ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ | ಸಂಕಷ್ಟದ ಸಮಯದಲ್ಲಿ ಸುಲಿಗೆ ಸಲ್ಲದು

ಅಕ್ಷರ ಗಾತ್ರ

ಜಗತ್ತಿನೆಲ್ಲೆಡೆ ಕೊರೊನಾ ಸೋಂಕು ಬಾಧಿಸುತ್ತಿದೆ. ಕಣ್ಣಿಗೆ ಕಾಣದ ಮಾಯಾವಿ ಕ್ರಿಮಿಯಿಂದ ಮನುಕುಲವೇ ನಾಶವಾಗಿಬಿಡುತ್ತಾ ಅನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಮಾನವರು ಮಾಡಿದ ತಪ್ಪಿಗೆ ಭಗವಂತ ಶಿಕ್ಷೆ ನೀಡುತ್ತಿದ್ದಾನೆಂದು ಅನ್ನುವವರೂ ಇದ್ದಾರೆ. ಕೆಲವು ಮಾನವರಾರೋ ಮಾಡಿದ ತಪ್ಪುಗಳಿಗೆಸೃಷ್ಟಿಕರ್ತ ಭಗವಂತ ಸಾಮೂಹಿಕ ಶಿಕ್ಷೆ ನೀಡಲಾರ. ಆದರೆ, ಎಚ್ಚರಿಕೆಯ ಪಾಠವನ್ನಂತೂ ಕಲಿಸುತ್ತಾನೆ. ಬುದ್ಧಿ ಇರುವ ಮಾನವರು ಭಗವಂತ ನೀಡುತ್ತಿರುವ ಬದುಕಿನ ಪಾಠವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಬದುಕುವ ದಾರಿ ಕಂಡುಕೊಂಡರೆ ಈಗ ಬಂದಿರುವ ಆಪತ್ತು ನಿವಾರಣೆಯಾಗಬಹುದು.

ಕೊರೊನಾ ಕಾಲದಲ್ಲೂ ಸುಲಿಗೆ ಮಾಡುವ ಮಾನವರ ದುರಾಸೆಯ ಬುದ್ಧಿಯನ್ನು ನೋಡಿದರೆ, ಇವರ್ಯಾರೂ ಭಗವಂತ ಕಲಿಸುವ ಬದುಕಿನ ಪಾಠವನ್ನು ಖಂಡಿತ ಕಲಿಯಲಾರರೆನಿಸುತ್ತೆ. ಹಣದ ಗುಡ್ಡ ಏರಲು ಹೆಣಗಳನ್ನೆ ಮೆಟ್ಟಿಲಾಗಿಸಿಕೊಳ್ಳಲು ಯೋಚಿಸುವ ಮಾನವರ ದುರ್ಬುದ್ಧಿ ನೋಡಿದರೆ, ಸೃಷ್ಟಿಯ ಆಹಾರಸರಪಣಿ ನೆನಪಾಗುತ್ತದೆ. ಸಾವು ತನ್ನ ಬೆನ್ನ ಹಿಂದೆಯೇ ಇದೆ ಎಂಬ ಅರಿವಿಲ್ಲದೆ ಹುಲಿಯು ತೋಳವನ್ನು, ತೋಳವು ಮುಂಗುಸಿಯನ್ನು, ಮುಂಗುಸಿ ಹಾವನ್ನು, ಹಾವು ಇಲಿಯನ್ನು ಬೆನ್ನತ್ತಿ ಹೋಗುವಂತೆ, ಸಾವು ತಮ್ಮ ಬೆನ್ನ ಹಿಂದೆಯೇ ಇದ್ದರೂ, ಲೋಭಿಗಳು ಹಣಕ್ಕಾಗಿ ಹಪಾಹಪಿಸುತ್ತಿದ್ದಾರೆ; ತಮ್ಮನ್ನು ಅಮರರೆಂದು ಭಾವಿಸುತ್ತಿದ್ದಾರೆ.

ಮನುಷ್ಯನ ದುರ್ಬುದ್ಧಿಯೇ ಹಾಗೆ–ತನ್ನೊಬ್ಬನ ಸುಖಕ್ಕಾಗಿ ಹಲವರ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಾನೆ. ಸರ್ವಜನರ ಸುಖದಲ್ಲಿ ತನ್ನ ನೆಮ್ಮದಿ ಇದೆ ಎಂಬುದನ್ನು ಮರೆಯುತ್ತಾನೆ. ಕಷ್ಟ ಕಾಲದಲ್ಲಿ ನೆರವಿಗೆ ಬಂದವರು ನೆಂಟರೆಂಬ ನಂಬಿಕೆ ಇದೆ. ಬರಗಾಲದಲ್ಲಿ ತನ್ನ ಮಡದಿ–ಮಕ್ಕಳನ್ನು ಸಲಹಿದ ತ್ರಿಶಂಕುವಿಗೆ ವಿಶ್ವಾಮಿತ್ರ ಸ್ವರ್ಗವನ್ನೇ ಸೃಷ್ಟಿಸಿಕೊಟ್ಟ. ತನಗೆ ಉಪಕಾರ ಮಾಡಿದ ದುರ್ಯೋಧನನಿಗಾಗಿ ಒಡಹುಟ್ಟಿದ ಸೋದರರನ್ನೇ ದೂರವಿಟ್ಟ ಕರ್ಣ.

ಉಪಕಾರಕ್ಕೆ ಪ್ರತ್ಯುಪಕಾರ ಮಾಡುವುದು ಮಾನವಧರ್ಮ. ಅಪಕಾರ ಮಾಡಿ ಬದುಕುವುದು ದಾನವರ ಕರ್ಮ. ಮಾನವತ್ವವು ಮುಂದೆ ದೈವತ್ವಕ್ಕೇರಲು ಇರುವ ಮೆಟ್ಟಿಲು. ಇಂಥ ಸ್ವರ್ಗಾರೋಹಣದಲ್ಲಿ ಪಾಂಡವರೆ ಸೋತರೆಂದರೆ, ನಾವಿನ್ನೆಂಥ ಪುಣ್ಯ ಸಂಪಾದನೆಗೆ ಯತ್ನಿಸಬೇಕೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜೀವ ಇದ್ದರೆ ಜೀವನ. ಜೀವನ ಇದ್ದರೆ ಮಾತ್ರ ಶ್ರೀಮಂತಿಕೆಗೆ ಕಳೆ. ಜೀವ-ಜೀವನ ಇಲ್ಲದ ಜಗತ್ತು ಬರೀ ಪ್ರೇತಕಳೆ ಅಷ್ಟೆ. ಅಣುಬಾಂಬಿನಿಂದ ಜಪಾನ್ ಸ್ಮಶಾನದಂತಾದಾಗ, ಅಲ್ಲಿನ ರಾಜರ ಸಹಿತ ಎಲ್ಲ ಶ್ರೀಮಂತರು ಧಾರಾಳವಾಗಿ ಹಣ ಚೆಲ್ಲಿ ಜನರ ಜೀವ ಉಳಿಸಿದರು. ಜೀವನ ಕಟ್ಟಿಕೊಂಡ ಜನ ಇಡೀ ದೇಶವನ್ನೇ ಶ್ರೀಮಂತಗೊಳಿಸಿದರು. ಜನ ಇದ್ದರೆ ಹಣಕ್ಕೆ ಬೆಲೆ. ಜನರಿಲ್ಲದ ಮೇಲೆ ಯಾವ ಹಣಕ್ಕೂ ಬೆಲೆ ಇರೋಲ್ಲ. ಹಾಳೂರಿನಲ್ಲಿ ಒಬ್ಬನೇ ಕುಳಿತು ‘ನಾನೇ ರಾಜ’ ಎಂಬಂತಾಗುತ್ತದಷ್ಟೆ.

ಕೊರೊನಾ ವಿರುದ್ಧದ ಸಮರದಲ್ಲಿ ಪ್ರತಿಯೊಬ್ಬರೂ ವೀರ ಯೋಧರಂತೆ ಹೋರಾಡಲೇ ಬೇಕು. ಸಾವಿನ ಭಯವಿಲ್ಲದೆ ಯೋಧರು ಮುನ್ನುಗ್ಗುವಂತೆ ಆರೋಗ್ಯಯೋಧರು ಮುನ್ನುಗಲೇ ಬೇಕು. ಸಾವು ಅಡಿಗಡಿಗೆ ಎದುರಾದರೂ ಧೈರ್ಯಗೆಡದೆ ಮುನ್ನಡೆದರೆ ಮಾತ್ರ ನಾವು ಬದುಕಲು ಸಾಧ್ಯ. ವೈದ್ಯರು-ಶುಶ್ರೂಷಕರಷ್ಟೆ ಆರೋಗ್ಯಯೋಧರಾದರೆ ಸಾಲದು, ಪ್ರತಿಯೊಬ್ಬರೂ ಆರೋಗ್ಯ ಯೋಧರಾಗಿ ರೂಪುಗೊಳ್ಳಬೇಕು. ಇದಕ್ಕೇ ಬೇಕಿರುವುದು ಗಟ್ಟಿ ಮನಸ್ಸು. ಇಂಥ ನಿಃಸ್ವಾರ್ಥವಾದ ನಿರ್ಮಲ ಮನಸ್ಸೇ ‘ಸಚ್ಚಿದಾನಂದ’ರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT