ಬುಧವಾರ, ಜೂನ್ 29, 2022
24 °C
ಭಾಗ 132

ವೇದವ್ಯಾಸರ ಶಿವಪುರಾಣ ಸಾರ: ಅಗ್ನಿಗಾಹುತಿಯಾದ ಸಂಧ್ಯೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಸಂಧ್ಯೆಯ ಕೋರಿಕೆಗಳನ್ನು ಕೇಳಿದ ಭಕ್ತವತ್ಸಲನಾದ ಶಿವ ಮತ್ತೂ ಪ್ರಸನ್ನನಾಗಿ ‘ಎಲೈ ಸಂಧ್ಯಾದೇವಿ, ನಿನ್ನ ಪಾಪವೆಲ್ಲವೂ ಭಸ್ಮವಾಯಿತು. ನಿನ್ನಲ್ಲಿನ ನನ್ನ ಕೋಪವು ಶಾಂತವಾಯಿತು. ತಪಸ್ಸಿನಿಂದ ನೀನು ಪರಿಶುದ್ಧಳಾಗಿರುವೆ. ನೀನು ಕೇಳಿದ ವರಗಳನ್ನೆಲ್ಲಾ ಕೊಟ್ಟಿರುವೆ. ನಿನ್ನ ಮಹತ್ತಾದ ತಪಸ್ಸಿನಿಂದ ಲೋಕಕ್ಕೆ ಕಲ್ಯಾಣವಾಗಲಿದೆ’ ಎಂದ ಪರಶಿವ ಈರೀತಿ ಹೇಳಿದ.

ಪ್ರಾಣಿಗಳಿಗೆ ಮೊದಲನೆಯದು ಬಾಲ್ಯಾವಸ್ಥೆ, ಎರಡನೆಯದು ಕೌಮಾರಾವಸ್ಥೆ, ಆಮೇಲೆ ಯೌವನಾವಸ್ಥೆ ಬರುವುದು. ವಾರ್ಧಕ್ಯಾವಸ್ಥೆಯು ನಾಲ್ಕನೆಯ ಅವಸ್ಥೆ. ಇದರಲ್ಲಿ ಮೂರನೆಯದಾದ ಯೌವನಾಸ್ಥೆಯಲ್ಲಿಯೇ ಪ್ರಾಣಿಗಳು ಕಾಮೇಚ್ಛೆಯುಳ್ಳವರಾಗುವರು. ಕೆಲವೆಡೆ ಕೌಮಾರಾವಸ್ಥೆಯ ಕೊನೆಯಲ್ಲಿಯೂ ಕಾಮ ವಿಕಾರವುಂಟಾಗುವುದು. ನಿನ್ನ ತಪಸ್ಸಿಗೆ ಮೆಚ್ಚಿ ನಾನು ಪ್ರಾಣಿಗಳು ಜನಿಸಿದೊಡನೆಯೇ ಕಾಮ ವಿಕಾರಕ್ಕೊಳಗಾಗಬಾರದೆಂಬ ಮರ್ಯಾದೆಯನ್ನು ಜಗತ್ತಿನಲ್ಲಿ ಸ್ಥಾಪಿಸಿರುವೆ. ನಿನ್ನಂಥ ಪತಿವ್ರತೆಯು ಮತ್ತೊಬ್ಬಳು ಯಾರೂ ಆಗಲಾರರು. ನಿನ್ನ ಪತಿಯ ಹೊರತು ಮಿಕ್ಕ ಯಾವ ಪುರುಷನಾದರೂ ಕಾಮದೃಷ್ಟಿಯಿಂದ ನಿನ್ನನ್ನು ನೋಡಿದರೆ, ಅವನು ನಪುಂಸಕನಾಗುವನು. ನಿನ್ನ ಪತಿಯು ಮಹಾಮಹಿಮನೂ ತಪಸ್ವಿಯೂ ಸುಂದರನೂ ಆಗಿದ್ದು ಏಳು ಕಲ್ಪಗಳವರೆಗೆ ನಿನ್ನೊಡನೆ ಜೀವಿಸಿರುವನು ಎಂದು ಶಿವ ಆಕೆ ಪ್ರಾರ್ಥಿಸಿದ ವರಗಳನ್ನೆಲ್ಲಾ ಅನುಗ್ರಹಿಸಿದ. ಅಲ್ಲದೆ, ಈ ಜನ್ಮದಲ್ಲಿಯೇ ಮಾಡಬೇಕಾದ ಇನ್ನೊಂದು ವಿಷಯವನ್ನು ಸಂಧ್ಯೆಗೆ ಹೇಳಿದ.

ಹಿಂದೆ ನೀನು ಅಗ್ನಿಯಲ್ಲಿ ಶರೀರತ್ಯಾಗಮಾಡುವೆನೆಂದು ಸಂಕಲ್ಪಿಸಿರುವೆ. ಅದನ್ನ ಹೇಗೆ ಮಾಡಬೇಕೆಂಬ ಉಪಾಯವನ್ನು ಹೇಳುವೆನು. ಮೇಧಾತಿಥಿ ಎಂಬ ಮುನಿಯು ಹನ್ನೆರಡು ವರ್ಷ ಪರ್ಯಂತ ನಡೆಯುವಂತಹ ಒಂದು ಯಾಗವನ್ನು ಮಾಡುತ್ತಿದ್ದಾನೆ. ಆ ಯಾಗದ ಉರಿಯುತ್ತಿರುವ ಅಗ್ನಿಯಲ್ಲಿ ನಿನ್ನ ಶರೀರತ್ಯಾಗವನ್ನು ಮಾಡು. ಈ ಬೆಟ್ಟದ ಕೆಳತಪ್ಪಲಲ್ಲಿನ ಚಂದ್ರಭಾಗಾನದಿಯ ದಡದಲ್ಲಿ ತಾಪಸಾಶ್ರಮವಿದೆ. ಅಲ್ಲೇ ಯಾಗವನ್ನು ಮಾಡುತ್ತಿದ್ದಾನೆ. ಮುನಿಗಳಿಗೆ ಕಾಣಿಸದಂತೆ ಆ ಯಾಗಶಾಲೆಗೆ ಮರೆಯಾಗಿ ಹೋಗಿ ಅಗ್ನಿಕುಂಡದಲ್ಲಿ ಶರೀರವನ್ನು ತ್ಯಜಿಸು. ಮುಂದೆ ನನ್ನ ಅನುಗ್ರಹದಿಂದ ಅಗ್ನಿಯಲ್ಲಿ ಜನಿಸಿ ನೀನು ಮೇಧಾತಿಥಿಮುನಿಯ ಪುತ್ರಿಯಾಗುವೆ. ಅಗ್ನಿಗೆ ಬೀಳುವ ಮುನ್ನ ನೀನು ಯಾರನ್ನು ಪತಿಯಾಗಿ ವರಿಸಬೇಕೆಂದಿರುವೆಯೋ, ಅವನನ್ನು ಮನಸ್ಸಿನಲ್ಲಿ ಚಿಂತಿಸುತ್ತಾ ಅಗ್ನಿಯಲ್ಲಿ ಶರೀರವನ್ನು ತ್ಯಜಿಸು. ನೀನು ಈ ಬೆಟ್ಟದಲ್ಲಿ ಗಾಢವಾಗಿ ತಪಸ್ಸನ್ನಾಚರಿಸುತ್ತಲಿರುವಾಗ ನಾಲ್ಕು ಯುಗಗಳು ಕಳೆದುಹೋದುವು. ಆ ನಾಲ್ಕು ಯುಗಗಳಲ್ಲಿ ಮೊದಲನೆಯದಾದ ಕೃತಯುಗವು ಕಳೆದು ತ್ರೇತಾಯುಗವು ಬಂದಿತು. ಆ ಯುಗದ ಮೊದಲನೆಯ ಭಾಗದಲ್ಲಿ ದಕ್ಷಬ್ರಹ್ಮನಿಗೆ ಅನೇಕ ಕನ್ಯೆಯರು ಜನಿಸಿದರು. ಸೌಂದರ್ಯ ಮತ್ತು ಶೀಲ ಸಂಪನ್ನರಾದ ಅವರಿಗೆ ಯೋಗ್ಯವಾಗಿ ಮದುವೆಯೂ ಆಯಿತು. ಆ ಕನ್ಯೆಯರಲ್ಲಿ ಅಶ್ವಿನೀ ಮೊದಲಾದ ಇಪತ್ತೇಳು ಜನ ಕನ್ಯೆಯರನ್ನು ಚಂದ್ರನಿಗೆ ದಕ್ಷನು ಮದುವೆ ಮಾಡಿಕೊಟ್ಟ. ಆದರೆ ಚಂದ್ರನು ಮಿಕ್ಕ ಪತ್ನಿಯರನ್ನೆಲ್ಲಾ ಬಿಟ್ಟು ರೋಹಿಣಿಯೊಬ್ಬಳಲ್ಲಿಯೇ ಹೆಚ್ಚು ಪ್ರೀತಿಯುಳ್ಳವನಾದ.

ಅದಕ್ಕಾಗಿ ದಕ್ಷಪ್ರಜಾಪತಿಯು ತುಂಬಾ ಕೋಪಗೊಂಡು ಚಂದ್ರನನ್ನು 15 ದಿನ ಕೃಶನಾಗಿ, ಮತ್ತೆ 15 ದಿನ ವಿಕಾಸವಾಗುವಂತೆ ಶಪಿಸಿದ. ಚಂದ್ರನ ಶಾಪವನ್ನು ಹೋಗಲಾಡಿಸಲು ನೀನು ತಪಸ್ಸು ಮಾಡುತ್ತ ಕುಳಿತಿರುವ ಪ್ರದೇಶಕ್ಕೆ ದೇವತೆಗಳು ಬಂದಿದ್ದರು. ಆದರೆ ನೀನು ನನ್ನಲ್ಲಿಯೇ ನೆಟ್ಟ ಮನಸ್ಸುಳ್ಳವಳಾಗಿ ಆಕಾಶದೆಡೆಗೆ ನೋಡುತ್ತಾ ಧ್ಯಾನಿಸುತ್ತಲಿದ್ದ ಕಾರಣ, ಬ್ರಹ್ಮನೇ ಮೊದಲಾದ ದೇವತೆಗಳು ನಿನಗೆ ಕಾಣಿಸಲಿಲ್ಲ. ಚಂದ್ರನ ಶಾಪವನ್ನು ಹೋಗಲಾಡಿಸಲು ಬ್ರಹ್ಮನು ಇಲ್ಲಿ ಚಂದ್ರಭಾಗಾನದಿಯನ್ನು ನಿರ್ಮಿಸಿ ಹರಿಯಿಸಿದ. ಅಂದಿನಿಂದ ಮೇಧಾತಿಥಿ ಮುನಿಯು ಈ ನದೀತೀರದಲ್ಲಿ ವಾಸವಾಗಿದ್ದಾನೆ. ಅವನಂತಹ ತಪಸ್ವಿಯು ಹಿಂದೆ ಜನಿಸಿಲ್ಲ. ಮುಂದೂ ಜನಿಸಲಾರರು. ಆ ಮುನಿಯೇ ಈಗ ಜ್ಯೋತಿಷ್ಟೋಮ ಎಂಬ ಮಹಾಯಜ್ಞವನ್ನು ನಡೆಸುತ್ತಿದ್ದಾನೆ. ಆ ಯಾಗದಲ್ಲಿ ಶರೀರವನ್ನು ತ್ಯಜಿಸು. ಈಗ ನೀನು ಅತ್ಯಂತ ಪರಿಶುದ್ಧಳಾಗಿರುವೆ – ಎಂದು ಸಂಧ್ಯೆಗೆ ಉಪದೇಶಿಸಿ, ದೇವದೇವನಾದ ಶಿವನು ಅಲ್ಲಿಯೇ ಅಂತರ್ಧಾನನಾದ.

ಇಲ್ಲಿಗೆ ಶಿವಪುರಾಣದ ರುದ್ರಸಂಹಿತೆಯಲ್ಲಿನ ಸತೀಖಂಡದ ಆರನೆಯ ಅಧ್ಯಾಯವು ಮುಗಿಯುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು