ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಗಣಪತಿ; ನಮ್ಮ ದೇವರು

Last Updated 21 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಯುಗಪತ್‌ ಸ್ವಗಂಡಚುಂಬನಲೋಲೌ ಪಿತರೌ ನಿರೀಕ್ಷ್ಯ ಹೇರಂಬಃ ।
ತನ್ಮುಖಮೇಲನಕುತುಕೀ ಸ್ವಾನನಮಪನೀಯ ಪರಿಹಸನ್‌ ಪಾಯಾತ್ ।।

ಈ ಸಂದರ್ಭದ ತಾತ್ಪರ್ಯ ಹೀಗೆ:

‘ಒಮ್ಮೆ ಶಿವ–ಪಾರ್ವತಿ ಇಬ್ಬರಿಗೂ ಮಗನಾದ ಗಣಪತಿಗೆ ಏಕಕಾಲದಲ್ಲಿ ಮುದ್ದಿಸಬೇಕೆಂಬ ಮನಸ್ಸಾಯಿತಂತೆ. ಬಲಗೆನ್ನೆಯೊಬ್ಬರು, ಎಡಗೆನ್ನೆಯೊಬ್ಬರು ಮುದ್ದಿಸಲು ಮುಂದಾದರು. ಹೀಗೆ ಒಮ್ಮೆಲೆ ತನ್ನ ಕೆನ್ನೆಗೆ ಮುದ್ದಿಡಲು ಸಿದ್ಧರಾದ ತಾಯಿ–ತಂದೆಯರನ್ನು ನೋಡಿ ಅವರಿಬ್ಬರ ಮುಖವನ್ನು ಸೇರಿಸಬೇಕೆಂದು ಗಣಪತಿಗೆ ಕುತೂಹಲ ಮೂಡಿತಂತೆ. ಆಗ ತನ್ನ ಮುಖವನ್ನು ಅವನು ಹಿಂದಕ್ಕೆ ಸರಿಸಿದ. ಅದರ ಪರಿಣಾಮವನ್ನು ನೋಡಿ ನಗಲು ತೊಡಗಿದನಂತೆ. ಅಂಥ ಗಣಪತಿ ನಮ್ಮನ್ನು ಕಾಪಾಡಲಿ.’

ಗಣಪತಿಯ ಕಲ್ಪನೆಯೇ ಸ್ವಾರಸ್ಯಕಾರವಾದುದು.ಗಣೇಶ, ವಿನಾಯಕ, ಗಣಪತಿ, ಕುಮಾರಗುರು, ಗೌರೀಪುತ್ರ, ಶಿವಸುತ, ಸುಮುಖ, ಏಕದಂತ, ಲಂಬೋದರ, ಮೂಷಿಕವಾಹನ, ವಕ್ರತುಂಡ, ಶೂರ್ಪಕರ್ಣ, ಗಜಾನನ, ವಿಘ್ನರಾಜ, ವಿಘ್ನವಿನಾಶಕ – ಹೀಗೆ ಅವನ ಒಂದೊಂದು ಹೆಸರು ಅವನ ತತ್ತ್ವವನ್ನು ಎತ್ತಿಹಿಡಿಯುತ್ತದೆ.

ನಮ್ಮ ಸಂಸ್ಕೃತಿಯಲ್ಲಿ ಪುರಾಣಗಳ ಪಾತ್ರ ತುಂಬ ದೊಡ್ಡದು. ಇವು ನಮ್ಮ ಸಂಸ್ಕೃತಿಯ ಸೂಕ್ಷ್ಮಗಳನ್ನೂ ಗಹನತೆಯನ್ನೂ ಸೊಗಸನ್ನೂ ಮನೋಧರ್ಮವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಗಣಪತಿಯ ಕಲ್ಪನೆಯೂ ಹೀಗೆ ಹಲವು ಪುರಾಣಗಳಲ್ಲಿ ಹರಡಿರುವುದನ್ನು ಕಾಣಬಹುದು.

ಗಣಪತಿಯ ಹೆಸರುಗಳ ಹಿಂದೆ ಮಾತ್ರವಲ್ಲ, ಅವನ ಆಕಾರದ ಒಂದೊಂದು ವಿವರದ ಹಿಂದೆಯೂ ಪುರಾಣಪ್ರತಿಮೆಗಳು ನಂಟನ್ನು ಹೊಂದಿವೆ.ಗಣಪತಿಯ ಕಲ್ಪನೆಯಲ್ಲಿ ಹಲವು ಸ್ವಾರಸ್ಯಗಳೂ ಧ್ವನಿಗಳೂ ಸೇರಿಕೊಂಡಿವೆ.

ಪಾರ್ವತಿಯ ಮೈಮೇಲಿನ ಲೇಪನದಿಂದಲೇ ಜನಿಸಿದವನು ಅವನು. ಹೀಗಾಗಿ ಅವನ ಹುಟ್ಟು ಕಾಮಾತೀತತತ್ತ್ವವನ್ನು ಸಂಕೇತಿಸುತ್ತದೆ. ಅವನು ವಿದ್ಯೆಗೆ ಅಧಿಪತಿ; ಬ್ರಹ್ಮಚಾರಿಯೂ ಹೌದು. ವಿದ್ಯೆಗೂ ಬ್ರಹ್ಮಚರ್ಯಕ್ಕೂ ಇರುವ ನಂಟನ್ನು ಅವನಲ್ಲಿ ನೋಡಬಹುದು. ಅವನು ಬ್ರಹ್ಮಚಾರಿಯಾದರೂ ಸಿದ್ಧಿ–ಬುದ್ಧಿ ಎಂಬ ಪತ್ನಿಯರಿಬ್ಬರು ಅವನಿಗೆ ಇದ್ದಾರೆ ಎಂದೂ ಕಾಣಿಸಲಾಗಿದೆ. ನಮ್ಮ ಎಲ್ಲ ಸಿದ್ಧಿಗೂ ಬುದ್ಧಿಗೂ ಅವನೇ ಯಜಮಾನ ಎಂಬುದು ಇದರ ತಾತ್ಪರ್ಯ. ಅವನದ್ದು ಆನೆಯ ಮುಖ; ಇದು ಓಂಕಾರವನ್ನು ಸೂಚಿಸುತ್ತದೆ; ಅವನು ಪ್ರಣವಸ್ವರೂಪಿ. ಅವನ ಕಿವಿಗಳು ವಿಶಾಲವಾಗಿದೆ; ವಿದ್ಯೆಯ ಸಿದ್ಧಿಗೆ ಕೇಳ್ಮೆ ತುಂಬ ಮುಖ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ಅವನ ದೊಡ್ಡದಾದ ಹೊಟ್ಟೆಯು ಇಡೀ ಬ್ರಹ್ಮಾಂಡವನ್ನೇ ಸಂಕೇತಿಸುತ್ತದೆ.

ಹೆತ್ತವರನ್ನೇ ಅವನು ತನ್ನ ಜಗತ್ತಾಗಿ ಸ್ವೀಕರಿಸಿದವನು. ಹೀಗಾಗಿ ಅವನು ಆದರ್ಶಪುತ್ರ. ತಾಯಿಯ ಜೊತೆಯಲ್ಲಿಯೇ ಅವನು ಭೂಲೋಕಕ್ಕೆ ಬರುತ್ತಾನೆ. ಅಪಹಾಸ್ಯವನ್ನು ದಂಡಿಸಿ, ಚಂದ್ರನಿಗೆ ಶಾಪವನ್ನು ಕೊಟ್ಟನಷ್ಟೆ. ಆದರೆ ಅವನು ಹಾಸ್ಯಪ್ರಿಯ; ಒಳ್ಳೆಯ ಹಾಸ್ಯ ಅವನಿಗೆ ಇಷ್ಟವೇ. ಅವನು ಹಾಸ್ಯಾಧಿಪತಿಯೇ ಹೌದು. ಅವನು ಹೊಟ್ಟೆಗೆ ಸುತ್ತಿಕೊಂಡಿರುವ ಹಾವು ಯೋಗಕ್ಕೆ ಸಂಕೇತ; ಕುಂಡಲಿನೀಶಕ್ತಿಗೆ ಸಂಕೇತ. ಅವನ ವಾಹನ ಇಲಿ. ಅವನ ಪರ್ವತದಂಥ ಶರೀರವನ್ನು ಸಣ್ಣ ಇಲಿ ಹೊರುತ್ತಿದೆ; ಇದೊಂದು ಸೋಜಿಗ; ಮಾತ್ರವಲ್ಲ, ಸಣ್ಣ ಜೀವಿಗೆ ಗಣ್ಯಸ್ಥಾನವನ್ನು ನೀಡಿದವನು ಅವನು ಸಾಮರಸ್ಯಕ್ಕೂ ಸಂಕೇತವಾಗಿದ್ದಾನೆ.

ಇಲ್ಲಿಯ ಶ್ಲೋಕ ಕೂಡ ಗಣಪತಿಯ ತತ್ತ್ವವನ್ನು ಸೊಗಸಾಗಿ ನಿರೂಪಿಸಿದೆ. ಗಣಪತಿಯ ತುಂಟತನ, ಕುಟುಂಬದ ಸೌಹಾರ್ದ – ಇಂಥವುಗಳನ್ನು ಇಲ್ಲಿ ನೋಡಬಹುದು.

ನಮ್ಮ ಪುರಾಣಗಳು, ನಮ್ಮ ದೇವರ ಕಲ್ಪನೆಗಳು ನಮ್ಮ ಜೀವನದ ಸತ್ಯ ಶಿವ ಸುಂದರಗಳೊಂದಿಗೆ ನೇರ ನಂಟನ್ನು ಹೊಂದಿವೆ. ಅವುಗಳನ್ನು ಅರ್ಥಮಾಡಿಕೊಂಡು ಹಬ್ಬ–ಹರಿದಿನಗಳನ್ನು ಆಚರಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT