ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಕಣ್ಣು ಸುಟ್ಟುಕೊಂಡ ಕುಬೇರ

Last Updated 10 ಮೇ 2022, 16:34 IST
ಅಕ್ಷರ ಗಾತ್ರ

ಸೃಷ್ಟಿಖಂಡದ ಹತ್ತೊಂಬತ್ತನೇ ಅಧ್ಯಾಯದಲ್ಲಿ, ಗುಣನಿಧಿಯು ಕುಬೇರನಾದ ಕಥಾವೃತ್ತಾಂತವನ್ನು ನಾರದನಿಗೆ ಬ್ರಹ್ಮ ಹೇಳುತ್ತಾನೆ.

‘ಹಿಂದೆ ಪಾದ್ಮಕಲ್ಪದಲ್ಲಿ ನನ್ನ ಮಾನಸಪುತ್ರನಾದ ಪುಲಸ್ತ್ಯನಿಗೆ ವಿಶ್ರವಸ್ಸ ಎಂಬ ಸುತನು ಜನಿಸಿದ. ಆ ವಿಶ್ರವಸ್ಸನಿಗೆ ವೈಶ್ರವಣನೆಂಬ ಮಗನು ಹುಟ್ಟಿದ. ಅವನು ತ್ರಿಲೋಚನನಾದ ಶಿವನನ್ನು ಅತಿ ಘೋರವಾದ ತಪಸ್ಸಿನಿಂದ ಮೆಚ್ಚಿಸಿ, ವಿಶ್ವಕರ್ಮನಿಂದ ನಿರ್ಮಿತವಾದ ಅಲಕಾ ನಗರಿಯನ್ನು ವೈಶ್ರವಣನು ಉಪಭೋಗಿಸುತ್ತ ಬಂದ. ಪಾದ್ಮಕಲ್ಪವು ಕಳೆದು, ಮೇಘವಾಹನ ಕಲ್ಪವು ಆದಮೇಲೆ, ಯಜ್ಞದತ್ತನ ಮಗನಾಗಿದ್ದ ಈ ಶ್ರೀದ (ಕುಬೇರ) ಎಂಬುವನು ಸಹಿಸಲು ಅಸಾಧ್ಯವಾದ ದೊಡ್ಡ ತಪಸ್ಸನ್ನು ಮಾಡಿದ. ಗುಣನಿಧಿಯಾಗಿದ್ದ ಜನ್ಮದಲ್ಲಿ ತಾನಿಟ್ಟ ದೀಪವೊಂದರಿಂದ ಇಷ್ಟು ಅತುಲೈಶ್ವರ್ಯವು ಲಭಿಸಿತು. ಇದಕ್ಕೆ ಶಿವನಲ್ಲಿ ಉಂಟಾದ ಭಕ್ತಿಯ ಪ್ರಭಾವವೇ ಕಾರಣ ಎಂದು ಅರಿತು ಬಹುದೊಡ್ಡ ತಪಸ್ಸಿಗೆ ಉಪಕ್ರಮಿಸಿದ್ದ.

ವೈಶ್ರವಣನು ಶಿವನ ವಾಸಸ್ಥಾನವೂ, ಶುದ್ಧ ಜ್ಞಾನವನ್ನು ಬೆಳಗಿಸುವುದೂ ಆದ ಕಾಶೀಕ್ಷೇತ್ರವನ್ನು ಸೇರಿದ. ಅಲ್ಲಿ ತನ್ನ ಮನಸ್ಸೆಂಬ ರತ್ನ ಖಚಿತವಾದ ಪಾತ್ರೆಯಲ್ಲಿ ಶಿವನೆಂಬ ಬತ್ತಿಯನ್ನು ಮೀಟಿ, ಅನನ್ಯವಾದ ಭಕ್ತಿಯೆಂಬ ಎಣ್ಣೆಯನ್ನು ತುಂಬಿ, ಶಿವತಾದಾತ್ಮ್ಯವೆಂಬ ಪಾತ್ರೆಯೂ, ತಪಸ್ಸೆಂಬ ದೀಪಶಿಖೆಯೂ ಉಳ್ಳ ಮತ್ತು ಕಾಮ-ಕ್ರೋಧ ಮೊದಲಾದ ಮಹಾವಿಘ್ನಗಳೆಂಬ ಪತಂಗಗಳ ಹೊಡೆತವಿಲ್ಲದ, ಗಾಳಿ ಅಲುಗಾಡದಿರುವಂಥ ವಾತಾವರಣ ಮಾಡಿ, ಶುದ್ಧವಾದ ದೀಪ ಬೆಳಗಿದ. ಸದ್ಭಾನೆ ಎಂಬ ಹೂಗಳಿಂದ ಪೂಜಿಸಲ್ಪಟ್ಟ ಜ್ಯೋತಿರ್ಮಯವಾದ ಶಂಭುಲಿಂಗವನ್ನು ಸ್ಥಾಪಿಸಿದ. ಶಿವಧ್ಯಾನದಿಂದ ನಿಶ್ಚಲನೂ ತನ್ಮಯನೂ ಆಗಿ, ಮೈಯಲ್ಲಿ ರಕ್ತಮಾಂಸಗಳು ಒಣಗಿಹೋಗಿ ಎಲುಬು ಚರ್ಮಗಳು ಮಾತ್ರ ಉಳಿಯುವಷ್ಟರ ಮಟ್ಟಿಗೆ ಹತ್ತುಲಕ್ಷ ವರ್ಷಗಳ ಕಾಲ ದೀರ್ಘವಾದ ತಪಸ್ಸನ್ನಾಚರಿಸಿದ.

‘ಅನಂತರ ಶಿವಲಿಂಗದಲ್ಲಿ ಏಕಾಗ್ರತೆಯಿಂದ ಮನಸ್ಸನ್ನಿಟ್ಟು, ಸ್ಥಾಣು (ಈಶ್ವರ, ಗಿಡ್ಡಾದ ಮರ)ವಾಗಿಯೇ ಬಿಟ್ಟಿರುವ ಆ ಅಲಕಾಧಿಪತಿಯಾದ ಕುಬೇರನನ್ನು ನೋಡಿ, ಪ್ರಸನ್ನ ಹೃದಯವುಳ್ಳವನಾದ ಸಾಕ್ಷಾತ್ ವಿಶ್ವೇಶ್ವರನೇ ತನ್ನ ಮಡದಿಯಾದ ವಿಶಾಲಕ್ಷಿಯೊಡನೆ ಬಂದು ‘ಎಲೈ, ಅಲಕೇಶ್ವರನೇ. ನಿನ್ನ ತಪಸ್ಸಿಗೆ ಮೆಚ್ಚಿ ವರವನ್ನೀಯಲು ಬಂದಿರುವೆ. ಬೇಕಾದ ವರವನ್ನು ಕೇಳು’ ಎಂದ.

‘ತಪೋನಿರತನಾದ ವೈಶ್ರವಣನು ಕಣ್ಣುಗಳನ್ನು ತೆರೆದು ನೋಡಿದಾಗ ಏಕಕಾಲದಲ್ಲಿ ಸಹಸ್ರ ಸೂರ್ಯರು ಉದಯಿಸಿದರೆ ಉಂಟಾಗುವುದಕ್ಕಿಂತಲೂ ಹೆಚ್ಚಾದ ತೇಜಸ್ಸಿನಿಂದ ಬೆಳಗುತ್ತ ನಿಂತಿದ್ದ ಪಾರ್ವತೀಕಾಂತನ ಕಣ್ಣು ಕೋರೈಸುವಂತಹ ತೇಜಸ್ಸನ್ನು ನೋಡಲಾರದೆ, ಕಣ್ಣುಗಳನ್ನು ಮುಚ್ಚಿಕೊಂಡ. ಕಣ್ಣು ಮುಚ್ಚಿಕೊಂಡೇ, ಮನೋರಥಗಳ ಎಲ್ಲೆಯನ್ನೂ ಮೀರಿದ ದೇವದೇವನಾದ ಆ ಶಿವನನ್ನು ಕುರಿತು ಹೀಗೆಂದ:

‘ಈ ಕಣ್ಣುಗಳಿಗೆ ನಿನ್ನ ಪಾದಕಮಲಗಳನ್ನು ನೋಡುವಷ್ಟು ಶಕ್ತಿಯನ್ನು ಅನುಗ್ರಹಿಸು ಪ್ರಭೂ! ನೀನು ನನ್ನೆದುರು ನಿಂತು ನನ್ನ ಕಣ್ಣುಗಳಿಂದ ಪ್ರತ್ಯಕ್ಷವಾಗಿ ನೋಡುವಂತಾದುದೇ ದೊಡ್ಡ ವರ. ಇದಕ್ಕಿಂತ ಬೇರೆ ವರವಿನ್ನೇನ್ನುಬೇಕು? ಓ ಶಶಾಂಕಮೌಲಿ, ಇಗೋ ನಿನಗೆ ನಮಸ್ಕಾರ’.

ಹೀಗೆ ವೈಶ್ರವಣ ಹೇಳುತ್ತಿರುವ ಮಾತನ್ನು ಕೇಳಿ, ದೇವದೇವನಾದ ಆ ಉಮಾಪತಿಯು ಮತ್ತಷ್ಟು ಪ್ರಸನ್ನನಾದ. ವೈಶ್ರವಣನನ್ನು ಕೈಯಿಂದ ಮುಟ್ಟಿ, ತನ್ನನ್ನು ನೋಡುವಂಥ ಶಕ್ತಿಯನ್ನಿತ್ತ. ಬಳಿಕ ಆಗ ಕುಬೇರನಿಗೆ ಶಿವನ ದರ್ಶನ ಸಾಮರ್ಥ್ಯ ದೊರೆಯಿತು. ಶಿವನ ಅನುಗ್ರಹದಿಂದ ಕುಬೇರ ತನ್ನ ಕಣ್ಣುಗಳನ್ನು ತೆರೆದಾಗ ಅವನಿಗೆ ಮೊದಲು ಕಂಡಿದ್ದು ಪಾರ್ವತಿಮಾತೆ. ‘ಶಿವನ ಬಳಿಯಲ್ಲಿರುವ ಸರ್ವಾಂಗಸುಂದರಿಯಾದ ಈ ಹೆಂಗಸು ಯಾರು? ಶಿವನ ಸಮೀಪದಲ್ಲಿರಬೇಕಾದರೆ ನಾನು ಮಾಡಿದ ತಪಸ್ಸಿಗಿಂತಲೂ ಹೆಚ್ಚಾಗಿ ಈಕೆ ಇನ್ನೆಂತಹ ತಪಸ್ಸನ್ನು ಮಾಡಿರಬೇಕು? ಅಬ್ಬಾ, ಎಂತಹ ಅದ್ಭುತವಾದ ರೂಪ! ಎಂತಹ ಸೌಭಾಗ್ಯ!’ ಎಂದು ಬಡಬಡಿಸಿದ.

ಶಿವನಿಗೆ ಮಗನಂತೆ ಪ್ರೇಮಾಸ್ಪದನಾದ ಕುಬೇರನು ಮತ್ತೆ ಮತ್ತೆ ಪಾರ್ವತಿಯ ಸೌಂದರ್ಯವನ್ನೂ ಸೌಭಾಗ್ಯವನ್ನೂ ಹೊಗಳುತ್ತಿದ್ದ. ಶಿವನ ಪಕ್ಕ ಇರುವ ಪಾರ್ವತಿಯನ್ನು ಮತ್ತೆ ಮತ್ತೆ ಹೊಗಳುತ್ತಾ ಬೆರುಗಣ್ಣಿನಿಂದ ಒಂದೇ ಸಮನೆ ನೋಡಿದ. ಹೀಗೆ ಪಾರ್ವತಿಯನ್ನು ನೆಟ್ಟ ನೋಟದಿಂದ ನೋಡಿದ್ದರಿಂದ ಕುಬೇರನ ಎಡಗಣ್ಣು ಸುಟ್ಟುಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT