ಸೋಮವಾರ, ನವೆಂಬರ್ 29, 2021
20 °C

ಈದ್ ಮಿಲಾದ್: ಸಮತ್ವದ ಸಂದೇಶ ಸಾರಿದ ಪ್ರವಾದಿ

ಚಾಂದ್ ಬಾಷ ಅರಸೀಕೆರೆ Updated:

ಅಕ್ಷರ ಗಾತ್ರ : | |

ಈದ್ ಎಂದರೆ ‘ಉತ್ಸವ’, ಮಿಲಾದ್ ಎಂದರೆ ’ಜನ್ಮತಾಳಿದ’. ಆದ್ದರಿಂದ ಇಸ್ಲಾಮ್ ಧರ್ಮದ ಮಹತ್ವದ ಉತ್ಸವ ಎಂದರೆ ಈದ್ ಮಿಲಾದ್. ಈ ಪವಿತ್ರ ದಿನವನ್ನು ಪ್ರವಾದಿ ಮುಹಮ್ಮದ್ (ಸ.ಅ.) ಅವರ ಜನ್ಮದಿನವೆಂದು ಆಚರಿಸಲಾಗುತ್ತದೆ.

ಮುಹಮ್ಮದ್ ಅವರು ಇಸ್ಲಾಮ್ ಕಾಲಮಾನದ ಪ್ರಕಾರ ಕ್ರಿ.ಶ. 570ರ ರಬ್ಬಿವುಲ್ ಅವ್ವಲ್ ತಿಂಗಳ 12ನೇ ತಾರೀಖು ಅರಬ್‌ನ ಮಕ್ಕಾನಗರದಲ್ಲಿ ಜನಿಸಿದರು. ಇವರು ಹುಟ್ಟುವ ಮೊದಲೆ ಇವರ ತಂದೆ ಅಬ್ದುಲ್ಲಾರವರು ಮರಣ ಹೊಂದಿದರು; ಇವರು ಆರು ವರ್ಷದ ಬಾಲಕನಾಗಿದ್ದಾಗ ತಾಯಿ ಅಮೀನರವರು ಮರಣ ಹೊಂದಿದರು.

ಮುಹಮ್ಮದ್ ಅವರು ತಮ್ಮ 40ನೇ ವಯಸ್ಸಿಗೆ ಪ್ರವಾದಿತ್ವವನ್ನು ಗಳಿಸಿಕೊಂಡರು. ಆನಂತರ ಮೂವತ್ತು ಅಧ್ಯಾಯಗಳುಳ್ಳ ಕುರ್ ಆನ್ ಅವತರಿಸುತ್ತದೆ. ಕುರ್ ಆನ್ ಎಂದರೆ ಕೊನೆಯ ಅಥವಾ ಅಂತಿಮ ದೇವಪದ ಅಥವಾ ದೈವವಾಣಿ ಎಂದರ್ಥ.

ದೈವವಾಣಿಯ ಪ್ರಮುಖಾಂಶಗಳು

l ಮೊದಲ ದೇವವಾಣಿಯೇ ‘ಇಲ್ಮ್’, ಎಂದರೆ ‘ಜ್ಞಾನ’ವನ್ನು ಗಳಿಸುವುದು.

l ತಾಯಿಯ ಪಾದದಡಿ ಸ್ವರ್ಗವಿದೆ.

l ವಯಸ್ಸಾದ ತಂದೆ–ತಾಯಿಗಳ ಮನಸ್ಸು ನೋಯಿಸದಿರುವುದು.

l ಭಗವಂತ ಏಕಮಾತ್ರನೆಂದು ನಂಬುವುದು.

l ಎಲ್ಲಾ ಮಾನವಜನಾಂಗವು ಸಮಾನವೆಂದು ತಿಳಿಯುವುದು.

l ಮೋಸ, ವಂಚನೆ, ವ್ಯಭಿಚಾರಗಳಿಂದ ದೂರವಿರುವುದು.

l ನೆರೆಹೊರೆಯವರನ್ನು, ಸುತ್ತಮುತ್ತಲಿನವರನ್ನು ಬೆಳಕು–ನೆರಳಿನಂತೆ ರಕ್ಷಿಸುವುದು.

l ಮಹಿಳೆಯರಿಗೆ ಗೌರವವನ್ನು ತೋರುವುದು

l ಸರ್ವ ಮಾನವಜನಾಂಗಕ್ಕೆ ಕರುಣೆಯ ತೋರಿ, ಕೃತಜ್ಞರಾಗಿರುವುದು.

l ಭಗವಂತ ಕೊಟ್ಟದ್ದನ್ನು ತಾವು ತಿಂದು, ಇತರ ಹಸಿದವರಿಗೂ ತಿನ್ನಿಸುವುದು.

l ಅನಾಥರ, ತಬ್ಬಲಿಗಳ ಆಸ್ತಿ ಕಬಳಿಸಿ ಮೋಸ ಮಾಡದಿರುವುದು.

l ಕೋಪ ಗೆದ್ದು ಬಲಶಾಲಿಯಾಗುವುದು.

l ಯುದ್ಧ, ರಕ್ತಪಾತದ ಅಲ್ಪ ಗೆಲುವಿವ ದುರಾಸೆ ಬಿಟ್ಟು ಶಾಂತಿ–ಸಹನೆಯ ಶಾಶ್ವತ ಗೆಲುವಿಗೆ ಶ್ರಮಿಸುವುದು.

l ಪರರ ದೈಹಿಕ ಹಾಗೂ ಮಾನಸಿಕ ನಿಂದನೆ ಮಹಾಪಾಪವೆಂದು ನಂಬುವುದು.

l ಸದಾ ಮುಖದಲ್ಲಿ ಮುಗುಳ್ನಗೆಯನ್ನು ತುಂಬಿಕೊಂಡಿರುವುದು.

ಇಸ್ಲಾಮ್ ಧರ್ಮದ ಅಸ್ತಿತ್ವ ಉಳಿದಿರುವುದು ಪ್ರವಾದಿಗಳ ಸರಳತೆ, ನಿಃಸ್ವಾರ್ಥ ವಿನಮ್ರತೆ ಹಾಗೂ ಪ್ರತಿಜ್ಞೆಗಳ ಬಗ್ಗೆ ಅವರಿಗಿದ್ದ ಪ್ರಜ್ಞೆಯಲ್ಲಿ. ಸ್ವಾಮಿ ವಿವೇಕಾನಂದರು ಇಸ್ಲಾಮ್‌ನ ಕುರಿತು ‘ಸಮತ್ವವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ ಧರ್ವವೆಂದರೆ ಅದು ಇಸ್ಲಾಮ್ ಧರ್ಮ’ ಎಂದಿದ್ದಾರೆ.

ಪ್ರವಾದಿ ಮುಹಮ್ಮದ್ ಅವರು ಸಮರ್ಥ ಆಡಳಿತಗಾರರು, ವ್ಯಾಪಾರಿಗಳು, ಯೋಧರು, ತತ್ವಜ್ಞಾನಿಗಳು, ರಾಜಕಾರಣಿಗಳು, ಸಮಾಜ ಸುಧಾರಕರು, ಅನಾಥರ ಆಶ್ರಯದಾತರು, ಗುಲಾಮರ ರಕ್ಷಕರು, ಮಹಿಳಾ ವಿಮೋಚಕರು, ನ್ಯಾಯವಿಧಾಯಕ ನ್ಯಾಯಾಧೀಶರು ಹಾಗೂ ಸಂತರು. ಇಂತಹ ಮಹಾನ್ ಮಾನವೀಯ ಮೌಲ್ಯಗಳನ್ನು ತುಂಬಿಕೊಂಡಿದ್ದ ಪ್ರವಾದಿ ಮುಹಮ್ಮದ್ ಅವರು ಎಂದೂ ಆಡಂಬರದ ಜೀವನವಾಗಲಿ ಯಾವುದೇ ತೋರ್ಪಡಿಕೆಯ ಆಚರಣೆಗಳಾಗಲಿ ಇಷ್ಟಪಡುತ್ತಿರಲಿಲ್ಲ. ಬದಲಾಗಿ ಅವರಿಗೆ ವಿದ್ಯಾದಾನ; ಬಡವ, ಅನಾಥ ಹಸಿದವರಿಗೆ ಅನ್ನದಾನ ಹಾಗೂ ರೋಗಿಗಳ ಅರೈಕೆಗಳೇ ಆದ್ಯತೆಯ ಸೇವಾಕ್ಷೇತ್ರಗಳಾಗಿದ್ದವು.

ನಿಜಾರ್ಥದಲ್ಲಿ ಪ್ರವಾದಿಗಳ ಜನ್ಮದಿನೋತ್ಸವ ಎಂದರೆ ವಿಶ್ವದಲ್ಲಿ ಶಾಂತಿಸ್ಥಾಪನೆಯೇ ಹೊರತು ಮೆರವಣಿಗೆ ಮಾಡಿ, ಜೋರಾದ ಘೋಷಣೆ ಕೂಗುವುದಲ್ಲ, ಬೀಗಿ ನಡೆಯುದಲ್ಲ; ಬಾಗಿ ನಡೆಯುವುದು, ಬೆರೆತು ಬದುಕುವುದು, ಸಹಬಾಳ್ವೆ ನಡೆಸುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು