ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ರೋಗಕಾಲದಲ್ಲಿ ಶವಸಂಸ್ಕಾರ

Last Updated 29 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕರೊನಾ ರೋಗಕ್ಕೆ ತುತ್ತಾಗಿ ಮರಣ ಹೊಂದಿದವರ ದೇಹವೂ ನಮಗೆ ಸಿಗುವುದಿಲ್ಲ. ಇಂತಹ ವೇಳೆಯಲ್ಲಿ ಮೃತವ್ಯಕ್ತಿಗೆ ಸಂಸ್ಕಾರವನ್ನು ಹೇಗೆ ಒದಗಿಸಬೇಕು? ಹಾಗೆಯೇ ಈ ಸಂದರ್ಭದಲ್ಲಿ ಸಹಜವಾಗಿಯೇ ಮೃತರಾದವರ ಸಂಸ್ಕಾರವನ್ನು ನೆರವೇರಿಸಲೂ ಅನೇಕ ತೊಡಕುಗಳು ನಮಗೊದಗಿದೆ. ಸಾಂಕ್ರಾಮಿಕ ರೋಗ ಪ್ರಸರಣವಾಗಬಾರದೆಂದು ಸರ್ಕಾರ ಕೆಲವು ನಿರ್ದೇಶನಗಳನ್ನೂ ನೀಡಿದೆ.

ಅದರನ್ವಯ ನಾವು ನಡೆದುಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ. ಸಾಮಾಜಿಕ ಅಂತರವನ್ನು ಕಾದುಕೊಳ್ಳಬೇಕು. ಹೆಚ್ಚು ಜನರು ಒಂದೆಡೆ ಸೇರಬಾರದು. ಯಾವುದೇ ಕಾರಣಕ್ಕೂ ಧರ್ಮಾಚರಣೆಯ ನಿಮಿತ್ತ ಸಾಂಕ್ರಾಮಿಕ ರೋಗದ ಪ್ರಸರಣ ಉಂಟಾಗಿ ರಾಷ್ಟ್ರಕ್ಕೆ ಹಾನಿಯಾಗಬಾರದು. ವೈಯಕ್ತಿಕ ಬದುಕಿಗೆ ಭಂಗ ಬರಬಾರದು. ನಮ್ಮ ಧಾರ್ಮಿಕ ಆಚರಣೆಯನ್ನು ಬಿಡಬಾರದು. ಹಾಗಾಗಬೇಕಾದರೆ ಯಾವೆಲ್ಲ ಪರ್ಯಾಯ ಮಾರ್ಗವನ್ನು ನಮಗೆ ಶಾಸ್ತ್ರಕಾರರು ನೀಡಿದ್ದಾರೆಂಬುದನ್ನು ಅವಲೋಕಿಸಬೇಕಾಗಿದೆ.

ಕರೋನಾ ವೈರಾಣುವಿನಿಂದ ಮೃತಪಟ್ಟಾಗ ನಮಗೆ ಮೃತದೇಹ ದೊರೆಯುವುದಿಲ್ಲ, ಅಸ್ಥಿಯೂ ಸಿಗುವುದಿಲ್ಲ.ಇಂತಹ ವೇಳೆಯಲ್ಲಿ ’ಪೂರ್ವೋಕ್ತ ಕಾಲಾನಂತರಂ ಶಾಖಾ ಸಂಸ್ಕಾರಂ ಕುರ್ಯಾತ್‘ (ಬ್ರಹ್ಮಕರ್ಮಸಮುಚ್ಚಯ ಪಿತೃಮೇಧಕಾಂಡ) ಶಾಖಾಸಂಸ್ಕಾರವನ್ನು ಮಾಡಬೇಕು. ಶಾಖಾಸಂಸ್ಕಾರವೆಂದರೆ ಪಾಲಾಶಪ್ರತಿಕೃಯನ್ನು ಮಾಡಿ, ಅಂದರೆ ಮುತ್ತುಗದ ಕಾಂಡದಿಂದ ಮನುಷ್ಯಾಕೃತಿಯನ್ನು ಮಾಡಿ ದಾಹಾದಿ ಸಂಸ್ಕಾರವನ್ನು ನೇರವೇರಿಸಬೇಕು. ವ್ಯಕ್ತಿ ಮೃತನಾದ ನಂತರ ಎರಡು ತಿಂಗಳವರೆಗೂ ಈ ರೀತಿಯಾದ ಸಂಸ್ಕಾರಕ್ಕೆ ಅವಕಾಶವಿದೆ; ಅಥವಾ ರೋಗನಿವೃತ್ತಿಯವರೆಗೂ ಅವಕಾಶವಿದೆ. ಮೃತದಿನದಿಂದ ಹತ್ತುದಿನ ಅಶೌಚ ಆಚರಿಸಬೇಕು. ಶಾಖಾ ಸಂಸ್ಕಾರದ ವೇಳೆಯಲ್ಲಿ ಮೂರು ದಿನ ಮತ್ತೆ ಅಶೌಚ ಬಳಸಬೇಕು.

ಇಂಥ ವಿಪತ್ತಿನ ವೇಳೆಯಲ್ಲಿ ಸಹಜ ಸಾವಾದರೂ ಕೂಡ ಉತ್ತರಕ್ರಿಯೆಯ ನಿರ್ವಹಣೆ ಕಷ್ಟಸಾಧ್ಯವೇ. ಪುರೋಹಿತರು, ಕರ್ತೃಗಳು ಮಾತ್ರವಿದ್ದು ದೇಹಸಂಸ್ಕಾರ ಅಥವಾ ಸಾಂದರ್ಭಿಕವಾಗಿ ಉಕ್ತವಾದ ದಹನಸಂಸ್ಕಾರವನ್ನು ಪೊರೈಸಬೇಕು. ನಾಲ್ಕನೇ ದಿನ ಆಚರಿಸುವ ಅಸ್ಥಿಸಂಸ್ಕಾರಕ್ಕೆ ತೊಂದರೆ ಬಂದರೆ, ಎರಡು, ಮೂರು, ಆರು, ಏಳು, ಎಂಟನೆ ದಿನದವರೆಗೂ ಅವಕಾಶವಿದೆ. ರವಿ, ಮಂಗಳ, ಶನಿವಾರವನ್ನು ಬಿಟ್ಟು ಹಿಂದೆ ಹೇಳಿದ ಯಾವುದೇ ದಿನ ಮಾಡಬಹುದು. ನಾಲ್ಕನೇ ದಿನದಲ್ಲಿಯೇ ಅಸ್ಥಿಸಂಸ್ಕಾರ ಮಾಡುವುದಾದರೆ ವಾರಗಳ ನಿಷೇಧವಿಲ್ಲ. ಹತ್ತು ದಿನಗಳ ನಂತರವೂ ತಜ್ಞರ ಅಭಿಪ್ರಾಯವನ್ನು ಆಧರಿಸಿ ಅಸ್ಥಿಸಂಸ್ಕಾರವನ್ನು ಮಾಡಲು ಶಾಸ್ತ್ರದಲ್ಲಿ ಅವಕಾಶವಿದೆ. ಹನ್ನೊಂದನೇ ದಿನ ಮಹೈಕೋದ್ದಿಷ್ಟ ಶ್ರಾದ್ಧ ಪ್ರೇತಾವಸ್ಥೆಯಲ್ಲಿರುವ ಜೀವವನ್ನು ಮಾತ್ರ ಉದ್ದೇಶಿಸಿ ಮಾಡುವ ಕಾರ್ಯ. ಇದನ್ನು ಹನ್ನೊಂದನೇ ದಿನವೇ ಮಾಡಬೇಕು. ಹಾಗಿದ್ದರೂ ವಿಘ್ನ ಉಂಟಾದರೆ ಹನ್ನೆರಡನೇ ದಿನ, ಅದರ ನಂತರ ಹದಿಮೂರು, ಹದಿನೈದನೇ ದಿನ ಏಕೋದ್ದಿಷ್ಟಕ್ಕೆ ಅವಕಾಶವಿದೆ. ಒಂದು ತಿಂಗಳ ದಿನದಲ್ಲಿ, ಎರಡು ತಿಂಗಳ ದಿನದಲ್ಲಿ ಆಚರಿಸಲೂ ಅವಕಾಶವಿದೆ.

ಸಪಿಂಡೀಕರಣ – ಇದು ಉತ್ತರಕ್ರಿಯೆಯ ಪ್ರಧಾನ ಘಟ್ಟ. ದೇಹವನ್ನು ಬಿಟ್ಟ ಜೀವಕ್ಕೆ ಮೊದಲೇ ತೀರಿಕೊಂಡ ಹಿರಿಯ ತಲೆಮಾರಿನೊಟ್ಟಿಗೆ ಸ್ಥಾನವನ್ನು ಕಲ್ಪಿಸುವುದು. ಸದ್ಗತಿಯನ್ನು ಒದಗಿಸುವುದು. ಹನ್ನೆರಡನೆಯ ದಿನ ಮಾಡಬೇಕಾದದ್ದು. ಹಿರಿಯಮಗ ಆದ್ಯ ಅಧಿಕಾರಿ. ಗಂಡುಮಕ್ಕಳಿಲ್ಲದಾಗ ಹೆಂಡತಿ, ಹೆಣ್ಣುಮಗಳು ಕ್ರಮವಾಗಿ ಅಧಿಕಾರಿಗಳು, ಕರ್ತೃಗಳು ಆಗುತ್ತಾರೆ. ಮುಖ್ಯಾಧಿಕಾರಿ ಮಗನ ಅನುಪಸ್ಥಿತಿಯಲ್ಲಿ ಉತ್ತರಕ್ರಿಯೆಯನ್ನು ಮಾಡುವ ಸಂದರ್ಭ ಬಂದರೆ ಹನ್ನೊಂದನೇ ದಿನದ ಪರ್ಯಂತ ಮಾಡಬೇಕು. ನಂತರ ಅವನ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾದ ದಿನದಲ್ಲಿ ನಿರ್ವಹಿಸಬೇಕು. ಹನ್ನೆರಡನೇ ದಿನ ಮಾಡಬೇಕಾದ ಸಪಿಂಡೀಕರಣಕ್ಕೆ ವಿಘ್ನ ಉಂಟಾದರೆ ವರ್ಷದಕೊನೆಯೊಳಗೆ ಹದಿನಾಲ್ಕು ಅವಕಾಶವನ್ನು ಶಾಸ್ತ್ರವು ನೀಡಿದೆ. ಮೃತದಿನದಿಂದ ಹನ್ನೊಂದರಿಂದ ಹದಿನೇಳನೇ ದಿನದವರೆಗೆ, ಮೂವತ್ತನೇ ದಿನದಲ್ಲಿ, ಮೂರು ಪಕ್ಷ ಅಥವಾ ಮೂರನೇ ತಿಂಗಳಲ್ಲಿ, ಆರು, ಹನ್ನೊಂದನೇ ತಿಂಗಳಲ್ಲಿ ಅಥವಾ ಸಂವತ್ಸರದ ಕೊನೆಯ ದಿನದಲ್ಲಿ ಅಥವಾ ವರ್ಷದೊಳಗೆ ಪ್ರಾಪ್ತವಾದ ಮಂಗಳಕಾರ್ಯದ ಹಿಂದಿನ ದಿನದಲ್ಲಿ ಸಪಿಂಡೀಕರಣ ಮಾಡಬಹುದು.

ಈ ರೀತಿಯಾಗಿ ಶವಸಂಸ್ಕಾರಕ್ಕೂ ಉತ್ತರಕ್ರಿಯೆಗೂ ಪರ್ಯಾಯ ಮಾರ್ಗ ಹಾಗೂ ವಿಸ್ತೃತ ಅವಕಾಶವನ್ನು ಶಾಸ್ತ್ರಕಾರರು ನೀಡಿದ್ದಾರೆ. ಅದನ್ನು ಬಳಸಿಕೊಂಡು ಸ್ವಹಿತವನ್ನು, ರಾಷ್ಟ್ರಹಿತವನ್ನು ಸಾಧಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT