ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Ganesh Chaturthi 2024: ಬೆಂಗಳೂರಿಗೆ ಬಂದ ದಗುಡು ಶೇಠ್ ಗಣಪ

Published : 6 ಸೆಪ್ಟೆಂಬರ್ 2024, 23:30 IST
Last Updated : 6 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ತಮಿಳುನಾಡಿನ ಕಾಂಚೀಪುರಂನ ಐತಿಹಾಸಿಕ ಕೈಲಾಸನಾಥ ದೇವಸ್ಥಾನ ಮತ್ತು ಅದರ ಒಳಗೆ ಪುಣೆಯ ಪ್ರಸಿದ್ಧ ಹಲ್ವಾಯಿ ದಗುಡು ಶೇಠ್ ಗಣೇಶ. ದಕ್ಷಿಣ ಮತ್ತು ಪಶ್ಚಿಮ ಭಾರತದ ಈ ಅಪರೂಪದ ಸೊಬಗು ಈ ಬಾರಿ ಬೆಂಗಳೂರಿನಲ್ಲಿ ಕಾಣ ಸಿಗಲಿದೆ.

ಒರಾಯನ್‌ ಮಾಲ್‌ ಬಳಿಯ ಮಿಲ್ಕ್‌ ಕಾಲೊನಿ ಗಲ್ಲಿಯಲ್ಲಿ ಗಣೇಶ ಹಬ್ಬಕ್ಕಾಗಿ ₹16 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಭವ್ಯವಾದ ಸೆಟ್‌ ಪಲ್ಲವರ ಯುಗದ ಶಿವನ ದೇವಾಲಯದ ಪ್ರತಿರೂಪದಂತಿದೆ. 

ಕಾಂಚೀಪುರಂನ ಹಳೆ ಸ್ಮಾರಕಗಳಲ್ಲಿ ಒಂದಾದ ಶಿವನ ದೇವಾಲಯದ ಸರಿ ಸಾಟಿಯಿಲ್ಲದ ದ್ರಾವಿಡ ವಾಸ್ತುಶಿಲ್ಪದ ಸೊಬಗು ಕಲಾವಿದರ ಕೈಚಳಕದಲ್ಲಿ ಯಥಾವತ್ತಾಗಿ ಅರಳಿ ನಿಂತಿದೆ. 

ಮಹಾರಾಷ್ಟ್ರದ ಸೊಲ್ಲಾಪುರದ ನುರಿತ ಕಲಾವಿದರಾದ ದಾಸ್‌ ಮತ್ತು ವಿಭೇಶ್‌ ಕೈಯಲ್ಲಿ ಅರಳಿದ ಏಳೂವರೆ ಅಡಿ ಎತ್ತರದ ವಿನಾಯಕ ವಾರದ ಹಿಂದೆ ಲಾರಿಯಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾನೆ.

ಹಾಗಾಗಿ ಈ ಬಾರಿ ಬೆಂಗಳೂರಿಗರು ಗಣೇಶನನ್ನು ನೋಡಲು ಪುಣೆ, ಮುಂಬೈಗೆ ಹೋಗಬೇಕಾಗಿಲ್ಲ. ಪುಣೆ, ಮುಂಬೈ ಗಣೇಶನೇ  ಬೆಂಗಳೂರಿಗೆ ಬಂದಿದ್ದಾನೆ! 

ಪುಣೆಯ ಪ್ರಸಿದ್ಧ ಹಲ್ವಾಯಿ ದಗುಡು ಶೇಠ್ ಗಣಪನನ್ನು ಹೋಲುವ ಈತನ ತೂಕ 250 ಕೆ.ಜಿ. 150 ಕೆ.ಜಿ ಕೆಂಪು, ಹಸಿರು, ನೇರಳೆ, ಹಳದಿ ಮತ್ತು ಬಿಳಿ ಬಣ್ಣದ ಅಮೆರಿಕನ್‌ ಡೈಮಂಡ್‌ ಮತ್ತು ನವರತ್ನಗಳಿಂದ ಮಿರಿ, ಮಿರಿ ಮಿಂಚುವ ಮೂರ್ತಿಗೆ ಜೀವ ತುಂಬಲು ₹12 ಲಕ್ಷ ವೆಚ್ಚವಾಗಿದೆಯಂತೆ! 

ರಾಜ್ಯದಲ್ಲಿ ದುಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಅದ್ದೂರಿ ಸೆಟ್‌ಗಳಿಗೆ ಹೆಸರಾಗಿರುವ ಮಿಲ್ಕ್‌ ಕಾಲೊನಿಯ ಸ್ವಸ್ತಿಕ್‌ ಯುವಕರ ಸಂಘ ನಿರ್ಮಿಸಿರುವ ಶಿವ ದೇವಾಲಯ ಮಂಟಪ ಸಿನಿಮಾ ಸೆಟ್‌ಗಳನ್ನೂ ನಾಚಿಸುವಂತಿದೆ.

ದ್ರಾವಿಡ ಶ್ರೀಮಂತ ಕಲಾಕೃತಿಯ ಕನ್ನಡಿಯಂತಿರುವ ಕೈಲಾಸನಾಥ ದೇವಸ್ಥಾನವನ್ನು ಮೈಸೂರಿನ ಯಳಂದೂರು ಸ್ವಾಮಿ, ವಸಂತ್‌ ಕುಮಾರ್‌ ಹಾಗೂ ಕುಮಾರ್‌ ತಂಡ ಮರು ಸೃಷ್ಟಿಸಿದೆ.

ಪುಣೆ ಮಾದರಿಯ ₹12 ಲಕ್ಷದ ಗಣಪ ದ್ರಾವಿಡ ಶೈಲಿಯ ₹16 ಲಕ್ಷದ ಶಿವನ ದೇವಾಲಯದಲ್ಲಿ ಸೆಪ್ಟೆಂಬರ್‌ 7ರಂದು (ಶನಿವಾರ) ವಿರಾಜಮಾನನಾಗಲಿದ್ದಾನೆ. ಪಶ್ಚಿಮ ಮತ್ತು ದಕ್ಷಿಣ ಕಲಾಶೈಲಿಯ ಅಪರೂಪದ ಸೊಬಗು ಒಂದೇ ಕಡೆ ಸವಿಯಲು ಸಿಗಲಿದೆ. 

ಪ್ರತಿ ಬಾರಿ ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿ ತಯಾರಿಸಲಾಗುತ್ತಿತ್ತು. ಈ ಬಾರಿ ಸೊಲ್ಲಾಪುರ ಕಲಾವಿದರು ತಯಾರಿಸಿದ್ದಾರೆ. ಅದಕ್ಕೆ ಪುಣೆ ಮತ್ತು ಮುಂಬೈ ಕಲಾವಿದರು ಕೈಜೋಡಿಸಿದ್ದಾರೆ.

ಈ ಬೃಹತ್‌ ವಿಘ್ನ ನಿವಾರಕನನ್ನು ಯಾವುದೇ ವಿಘ್ನ ಇಲ್ಲದಂತೆ  ಒಂದಿಷ್ಟೂ ಮುಕ್ಕಾಗದಂತೆ ತರುವುದೇ ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ ಸ್ವಸ್ತಿಕ್‌ ಯುವಕರ ಸಂಘದ ಸದಸ್ಯರು.  

ಮುಂಬೈ, ಪುಣೆ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಅದ್ಧೂರಿ ಗಣೇಶ ಉತ್ಸವಕ್ಕೆ ಹೆಸರುವಾಸಿ. ರಾಜಾಜಿ ನಗರದ ಮಿಲ್ಕ್ ಕಾಲೊನಿಯ ಸ್ವಸ್ತಿಕ್ ಯುವಕರ ಸಂಘದ ಗಣೇಶ ಉತ್ಸವ ಕೂಡ ಅದೇ ವೈಭವವನ್ನು ನೆನಪಿಸುತ್ತದೆ.

ಅದ್ಧೂರಿತನ ಮತ್ತು ಹೊಸತನಕ್ಕೆ ಹೆಸರುವಾಸಿಯಾದ ಸ್ವಸ್ತಿಕ್‌ ಯುವಕರ ಸಂಘದ ಗಣೇಶ ಬೆಂಗಳೂರಿನ ಅತ್ಯಂತ ಶ್ರೀಮಂತ ಗಣಪ ಎಂಬ ಹೆಗ್ಗಳಿಕೆ ಹೊಂದಿದ್ದಾನೆ.

ಗಣೇಶ ಹಬ್ಬಕ್ಕೂ ಎರಡು, ಮೂರು ತಿಂಗಳ ಮೊದಲೇ ಸಿದ್ಧತೆ ಆರಂಭವಾಗುತ್ತದೆ. ಯಾವ ರೀತಿ ಸೆಟ್‌ ಹಾಕಬೇಕು ಎಂದು ಆಗಲೇ ನಿರ್ಧಾರವಾಗುತ್ತದೆ. ಸೆಟ್‌ ವಿನ್ಯಾಸಕ್ಕೆ ಹೊಂದಾಣಿಕೆಯಾಗುವಂತೆ ಮೂರ್ತಿ ತಯಾರಿಸಲು ನಿರ್ಧಾರವಾದ ನಂತರ ಕಲಾವಿದರಿಗೆ ವೀಳ್ಯದೆಲೆಯಲ್ಲಿ ದಕ್ಷಿಣೆ ನೀಡಿ ಮೂರ್ತಿ ತಯಾರಿ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ. ಹಬ್ಬಕ್ಕೂ ವಾರ ಮೊದಲು ಸೆಟ್‌ ನಿರ್ಮಾಣದ ಕೆಲಸ ಶುರುವಾಗುತ್ತದೆ. 20ಕ್ಕೂ ಹೆಚ್ಚು ಕಲಾವಿದರು, ಕಾರ್ಮಿಕರು ಇದಕ್ಕಾಗಿ ಹಗಲಿರಳು ದುಡಿಯುತ್ತಾರೆ.

ಇಷ್ಟು ಎತ್ತರದ ಮೂರ್ತಿಯನ್ನು ಬೆಂಗಳೂರಿನಲ್ಲಿ ಯಾರೂ ಪ್ರತಿಷ್ಠಾಪಿಸಿಲ್ಲ. ಅದ್ದೂರಿತನ ಮತ್ತು ಹೊಸತನಗಳಿಗೆ ಮತ್ತೊಂದು ಹೆಸರೇ ಮಿಲ್ಕ್‌ ಕಾಲೊನಿಯ ಗಣೇಶ ಉತ್ಸವ ಎನ್ನುವಷ್ಟು ಹೆಸರುವಾಸಿಯಾಗಿದೆ.

ಸೆಪ್ಟೆಂಬರ್‌ 7ರಿಂದ 15ರವರೆಗೆ ಪ್ರತಿನಿತ್ಯ ಸಂಜೆ ಮಿಲ್ಕ್ ಕಾಲೊನಿಯ ಆಟದ ಮೈದಾನದಲ್ಲಿ ನಾಡಿನ ಪ್ರಸಿದ್ಧ ಕಲಾವಿದರಿಂದ ಹಾಡು, ನೃತ್ಯ, ಸಂಗೀತ ಸಂಜೆಯಂತಹ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ಆಹಾರ ಉತ್ಸವದಲ್ಲಿ ನಾಡಿನ ವಿವಿಧ ಬಗೆಯ ಸ್ವಾದಿಷ್ಟ ಖಾದ್ಯಗಳನ್ನೂ ಸವಿಯಬಹುದು.

ಕೇರಳದ ಚಂಡೆ ವಾದ್ಯ, ಕುಪ್ಪುಂನ ನಾದಸ್ವರ, ತಮಿಳುನಾಡಿನ ಕೀಲುಕುದುರೆ ಮತ್ತು ಹೂವಿನ ಪಲ್ಲಕ್ಕಿ, ನೈಯಂಡಿ ಮೇಳ, ವೇಲೂರು, ದಿಂಡಿಗಲ್, ಪಾಲ್ಗಾಟ್‌ ಡ್ರಮ್ಸ್ ಮತ್ತು ಬ್ಯಾಂಡ್, ಕಲ್ಲಡ್ಕದ ಗಾರುಡಿ ಗೊಂಬೆಗಳು, ಮಂಗಳೂರಿನ ಹುಲಿವೇಷ ಸೇರಿ ಹೆಸರಾಂತ ಕಲಾ ತಂಡಗಳು ಉತ್ಸವದ ವೈಭವ ಇಮ್ಮಡಿಗೊಳಿಸುತ್ತವೆ.

ಕೊನೆಯ ದಿನ ನಡೆಯುವ ಸಿಡಿಮದ್ದು ಪ್ರದರ್ಶನ ಉತ್ಸವದ ಹೈಲೈಟ್‌. ಒಂದು ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಪಟಾಕಿ, ಸಿಡಿಮದ್ದು ಸುಡಲಾಗುತ್ತದೆ. ಗಣೇಶ ವಿಸರ್ಜನೆಯ ದಿನ ವಿಶೇಷ ಸಿಡಿಮದ್ದು ಪ್ರದರ್ಶನ ಆಕರ್ಷಣೆಯ ಕೇಂದ್ರ ಬಿಂದು. ಸಿಡಿಮದ್ದು ಸುಡುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಸೇರುತ್ತಾರೆ.

ಒಂದು ವಾರದ ಸಾಂಸ್ಕೃತಿಕ ಹಬ್ಬ

ಸ್ವಸ್ತಿಕ ಯುವಕರ ಸಂಘದ ಗಣೇಶ ಉತ್ಸವ ಬರೀ ಶ್ರೀಮಂತಿಕೆ, ಅದ್ದೂರಿತನಕ್ಕೆ ಮಾತ್ರ ಹೆಸರಾಗಿಲ್ಲ. ಕಲೆ, ಸಂಗೀತ, ಸಂಸ್ಕೃತಿ, ಸದಭಿರುಚಿಯ ಸಂಕೇತವಾಗಿಯೂ ಮನೆಮಾತಾಗಿದೆ. 

38 ವರ್ಷಗಳಿಂದ ಗಣೇಶ ಉತ್ಸವದಲ್ಲಿ ರಾಜ್ಯದ ಕಲಾವಿದರು, ಹೊಸ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಒದಗಿಸುವ ಕೆಲಸ ಮಾಡುತ್ತಿದೆ. ಈ ಕೆಲಸಕ್ಕೆ ದಾನಿಗಳು ಉದಾರವಾಗಿ ದೇಣಿಗೆ ನೀಡುತ್ತಾರೆ.

ಮಲ್ಲೇಶ್ವರ, ರಾಜಾಜಿನಗರ, ಸುಬ್ರಮಣ್ಯ ನಗರ, ಗಾಯತ್ರಿ ನಗರ, ಮಹಾಲಕ್ಷ್ಮಿ ಲೇಔಟ್‌, ಯಶವಂತಪುರ ಸುತ್ತಮುತ್ತಲಿನ ಜನರ ಪಾಲಿಗೆ ಗಣೇಶ ಉತ್ಸವ ಸಾಂಸ್ಕೃತಿಕ ಹಬ್ಬವಾಗಿದೆ. 

ಸಂಜೆಯಾಗುತ್ತಿದ್ದಂತೆ ಬಡಾವಣೆ ಚಿತ್ರಣ ಬದಲಾಗುತ್ತದೆ. ದೀಪಾಲಂಕಾರ, ದೃಶ್ಯ ರೂಪಕ, ಸಂಗೀತದ ರಸದೌತಣದಿಂದ ಒಂದು ವಾರ ಬಡಾವಣೆಯಲ್ಲಿ ಹಬ್ಬದ ಸಂಭ್ರಮ ಮನೆಮಾಡುತ್ತದೆ. 

 ಪ್ರತಿಬಾರಿ ಹೊಸ ಪರಿಕಲ್ಪನೆ

ಪ್ರತಿ ಬಾರಿಯೂ ಹೊಸ ಪರಿಕಲ್ಪನೆ, ನವನವೀನ ಸೆಟ್‌, ಬೃಹತ್‌ ಗಣೇಶ ವಿಗ್ರಹ ಇಂತಹ ವಿಶೇಷತೆಗಳಿಂದಲೇ ಸ್ವಸ್ತಿಕ್‌ ಯುವಕರ ಸಂಘದ ಗಣೇಶ ಉತ್ಸವ ಬೆಂಗಳೂರಿಗರ ಗಮನ ಸೆಳೆಯುತ್ತಿದೆ.

ಬೇಲೂರು–ಹಳೆಬೀಡು ಚನ್ನಕೇಶವ ದೇವಾಲಯ, ಬಾದಾಮಿ–ಐಹೊಳೆಯ ಗುಹಾಂತರ ದೇವಾಲಯ, ಅಮೃತೇಶ್ವರ ದೇವಾಲಯ, ತಿರುಪತಿ ದೇವಸ್ಥಾನದ ಪ್ರತಿಕೃತಿಗಳು ಎಲ್ಲರ ಮನಗೆದ್ದಿದ್ದವು. ಮುಂಬೈ, ಪುಣೆ ಹಾಗೂ ಬೆಳಗಾವಿ, ಹುಬ್ಬಳ್ಳಿ–ಧಾರವಾಡದ ಗಣೇಶ ಉತ್ಸವಕ್ಕೆ ಅದ್ದೂರಿ ಸೆಟ್‌ಗಳು ಸಡ್ಡು ಹೊಡೆಯುವಂತಿದ್ದವು.

ಮೊದಲ ವರ್ಷ ವೈರಮುಡಿ, ನಂತರ ತಿರುಪತಿ ತಿರುಮಲ ನಿಜಪಾದ ಬಾಲಾಜಿ, ವಿಷ್ಣುರೂಪಿ ಗಣೇಶ, ಮಲೇಷ್ಯಾದ ಪ್ರಸಿದ್ಧ ಸುಬ್ರಮಣ್ಯನನ್ನು ಹೋಲುವ ಐದೂವರೆ ಅಡಿ ಎತ್ತರದ ಗಣೇಶ ಹೀಗೆ ಪ್ರತಿ ಬಾರಿಯೂ ಬಹುರೂಪಿ ಗಣೇಶ ಎಲ್ಲರನ್ನೂ ಸೆಳೆಯುತ್ತಾನೆ.

ಅಂದಾಜು ₹70 ಲಕ್ಷ ಖರ್ಚು!

ಚಲನಚಿತ್ರ ನಿರ್ಮಾಪಕ ಡಿ. ಸುರೇಶ್ ಗೌಡ ನೇತೃತ್ವದಲ್ಲಿ 1984ರಲ್ಲಿ ಆರಂಭವಾದ ಸ್ವಸ್ತಿಕ್ ಯುವಕರ ಸಂಘ ಬೆಳ್ಳಿಹಬ್ಬ ಪೂರೈಸಿದೆ. 38 ವರ್ಷಗಳಿಂದ ಗಣೇಶ ಉತ್ಸವ ನಡೆಸಿಕೊಂಡು ಬರುತ್ತಿದೆ.

ವಾರದ ವೈಭವದ ಗಣೇಶ ಉತ್ಸವಕ್ಕೆ ಅಂದಾಜು ₹65 ಲಕ್ಷದಿಂದ ₹70 ಲಕ್ಷ ಖರ್ಚಾಗುತ್ತದೆ. ಮಿಲ್ಕ್‌ ಕಾಲೊನಿ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರದ ನಿವಾಸಿಗಳು, ವರ್ತಕರು ಮತ್ತು ನಿವಾಸಿಗಳು ಉದಾರವಾಗಿ ದೇಣಿಗೆ ನೀಡುತ್ತಾರೆ. ಹೆಚ್ಚುವರಿ ಖರ್ಚುಗಳನ್ನು ಸ್ವಸ್ತಿಕ್ ಸಂಘ ನಿಭಾಯಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT