ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಮಾನವಪ್ರೇಮಿ ವಿವೇಕಾನಂದ

Last Updated 10 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಸ್ವಾಮಿ ವಿವೇಕಾನಂದರ ಜನಪ್ರಿಯತೆಗೆ, ಪೂಜ್ಯತೆಗೆ ಕಾರಣವಾದ ಅನೇಕ ಅಂಶಗಳಲ್ಲಿ ಅವರ ಮಾನವಪ್ರೇಮವು ಪ್ರಮುಖವಾದದ್ದು. ಅವರು ಸ್ಥಾಪಿಸಿದ ರಾಮಕೃಷ್ಣ ಮಹಾಸಂಘದ ಘೋಷವಾಕ್ಯವೂ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’; ಅಂದರೆ ಜಗತ್ತಿನ ಹಿತ ಸಾಧಿಸುವುದರೊಂದಿಗೇ ಸ್ವಂತದ ಮುಕ್ತಿಯನ್ನು ಕಾಣುವುದು. ಈ ಸಂಘಟನೆಯ ಕಾರ್ಯಸೂತ್ರವೂ ಪ್ರಸಿದ್ಧವೇ, ಅದು ಅತ್ಯಂತ ಸರಳ – ‘ಜೀವರಲ್ಲಿ ಶಿವನ ಸೇವೆ’.

ಹೀಗೆ ನಿವೃತ್ತಿಯ ಪ್ರತೀಕವಾದ ಸನ್ಯಾಸಕ್ಕೆ ಸೇವಾಪ್ರವೃತ್ತಿಯ ಲೇಪ ನೀಡಿ ಸನ್ಯಾಸಕ್ಕೊಂದು ಹೊಳಹು ನೀಡಿದವರು ವಿವೇಕಾನಂದರು. ಅವರ ಸೇವಾಸ್ಫೂರ್ತಿ ಸಂಪೂರ್ಣ ಪ್ರಕಾಶವನ್ನು ಕಂಡಿದ್ದು 1898ರ ಕಲ್ಕತ್ತದ ಪ್ಲೇಗ್ ಹಾವಳಿಯ ಸಮಯದಲ್ಲಿ. ಆ ಸಂದರ್ಭದಲ್ಲಿ ಅವರ ನಾಯಕತ್ವದಲ್ಲಿ ಅವರ ಶಿಷ್ಯವೃಂದ ಕೈಗೊಂಡ ಸೇವಾಕಾರ್ಯವನ್ನು ಕಂಡು ಕಲ್ಕತ್ತದ ಜನ ಮೂಕವಿಸ್ಮಿತರಾದರು. ಸೇವಾಬದ್ಧ ಪೌರಕಾರ್ಮಿಕರೇ ಕಸದ ರಾಶಿಗಳನ್ನು ಕಂಡು ಧೃತಿಗೆಟ್ಟಾಗ ಸೋದರಿ ನಿವೇದಿತಾ, ಸ್ವಾಮಿ ಸದಾನಂದ ಮೊದಲಾದ ವಿವೇಕಾನಂದರ ಶಿಷ್ಯರು ಪೊರಕೆ, ಮಂಕರಿ, ಗುದ್ದಲಿಗಳೊಂದಿಗೆ ಬೀದಿಗಿಳಿದರು. ಕಸದ ರಾಶಿಗಳು ಕರಗಿದವು. ಗಂಜಿಕೇಂದ್ರಗಳು ಆರಂಭವಾದವು. ಅಕ್ಕ ನಿವೇದಿತಾ ಕಲ್ಕತ್ತದ ಕೊಳಚೆ ಪ್ರದೇಶಗಳನ್ನೂ ಬಿಡದಂತೆ ಎಲ್ಲೆಡೆ ಸಂಚರಿಸಿ ರೋಗಿಗಳ ಶುಶ್ರೂಷೆ ಕೈಗೊಂಡಳು. ಸತ್ತವರನ್ನು ಸಾಗಿಸಲು, ಉಳಿದವರನ್ನು ಸಂತೈಸಲು, ನಗರವನ್ನು ಶುಚಿಗೊಳಿಸಲು ವಿವೇಕಾನಂದ ಶಿಷ್ಯ ಪಡೆ ಸದಾ ನಿರತವಾಗಿತ್ತು. ಪರಿಣಾಮವಾಗಿ ಪ್ಲೇಗ್ ನಿಯಂತ್ರಣಕ್ಕೆ ಬಂತು, ನಿವೇದಿತಾ ಕಲ್ಕತ್ತದ ಕಣ್ಮಣಿಯಾದಳು; ನಿಜ ಅರ್ಥದಲ್ಲಿ ವಿವೇಕಾನಂದರ ವಾರಸುಧಾರಿಣಿಯಾದಳು. ಇದೇ ಪ್ಲೇಗ್ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ತಂಡದೊಡನೆ ತಯಾರಿಸಿದ ಪ್ಲೇಗ್ ನಿಯಂತ್ರಣದ ಪ್ರಣಾಳಿಕೆಯನ್ನು ಗಮನಿಸುವಾಗ ಅಲ್ಲಿ ವ್ಯಕ್ತವಾಗುವುದು ಅವರ ಅಪಾರ ಮಾನವಪ್ರೇಮ.

‘ನಾವೆಲ್ಲರೂ ಒಂದೇ’ ಎಂಬ ಚರ್ವಿತಚರ್ವಣ ಹೇಳಿಕೆಯಾಗದೆ ಆ ಪ್ರಣಾಳಿಕೆ ‘ಜೀವ =ಶಿವ’ಸೂತ್ರದ ಸರಳ ವಿವರಣೆಯೇ ಆಗಿದೆ. ‘ನಿಮಗೆ ಸಂತೋಷವಾದರೆ ನಮಗೂ ಸಂತೋಷವೇ. ಹಾಗೇ ನಿಮಗೆ ಸಂಕಟವೊದಗಿದಾಗ ನಮಗೂ ಸಂಕಟವೇ, ಆದುದರಿಂದ ನಿಮ್ಮ ಈ ಸಂಕಷ್ಟದ ಸಮಯದಲ್ಲಿ ನಿಮ್ಮ ಸೇವೆ, ಪ್ರಾರ್ಥನೆಯಲ್ಲಿ ನಾವು ತೊಡಗಿಕೊಳ್ಳುತ್ತೇವೆ’ ಎನ್ನುವ ಆರಂಭದ ವಾಕ್ಯ ಸೇವ್ಯ-ಸೇವಿತ ಭಾವದ ಉನ್ನತೀಕರಣವನ್ನು ಸೂಚಿಸುತ್ತದೆ. ಸೇವಿತರಿಗೆ ಮುಜುಗರವಾಗದಂತೆ, ನಮ್ಮ ಅಹಮಿಕೆಯನ್ನು ಬದಿಗೊತ್ತಿ – ಅವರ ಸಂತೋಷದಲ್ಲಿ ನಮ್ಮ ಸಂತೋಷ ಅಡಗಿದೆ ಎಂಬ ಗುಟ್ಟನ್ನು ರಟ್ಟು ಮಾಡಿ ಅವರ ಸಂಕೋಚವನ್ನು ಮುರಿಯುವ ಪರಿಯನ್ನು ನಾವಿಲ್ಲಿ ಗಮನಿಸಬೇಕು. ಜೊತೆಗೆ ವದಂತಿಗಳಿಗೆ ಕಿವಿಗೊಡದೆ, ಹೆದರದೆ ಸ್ವಯಂಸೇವಕರೊಂದಿಗೂ ಸರಕಾರದೊಂದಿಗೂ ಸಹಕರಿಸಬೇಕು ಎಂದೂ ಅವರು ತಿಳಿಸುತ್ತಾರೆ. ‘ಮನೆ, ಆವರಣ, ಕೊಠಡಿ, ಬಟ್ಟೆ, ಹಾಸಿಗೆ, ಮೋರಿ – ಇವೆಲ್ಲವನ್ನು ಸ್ವಚ್ಛವಾಗಿರಿಸಿ; ತಂಗಳು, ಹಾಳಾದ ಆಹಾರ ಸೇವಿಸದೆ ಶುದ್ಧ, ಪೌಷ್ಟಿಕ ಆಹಾರ ಸೇವಿಸಿ, ದುರ್ಬಲ ಶರೀರವೇ ಕಾಯಿಲೆಗೆ ಮೂಲ. ಮನಸ್ಸನ್ನು ಸಂತೋಷವಾಗಿರಿಸಿ. ಸಾವಿಗೆ ಹೆದರದಿರಿ. ಒಂದಿಲ್ಲೊಂದು ದಿನ ಸಾವು ಖಚಿತ. ಆದರೆ ಹೇಡಿಗಳು ಮನಸ್ಸಿನಲ್ಲೇ ಸಾವಿರ ಸಲ ಸಾಯುತ್ತಾರೆ (ಅಂತಹ ಹೇಡಿಗಳಾಗಬೇಡಿ)’ ಎನ್ನುತ್ತಾರೆ.

ಎಂತಹ ಕನಿಷ್ಠರಿಗೂ ಸೇವೆ ಸಲ್ಲಿಸಲು ಸಿದ್ಧ ಎಂಬುದನ್ನು ಸ್ವಾಮೀಜಿ ಈ ಪ್ರಣಾಳಿಕೆಯಲ್ಲಿ ಮತ್ತೆ ಮತ್ತೆ ಖಚಿತಪಡಿಸುವುದನ್ನು ನಾವು ಕಾಣಬಹುದು. ‘ನಿಮ್ಮ ಸೇವೆಯಲ್ಲಿ ನಾವು ಸಾವನ್ನಪ್ಪಿದರೂ ಅದು ನಮ್ಮ ಸೌಭಾಗ್ಯವೆಂದೇ ಪರಿಗಣಿಸುತ್ತೇವೆ; ಏಕೆಂದರೆ ನೀವು ಸಾಕ್ಷಾತ್ ದೈವಸ್ವರೂಪಿಗಳು. ಇದನ್ನು ನಂಬದ ಸೇವಾವ್ರತಿಯು ದೈವನಿಂದನೆಯನ್ನು ಮಾಡಿದಂತೆ, ಅವನಿಗೆ ಪಾಪಸಂಗ್ರಹವಾಗುತ್ತದೆ’ ಎಂಬ ವಾಕ್ಯವನ್ನೂ ಅವರು ಸೇರಿಸಿದ್ದಾರೆ. ಹೀಗೆ ವೀರ ಸೇವಾವ್ರತದೀಕ್ಷಿತರಾದ ವಿವೇಕಾನಂದ ಪಡೆ ಅಂದು ಪ್ಲೇಗನ್ನು ಜಯಸಿತು. ಈ ಕೊರೋನಾ ಪಿಡುಗಿನ ಸಂದರ್ಭದಲ್ಲಿ ಆ ಪ್ರಣಾಳಿಕೆಯನ್ನು ನಾವು ಮತ್ತೆ ಮತ್ತೆ ಓದಿ ಸ್ಫೂರ್ತಿಯನ್ನು ಪಡೆಯುವುದರೊಂದಿಗೆ ಸ್ವಾಮಿ ವಿವೇಕಾನಂದರ ಮಾನವಪ್ರೇಮವನ್ನು ಅನುಸಂಧಾನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT