ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮಹಾಶಿವರಾತ್ರಿ: ಶಿವಪ್ರಜ್ಞೆಯ ಮಹಾರಾತ್ರಿ

Published 8 ಮಾರ್ಚ್ 2024, 0:34 IST
Last Updated 8 ಮಾರ್ಚ್ 2024, 0:34 IST
ಅಕ್ಷರ ಗಾತ್ರ

ಬಹಳ ಹಿಂದೊಮ್ಮೆ ಜಗತ್ತಿನ ಕಲ್ಯಾಣಕ್ಕಾಗಿ ದೇವತೆಗಳೂ ಅಸುರರೂ ಸಮುದ್ರಮಥನದಲ್ಲಿ ತೊಡಗಿದರು. ಆಗ ಇದ್ದಕ್ಕಿದ್ದಂತೆ ದೊಡ್ಡ ಅನಾಹುತವೊಂದು ಕಾಣಿಸಿಕೊಂಡಿತು. ಹಾಲಾಹಲ, ಎಂದರೆ ಭಯಂಕರ ವಿಷವೊಂದು, ತೋರಿಕೊಂಡಿತು. ಅದೇನೂ ತೋರಿಕೊಂಡು ಸುಮ್ಮನಾಗುವಂಥದ್ದಲ್ಲ; ಅದು ಇಡಿಯ ಸೃಷ್ಟಿಯನ್ನೇ ನಾಶ ಮಾಡಬಲ್ಲಂಥದ್ದು. ಹುಟ್ಟಿದ ವಸ್ತುವಿಗೆ ನೆಲೆಯೊಂದನ್ನು ಕಾಣಿಸಬೇಕಷ್ಟೆ. ಈ ವಿಷಕ್ಕೂ ನೆಲೆಯೊಂದನ್ನು ಒದಗಿಸಬೇಕು. ಆದರೆ ಅದು ನೆಲೆನಿಂತಮೇಲೆ ಅದರಿಂದ ಯಾರಿಗೂ ತೊಂದರೆ ಆಗಕೂಡದು. ಹೀಗೆ ವಿಷಕ್ಕೂ ನೆಲೆಯಾಗಬೇಕು, ವಿಶ್ವಕ್ಕೂ ತೊಂದರೆ ಆಗಕೂಡದು. ಅಂಥದೊಂದು ನೆಲೆಯನ್ನು ಸೃಷ್ಟಿಯಲ್ಲಿ ಎಲ್ಲಿ ಕಾಣುವುದು? ಆಗ ಈ ಪ್ರಶ್ನೆಗೆ ಉತ್ತರವಾಗಿ ಎಲ್ಲರಿಗೂ ಹೊಳೆದವನೇ ‘ಶಿವ’. ಇಷ್ಟಕ್ಕೂ ‘ಶಿವ’ ಎನ್ನುವುದು ‘ಒಳಿತು’ ಎಂಬುದರ ಇನ್ನೊಂದು ಹೆಸರೇ ಹೌದಲ್ಲವೆ? 

ಶಿವ ಮತ್ತು ಅವನ ಶಕ್ತಿ ಜಗತ್ತಿನ ಆದಿದಂಪತಿಗಳು ತಾನೆ? ಜಗತ್ತಿಗೆ ಒದಗಿದ ವಿಪತ್ತು ಎಂದರೆ ಮಕ್ಕಳಿಗೆ ಒದಗಿದ ಆಪತ್ತೇ. ಮಕ್ಕಳಿಗೆ ಒದಗುವ ತೊಂದರೆಗಳನ್ನು ನೋಡಿಕೊಂಡು ಯಾವ ತಂದೆ–ತಾಯಿ ತಾನೆ ಸುಮ್ಮನಿದ್ದಾರು? ಆರ್ತರ ಪ್ರಾರ್ಥನೆಗೆ ಶಿವ ಸ್ಪಂದಿಸಿದ. ಜಗತ್ತು ಉಂಟಾದುದ್ದೇ ಅವನ ಡಮರುಗದ ನಾದದ ಸ್ಪಂದನದಿಂದಲೆ ಅಲ್ಲವೆ? ಆ ವಿಷವನ್ನು ಶಿವ ಕುಡಿದ. ಹೀಗೆಂದು ಅದನ್ನು ಜೀರ್ಣಮಾಡಿಬಿಡಲಿಲ್ಲ; ನೆಲೆಯೊಂದನ್ನು ಒದಗಿಸಿದನಷ್ಟೆ. ವಿಷವನ್ನೂ ನಾಶಮಾಡಲಾರದಷ್ಟು ಕರುಣಾಮಯಿ ಶಿವ! ಅದನ್ನು ತನ್ನ ಕಂಠದಲ್ಲಿಯೇ ನಿಲ್ಲಿಸಿಕೊಂಡ; ಅವನ ಕೊರಳಿನಲ್ಲಿಯೇ ಆ ವಿಷ ಮಣಿಯಿತು; ಮಣಿಯಂತೆ ಅಲ್ಲಿ ಹೊಳೆಯಿತು. ಅಂದಿನಿಂದ ಅವನು ನೀಲಕಂಠನಾದ. ಇತರರಿಗೆ ಅಪಾಯವಾಗಬಹುದಾಗಿದ್ದ ವಸ್ತು, ಶಿವನ ಪಾಲಿಗೆ ಆಭರಣವಾಯಿತೆನ್ನಿ! ಶಿವನ ಶಕ್ತಿಗೂ ಕಾರುಣ್ಯಕ್ಕೂ ಇದೊಂದು ಸಣ್ಣ ಉದಾಹರಣೆಯಷ್ಟೆ.

ಶಿವ ಸದಾ ತಪಸ್ಸಿನಲ್ಲಿ ನಿರತನಾಗಿರುವವನು. ಎಲ್ಲರ ತಪಸ್ಸುಗಳಿಗೂ ಫಲವೇ ಅವನು. ಹೀಗಿದ್ದರೂ ಏಕಾದರೂ ಅವನ ಈ ಮಹಾತಪಸ್ಸು? ಅವನು ತಪಸ್ಸು ಮಾಡುವುದೇ ಲೋಕದ ಒಳಿತಿಗಾಗಿ; ಎಲ್ಲರ ಸಂಕಷ್ಟಗಳನ್ನು ಪರಿಹರಿಸುವುದಕ್ಕಾಗಿ. ಲೋಕವನ್ನು ಸಂಕಷ್ಟಗಳೇ ಇಲ್ಲದಂತೆ ಸೃಷ್ಟಿಸಬಹುದಿತ್ತಲ್ಲವೆ? ಸೃಷ್ಟಿ ಅವನಿಗೊಂದು ಲೀಲಾವಿನೋದ. ಅವನ ಲೀಲೆಯಲ್ಲಿ ಎಲ್ಲರೂ ಅವನವರೇ, ಎಲ್ಲವೂ ಅವನವೇ. ಹೀಗಾಗಿಯೇ ಅವನಿಗೆ ಎಲ್ಲರ ಬಗ್ಗೆಯೂ ಕರುಣೆ. ಅವನ ಈ ಕರುಣೆಯ ವ್ಯಾಪ್ತಿಯ ಹರಹನ್ನು ವೇದದಲ್ಲಿ ಚೆನ್ನಾಗಿ ವರ್ಣಿಸಲಾಗಿದೆ. ‘ರುದ್ರಪ್ರಶ್ನೆ’ಯಲ್ಲಿ ಶಿವತತ್ತ್ವದ ಈ ವೈಶಾಲ್ಯವನ್ನು ಕಾಣಬಹುದಾಗಿದೆ.

ಇಂಥ ಲೋಕಮಂಗಳಕರವಾದ ತತ್ತ್ವವನ್ನು ಆರಾಧಿಸುವ ಪರ್ವದಿನವೇ ಶಿವರಾತ್ರಿ. ಇಡಿಯ ಶಿವರಾತ್ರಿ ಹಲವು ಸಂಕೇತಗಳಿಂದ ಸಮೃದ್ಧವಾಗಿದೆ. ರಾತ್ರಿಯ ಕತ್ತಲೆಯಲ್ಲಿ ಶಿವನನ್ನು ಸ್ಮರಿಸಿಕೊಳ್ಳಬೇಕು, ಶಿವನನ್ನು ಕಾಣಬೇಕು ಎಂಬ ಆಶಯ ಈ ಆಚರಣೆಯ ಪ್ರಧಾನ ಉದ್ದೇಶ. ನಿದ್ರೆಗೆ ಜಾರದೆ ಶಿವನ ಅನುಸಂಧಾನದಲ್ಲಿರಬೇಕು. ಎಂದರೆ ಎಚ್ಚರ ತಪ್ಪದ ಸ್ಥಿತಿ. ಕತ್ತಲೆಯನ್ನು, ಎಂದರೆ ಕೇಡನ್ನು ಕಂಡಾಗ ಒಳಿತಿನ ಅನುಸಂಧಾನ; ಕೇಡಿಗೆ ಮಣಿಯದ ಎಚ್ಚರ. ಶಿವರಾತ್ರಿಯ ಈ ಸಂದೇಶವನ್ನು ಜಾನಪದಗೀತೆಯೊಂದು ಸೊಗಸಾಗಿ ಕಟ್ಟಿಕೊಟ್ಟಿದೆ, ಹೀಗೆ:

‘ಎದ್ದೂನೆ ನಿಮ ಗ್ಯಾನ ಏಳುತಲೆ ನಿಮಗ್ಯಾನ

ಸಿದ್ಧರ ಗ್ಯಾನ ಶಿವಗ್ಯಾನ ಮಾಶಿವನೆ

ನಿದ್ದೆಗಣ್ಣಿನಲಿ ನಿಮ ಗ್ಯಾನ’ ||

ಇಂದು ಜಗತ್ತು ಹಲವು ಸಂಕಷ್ಟಗಳಿಂದ ನರಳುತ್ತಿದೆ. ಈ ಎಲ್ಲ ವಿಧದ ಹಾಲಾಹಲಗಳಿಂದ ನಮ್ಮನ್ನು ಪಾರುಮಾಡಬಲ್ಲಂಥ ಶಿವಶಕ್ತಿಯೊಂದು ನಮಗೆ ಬೇಕಾಗಿದೆ. ಅದಕ್ಕೂ ಮೊದಲು ನಮಗೆ ಒಳಿತು ಎಂದರೆ ಏನು ಎಂಬುದೂ ಸ್ಪಷ್ಟವಾಗಬೇಕಿದೆ. ಅಂಥ ಶಿವಪ್ರಜ್ಞೆಯ ಕಾಣ್ಕೆಗೆ ಶಿವರಾತ್ರಿಯ ಆಚರಣೆ ಬೆಳಕಾಗಿ ಒದಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT