂತಗಳಲ್ಲಿ ಒಂದಾದ ಅಗ್ನಿತತ್ವದ ಬೆಂಕಿಗುಣವು ಹೆಣ್ಣು ಮತ್ತು ಗಂಡು ಎರಡೂ ಜೀವಗಳಲ್ಲಿ ಸಮನಾಗಿಯೇ ಇರುತ್ತದೆಯಷ್ಟೇ ಅಲ್ಲ; ಆ ಎರಡೂ ಜೀವಗಳು ಒಟ್ಟುಗೂಡಿದಾಗಲೂ ಅದೇ ಗುಣ ಪ್ರಕಟವಾಗುತ್ತದೆ.

ವರ್ಗ ಮತ್ತು ವರ್ಣಸಮಾನತೆಯ ಜೊತೆಗೇ ಶರಣರು ವೈಜ್ಞಾನಿಕವಾಗಿ ಸಾಧಿಸಿ ತೋರಿಸಿದ್ದು ಲಿಂಗಸಮಾನತೆಯನ್ನು. ಇಂಥ ಪ್ರಯತ್ನದಿಂದಾಗಿ ಮಹಿಳೆಯ ಮೇಲಿನ ಶೋಷಣೆ ನಿಂತು, ಶರಣಕ್ರಾಂತಿಯಲ್ಲಿ ಅಸಂಖ್ಯ ಮಹಿಳೆಯರ ದನಿ ಕೇಳುವಂತೆ ಆಯ್ತು, ಮತ್ತು ಎಲ್ಲ ಚಟುವಟಿಕೆಗಳಲ್ಲಿ ಅವಳೂ ಪುರುಷನ ಸಮನಾಗಿ ನಿಲ್ಲುವಂತಾಯಿತು. ಮನುಕುಲದ ಚರಿತ್ರೆಯಲ್ಲಿ ಇದು ಬಹುದೊಡ್ಡ ಕ್ರಾಂತಿ. ಜೇಡರ ದಾಸಿಮಯ್ಯನ ಪ್ರಸ್ತುತ ವಚನ ಈ ಇಡೀ ಪ್ರಕ್ರಿಯೆಗೆ ಒಂದು ಸ್ಪಷ್ಟ ನಿದರ್ಶನದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT