ಭಾನುವಾರ, ಸೆಪ್ಟೆಂಬರ್ 19, 2021
27 °C

ಪ್ರೀತಿಯ ಸಿಹಿಹೂರಣ!

ರಘು ವಿ. Updated:

ಅಕ್ಷರ ಗಾತ್ರ : | |

ಕರ್ತವ್ಯ ಎಂಬುದು ಅಪರೂಪಕ್ಕೆ ಸಿಹಿಯಾಗಿರಬಹುದು. ಆದರೆ ಪ್ರೀತಿಯೆಂಬ ಕೀಲೆಣ್ಣೆ ಬಳಿದಾಗ ಕರ್ಮಚಕ್ರಗಳು ಸಲೀಸಾಗಿ ತಿರುಗುತ್ತವೆ. ಇಲ್ಲವಾದರೆ ಅಲ್ಲಿ ನಿರಂತರ ಸಂಘರ್ಷ. ಪ್ರೀತಿಯೆಂಬುದಿಲ್ಲದಿದ್ದರೆ ಪಾಲಕರು ತಮ್ಮ ಮಕ್ಕಳನ್ನು ಸಲಹುವ ಕರ್ತವ್ಯವನ್ನಾದರೂ ಹೇಗೆ ಮಾಡುತ್ತಿದ್ದರು? ದಂಪತಿಗಳು ಹೇಗೆ ಪರಸ್ಪರ ಪೂರಕವಾಗಿರುತ್ತಿದ್ದರು? ಇಂತಿದ್ದೂ ಪ್ರತಿನಿತ್ಯದ ಜೀವನದಲ್ಲಿ ಅನೇಕ ಸಂಘರ್ಷಗಳನ್ನು ಕಾಣುತ್ತಿದ್ದೇವಲ್ಲ! ಕರ್ತವ್ಯಗಳು ಸಿಹಿಯಾಗುವುದು ಪ್ರೀತಿಯ ಕಾರಣದಿಂದ. ಆ ಪ್ರೀತಿ ಕಂಗೊಳಿಸುವುದು ಸ್ವಾತಂತ್ರ್ಯದಲ್ಲಿ ಮಾತ್ರ.

– ಸ್ವಾಮಿ ವಿವೇಕಾನಂದ, ‘ಕರ್ಮಯೋಗ’

ಜಗತ್ತಿನಲ್ಲಿ ಸುಮ್ಮನಿರಲಾರೆವು. ಒಂದಿಲ್ಲೊಂದು ಕೆಲಸಕಾರ್ಯದಲ್ಲಿ ತೊಡಗಿಯೇ ಇರುತ್ತೇವೆ. ಆದರೆ ಅದರಲ್ಲಿ ಎಷ್ಟರಮಟ್ಟಿಗೆ ತೊಡಗಿಕೊಳ್ಳುತ್ತೇವೆ? ಅದರಿಂದ ಎಷ್ಟು ಸಂತೋಷವನ್ನು ಪಡೆದುಕೊಳ್ಳುತ್ತೇವೆ? ಅದು ನಮಗಾಗಲೀ, ಜಗತ್ತಿಗಾಗಲೀ ಎಷ್ಟರಮಟ್ಟಿಗೆ ಹಿತಕಾರಿ? ಹೊಟ್ಟೆಹೊರೆಯಲು ಮಾತ್ರ ದುಡಿತವೊ? ಕುಟುಂಬ ಪೋಷಣೆಗಾಗಿ ಮಾತ್ರ ಉದ್ಯೋಗವೊ? ರ‍್ಯಾಂಕು, ರಿಸಲ್ಟುಗಳಿಗಾಗಿ ಮಾತ್ರ ಅಧ್ಯಯನವೊ? ಖಂಡಿತ ಅಲ್ಲ. ಏಕೆಂದರೆ ಮಾಡುವ ಕಾರ್ಯದಲ್ಲಿ ಪ್ರೀತಿಯಿರದಿದ್ದರೆ ಅದು ಯಶಸ್ವಿಯೂ ಸಂತೋಷದಾಯಕವೂ ಆಗುವುದಿಲ್ಲ. ಖಲೀಲ್ ಗಿಬ್ರಾನ್ ಕೂಡ ಇದನ್ನೇ ಧ್ವನಿಸುತ್ತಾನೆ.
ತನ್ನ ಅತ್ಯಂತ ಮಹತ್ತರ ಕೃತಿಯಾದ ’ಪ್ರವಾದಿ’ಯಲ್ಲಿ (ದಿ ಪ್ರಾಫೆಟ್) ’ಕೆಲಸವನ್ನು ಕುರಿತು’ (ಆನ್ ವರ್ಕ್) ಎಂಬ ಭಾಗದಲ್ಲಿ ಗಿಬ್ರಾನ್ ಮನುಷ್ಯ ಕಾಯಕದ ಮೂಲಕ ಭೂಮಿಯೊಂದಿಗೂ ಭೂಮಿಯ ಆತ್ಮದೊಂದಿಗೂ ಸಂಪರ್ಕ ಸ್ಥಾಪಿಸಿಕೊಳ್ಳುತ್ತಾನೆಂದು ಸೂಚಿಸುತ್ತಾನೆ. ಮುರಳಿಯ ಗಾನದಂತೆ ಕೆಲಸವು ಸಹಜವಾದ ಸಂಗೀತವನ್ನು ಹೊಮ್ಮಿಸಬೇಕು. ಪ್ರೇರಣೆ ಇಲ್ಲದ ಬದುಕು ನಿಸ್ಸಾರ. ಪ್ರೇರಣೆಯ ಹಿಂದೆ ತಿಳಿವಳಿಕೆಯಿರಬೇಕು. ಕೆಲಸದ ಮುನ್ನೆಲೆಯಿಲ್ಲದ ತಿಳಿವಳಿಕೆಯು ದಂಡ. ಮತ್ತು ಪ್ರೀತಿಯ ಹೊಳಹು ಇಲ್ಲದ ಕೆಲಸ ಶೂನ್ಯ. ನೀವು ಪ್ರೀತಿಯಿಂದ ಕೆಲಸ ಮಾಡಿದಾಗ, ಅದು ನಿಮ್ಮನ್ನು ನಿಮ್ಮೊಂದಿಗೇ ಮತ್ತು ಇತರರೊಂದಿಗೆ ಕೊನೆಗೆ ದೇವರೊಂದಿಗೆ ನಿಮ್ಮನ್ನು ಬೆಸೆಯುತ್ತದೆ ಎಂದಿದ್ದಾನೆ ಗಿಬ್ರಾನ್. ಕೆಲಸ ಮಾಡುವುದರ ಹಿಂದಿರಬೇಕಾದ ಮನೋಭಾವವನ್ನು ನಾವಿಲ್ಲಿ ಗುರುತಿಸಬೇಕು. ’ಕೆಲಸವು ಪ್ರೇಮದ ವ್ಯಕ್ತರೂಪ’ (Work is love made visible) ಎಂದು ಅವನು ಸ್ಪಷ್ಟಪಡಿಸಿದ್ದಾನೆ. ವಿವೇಕಾನಂದರ ಉಕ್ತಿಯನ್ನೇ ಕಾವ್ಯಮಯವಾಗಿ ವಿಶದೀಕರಿಸಿದ್ದಾನೆ ಖಲೀಲ್ ಗಿಬ್ರಾನ್.

’ಹೊಸದರಲ್ಲಿ ಗೋಣಿಯನ್ನು ಎತ್ತಿ ಒಗೆದ’ ಎಂಬ ಗಾದೆಯಂತೆ ಯಾವುದೇ ಕೆಲಸವಾದರೂ ಅದರ ಹುರುಪು ಕಾಲಕ್ರಮೇಣ ಕ್ಷೀಣಿಸುವುದು ಸಹಜ. ಆದರೆ ಅದಕ್ಕೆ ಪ್ರೀತಿ ಬೆರೆತುಬಿಟ್ಟರೆ ಅದು ಎಷ್ಟೇ ನಿತ್ಯದ ಕೆಲಸವಾದರೂ ಹದಗೆಡದೆ ಮುಂದುವರೆಯುವುದು. ತಾಯಿ ಪ್ರತಿನಿತ್ಯ ಅಡುಗೆ ಮಾಡಿದರೂ ಅದು ರುಚಿಗೆಡದು; ಏಕೆಂದರೆ ಅದು ತನ್ನ ಮಕ್ಕಳು ತಿನ್ನುವ ಪದಾರ್ಥವಾದ್ದರಿಂದ ಅಷ್ಟೇ ಶ್ರದ್ಧೆ, ಪ್ರೀತಿಯಿಂದ ಆಕೆ ಪ್ರತಿದಿನವೂ ಅದನ್ನು ಮಾಡುತ್ತಾಳೆ. ಪ್ರೀತಿಯಿದ್ದಲ್ಲಿ ಎಲ್ಲವೂ ಸರಾಗವಾಗಿ ನಡೆಯುತ್ತಿರುತ್ತದೆ. ಇಲ್ಲವಾದರೆ ಎಷ್ಟೇ ಸುಲಭದ ಕೆಲಸವಾದರೂ ಅದರಿಂದ ಸಂಘರ್ಷವೇ.

‘ಪ್ರೀತಿ ಕಂಗೊಳಿಸುವುದು ಸ್ವಾತಂತ್ರ್ಯದಲ್ಲಿ ಮಾತ್ರ’ ಎನ್ನುವ ವಿವೇಕಾನಂದರ ಕೊನೆಯ ವಾಕ್ಯ ಬಹಳ ಮಾರ್ಮಿಕ. ಸಾಮಾನ್ಯವಾಗಿ ಪ್ರೀತಿಯೆಂಬುದು ಮೋಹ, ಮಾಯೆ, ಅಪೇಕ್ಷೆ, ನಿರೀಕ್ಷೆಗಳ ಮೊತ್ತ. ಇವೆಲ್ಲವೂ ಬಂಧನಕಾರಿ ಅಂಶಗಳು. ನಿಜವಾದ ಪ್ರೀತಿ ಷರತ್ತುಗಳಿಲ್ಲದ, ವ್ಯಾವಹಾರಿಕ ಆಸಕ್ತಿ ಕಿಂಚಿತ್ತೂ ಇರದ ಪ್ರೀತಿ ಆಗಿರುತ್ತದೆ. ಕೊಡುವ-ಕೊಳ್ಳುವ ಜಗದೊಳಗೆ ಕೊಡದ-ತೆಗೆದುಕೊಳ್ಳದ ಪ್ರೀತಿಯ ಅನುಭವ ಅಪರೂಪವೇ. ಆದುದರಿಂದಲೇ ಕರ್ತವ್ಯ ಎಂಬುದು ಅಪರೂಪಕ್ಕೆ ಸಿಹಿಯಾಗುವುದು. ಈ ಬಗೆಯ ಪ್ರೀತಿಯ ಅನುಭವ ಸ್ವತಃ ವಿವೇಕಾನಂದರಿಗೇ ಆಗಿತ್ತು. ಅದನ್ನು ಅವರು ಶ್ರೀರಾಮಕೃಷ್ಣರಿಂದ ಪಡೆದುಕೊಂಡಿದ್ದರು. ಪಡೆದುಕೊಂಡಿದ್ದರು – ಎಂಬುದಕ್ಕಿಂತ ಆ ಸಂಬಂಧದಲ್ಲಿ ಅವರು ಅದನ್ನು ಕಂಡಿದ್ದರು, ಅನುಭವಿಸಿದ್ದರು.
ಅದಾವ ಬಗೆಯ ಪ್ರೀತಿ?

ಶ್ರೀರಾಮಕೃಷ್ಣರು ರುಗ್ಣಶಯೆಯಲ್ಲಿ ಮಲಗಿದ್ದಾರೆ. ಹಾಸಿಗೆ ಹಿಡಿದು ಅನೇಕ ದಿನಗಳಾಗಿವೆ. ಎದ್ದು ಓಡಾಡಲು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ. ಅವರನ್ನು ಕಾಶೀಪುರದಲ್ಲಿ (ಕಲ್ಕತ್ತದ ಹೊರವಲಯ) ಒಂದು ಹಸಿರು ತೋಟದ ನಡುವಣ ಮನೆಯಲ್ಲಿ ಇರಿಸಿದ್ದಾರೆ. ಅವರ ಸೇವೆಗೆ ಶ್ರೀಶಾರದಾದೇವಿಯವರು, ರಾಮಕೃಷ್ಣರ ಯುವಶಿಷ್ಯರು ಟೊಂಕಕಟ್ಟಿ ನಿಂತಿದ್ದಾರೆ. ಒಂದು ಇಳಿ ಮಧ್ಯಾಹ್ನ ನರೇಂದ್ರಾದಿ ಯುವಶಿಷ್ಯರು ತೋಟದ ಕಡೆ ಹೊರಟರು. ಇತ್ತ ಶಾರದಾದೇವಿಯವರು ನೋಡುತ್ತಿದ್ದಾರೆ ಮಲಗಿದ್ದ ರಾಮಕೃಷ್ಣರು ದಿಗ್ಗನೆದ್ದು ಮಹಡಿಯಿಂದ ಇಳಿದು ವೇಗವಾಗಿ ಓಡಿದರು. ಮತ್ತೆ ಕೆಲವೇ ನಿಮಿಷಗಳಲ್ಲಿ ಅಷ್ಟೇ ವೇಗವಾಗಿ ಹಿಂದಿರುಗಿ ಬಂದು ಮಲಗಿದರು. ಶಾರದಾದೇವಿಯವರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದಾಗ ಅವರು ‘ಓ! ನೀನು ನೋಡಿಬಿಟ್ಟೆಯಾ? ತೋಟದ ಆ ಬದಿಯಲ್ಲಿದ್ದ ಖರ್ಜೂರದ ಮರದ ಹಣ್ಣುಗಳನ್ನು ಕಿತ್ತು ಅದರ ರಸ ತಯಾರಿಸಲು ನರೇಂದ್ರಾದಿ ಯುವಕರು ಹೊರಟಿದ್ದರು. ಆದರೆ ಆ ಮರದಲ್ಲಿ ಒಂದು ಸರ್ಪವಿದೆ. ನಾನು ಬೇರೊಂದು ಹಾದಿಯಿಂದ ವೇಗವಾಗಿ ಹೋಗಿ ಆ ಸರ್ಪಕ್ಕೆ ಸ್ವಲ್ಪಕಾಲ ಬೇರೆ ಜಾಗ ನೋಡಿಕೊಳ್ಳುವಂತೆ ಹೇಳಿ ಬಂದೆ’ ಎಂದರು. ಅವರಿಗೆ ನರೇಂದ್ರಾದಿ ಯುವಕರ ಬಗೆಗಿದ್ದ ಕಾಳಜಿ, ಪ್ರೀತಿ ಅಂತಹದ್ದು. ಈ ಬಗೆಯ ಪ್ರೀತಿಯ ಕಾರಣದಿಂದಲೇ ನರೇಂದ್ರ ಅವರ ಶಿಷ್ಯನಾದುದು. ಮುಂದೆ ವಿವೇಕಾನಂದರಲ್ಲೂ ಈ ಪ್ರೀತಿ ಅನೇಕ ರೀತಿಗಳಲ್ಲಿ ಆವಿರ್ಭಾವಗೊಂಡದ್ದನ್ನು ನೀವು ಕಾಣಬಹುದು.

ನಮ್ಮ ಕೆಲಸಕಾರ್ಯಗಳು ಅಚ್ಚುಕಟ್ಟಾಗಿ ನಡೆಯಬೇಕಾದರೆ, ಅಲ್ಲಿ ಪ್ರೀತಿಯ ಲೇಪವಿರಬೇಕು. ಆಗ ಕೆಲಸವೇ ಪೂಜೆ, ಕಾಯಕದಿಂದಲೇ ಕೈಲಾಸ.

ಇದನ್ನೂ ಓದಿ: ಸತ್ಯದ ಬೆಳಕು ತೋರಿದ ಸಂತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು