ಸೋಮವಾರ, ಫೆಬ್ರವರಿ 17, 2020
28 °C

ಆನಂದದ ವಿದ್ಯಾನಿಲಯ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

prajavani

ನಮಗೆ ಇಂದು ಕುಳಿತುಕೊಳ್ಳುವುದಕ್ಕೆ ಕೂಡ ಸಮಯವಿಲ್ಲ; ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡಂತೆ ಸದಾ ಗಡಿಬಿಡಿಯಲ್ಲೇ ಒಂದೆಡೆ ನಿಲ್ಲದೆ, ಕೂರದೆ, ಆದರೆ ಸದಾ ಕೊರಗುತ್ತ, ಸುತ್ತುತ್ತಿರುತ್ತೇವೆ. ಅಕಸ್ಮಾತ್‌ ನಮ್ಮ ದೇಹ ಒಂದೆಡೆ ಕುಳಿತಿದ್ದರೂ ಮನಸ್ಸು ಮಾತ್ರ ಎಲ್ಲೆಲ್ಲೋ ಸಂಚರಿಸುತ್ತಲೇ ಇರುತ್ತದೆ. ಚೆನ್ನಾಗಿ ಕುಳಿತುಕೊಳ್ಳುವ ರೀತಿಯನ್ನೇ ನಾವಿಂದು ಮರೆತಿದ್ದೇವೆ; ಊಟ, ಓದು, ಬರೆಹ – ಹೀಗೆ ಎಲ್ಲವೂ ಓಟದ ಭಾಗವಾಗುತ್ತಿದೆ. ನಿರಂತರ ಉದ್ವೇಗದಲ್ಲಿರುವ ಇಂಥ ಮನಸ್ಸಿಗೆ ನೆಮ್ಮದಿಯಿಂದ ಒಂದೆಡೆ ಕುಳಿತುಕೊಳ್ಳುವ ವಿಧಾನವನ್ನು ಕಲಿಸಲು ಉತ್ಸುಕವಾಗಿರುವ ಪ್ರಾಚೀನ ವಾಙ್ಮಯವೇ ‘ಉಪನಿಷತ್‌.’

‘ಉಪನಿಷತ್‌’ ಎನ್ನುವುದರ ಅರ್ಥವೇ ‘ಚೆನ್ನಾಗಿ, ಹತ್ತಿರ ಕುಳಿತುಕೊಳ್ಳುವುದು’. ಯಾವುದಕ್ಕೆ ಅಥವಾ ಯಾರಿಗೆ ‘ಹತ್ತಿರ’ ಕುಳಿತುಕೊಳ್ಳುವುದು – ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಗುರುವಿಗೆ ಹತ್ತಿರದಲ್ಲಿ ಚೆನ್ನಾಗಿ ಕುಳಿತು ಅವನು ಉಪದೇಶಿಸುವ ಗಹನವಾದ ವಿದ್ಯೆಯನ್ನು ಪಡೆಯುವುದು – ಎಂಬುದು ‘ಉಪನಿಷತ್‌’ಗೆ ಇರುವ ಅರ್ಥ.

ಪ್ರಾಚೀನ ಭಾರತದಲ್ಲಿ ಗುರುಕುಲಗಳೇ ವಿಶ್ವವಿದ್ಯಾಲಯಗಳು. ಈ ಗುರುಕುಲಗಳು ಇರುತ್ತಿದ್ದುದು ಅರಣ್ಯಗಳಲ್ಲಿ. ವಿದ್ಯೆಯನ್ನು ಕಲಿಯಲು ಬರುವವರು ಅಲ್ಲಿಯೇ ಇರಬೇಕಾಗುತ್ತಿತ್ತು. ಹೀಗೆ ಗುರುಗಳ ಸಮೀಪದಲ್ಲಿ ಚೆನ್ನಾಗಿ, ಎಂದರೆ ತಾದಾತ್ಮ್ಯದಿಂದ ಕುಳಿತು, ವಿದ್ಯೆಯನ್ನು ಸಂಪಾದಿಸಬೇಕಾಗುತ್ತಿತ್ತು. ಕಣ್ಣಿಗೆ ಕಾಣುವ ಪ್ರಪಂಚದ ಬಗ್ಗೆಯೂ, ಕಣ್ಣಿಗೆ ಕಾಣದ ವಿಶ್ವದ ಬಗ್ಗೆಯೂ ಶಿಕ್ಷಣ ಅಲ್ಲಿ ದೊರಕುತ್ತಿತ್ತು. ಹೊರಗಿನ ಕಣ್ಣುಗಳಿಗೆ ಕಾಣುವ ವಿವರಗಳನ್ನು ಕುರಿತ ತಿಳಿವಳಿಕೆ ‘ಲೌಕಿಕವಿದ್ಯೆ’ ಎಂದೆನಿಸಿಕೊಳ್ಳುತ್ತಿತ್ತು. ಒಳಗಿನ ಕಣ್ಣುಗಳಿಗಷ್ಟೆ ಗೋಚರವಾಗುವ ಸಂಗತಿಗಳನ್ನು ಕುರಿತಾದ ಅರಿವು ‘ಅಲೌಕಿಕವಿದ್ಯೆ’ ಎಂದೆನಿಸಿಕೊಳ್ಳುತ್ತಿತ್ತು. ‘ಉಪನಿಷತ್‌’: ಇದು ಕಣ್ಣಿಗೆ ಕಾಣದ ವಿವರಗಳನ್ನು ಕುರಿತಾದದ್ದು; ಹೀಗಾಗಿಯೇ ಅದು ‘ಗಹನ’ ಎಂದೂ, ‘ರಹಸ್ಯ’ ಎಂದೂ ಎನಿಸಿಕೊಂಡಿತು.

ಈ ರಹಸ್ಯವಿದ್ಯೆಯ ಉಪದೇಶಕ್ಕೂ ಮೊದಲು ಗುರುವಿನಿಂದ ಶಿಷ್ಯನ ಪರೀಕ್ಷೆ ನಡೆಯುತ್ತಿತ್ತು; ಚೆನ್ನಾಗಿ ಕುಳಿತುಕೊಳ್ಳುವಂಥ ಸ್ಥಿರತೆ ಶಿಷ್ಯನಿಗೆ ಒದಗಿದೆಯೇ – ಎಂಬುದರ ಪರೀಕ್ಷೆ. ದೇಹವಷ್ಟೆ ಚೆನ್ನಾಗಿ – ಸ್ಥಿರವಾಗಿ – ಕುಳಿತುಕೊಳ್ಳುವುದಲ್ಲ; ಮನಸ್ಸು ಸಹ ಸ್ಥಿರತೆಯನ್ನು ಪಡೆದುಕೊಳ್ಳಬೇಕಾಗುತ್ತಿತ್ತು. ಚೆನ್ನಾಗಿ ಕುಳಿತುಕೊಳ್ಳುವುದಷ್ಟೆ ಅಲ್ಲ, ಹತ್ತಿರದಲ್ಲಿ ಕುಳಿತುಕೊಳ್ಳಬೇಕೆಂಬ ಸೂಚನೆಯೂ ‘ಉಪನಿಷತ್‌’ ಎಂಬ ಒಕ್ಕಣೆಯಲ್ಲಿ ಉಂಟಷ್ಟೆ. ಗುರುವಿನ ಹತ್ತಿರದಲ್ಲಿ ಎನ್ನುವುದು ವಾಚ್ಯಾರ್ಥ; ವಿದ್ಯೆಗೆ ಹತ್ತಿರ ಎಂಬುದೇ ಇದರ ದಿಟವಾದ ಧ್ವನ್ಯರ್ಥ. ‘ಗುರು’ ಎನ್ನುವವನು ವಿದ್ಯೆಯ ಮೂರ್ತರೂಪ ತಾನೆ? ಹೀಗೆ ವಿದ್ಯೆಗೆ ಹತ್ತಿರದಲ್ಲಿ ಚೆನ್ನಾಗಿ ಕುಳಿತುಕೊಳ್ಳುವುದು ಎಂದರೆ, ಶಿಷ್ಯನಾದವನು ವಿದ್ಯೆಯನ್ನು ಪಡೆಯಲು ಸಿದ್ಧನಾಗಿದ್ದಾನೆ ಎಂದೇ ತಾತ್ಪರ್ಯ. ಅವನಲ್ಲಿ ತನ್ನ ಜೀವನದ ಸಾರ್ಥಕತೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ದಿಟವಾದ ಶ್ರದ್ಧೆ ಮೂಡಿದೆ ಎಂಬುದು ಈ ‘ಸಿದ್ಧ’ ಎನ್ನುವುದರ ಅಭಿಪ್ರಾಯ.

ಉಪನಿಷತ್ತಿಗೆ ‘ವೇದಾಂತ’ ಎಂದು ಇನ್ನೊಂದು ಹೆಸರು ಕೂಡ ಉಂಟು. ಈ ಹೆಸರಿನಲ್ಲೂ ಸ್ವಾರಸ್ಯ ಇಲ್ಲದಿಲ್ಲ. ‘ವೇದ’ ಎಂದರೇನು – ಎಂಬುದನ್ನು ತಿಳಿದುಕೊಂಡರೆ ’ವೇದಾಂತ’ದ ಅರ್ಥ ಸ್ಪಷ್ಟವಾಗುತ್ತದೆ.

ಎಲ್ಲ ಅರಿವಿನ ಮೂಲವನ್ನು ‘ವೇದ’ ಸಂಕೇತಿಸುತ್ತದೆ. ಇದರಲ್ಲಿ ಲೌಕಿಕವೂ ಅಲೌಕಿಕವೂ ಬೆರೆತುಕೊಂಡೇ ಇರುತ್ತದೆ. ಇಲ್ಲಿ ಕರ್ಮಕ್ಕೆ ಹೆಚ್ಚಿನ ಮನ್ನಣೆ. ಕರ್ಮ ಎಂದರೆ ಸದಾ ಚಟುವಟಿಕೆ; ಸಂಚಾರ, ಜೀವನದ ಎಲ್ಲ ವಿವರಗಳಲ್ಲೂ ಎಡೆಬಿಡದೆ ಕ್ರಿಯಾಶೀಲವಾಗಿ ಭಾಗವಹಿಸುವಿಕೆ; ಸಾಮಾನ್ಯರ ಬದುಕು–ಬವಣೆ, ಬೇಕು–ಬೇಡಗಳು. ಆದರೆ ಎಷ್ಟು ಕಾಲ ಈ ರಾಗ–ದ್ವೇಷಗಳ ಓಟ? ಹೊರಮುಖವಾದ ಈ ಓಟದಿಂದ ವಿರಮಿಸಿ ವಿಶ್ರಾಂತಿ ಪಡೆಯಬೇಕೆಂಬ ಮನಸ್ಸು ಯಾರಿಗಾದರೂ ಎಂದಾದರೂ ಅನಿಸದಿದ್ದೀತೆ? ಹೀಗೆ ಬಾಹ್ಯಪ್ರಪಂಚದ ಓಟದ ಆವೇಗವನ್ನು ಅಂತರಂಗಜಗತ್ತಿನ ಅರಿವನ್ನಾಗಿಸಿಕೊಂಡು ವಿಶ್ರಮಿಸಿಕೊಳ್ಳುವ ವಿಧಾನವೇ ‘ವೇದಾಂತ’; ‘ವೇದದ ಕೊನೆ’ – ‘ವೇದದ ಸಾರ’ ಎನ್ನುವುದು ಈ ಶಬ್ದಕ್ಕೆ ಸಲ್ಲುವ ಮುಖ್ಯಾರ್ಥ. ಹೀಗಾಗಿ ಎಲ್ಲ ಅರಿವಿನ ಮೂಲವೂ ವಿಶ್ರಾಂತಿ, ಎಂದರೆ ನೆಮ್ಮದಿಯೇ ಎಂದಾಗುತ್ತದೆಯೆನ್ನಿ.

ನಮ್ಮ ಮನಸ್ಸಿನ ದುಗುಡಗಳಿಗೂ ದೇಹದ ದುಡಿಮೆಗೂ ನೆಮ್ಮದಿಯನ್ನು ಒದಗಿಸುವ ಅರಿವಿನ ಚಿಲುಮೆಯೇ ಉಪನಿಷತ್‌; ಇದು ಎಲ್ಲರೂ ಹಂಬಲಿಸುವ ಆನಂದದ ವಿದ್ಯಾನಿಲಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)