ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಾರಾಯಣ ಎಂಬ ಕಳ್ಳ!

Last Updated 13 ಮಾರ್ಚ್ 2021, 0:52 IST
ಅಕ್ಷರ ಗಾತ್ರ

ನಾರಾಯಣೋ ನಾಮ ನರೋ ನರಾಣಾಂ ಪ್ರಸಿದ್ಧಚೌರಃ ಕಥಿತ ಪೃಥಿವ್ಯಾಮ್‌ ।

ಅನೇಕ ಜನ್ಮಾರ್ಜಿತಪಾಪಸಂಚಯಂ ಹರತ್ಯಶೇಷಂ ಸ್ಮರತಾಂ ಸದೈವ ।।

ಇದರ ತಾತ್ಪರ್ಯ ಹೀಗೆ:

‘ನಾರಾಯಣನೆಂಬ ನರನೊಬ್ಬನು ಅತಿ ಪ್ರಸಿದ್ಧನಾದ ಕಳ್ಳ ಎಂದು ಲೋಕದಲ್ಲಿ ಹೇಳಲ್ಪಟ್ಟಿದ್ದಾನೆ; ಹೌದು, ಅವನು ತನ್ನನ್ನು ಒಮ್ಮೆ ಯಾರು ಸ್ಮರಿಸುವರೋ ಅವರ ಅನೇಕ ಜನ್ಮಗಳ ಪಾಪಸಮೂಹವನ್ನೆಲ್ಲ ಆ ಕೂಡಲೇ ಸಂಪೂರ್ಣವಾಗಿ ಅಪಹರಿಸಿಬಿಡುತ್ತಾನೆ.’

ನಮಗೆ ಸುಲಭವಾಗಿ ಅರ್ಥವಾಗುವಂಥ ದುಷ್ಟತನವನ್ನೇ ಉಪಮೆಯಾಗಿ ಬಳಸಿಕೊಂಡು ಈ ಸುಭಾಷಿತವು ಭಕ್ತಿಯ ಮೀಮಾಂಸೆಯನ್ನು ಸೊಗಸಾಗಿ ಮಾಡಿದೆ.

ನಮ್ಮಲ್ಲಿರುವ ಎಲ್ಲ ಸಂಪತ್ತನ್ನೂ ಕ್ಷಣಾರ್ಧದಲ್ಲಿ ಅಪಹರಿಸಿಬಿಡುತ್ತಾನೆ ಕಳ್ಳ. ನಾವು ಈ ಸಂಪತ್ತನ್ನು ಸಂಪಾದಿಸಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದನ್ನಾಗಲೀ, ಈ ಸಂಪತ್ತು ನಮ್ಮ ಕೈ ತಪ್ಪಿಹೋದರೆ ಅದರಿಂದ ನಮಗೆ ಎದುರಾಗುವ ತೊಂದರೆಗಳು ಎಂಥವು ಎಂಬುದನ್ನಾಗಲೀ ಆ ಕಳ್ಳ ಯೋಚಿಸುವುದಿಲ್ಲವಷ್ಟೆ! ಭಗವಂತನಾದ ನಾರಾಯಣನೂ ಇಂಥ ಕಳ್ಳನೇ ಹೌದು ಎನ್ನುತ್ತಿದೆ ಸುಭಾಷಿತ. ಏಕೆಂದರೆ ಅವನು ಕ್ಷಣಾರ್ಧದಲ್ಲಿ ಭಕ್ತರ ಪಾಪರಾಶಿಯನ್ನೆಲ್ಲ ಅಪಹರಿಸಿಬಿಡುತ್ತಾನೆ ಎನ್ನುತ್ತಿದೆ ಅದು. ನಿಜವಾದ ಭಕ್ತನನ್ನು ಕಾಪಾಡುವ ಭಗವಂತ ಕೃಪೆಯನ್ನೂ ಇಲ್ಲಿ ಸೂಚಿಸಲಾಗಿದೆ. ಹೇಗೆ ಕಳ್ಳನಿಗೆ ನಮ್ಮ ಸಂಪತ್ತಿನ ಸಂಗ್ರಹದ ಹಿಂದಿರುವ ಶ್ರಮದ ಬಗ್ಗೆ ಯೋಚನೆಯೇ ಇರುವುದಿಲ್ಲೋ, ನಾರಾಯಣನಿಗೂ ನಮ್ಮ ಪಾಪಗಳ ಹಿನ್ನೆಲೆ ಬೇಕಾಗುವುದಿಲ್ಲ; ಅವನಲ್ಲಿ ಭಕ್ತಿ ಇದ್ದರೆ ನಮ್ಮ ಪಾಪಗಳನ್ನು ಅವನು ಇಲ್ಲವಾಗಿಸಿಬಿಡುತ್ತಾನೆ.

ವಿಪದೋ ನೈವ ವಿಪದಃ ಸಂಪದೋ ನೈವ ಸಂಪದಃ ।

ವಿಪದ್ವಿಸ್ಮರಣ ವಿಷ್ಣೋಃ ಸಂಪನ್ನಾರಾಯಣಸ್ಮೃತಿಃ ।।

ಎಂದರೆ ‘ವಿಪತ್ತುಗಳು ನಿಜವಾದ ವಿಪತ್ತುಗಳಲ್ಲ; ಐಶ್ವರ್ಯಗಳು ನಿಜವಾಗಿಯೂ ಐಶ್ವರ್ಯಗಳಲ್ಲ. ಸರ್ವೇಶ್ವರನಾದ ವಿಷ್ಣುವಿನ ಮರೆವೇ ನಿಜವಾದ ವಿಪತ್ತು; ನಾರಾಯಣನ ಸ್ಮರಣೆಯೇ ನಿಜವಾದ ಸಂಪತ್ತು‘ – ಎನ್ನುವ ಮೂಲಕ ಈ ಸುಭಾಷಿತ ನಿಜವಾದ ಸಂಪತ್ತು ಯಾವುದು ಎಂದು ಹೇಳುತ್ತಿದೆ. ಭಕ್ತನಿಗೆ ಭಕ್ತಿಯೇ ಸಂಪತ್ತು, ಭಗವಂತನ ಸ್ಮರಣೆಯೇ ಸಂಪತ್ತು.

ಭಕ್ತಿಗೆ ಇಂಥ ಶಕ್ತಿ ಏಕೆ – ಎಂದರೆ ಇಡಿಯ ಸೃಷ್ಟಿಯೇ ಭಗವಂತನ ಲೀಲೆ, ಕೃಪೆ; ಹೀಗಾಗಿ ಅನಿಗಿಂತ ಮಿಗಿಲಾದ ಇನ್ನೊಂದು ಶಕ್ತಿ ಇರಲು ಸಾಧ್ಯವೇ ಇಲ್ಲ.

ವಯಂ ತ್ವಾಂ ಸ್ಮರಾಮೋ ವಯಂ ತ್ವಾಂ ಭಜಾಮೋ

ವಯಂ ತ್ವಾಂ ಜಗತ್ಸಾಕ್ಷಿರೂಪಂ ನಮಾಮಃ ।

ಸದೇಕಂ ನಿಧಾನಂ ನಿರಾಲಂಬಮೀಶಂ

ಭವಾಂಭೋಧಿ ಪೋತಂ ಶರಣ್ಯಂ ವ್ರಜಾಮಃ ।।

ಎಂದರೆ ’ನಾವು ನಿನ್ನನ್ನೇ ಸ್ಮರಿಸುವೆವು: ಭಜಿಸುವೆವು; ಜಗತ್ಸಾಕ್ಷಿರೂಪಿಯಾದ ನಿನ್ನನ್ನೇ ನಮಿಸುವೆವು. ಅದ್ವಿತೀಯನಾದ ಸದ್ರೂಪಿ, ಮತ್ತೊಂದರ ಆಲಂಬನವೇ ಇಲ್ಲದವನೂ, ಪರಮಗತಿಯಾಗಿರುವವನೂ ಸಂಸಾರಸಾಗರದಿಂದ ದಾಟಿಸುವ ದೋಣಿಯಂತೆ ಇರುವವನೂ ಆದ ಸರ್ವೇಶ್ವರನಾದ ನಿನ್ನಲ್ಲೇ ಶರಣುಹೋಗುತ್ತೇನೆ.’

ಭಕ್ತಿ ನಮ್ಮ ಚಿತ್ತಶುದ್ಧಿಗೆ ಕಾರಣವಾಗುವಂಥ ಮಹೋನ್ನತ ತತ್ತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT