ಭಾನುವಾರ, ಸೆಪ್ಟೆಂಬರ್ 26, 2021
23 °C

ಭೀಮನ ಅಮಾವಾಸ್ಯೆ: ದಾಂಪತ್ಯದ ಆದರ್ಶ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ದಾಂಪತ್ಯದ ಹಿರಿಮೆಯನ್ನೂ ಗೃಹಸ್ಥಾಶ್ರಮದ ಗರಿಮೆಯನ್ನೂ ಎತ್ತಿಹಿಡಿಯುವ ವ್ರತಗಳಲ್ಲಿ ಒಂದು ಭೀಮೇಶ್ವರವ್ರತ. ಇದು ಭೀಮನ ಅಮಾವಾಸ್ಯೆ ಎಂದೇ ಪ್ರಸಿದ್ಧಿ.

***

ಭಾರತೀಯ ಸಂಸ್ಕೃತಿಯಲ್ಲಿ ದಿನವೂ ಒಂದಲ್ಲ ಒಂದು ವ್ರತ, ಪರ್ವ ಇದ್ದೇ ಇರುತ್ತದೆ. ಇವುಗಳಲ್ಲಿ ಎಲ್ಲವನ್ನೂ ನಾವು ಪ್ರಧಾನವಾಗಿ ಆಚರಿಸುವುದಿಲ್ಲ. ಹೀಗಾಗಿ ನೂರಾರು ವ್ರತಗಳ ಬಗ್ಗೆ ನಮಗೆ ಪರಿಚಯವೇ ಇರುವುದಿಲ್ಲ. ನಮಗೆ ತಿಳಿದಿರುವಂಥ ವ್ರತಗಳನ್ನೂ ಪರ್ವಗಳನ್ನೂ ಒಮ್ಮೆ ಅವಲೋಕಿಸಿದರೂ ಸಾಕು, ಎಲ್ಲ ಆಚರಣೆಗಳ ಹಿಂದಿರುವ ಏಕಸೂತ್ರವೊಂದು ಸ್ಪಷ್ಟವಾಗಿ ಗೋಚರಿಸುತ್ತದೆ. ನಮ್ಮ ಬಹುಪಾಲು ಹಬ್ಬ–ಹರಿದಿನಗಳು ನಮ್ಮ ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿಯವಂಥದ್ದೇ ಆಗಿರುವುದು ಕಾಕತಾಳೀಯವಲ್ಲ.

ನಮ್ಮ ಸಂಸ್ಕೃತಿಯ ವಿಶಿಷ್ಟತೆ ಎಂದರೆ ಕುಟುಂಬದ ವ್ಯವಸ್ಥೆಯ ಬಗ್ಗೆ ನಮಗಿರುವ ಆದರ್ಶ. ನಮ್ಮ ಜೀವನದ ಸಾರ್ಥಕತೆಗೆ ನೆರವಾಗುವ ಸಾಮಾಜಿಕ ಮಹಾಸಂಸ್ಥೆಯೇ ನಮ್ಮ ಕುಟುಂಬ ಎಂಬ ನಿಲುವು ನಮ್ಮದು. ಕುಟುಂಬದ ಕೇಂದ್ರವೇ ದಾಂಪತ್ಯ. ಈ ದಾಂಪತ್ಯ ಎಂಬ ಕೇಂದ್ರತತ್ತ್ವದ ಸುತ್ತಲೂ ಬೆಳೆದಿರುವಂಥ ವಿಶಾಲ ಮೌಲ್ಯಗಳೇ ಗೃಹಸ್ಥಧರ್ಮ ಎನಿಸಿಕೊಂಡಿದೆ. ಎಲ್ಲ ಆಶ್ರಮಗಳಿಗಿಂತಲೂ ಗೃಹಸ್ಥಾಶ್ರಮವೇ ಶ್ರೇಷ್ಠ; ನಮ್ಮ ಜೀವನಕ್ಕೆ ಧನ್ಯತೆಯನ್ನು ಒದಗಿಸುವಂಥದ್ದೇ ಗೃಹಸ್ಥಾಶ್ರಮ ಎಂಬ ಉದ್ಗಾರಗಳು ನಮ್ಮ ಸಂಸ್ಕೃತಿಗೆ ಸಹಜ ಸ್ವಭಾವವೇ ಆಗಿದೆ. ಹೀಗೆ ದಾಂಪತ್ಯದ ಹಿರಿಮೆಯನ್ನೂ ಗೃಹಸ್ಥಾಶ್ರಮದ ಗರಿಮೆಯನ್ನೂ ಎತ್ತಿಹಿಡಿಯುವ ವ್ರತಗಳಲ್ಲಿ ಒಂದು ಭೀಮೇಶ್ವರವ್ರತ. ಇದು ಭೀಮನ ಅಮಾವಾಸ್ಯೆ ಎಂದೇ ಪ್ರಸಿದ್ಧಿ.

ನಮ್ಮ ಜೀವನ ಸಂತೋಷವಾಗಿರಬೇಕು ಎಂದರೆ ನಮ್ಮ ಕುಟುಂಬ ಸಂತೋಷವಾಗಿರಬೇಕು. ಹೌದು, ಸಮಾಜವೂ ಒಂದು ಕುಟಂಬವೇ, ದೇಶವೂ ಒಂದು ಕುಟುಂಬವೇ. ಆದರೆ ಈ ವೈಶಾಲ್ಯ ನಮಗೆ ಒದಗಬೇಕಾದರೆ ನಮ್ಮ ‘ಮನೆ’ ಎಂಬ ಕುಟುಂಬ ಸದೃಢವಾಗಿರಬೇಕು, ಸಂತೋಷವಾಗಿರಬೇಕು. ಇಂಥ ಆದರ್ಶಮಯವೂ ಆನಂದಮಯವೂ ಆದ ಕುಟುಂಬ ಹೇಗಿರುತ್ತದೆ? ಈ ಪದ್ಯದಲ್ಲಿ ಅಂಥದೊಂದು ಚಿತ್ರಣ ಇದೆ:

ಸನ್ಮಿತ್ರಂ ಸಧನಂ ಸ್ವಯೋಷಿತಿ ರತಿಶ್ಚಾಜ್ಞಾಪರಾಃ ಸೇವಕಾಃ

ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ಮನೋಹಾರಿಣೀ |

ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ

ಸಾಧೋಃ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||

’ಗೃಹಸ್ಥನಿಗೆ ಒಳ್ಳೆಯ ಸ್ನೇಹಿತರಿರುತ್ತಾರೆ; ಧನಕನಕಗಳೂ ಇರುತ್ತವೆ; ಪ್ರೀತಿಯನ್ನು ಕೊಡುವ ಹೆಂಡತಿಯೂ ಇರುತ್ತಾಳೆ; ಕೆಲಸಕ್ಕೆ ನೆರವಾಗುವ ಸೇವಕರೂ ಇರುತ್ತಾರೆ; ಇಷ್ಟೆಲ್ಲ ಇದ್ದ ಮೇಲೆ ಅಂಥ ಮನೆಯಲ್ಲಿ ಆನಂದ ಸಹಜವಾಗಿಯೇ ಇರುತ್ತದೆ; ಇದರ ಜೊತೆಗೆ ಮಕ್ಕಳು ಬುದ್ಧಿವಂತರು; ಹೆಂಡತಿ ಸುಂದರಿ. ಇಷ್ಟೆಲ್ಲ ಸಂತೋಷ, ಅನುಕೂಲಗಳು ಇದ್ದಾಗ ಅತಿಥಿಸತ್ಕಾರಕ್ಕೆ ಕೊರತೆಯಾದರೂ ಇದ್ದೀತೆ? ಮನೆಯಲ್ಲಿ ಪೂಜೆ ವ್ರತ ಹಬ್ಬಗಳ ಸಂಭ್ರಮ; ದೇವತಾಕಾರ್ಯವೂ ನಿರಂತರ. ಇವೆಲ್ಲಕ್ಕೂ ಮೀರಿದ ಗುಣವಾಗಿ ಹಲವರು ಸಜ್ಜನರ ಸ್ನೇಹ. ಇಷ್ಟೆಲ್ಲ ಸಂತಸಗಳ ನೆಲೆಯನ್ನು ಒದಗಿಸಿರುವ ಗೃಹಸ್ಥಾಶ್ರಮವೇ ಧನ್ಯ, ಅಲ್ಲವೆ?’

ಇಂಥದೊಂದು ಸಂತೋಷಕ್ಕೆ ಮನೆ ಆಶ್ರಯವಾಗಬೇಕಾದರೆ ಮೊದಲು ಅದಕ್ಕೆ ತಕ್ಕ ದಾಂಪತ್ಯ ಸಿದ್ಧವಾಗಬೇಕು. ಎಂದರೆ ಹೆಣ್ಣಿಗೆ ತಕ್ಕ ಗಂಡು, ಗಂಡಿಗೆ ತಕ್ಕ ಹೆಣ್ಣು ಒಂದಾಗಿ, ಸತಿ–ಪತಿಗಳಾಗಬೇಕು. ಇದೇ ದಾಂಪತ್ಯ. ಹೆಣ್ಣೊಬ್ಬಳು ತನಗೆ ಒಳ್ಳೆಯ ಗಂಡ ದೊರೆಯಲಿ ಎಂದು ಆಶಿಸುವುದು ಸಹಜ. ಹೀಗೆಯೇ ಗಂಡು ಕೂಡ ತನಗೆ ತಕ್ಕ ಹೆಂಡತಿ ದೊರೆಯಲಿ ಎಂದು ಬಯಸುವುದೂ ಸಹಜ. ಹೀಗೆ ಪರಸ್ಪರ ಹೊಂದಾಣಿಕೆಯಾಗುವ ಹೆಣ್ಣು–ಗಂಡು ‘ದಂಪತಿ’ಯಾದರೆ ಆಗ ಅದು ಸಂತೋಷಮಯವಾದ ಕುಟುಂಬಕ್ಕೆ ಮೂಲವಾಗುತ್ತದೆ. ಇಂಥದೊಂದು ಆದರ್ಶವೇ ಭೀಮನ ಅಮಾವಾಸ್ಯೆಯ ವ್ರತದಲ್ಲಿ ನಾವು ಕಾಣುವುದು. ಇನ್ನು ಮದುವೆಯಾಗದ ಹೆಣ್ಣು ತನಗೆ ಭೀಮನಂಥ ಗಂಡ ಸಿಗಲಿ ಎಂದೂ, ಆಗಷ್ಟೆ ಮದುವೆಯಾಗಿರುವ ಹೆಣ್ಣು ತನ್ನ ಗಂಡ ಭೀಮನಂತೆ ಆಗಲಿ ಎಂದೂ ಪ್ರಾರ್ಥಿಸಿ ಆಚರಿಸುವ ವ್ರತವೇ ಭೀಮನ ಅಮಾವಾಸ್ಯೆಯ ವಿಶೇಷತೆ. ಭೀಮ ಎಂದರೆ ಶಿವ. ಆದರ್ಶ ದಾಂಪತ್ಯಕ್ಕೆ ಉದಾಹರಣೆ ಎಂದರೆ ಶಿವ–ಪಾರ್ವತಿ; ಜಗತ್ತಿನ ಆದಿದಂಪತಿಗಳು. ಶಿವ ತನ್ನ ಅರ್ಧ ಶರೀರವನ್ನೇ ತನ್ನ ಹೆಂಡತಿಗೆ ಕೊಟ್ಟವನು. ಹೀಗಾಗಿ ಇಂಥ ಶಿವನನ್ನು ದಾಂಪತ್ಯದ ಸೌಖ್ಯಕ್ಕಾಗಿ ಆರಾಧಿಸುವುದು ಯುಕ್ತವೇ ಆಗಿದೆ.

ದಾಂಪತ್ಯದ ಸಾರ್ಥಕತೆ ಕೇವಲ ಹೆಣ್ಣನ್ನು ಮಾತ್ರವೇ ಅವಲಂಬಿಸಿಲ್ಲ. ಹೀಗಾಗಿ ಒಳ್ಳೆಯ ಗಂಡನಿಗಾಗಿ ಹೆಣ್ಣು ಪ್ರಾರ್ಥಿಸುವಂತೆಯೇ, ಗಂಡು ಕೂಡ ಒಳ್ಳೆಯ ಹೆಂಡತಿಗಾಗಿ ಪ್ರಾರ್ಥಿಸಬೇಕು ಎಂಬ ಧ್ವನಿಯೂ ಈ ವ್ರತದ ಆಚರಣೆಯಲ್ಲಿ ಇಲ್ಲದೇ ಇಲ್ಲ. ಪಾರ್ವತಿಯ ತಪಸ್ಸಿನ ಫಲ ಶಿವನಾದರೆ, ಶಿವನ ತಪಸ್ಸಿನ ಫಲ ಪಾರ್ವತಿ ಎಂಬುದನ್ನೂ ನಾವು ಮರೆಯುವಂತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು