ಮಂಗಳವಾರ, ಸೆಪ್ಟೆಂಬರ್ 21, 2021
23 °C

ಸಚ್ಚಿದಾನಂದ ಸತ್ಯಸಂದೇಶ | ನಾನಾ ಭಾವಗಳ ಚಿದ್ವಿಲಾಸ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಮನುಷ್ಯರ ಭಾವನೆಗಳೆಲ್ಲಾ ಒಂದೇ ರೀತಿ ಇದ್ದರೆ, ಮನುಕುಲ ರಾಗ-ದ್ವೇಷಗಳಿಲ್ಲದೆ ಸಂತೋಷವಾಗಿ, ನೆಮ್ಮದಿಯಾಗಿ ಇರುತ್ತೆ. ಇದಕ್ಕಾಗಿ ಮನುಷ್ಯರ ಭಾವಗಳನ್ನೆಲ್ಲಾ ಒಂದೇ ರೀತಿ ತೂಗಲು ಧರ್ಮದ ಚೌಕಟ್ಟು ಹಾಕಿ, ಸಮಾಜದ ಕಟ್ಟಳೆಗಳನ್ನೂ ಮಾಡುತ್ತೇವೆ. ಆದರೆ ಮನುಷ್ಯರ ಭಾವಗಳು ಎಂದೂ ಸಮಾನವಾಗಿ ತೂಗುವುದಿಲ್ಲ. ವೈರುದ್ಧ್ಯ, ಏರಿಳಿತಗಳು ಘಟಿಸುತ್ತಲೇ ಇರುತ್ತೆ. ಏಕೆಂದರೆ, ಮನುಷ್ಯರ ಭಾವನೆಗಳನ್ನು ತೂಗುವುದೂ ಒಂದೇ, ಕಪ್ಪೆಗಳನ್ನು ಕಲೆಹಾಕಿ ತೂಗಿ ನೋಡುವುದೂ ಒಂದೇ. ಕಪ್ಪೆಯಂತೆಯೇ ಮನುಷ್ಯರ ಭಾವನೆಗಳು ಕ್ಷಣಕ್ಷಣಕ್ಕೂ ಕುಪ್ಪಳಿಸುತ್ತಿರುತ್ತವೆ. ಇದಕ್ಕೆ ಮೂಲ ಕಾರಣ ಭಗವಂತ ಮನುಷ್ಯನಿಗೆ ಕೊಟ್ಟ ಇಚ್ಛಾಶಕ್ತಿ. ಮನುಷ್ಯನ ಮನದೊಳಗೆ ಸೂಪರ್ ಪವರ್‌ನಂತಿರುವ ಇಚ್ಛಾಶಕ್ತಿ ಕ್ಷಣಕ್ಷಣಕ್ಕೂ ಚಂಚಲಿಸುತ್ತದೆ. ಹೀಗಾಗಿ ಮನುಷ್ಯರೆಲ್ಲರ ಭಾವನೆಗಳು ಒಂದೇ ರೀತಿ ಇರುವುದಿಲ್ಲ. ಒಂದು ಭಾವನೆಗೆ ಮತ್ತೊಂದು ಭಾವ ಸಂಘರ್ಷಿಸುತ್ತಲೇ ಇರುತ್ತದೆ. ಉದ್ದೇಶ ಪೂರ್ವಕವಾಗಿಯೋ-ದುರುದ್ದೇಶವಾಗಿಯೋ ಭಗವಂತ ರೂಪಿಸಿದ ಚಿದ್ವಿಲಾಸದ ಸೂತ್ರಕ್ಕೆ ಮನುಷ್ಯನ ಮನಸ್ಸು ಚಂಚಲಗೊಳ್ಳುತ್ತಲೇ ಇರುತ್ತದೆ.

ಭಿನ್ನರೂಪಗಳು ಇರುವಂತೆಯೇ, ಭಿನ್ನಭಾವಗಳು ಮನುಷ್ಯರಲ್ಲಿವೆ. ಒಂದೇ ರೀತಿ ಇದ್ದರೆ ಯಾವುದೇ ಸ್ವಾರಸ್ಯವಿರುವುದಿಲ್ಲ ಅಂತ ಮನಸ್ಸು ಸಹ ದೇಹದಂತೆ ನಿತ್ಯ ರಂಜನೆಯ ರಸದೂಟವನ್ನು ಬಯಸುತ್ತದೆ. ಇದಕ್ಕಾಗಿ ಭಗವಂತ ಮನುಷ್ಯನ ದೇಹ ಮತ್ತು ಮನಸ್ಸು ಸಮತೋಲಿತ ಹಾಗೂ ಸಂತುಲಿತವಾಗಿರಲು ಜಿಹ್ವಾಚಾಪಲ್ಯ ಮತ್ತು ಚಿತ್ತಚಾಪಲ್ಯವನ್ನು ಕರುಣಿಸಿದ್ದಾನೆ. ನಾಲಿಗೆ ಚಪಲದಿಂದ ದೇಹಕ್ಕೆ ನಾನಾ ರೀತಿಯ ಪೌಷ್ಟಿಕ ಆಹಾರ, ಅನಾರೋಗ್ಯಕರ ಆಹಾರ ಸೇರುವಂತೆ ಮನಸ್ಸಿನ ಚಪಲದಿಂದ ಬುದ್ಧಿಗೆ ನಾನಾ ರೀತಿಯ ಸದ್ಭಾವನೆ, ದುರ್ಭಾವನೆಗಳು ಸೇರುತ್ತಿರುತ್ತವೆ. ಇದರಿಂದ ಲೋಕದಲ್ಲಿ ನಾನಾ ರೂಪಗಳು, ನಾನಾ ಭಾವಗಳು ರೂಪುಗೊಳ್ಳುತ್ತಿರುತ್ತವೆ. ದೇಹಾರೋಗ್ಯಕ್ಕೆ ಯಾವುದು ಒಳ್ಳೆಯ ಆಹಾರ ಅಂತ ಯೋಚಿಸಿ ತಿನ್ನುತ್ತೇವೋ, ಹಾಗೇ ಮನಸ್ಸಿನ ಆರೋಗ್ಯಕ್ಕೆ ಯಾವುದು ಒಳ್ಳೆಯ ಆಲೋಚನೆ ಅಂತ ಯೋಚಿಸಿ, ಯೋಗ್ಯವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಒಳ್ಳೆಯದನ್ನು ಆಯ್ದುಕೊಳ್ಳುವ ತಿಳಿವಳಿಕೆ ನಮಗಿರಬೇಕು. ಅಂಥ ತಿಳಿವಳಿಕೆಯನ್ನು ನೀಡುವುದು ಧರ್ಮ. ಧರ್ಮವನ್ನು ಸರಿಯಾಗಿ ತಿಳಿದುಕೊಂಡರೆ, ಕರ್ಮ ಉತ್ತಮವಾಗಿರುತ್ತೆ. ಕರ್ಮ ಉತ್ತಮವಾಗಿದ್ದರೆ ಮನಸ್ಸು ಪ್ರಫುಲ್ಲವಾಗಿರುತ್ತದೆ. ಮನಸ್ಸು ಚೆನ್ನಾಗಿದ್ದರೆ ಬದುಕು ನೆಮ್ಮದಿಯಾಗಿರುತ್ತದೆ.

ಮನಸ್ಸಿನಂತೆ ಮಾನವ ರೂಪುಗೊಳ್ಳುತ್ತಾನೆ. ಮಾನವನಿಗೆ ಮನಸ್ಸು ಎಷ್ಟು ನಿಕಟವರ್ತಿ ಅನ್ನುವುದನ್ನ ‘ಮನ’ ಮತ್ತು ‘ಮನು’ ಎಂಬ ಪದಗಳೇ ಸೂಚಿಸುತ್ತವೆ. ‘ಮನ’ದಲ್ಲಿನ ‘ಅ’ಕಾರ, ‘ಮನು’ವಿನಲ್ಲಿರುವ ‘ಉ’ಕಾರಗಳಷ್ಟೆ ಭಿನ್ನವಾಗಿವೆ. ಆದ್ದರಿಂದ ಮನುಷ್ಯನ ನಿಜವಾದ ರೂಪವೇ ಮನಸ್ಸು. ಒಳ್ಳೆಯ ಮನಸ್ಸಿನಿಂದ ಒಳ್ಳೆಯ ರೂಪ ಮೂಡಿಸಿಕೊಳ್ಳುವುದು ಮಾನವರ ಇಚ್ಛಾಶಕ್ತಿಯಲ್ಲಿದೆ. ಒಳ್ಳೆಯ ಭಾವನೆಗಳು ಮನಸ್ಸಿನಲ್ಲಿ ಮೂಡಿದರೆ ಒಳ್ಳೆಯ ಭಾವಗಳು ಮುಖದಲ್ಲಿ ಮೂಡುತ್ತವೆ. ಕೆಟ್ಟ ಭಾವನೆಗಳಿದ್ದರೆ ಕೆಟ್ಟ ಭಾವ ಪ್ರತಿಫಲನವಾಗುತ್ತೆ. ನಮ್ಮ ಮನಸ್ಸಿನ ಕನ್ನಡಿಯಂತಿರುವ ಮುಖದಲ್ಲಿ, ಮನದೊಳಗೆ ನಡೆಯುವ ಎಲ್ಲಾ ತಾಕಲಾಟಗಳೂ ಪ್ರತಿಫಲಿತವಾಗುತ್ತಿರುತ್ತವೆ. ಚಿದ್ಭವಲೋಕದಲ್ಲಿ ಉದ್ಭವಿಸುವ ವಿಚಾರಗಳು ವಿಕಾರರೂಪ ತಾಳದಂತೆ ಎಚ್ಚರವಹಿಸುವ ಜಾಗೃತಪ್ರಜ್ಞೆ ನಮ್ಮಲ್ಲಿರಬೇಕಷ್ಟೆ. ಅಂಥ ಜಾಗೃತಪ್ರಜ್ಞೆಯನ್ನು ಕೊಡುವುದು ಧರ್ಮ. ಧರ್ಮ ಮರೆತವ ಉತ್ತಮ ಕರ್ಮ ಮಾಡಲಾರ.

ಮನಸ್ಸೆಂಬ ಗಂಗೋತ್ರಿಯಲ್ಲಿ ನಾನಾ ಭಾವಗಳು ಹುಟ್ಟುತ್ತವೆ. ಇದರಲ್ಲಿ ಒಳ್ಳೆಯ ಭಾವಗಳನ್ನು ಆಯ್ದುಕೊಳ್ಳುವ ಯುಕ್ತಿ ನಮಗಿರಬೇಕು. ನಾವು ಒಳ್ಳೆಯವರಾಗುವುದು ಅಥವಾ ಕೆಟ್ಟವರಾಗುವುದು ನಮ್ಮ ಇಚ್ಛಾಶಕ್ತಿಯಲ್ಲಿದೆ. ಮನಸ್ಸಿಗೆ ಸ್ನೇಹ-ಪ್ರೀತಿ-ವಿಶ್ವಾಸ ಗಳಿಸುವ ಇಚ್ಛಾಶಕ್ತಿಯನ್ನು ತುಂಬಿದರೆ, ಒಳ್ಳೆಯ ಭಾವ ಮೂಡುತ್ತದೆ. ದ್ವೇಷ-ಅಸೂಯೆ ತುಂಬಿದರೆ ಕೆಟ್ಟ ಭಾವಗಳು ವ್ಯಕ್ತವಾಗುತ್ತವೆ. ಇದಕ್ಕಾಗಿ ನಾವು ಮನದಲ್ಲಿ ಸದಾ ಸದ್ಭಾವನೆ ತುಂಬಿ ‘ಸಚ್ಚಿದಾನಂದ’ಭಾವವನ್ನು ಮೂಡಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು