ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವೈಕುಂಠ ಏಕಾದಶಿ: ದಾರಿ ಯಾವುದಯ್ಯಾ ವೈಕುಂಠಕೆ...

Last Updated 13 ಜನವರಿ 2022, 9:29 IST
ಅಕ್ಷರ ಗಾತ್ರ

‘ಇಷ್ಟು ದಿನ ಈ ವೈಕುಂಠ, ಎಷ್ಟು ದೂರವೋ ಎನ್ನುತ್ತಲಿದ್ದೆ; ದೃಷ್ಟಿಯಿಂದಲಿ ನಾನು ಕಂಡೆ, ಸೃಷ್ಟಿಗೀಶನೆ ಶ್ರೀರಂಗಶಾಯಿ’ – ಕನಕದಾಸರು ಭಕ್ತಿಯ ಪರಾಕಾಷ್ಠೆಯಲ್ಲಿ ವೈಕುಂಠದ ಬಗ್ಗೆ ಹೇಳುತ್ತಾರೆ. ವೈಕುಂಠ, ವಿಷ್ಣುವಿನ ಆವಾಸಸ್ಥಾನ. ಎಲ್ಲಿ ಯಾವ ಕೊರತೆಗಳ ಸಣ್ಣ ಸುಳಿವೂ ಇಲ್ಲವೋ, ಎಲ್ಲಿ ಎಲ್ಲವೂ ಅತ್ಯಂತ ಸಮೃದ್ಧಿಯಿಂದ ಕೂಡಿರುತ್ತವೆಯೋ ಅದೇ ವೈಕುಂಠ.

ವೈಕುಂಠವನ್ನು ಪ್ರವೇಶಿಸುವ ಎಲ್ಲ ಜೀವಗಳೂ ಸ್ವತಃ ನಾರಾಯಣನ ಸ್ವರೂಪವನ್ನು ಪಡೆಯುತ್ತಾರೆ. ಅಲ್ಲಿ ಸೃಷ್ಟಿ–ಸೃಷ್ಟಿಕರ್ತ, ದೇವ–ಸೇವಕ – ಯಾವ ಭೇದವೂ ಇರುವುದಿಲ್ಲ ಎನ್ನುತ್ತದೆ, ಶ್ರೀಮದ್ಭಾಗವತ. ಆಚಾರ್ಯ ರಾಮಾನುಜಾಚಾರ್ಯರು ಹೇಳುವಂತೆ ವೈಕುಂಠವೆಂಬುದು ಪರಮಪದ; ಇಹಪರಲೋಕಗಳಲ್ಲಿ ಶ್ರೇಷ್ಠವಾದುದು; ದಿವ್ಯವಾದುದು, ನಿತ್ಯಚಿರಂತನವಾದ ಪುಣ್ಯಸ್ಥಳ. ಸ್ವತಃ ಶ್ರೀವಿಷ್ಣು ಲಕ್ಷ್ಮೀ ಸಮೇತನಾಗಿ ವೈಕುಂಠದಲ್ಲಿ ವಾಸಿಸುತ್ತಾನೆ. ಜಯವಿಜಯರು ಅದರ ದ್ವಾರವನ್ನು ಕಾಯುತ್ತಾರೆ ಎಂಬುದು ನಮ್ಮ ಸಂಸ್ಕೃತಿಯ ನಂಬಿಕೆ. ಅಂತಹ ವೈಕುಂಠದ ದ್ವಾರ ಧನುರ್‍ಮಾಸದ ಏಕಾದಶಿಯಂದು ತೆರೆಯುತ್ತದೆಯಂತೆ.

ಈ ವೈಕುಂಠ ಏಕಾದಶಿಗೆ ಪೌರಾಣಿಕ ಹಿನ್ನೆಲೆಗಳೂ ಇವೆ. ಒಮ್ಮೆ ಭಗವಾನ್ ವಿಷ್ಣುವು ವೈಕುಂಠದ್ವಾರವನ್ನು ಇಬ್ಬರು ಅಸುರರನ್ನು ಕೊಲ್ಲಬೇಕೆಂದು ತೆರೆಯುತ್ತಾನೆ. ಆಗ ಆ ರಾಕ್ಷಸರು ತಮ್ಮ ಕೊನೆಯ ಆಸೆಯನ್ನು ಹೇಳಿಕೊಳ್ಳುತ್ತಾರೆ. ಯಾರು ತಮ್ಮ ಕಥೆಯನ್ನು ಕೇಳಿ, ಶ್ರೀವಿಷ್ಣುವನ್ನು ವೈಕುಂಠದ್ವಾರದ ಮೂಲಕ ನೋಡುತ್ತಾರೋ, ಅವರಿಗೆ ಮುಕ್ತಿ ದೊರೆಯುವಂತೆ ವರ ಬೇಡುತ್ತಾರೆ. ಇದೇ ಕಾರಣಕ್ಕೆ ಅನೇಕ ದೇವಾಲಯಗಳಲ್ಲಿ ವೈಕುಂಠದ ದ್ವಾರದ ಪ್ರತಿಕೃತಿ ಮಾಡಿ ಮಹಾವಿಷ್ಣುವಿನ ದರ್ಶನ ಮಾಡಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ.

ದೇವತೆಗಳಿಗೆ ಉಪಟಳವನ್ನು ನೀಡುತ್ತಿದ್ದ ಮುರ ಎಂಬ ರಾಕ್ಷಸನನ್ನು ಸಂಹರಿಸಲು ದೇವತೆಗಳೆಲ್ಲ ಶಿವನ ಬಳಿ ಕೇಳಿಕೊಳ್ಳುತ್ತಾರೆ. ಆಗ ಅವನು ‘ವಿಷ್ಣುವು ಲೋಕಪಾಲಕ. ಆದ್ದರಿಂದ ಲೋಕಕಂಟಕನಾದ ಮುರನನ್ನು ಸಂಹರಿಸಲು ವಿಷ್ಣುವೇ ಸರಿ’ ಎನ್ನುತ್ತಾನೆ. ದೇವತೆಗಳೆಲ್ಲಾ ವಿಷ್ಣುವಿನ ಬಳಿ ತಮ್ಮ ಅಳಲನ್ನು ತೋಡಿಕೊಂಡಾಗ, ಮುರನನ್ನು ಸಂಹರಿಸಲು ಒಪ್ಪಿ ಅದಕ್ಕಾಗಿ ಹೊಸ ಆಯುಧವೊಂದು ಬೇಕಾದ್ದರಿಂದ, ಹಿಮಾಲಯದ ತಪ್ಪಲಿನ ಬದರಿಕಾಶ್ರಮದ ಹೈಮಾವತಿದೇವಿಯ ಗುಹೆಯಲ್ಲಿ ತಪಸ್ಸಿಗೆ ತೊಡಗುತ್ತಾನೆ. ಆ ಸಂದರ್ಭದಲ್ಲಿ ವಿಷ್ಣುವಿಗೆ ಮುರ ಅಡ್ಡಿಯನ್ನುಂಟುಮಾಡಲಾರಂಭಿಸುತ್ತಾನೆ. ಆಗ ದೇವಿಯು ವಿಷ್ಣುವಿನೊಳಗೆ ಸ್ತ್ರೀಭಾವದ ಜಾಗೃತಿಯನ್ನುಂಟುಮಾಡುತ್ತಾಳೆ. ಆ ಶಕ್ತಿಯ ನೆರವಿನಿಂದ ಮುರನನ್ನು ಸಂಹರಿಸಿದ ಮಹಾವಿಷ್ಣುವು ‘ಮುರಾರಿ’ ಎಂಬ ಹೆಸರನ್ನು ಪಡೆಯುತ್ತಾನೆ. ದೇವಿ ಮಾಡಿದ ಸಹಾಯಕ್ಕಾಗಿ ಅವಳಿಗೆ ‘ಏಕಾದಶಿ’ ಎಂಬ ಹೆಸರನ್ನಿಟ್ಟು, ವರವನ್ನು ಕೇಳಲು ಹೇಳುತ್ತಾನೆ. ಏಕಾದಶಿಯಂದು ಉಪವಾಸ ಮಾಡುವ ಎಲ್ಲರಿಗೂ ವೈಕುಂಠದಲ್ಲಿ ಸ್ಥಾನ ಸಿಗಬೇಕೆಂದು ಕೇಳಿಕೊಳ್ಳುತ್ತಾಳೆ, ದೇವಿ. ಹೀಗಾಗಿ ಏಕಾದಶಿಯನ್ನು ‘ಮೋಕ್ಷದಾ ಏಕಾದಶಿ’, ‘ಪುತ್ರದಾ ಏಕಾದಶಿ’ ಎಂದೂ ಕರೆಯುತ್ತಾರೆ. ಇದು ಪದ್ಮಪುರಾಣದ ಕಥೆ. ನಮ್ಮೊಳಗಿನ ರಾಜಸಿಕ ತಾಮಸಿಕ ಗುಣಗಳನ್ನು ಮೀರುವ ಸಾತ್ವಿಕತೆಯನ್ನು ರೂಢಿಸಿಕೊಳ್ಳುವ ಸಂಕಲ್ಪಕ್ಕೆ ನೀರೆರೆಯುವ ಮತ್ತು ಮನಸ್ಸು ಬುದ್ಧಿ ಭಾವಗಳನ್ನು ಆ ನಿಟ್ಟಿನಲ್ಲಿ ಉದ್ಭೋದಕಗೊಳಿಸುವ ವಿಶಿಷ್ಟ ದಿನವೇ ವೈಕುಂಠ ಏಕಾದಶಿ.

ಏಕಾದಶಿಯಂದು ಉಪವಾಸದ ಕ್ರಮವಿದೆ. ಉಪ–ವಾಸವೆಂದರೆ ಹತ್ತಿರದ ವಾಸವೆಂಬ ಅರ್ಥವಿದೆ. ಆತ್ಮೋನ್ನತಿಗಾಗಿ ಭಗವಂತನಿಗೆ ಅಥವಾ ತನಗೆ ತಾನು ಹತ್ತಿರವಾಗುವ ಕ್ರಿಯೆ ಉಪವಾಸ. ಅದು ಯಾವುದೇ ಆಹಾರ ಅಥವಾ ಇತರ ಇಂದ್ರಿಯಗಳ ಪ್ರಲೋಭನೆಗೆ ಒಳಗಾಗದೆ ಏಕಾಗ್ರಚಿತ್ತದಿಂದ ಮಾಡಬೇಕಾದ ಕ್ರಿಯೆ. ದೇಹವನ್ನು ಎಲ್ಲ ಕಲ್ಮಷಗಳಿಂದ ದೂರ ಮಾಡುವುದಕ್ಕಾಗಿ ಉಪವಾಸ ಅತ್ಯಂತ ಸಹಕಾರಿಯಾದುದು. ಅದು ತಮ್ಮ ಮನೋನಿಗ್ರಹದ ಪರೀಕ್ಷೆ ಹಾಗೂ ಸಂಯಮದ ಪಾಠ ಹೇಳುವ ಕಾಲವೂ ಹೌದು. ಹೀಗೆ ಭಕ್ತಿ, ಆಚರಣೆ, ಸಂಪ್ರದಾಯ, ಐತಿಹ್ಯಗಳ ಒಟ್ಟು ಸಮ್ಮಿಲನವಾಗಿ ವೈಕುಂಠ ಏಕಾದಶಿ ನಮ್ಮ ನೆಲದ ಪರಂಪರೆಯಲ್ಲಿ ಬೆರೆತುಹೋಗಿದೆ. ವೈಷ್ಣವ ಸಂಪ್ರದಾಯದಲ್ಲಂತೂ ಅಭಿನ್ನ ಅಂಗವಾಗಿ ನಡೆದುಕೊಂಡುಬಂದಿದೆ. ಅನೇಕ ತೀರ್ಥಕ್ಷೇತ್ರಗಲ್ಲಿ ಅತ್ಯಂತ ವಿಜೃಂಭಣೆಯಿಂದ ವೈಕುಂಠ ಏಕಾದಶಿಯನ್ನು ಆಚರಿಸುತ್ತಾರೆ.

ವೈಕುಂಠವೆಂಬ ದಿವ್ಯವಾದ ಪ್ರತಿಮೆ; ಭಕ್ತಿಯ ಆಧಾರಸ್ತಂಭವಾಗಿ, ಜೀವನಮೌಲ್ಯಗಳ ಸಂಸ್ಕೃತಿಕೇಂದ್ರ ಎನಿಸಿದೆ. ವೈಕುಂಠವೆಂಬ ಪರಮಪದವನ್ನು ಸ್ಮರಿಸಿಕೊಡುವ ‘ವೈಕುಂಠ ಏಕಾದಶಿ’ಯೆಂಬ ದಿವ್ಯಪರ್ವ ನಮ್ಮೊಳಗೆ ಸದ್ಭಕ್ತಿ ಸದ್ವಿಚಾರಗಳನ್ನು ಎಚ್ಚರಗೊಳಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT