ಬುಧವಾರ, ಫೆಬ್ರವರಿ 26, 2020
19 °C

ಪ್ರೀತಿಯೇ ಅಧ್ಯಾತ್ಮ

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

ಹೆಣ್ಣಿಗೆ ಅಧ್ಯಾತ್ಮ ಎಂದರೆ ಇಷ್ಟೂ ಸಾಕು, ಅಥವಾ ಇಷ್ಟೇ ಸಾಕು ಅಥವಾ ನಿಜಕ್ಕೂ ಅಧ್ಯಾತ್ಮ ಎಂದರೆ ಇಷ್ಟೇ ಏನು! ನದಿಯಂತೆ ಹರಿವ ಬದುಕೇ ಅಧ್ಯಾತ್ಮ. ‘ತನ್ನ ಅರಿಯಬೇಕು’ ಎನ್ನುವ ಗೋಜಲಿಂದ ದೂರವಿದ್ದು ಪ್ರೀತಿಯಿಂದ ಹಗಲನ್ನು ಕಣ್ಣು ತುಂಬುವ ಬೆಳಕಾಗಿ ರಾತ್ರಿಗಳನ್ನು ಬೆಳಗಾದೊಡನೆ ಮತ್ತೊಂದು ಹಗಲು ಮೂಡುವುದು ಎನ್ನುವ ಆಶಾಭಾವನೆಯಿಂದ ತಳ್ಳುವುದೇ ಅವಳ ಅಧ್ಯಾತ್ಮ.

ಪ್ರಾಯಶಃ ಹೆಣ್ಣಿಗೆ ಸಂಸಾರದ ಜವಾಬ್ದಾರಿಗಳನ್ನು ಹಚ್ಚಿದ್ದೋ, ಅವಳೇ ಎಳಕೊಂಡಿದ್ದೋ, ಏನೇ ಇದ್ದರೂ ತಾನು ಮಾಡುವ ಕಾಯಕದಲ್ಲೇ ಕ್ಷಣಕ್ಷಣದ ಮುಕ್ತಿಯನ್ನು ಪಡೆದು ಜೀವನ್ಮುಕ್ತಿ ಎನ್ನುವ ವಿಶೇಷ ಪದವಿಗೆ ಹಾತೊರೆಯದಂತೇ ಅವಳನ್ನು ಪ್ರಕೃತಿ ಸೃಷ್ಟಿಸಿದೆ. ಆ ಮೂಲಕ ಅಧ್ಯಾತ್ಮ ಅವಳ ನಡೆನುಡಿಗಳಲ್ಲಿ ಪ್ರತಿಬಿಂಬಿತವಾಗುವಂತೆ ಹೆಣ್ಣು ಸೃಷ್ಟಿಯಾಗಿದ್ದಾಳೆ.

ಹಾಗೇ ಪ್ರಾಯಶಃ ಆರಾಧನೆ, ಪೂಜೆ ಎನ್ನುವ ಆಚರಣೆಯನ್ನು ಪುರುಷನ ಹಕ್ಕಾಗಿ ಸಮಾಜ ರೂಢಿಸಿಕೊಂಡಿರುವುದು. ಆತನಿಗದು ಅಗತ್ಯವಿರಬೇಕು. ತನ್ನಲ್ಲಿಲ್ಲದ ಸರ್ವಸಮರ್ಪಣಾಭಾವವನ್ನು ಕೆಲವು ಘಳಿಗೆಗಳ ಪೂಜೆಯ ಮುಖಾಂತರವಾದರೂ ಪಡೆದು ಅಧ್ಯಾತ್ಮದ ವಿಶೇಷ ಅನುಭೂತಿ ಹೊಂದಲು ಅವಕಾಶ ಮಾಡಿಕೊಂಡಿರಬೇಕು. ಜಪತಪಗಳಿಂದ ನೇಮನಿಷ್ಠೆಗಳಿಂದ ಅಧ್ಯಾತ್ಮಲೋಕದ ಕೀಲಿ ಕೈ ಪಡೆಯುವ ಪುರುಷನಂತೇ ಹೆಣ್ಣು ಹಂಬಲಿಸಬೇಕಿಲ್ಲ. ಅವಳಿಗದು ಪ್ರಕೃತಿ ಸಹಜ. ಪ್ರೀತಿ ವ್ಯಾತ್ಸಲ್ಯದ ನಡೆನುಡಿಗಳಿಂದ ಸಹಜವಾಗಿ ಅವಳಲ್ಲೊಂದು ಶಮಭಾವ ಮೂಡಿರುತ್ತದೆ.

ಹೆಣ್ಣು ಚಂಚಲೆ ಎನ್ನುವವರೂ ಪ್ರಕೃತಿಯನ್ನೂ ಚಂಚಲೆ ಎನ್ನಬೇಕು. ಋತುಗಳಿಗೆ ಸರಿಯಾಗಿ ತನ್ನ ನಡೆ ಬದಲಿಸುವ ಪ್ರಕೃತಿ ಚಂಚಲೆಯಲ್ಲವೇನು! ಚಲನೆ ಇರುವುದೆಲ್ಲವೂ ಚಂಚಲವೇ! ಇದಕ್ಕೂ ಮೀರಿ, ಆಕೆಯೂ ಅಧ್ಯಾತ್ಮದ ಮುಂದಿನ ಮೆಟ್ಟಿಲುಗಳನ್ನು ಏರುವ ಹಂಬಲವಿದ್ದರೆ ಏರಬಹುದು. ಏರದಿದ್ದರೂ ಅಮೃತದ ಬಿಂದುಗಳನ್ನು ಬದುಕಿನ ದಿನನಿತ್ಯದ ಏರುಪೇರುಗಳಲ್ಲಿ ಹುಡುಕಾಡುತ್ತಾಳೆ ಅವಳು. ಅವಳು ಸದಾ ಅವಧೂತೆ! ತನ್ನ ಹೆಜ್ಜೆಗುರುತುಗಳನ್ನು ಎಲ್ಲೂ ಬಿಡದೇ ಸಹಜವಾಗಿ ಮುನ್ನಡೆಯುವವಳು.

ಕುಟುಂಬದಲ್ಲಾದ ಸಣ್ಣ ಮನಸ್ತಾಪ ಸಂಬಂಧಿಯೊಬ್ಬರನ್ನು ಸಂಸಾರ ಬಿಟ್ಟು ದೂರದ ಗಾಣಗಾಪುರದ ದತ್ತನ ಆಶ್ರಯದಲ್ಲಿ ಪಾರಾಯಣ ಮಾಡುತ್ತಾ ದಿನ ಕಳೆಯುವ ಮನಃಸ್ಥಿತಿಯನ್ನು ಮೂಡಿಸಿದರೆ, ಅವರ ಪತ್ನಿ ನಾಲ್ಕು ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ದೇವರ ಅಸ್ತಿತ್ವವನ್ನು ಕಂಡುಕೊಂಡರು. ಪಾರಾಯಣದಲ್ಲಿ ದತ್ತ ಸಿಕ್ಕನೋ ಇಲ್ಲವೋ ತಿಳಿಯದು. ಇಲ್ಲಿ ಮಕ್ಕಳ ಜೀವನ ಹಸನಾದಾಗ ದತ್ತನನ್ನು ಕಂಡಷ್ಟೇ ಹಿಗ್ಗಿತು ಈ ಹೆಣ್ಣುಜೀವ. ಅದೇ ಅಧ್ಯಾತ್ಮ ಅಥವಾ ನಿಜಕ್ಕೂ ಅಷ್ಟೇ ಅಧ್ಯಾತ್ಮವಿರಲೂಬಹುದು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು